Site icon Vistara News

ಜಪಾನ್‌ನಲ್ಲಿ ಅತಿಯಾದ ದುಡಿಮೆಯಿಂದ ವರ್ಷಕ್ಕೆ 10,000 ನೌಕರರ ಅಕಾಲಿಕ ಸಾವು!

japan work

ಟೋಕಿಯೊ: ಎರಡನೇ ಜಾಗತಿಕ ಯುದ್ಧದಲ್ಲಿ ಅಮೆರಿಕದ ಪರಮಾಣು ಬಾಂಬ್‌ ದಾಳಿಗೆ ಸಿಲುಕಿ ಜರ್ಜರಿತವಾಗಿದ್ದ ಜಪಾನ್‌ ನಂತರದ ದಶಕಗಳಲ್ಲಿ ಮೈಕೊಡವಿಕೊಂಡು ಕಠಿಣ ಪರಿಶ್ರಮದಿಂದ, ಶಿಸ್ತು ಸಂಯಮದಿಂದ, ಬುದ್ಧಿವಂತಿಕೆಯಿಂದ ಪ್ರಪಂಚದ ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಿತ್ತು. ಯುದ್ಧದ ಬೂದಿಯಿಂದ ಫೀನಿಕ್ಸ್‌ ಪಕ್ಷಿಯಂತೆ ಚೇತರಿಸಿತ್ತು. ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿದೆ. ಇದಕ್ಕೆ ಕಾರಣ ಜಪಾನಿಗರ ಕಠೋರ ಪರಿಶ್ರಮ. ಆದರೆ ಜಪಾನ್‌ನಲ್ಲಿ ಅತಿಯಾದ ದುಡಿಮೆಯಿಂದ ಪ್ರತಿ ವರ್ಷ 10 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಮಿಕರು ಅಕಾಲಿಕ ಸಾವಿಗೀಡಾಗುತ್ತಿದ್ದಾರೆ! ಅತಿಯಾದರೆ ವಿಪರೀತ ದುಡಿಮೆಯೂ ವಿಷವಾಗುತ್ತದೆ ಎಂಬುದಕ್ಕೆ ಜಪಾನ್‌ ಸಾಕ್ಷಿಯಾಗಿದೆ.

ಅತಿಯಾದ ದುಡಿತದಿಂದ ಸತ್ತರೆ ಕರೋಶಿ ಸಾವು

ಜಪಾನ್‌ನಲ್ಲಿ ಅವಿರತ ದುಡಿಮೆಯನ್ನು ಅತ್ಯಂತ ಗೌರವದಾಯಕ ಎಂದು ಪರಿಗಣಿಸಲಾಗುತ್ತದೆ. ರಜೆ ತೆಗೆದುಕೊಳ್ಳುವುದನ್ನು ಮಹಾಪರಾಧ ಎಂಬಂತೆ ತಪ್ಪಾಗಿ ಭಾವಿಸಲಾಗುತ್ತದೆ. ದುಡಿದೂ ದುಡಿದು ಸತ್ತರೆ ಅದನ್ನು “ಕರೋಶಿʼ ಸಾವು ಎಂದು ಕರೆಯಲಾಗುತ್ತದೆ. 1970 ರಿಂದಲೂ ಕರೋಶಿ ಪದಕ್ಕೆ ಮಾನ್ಯತೆಯೂ ಇದೆ. ಜಪಾನ್ ಸರಕಾರ ಹೇಳುವ ಪ್ರಕಾರ ಅಲ್ಲಿ ವರ್ಷಕ್ಕೆ ಸುಮಾರು ಮೂರು ಸಾವಿರ ಮಂದಿ ಅಸುನೀಗುತ್ತಾರೆ. ಆದರೆ ಅನಧಿಕೃತವಾಗಿ 10 ಸಾವಿರಕ್ಕೂ ಹೆಚ್ಚು ಮಂದಿ ಅತಿಯಾದ ದುಡಿತದ ಒತ್ತಡ ತಾಳಲಾರದೆ ಸಾವಿಗೀಡಾಗುತ್ತಾರೆ. ವಿಪರೀತ ಕೆಲಸದಿಂದ ಖಿನ್ನತೆಗೆ ಒಳಗಾಗಿ ಅನೇಕ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಸಂಬಳ ಸಹಿತ ರಜೆ ತೆಗೆದುಕೊಳ್ಳಲು ಹಿಂದೇಟು!

