ನವ ದೆಹಲಿ: ಕಾಂಗ್ರೆಸ್ ಪಕ್ಷ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಜಯ ಗಳಿಸುವ ನಿಟ್ಟಿನಲ್ಲಿ ಹಲವಾರು ಕಾರಣಗಳಿವೆ. ಅವುಗಳ ಪೈಕಿ ಗ್ಯಾರಂಟಿ ಸ್ಕೀಮ್‌ಗಳ ( Congress Guarantees ) ಘೋಷಣೆ ಕೂಡ ಪ್ರಮುಖವಾಗಿತ್ತು. ( Karnataka Election 2023) ಹಾಗಾದರೆ ಇವುಗಳನ್ನು ಜನರಿಗೆ ಮುಟ್ಟಿಸಬೇಕಾದರೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಬೊಕ್ಕಸಕ್ಕೆ ಎಷ್ಟು ಹೊರೆ ಬೀಳಲಿದೆ? ಜನರ ಎಷ್ಟು ತೆರಿಗೆ ಹಣ ವೆಚ್ಚವಾಗಲಿದೆ ಎಂಬ ಅಂದಾಜು ಲೆಕ್ಕಾಚಾರ ಈಗ ನಡೆಯುತ್ತಿದೆ.
ಕಾಂಗ್ರೆಸ್ ನೀಡಿದ್ದ ಭರವಸೆಗಳೇನು? ಕುಟುಂಬದ ಮಹಿಳಾ ಪ್ರಮುಖರಿಗೆ (ಮನೆಯ ಯಜಮಾನಿ) ಮಾಸಿಕ 2,000 ರೂ. ಪ್ರತಿಯೊಬ್ಬ ಡಿಪ್ಲೊಮಾ ನಿರುದ್ಯೋಗಿಗೆ ಮಾಸಿಕ 1,500 ರೂ, ಪದವೀಧರ ನಿರುದ್ಯೋಗಿಗೆ ಮಾಸಿಕ 3,000 ರೂ. ಸಿಗಲಿದೆ. ಮಹಿಳೆಯರಿಗೆ ರಾಜ್ಯ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಸಿಗಲಿದೆ. ಪ್ರತಿ ಕುಟುಂಬಕ್ಕೆ 200 ಯುನಿಟ್ ವಿದ್ಯುತ್ ಉಚಿತವಾಗಿ ಸಿಗಲಿದೆ. ಅನ್ನ ಭಾಗ್ಯ ಅಡಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ ಆಹಾರ ಧಾನ್ಯ ಸಿಗಲಿದೆ.
ಕಾಂಗ್ರೆಸ್ ರಾಜ್ಯದ ಮತದಾರರಿಗೆ ನೀಡಿರುವ 5 ಪ್ರಮುಖ ಆಶ್ವಾಸನೆಗಳು |
ಗೃಹಲಕ್ಷ್ಮಿ : ಕುಟುಂಬದ ಮಹಿಳಾ ಪ್ರಮುಖರಿಗೆ (ಮನೆಯ ಯಜಮಾನಿ) ಪ್ರತಿ ತಿಂಗಳು 2,000 ರೂ. |
ಯುವನಿಧಿ: ಪ್ರತಿ ಡಿಪ್ಲೊಮಾ ನಿರುದ್ಯೋಗಿಗೆ 2 ವರ್ಷಗಳ ತನಕ ಮಾಸಿಕ 1,500 ರೂ. |
ಪದವೀಧರ ನಿರುದ್ಯೋಗಿಗೆ 2 ವರ್ಷಗಳ ತನಕ ಮಾಸಿಕ 3,000 ರೂ. |
ಶಕ್ತಿ: ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ |
ಅನ್ನ ಭಾಗ್ಯ: ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ ಆಹಾರ ಧಾನ್ಯ |
ಗೃಹ ಜ್ಯೋತಿ: ಪ್ರತಿ ಕುಟುಂಬಕ್ಕೆ 200 ಯುನಿಟ್ ವಿದ್ಯುತ್ ಉಚಿತ |
ಇದನ್ನೂ ಓದಿ: Modi In Karnataka: ಕಾಂಗ್ರೆಸ್ ಗ್ಯಾರಂಟಿ ಸುಳ್ಳು, ನಂಬಿದರೆ ಮುಳ್ಳು; ಬೊಮ್ಮಾಯಿ ತವರಲ್ಲಿ ಮೋದಿ ಅಬ್ಬರ
ಇದರ ಜತೆಗೆ ಆಳ ಸಮುದ್ರ ಮೀನುಗಾರಿಕೆಗೆ 500 ಲೀಟರ್ ತೆರಿಗೆ ಮುಕ್ತ ಡೀಸೆಲ್, ಮೀನುಗಾರಿಕೆಗೆ ರಜೆಯ ಅವಧಿಯಲ್ಲಿ ಎಲ್ಲ ಮೀನುಗಾರರಿಗೆ 6,000 ರೂ. ನೆರವು, ಹಸುವಿನ ಸೆಗಣಿಯನ್ನು ಕೆ.ಜಿಗೆ 3 ರೂ. ದರದಲ್ಲಿ ಖರೀದಿಯ ಆಶ್ವಾಸನೆಯನ್ನು ಕಾಂಗ್ರೆಸ್ ಘೋಷಿಸಿತ್ತು.
ನಗದು ಪಾವತಿಗಳು ಮತ್ತು ವಿದ್ಯುತ್ ಸಬ್ಸಿಡಿಗೇ ವಾರ್ಷಿಕ 62,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಕೆಲ ವರದಿಗಳು ತಿಳಿಸಿವೆ. ಅಂದರೆ ರಾಜ್ಯ ಬಜೆಟ್‌ನ 20% ಪಾಲು ಇಂಥ ಯೋಜನೆಗಳಿಗೆ ವೆಚ್ಚವಾಗಲಿದೆ.
ಕಾಂಗ್ರೆಸ್ ನಾಯಕರು ಹೇಳುವುದೇನು?
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ವಹಿಸಿರುವ ರಣ್‌ದೀಪ್ ಸಿಂಗ್ ಸುರ್ಜೇವಾಲ ಹೇಳುವ ಪ್ರಕಾರ, ಪಕ್ಷವು ಘೋಷಿಸಿರುವ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ತಗಲುವ ವೆಚ್ಚ, ರಾಜ್ಯ ಬಜೆಟ್ ಗಾತ್ರದ 15% ಮೀರುವ ಸಾಧ್ಯತೆ ಇಲ್ಲ. ಮುಂದಿನ 5 ವರ್ಷಗಳಲ್ಲಿ ಬಜೆಟ್ ಗಾತ್ರ ವೃದ್ಧಿಸುವ ನಿರೀಕ್ಷೆಯೂ ಇದೆ. ಕರ್ನಾಟಕ ಪ್ರಬಲ ಆದಾಯ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ.
ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. 2022-23 ರಲ್ಲಿ 72,000 ಕೋಟಿ ರೂ. ಕಂದಾಯ ಸಂಗ್ರಹಣೆಯ ಗುರಿಯನ್ನು ಹೊಂದಿತ್ತು.