ಜಪಾನ್‌ನಲ್ಲಿ ಪ್ರಪಂಚದ ಬೇರಾವ ಭಾಗದಲ್ಲೂ ಕಾಣಲು ಸಿಗದಷ್ಟು ಸುದೀರ್ಘ ಕೆಲಸದ ಅವಧಿಯನ್ನು, ಕೆಲಸದ ಒತ್ತಡವನ್ನು ನೋಡಬಹುದು. ಇದಕ್ಕೆ ಎರಡನೇ ಮಹಾಯುದ್ಧದ ನಂತರದ ಕಾಲದ ಸಂಪ್ರದಾಯದ ಚೌಕಟ್ಟೂ ಇದೆ. ಅದು ಅವರ ಸಂಸ್ಕೃತಿಯೂ ಆಗಿದೆ. ಜಪಾನಿನ ಕನಿಷ್ಠ ಶೇ.25ರಷ್ಟು ಕಂಪನಿಗಳಲ್ಲಿ ತಿಂಗಳಿಗೆ 80 ಗಂಟೆಗಳ ಓವರ್‌ ಟೈಮ್ ಕೆಲಸ ಸಾಮಾನ್ಯ. ಈ ಓವರ್‌ ಟೈಮ್‌ ಕೆಲಸಕ್ಕೆ ಸಂಬಳವೂ ಕೊಡುವುದಿಲ್ಲ. ಜಪಾನ್‌ನಲ್ಲಿ ವರ್ಷಕ್ಕೆ 10 ದಿನಗಳ ಸಂಬಳ ಸಹಿತ ರಜೆಯ ವ್ಯವಸ್ಥೆ ಇದೆ. ಆದರೆ ಶೇ.60 ಮಂದಿ ಉದ್ಯೋಗಿಗಳು ಈ ಸಂಬಳ ಸಹಿತ ರಜೆಯನ್ನು ತೆಗೆದುಕೊಳ್ಳುವುದಕ್ಕೆ ಹಿಂಜರಿಯುತ್ತಾರೆ. ಅವರ ಮನಸ್ಸು ಒಪ್ಪುವುದಿಲ್ಲ. ಗಂಟೆಗಟ್ಟಲೆ ಕೆಲಸ ಮಾಡುತ್ತಾರೆ ಎಂದ ಮಾತ್ರಕ್ಕೆ ಜಪಾನ್‌ ಅತಿ ಹೆಚ್ಚು ಉತ್ಪಾದಕ ತೆ ಹೊಂದಿರುವ ರಾಷ್ಟ್ರವೇನಲ್ಲ. ಜಿ-7 ರಾಷ್ಟ್ರಗಳಲ್ಲಿ ಕಡಿಮೆ ಉತ್ಪಾದಕತೆ ಹೊಂದಿರುವ ದೇಶಗಳಲ್ಲಿ ಜಪಾನ್‌ ಕೂಡ ಒಂದು.

ಕೆಲಸದ ಶೈಲಿ ಬದಲಿಸಲು ಸರಕಾರದ ಯತ್ನ

ಜಪಾನ್‌ನಲ್ಲಿ ಸವಾಲಾಗಿ ಪರಿಣಮಿಸಿರುವ ಅತಿಯಾದ ಕೆಲಸದ ಸಂಸ್ಕೃತಿಯನ್ನು ತಪ್ಪಿಸಲು, ಸರಕಾರ ಮತ್ತು ಕಾರ್ಪೊರೇಟ್‌ ವಲಯ ಯತ್ನಿಸುತ್ತಿದೆ. ಕಚೇರಿಯಲ್ಲಿ ಕೆಲಸದ ಅವಧಿಯನ್ನು ಕಡಿತಗೊಳಿಸಲು ಉತ್ತೇಜಿಸಲಾಗುತ್ತಿದೆ. ವರ್ಷಕ್ಕೆ ಕನಿಷ್ಠ ೫ ದಿನಗಳ ವಿರಾಮದ ರಜೆ ತೆಗೆದುಕೊಳ್ಳಬೇಕು ಎಂಬ ನಿಯಮ ಜಾರಿಗೆ ಬಂದಿದೆ. 2016ರಲ್ಲಿ ಮೌಂಟೇನ್‌ ಡೇʼ ಎಂಬ ಹೊಸ ರಜಾ ದಿನವನ್ನು ಆರಂಭಿಸುವುದರೊಂದಿಗೆ ವಾರ್ಷಿಕ ಸಾರ್ವಜನಿಕ ರಜಾ ದಿನಗಳ ಸಂಖ್ಯೆಯನ್ನು 16ಕ್ಕೆ ಏರಿಸಲಾಯಿತು. ಸರಕಾರ “ಪ್ರೀಮಿಯಂ ಫ್ರೈಡೇʼ ಎಂಬ ಪದ್ಧತಿಯನ್ನು ಜಾರಿಗೊಳಿಸಿದ್ದು, ಪ್ರತಿ ತಿಂಗಳಿನ ಕೊನೆಯ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಕಚೇರಿಂದ ಬಿಡಬೇಕು. ವಿರಾಮ ತೆಗೆದುಕೊಳ್ಳಬೇಕು.

ದುಡಿತದ ಜತೆಗೆ ಕುಡಿತದ ನಂಟು

ಜಪಾನ್‌ನಲ್ಲಿ ಅತಿಯಾದ ದುಡಿಮೆಯಿಂದ ಒತ್ತಡಕ್ಕೊಳಗಾಗುವ ಜನ ಸಹೋದ್ಯೋಗಿಗಳ ಜತೆ ಮದ್ಯಪಾನದ ಮೊರೆ ಹೋಗುತ್ತಾರೆ. ಕೆಲಸ ಮುಗಿದ ಬಳಿಕ ಸಹೋದ್ಯೋಗಿಗಳ ಜತೆ ಮದ್ಯ ಸೇವನೆ ಸಾಮಾನ್ಯ ಪರಿಪಾಠವೆನಿಸಿದೆ. ಆದ್ದರಿಂದ ಜಗತ್ತಿನ ಮೂರನೇ ಬೃಹತ್‌ ಆರ್ಥಿಕತೆಯಾದ ಜಪಾನ್‌, ಕೆಲಸ ಮತ್ತು ಜನತೆಯ ಆರೋಗ್ಯ, ನೆಮ್ಮದಿಯ ಜೀವನದ ನಡುವೆ ಸಮತೋಲನ ಕಂಡುಕೊಳ್ಳಬೇಕಾದ ಅಗತ್ಯ ಇದೆ. ಎಷ್ಟು ದುಡ್ಡು ಇದ್ದರೇನು? ನೆಮ್ಮದಿ ಇರದಿದ್ದರೇನು ಫಲ?

Exit mobile version