ಜೀವ ವಿಮೆ ( Life Insurance) ಮತ್ತು ವೈದ್ಯಕೀಯ ವಿಮೆ ( Medical Insurance) ಎರಡೂ ಎಲ್ಲರಿಗೂ ಅವಶ್ಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಕುಟುಂಬದ ಆಧಾರ ಸ್ಥಂಭದಂತೆ ಇರುವ ಹಾಗೂ ಆದಾಯವನ್ನು ತಂದು ಕೊಡುವವರು ಅಗಲಿದ ಸಂದರ್ಭ ಸೂಕ್ತ ಜೀವ ವಿಮೆ ಇಲ್ಲದಿದ್ದರೆ, ಅಂಥ ಕುಟುಂಬ ಆರ್ಥಿಕ ಭದ್ರತೆಯನ್ನು ಕಳೆದುಕೊಂಡು ಬೀದಿ ಪಾಲಾಗುತ್ತದೆ. ಅದೇ ರೀತಿ ಅವರಿಗೆ ಅಪಘಾತ ಅಥವಾ ಇತರ ಕಾರಣಗಳಿಂದ ಆಸ್ಪತ್ರೆಗೆ ದಾಖಲಾಗುವ ಹಾಗೂ ಚಿಕಿತ್ಸೆಗೆ ಲಕ್ಷಾಂತರ ರೂ. ಖರ್ಚು ವೆಚ್ಚಗಳು ಸಂಭವಿಸಿದರೆ, ವೈದ್ಯಕೀಯ ವಿಮೆ ಅವಶ್ಯಕವಾಗುತ್ತದೆ. ಇಲ್ಲದಿದ್ದರೆ ಮತ್ತೆ ಆರ್ಥಿಕ ವ್ಯವಸ್ಥೆ ಬುಡಮೇಲಾಗಬಹುದು.
ಶ್ರೀಮಂತರು ಮತ್ತು ಬಡವರಲ್ಲಿ ಯಾರಿಗೆ ವಿಮೆಯ ಅಗತ್ಯ ಹೆಚ್ಚು ಇರುತ್ತದೆ? ಶ್ರೀಮಂತನಿಗೆ ಹೋಲಿಸಿದರೆ ಬಡವರಿಗೇ ವಿಮೆಯ ಅಗತ್ಯ ಹೆಚ್ಚು. ಇದಕ್ಕೊಂದು ಉದಾಹರಣೆ ನೋಡೋಣ. ಕುಟುಂಬದ ಆದಾಯಗಳ ಜವಾಬ್ದಾರಿ ಹೊತ್ತಿರುವ ವ್ಯಕ್ತಿ ನಿಧನರಾದರೆ, ಆ ಆದಾಯದ ಹರಿವು ಕುಟುಂಬಕ್ಕೆ ನಿಲ್ಲಬಾರದು. ಆಗ ಮಾತ್ರ ಕುಟುಂಬ ಬೀದಿ ಪಾಲಾಗುವುದು ತಪ್ಪುತ್ತದೆ.
ಇದನ್ನೂ ಓದಿ : Ram Mandir: ರಾಮಮಂದಿರ ಆತ್ಮನಿರ್ಭರತೆಯ ಸಂಕೇತ; ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ
ಒಂದು ವಿಮೆಯಲ್ಲಿ 10 ಲಕ್ಷ ರೂ. ಪರಿಹಾರದ ಕವರೇಜ್ ಇದೆ ಎಂದು ಇಟ್ಟುಕೊಳ್ಳೋಣ. 10 ಲಕ್ಷ ರೂ. ಆಸ್ತಿ ಇರುವ ಶ್ರೀಮಂತ ಮತ್ತು ಅಷ್ಟು ಆಸ್ತಿ ಪಾಸ್ತಿ ಇರದ ಬಡ ವ್ಯಕ್ತಿಯಲ್ಲಿ ಯಾರಿಗೆ ವಿಮೆಯ ಅಗತ್ಯ ಹೆಚ್ಚು ಇರುತ್ತದೆ? ಖಂಡಿತವಾಗಿಯೂ ಬಡವನಿಗೆ. ಏಕೆಂದರೆ ಶ್ರೀಮಂತ ವ್ಯಕ್ತಿ ವಿಮೆ ಇಲ್ಲದೆ ಮೃತಪಟ್ಟರೂ, ಆತ ಬಿಟ್ಟು ಹೋಗಿರುವ 10 ಲಕ್ಷ ರೂ. ಸಂಪತ್ತು ಆತನ ಕುಟುಂಬದ ಆರ್ಥಿಕ ಭದ್ರತೆಗೆ ನೆರವಾಗುತ್ತದೆ. ಆದರೆ ಬಡ ವ್ಯಕ್ತಿ ನಿಧನರಾದರೆ, ಆತ ಬಿಟ್ಟು ಹೋಗಿರುವ ಸಂಪತ್ತು ಕಡಿಮೆಯಾಗಿರುವುದರಿಂದ ಕುಟುಂಬ ಸಂಕಷ್ಟಕ್ಕೀಡಾಗುವುದುದ ಖಚಿತ. ಆದರೆ ಜೀವ ವಿಮೆ ಇದ್ದರೆ, ಅಲ್ಪ ಪ್ರೀಮಿಯಂ ವೆಚ್ಚದಲ್ಲಿ 10 ಲಕ್ಷ ರೂ. ಪರಿಹಾರವನ್ನು ಆತನ ಕುಟುಂಬವು ಪಡೆಯುತ್ತದೆ. ವಿಪರ್ಯಾಸವೇನೆಂದರೆ, ಸಾಮಾನ್ಯವಾಗಿ ಶ್ರೀಮಂತರು ವಿಮೆಯನ್ನು ಪಡೆದಿರುತ್ತಾರೆ. ಬಡವರು ಖರೀದಿಸಿರುವುದಿಲ್ಲ. ಆದರೆ ವಾಸ್ತವವಾಗಿ ಬಡವರಿಗೆ ವಿಮೆಯ ಅಗತ್ಯ ಹೆಚ್ಚು. ಸರಿಯಾದ ವಿಮೆಯನ್ನು ಪಡೆದಿರುವುದು ಮುಖ್ಯ. ಹಲವಾರು ಮಂದಿ ಬೇಕಾದಷ್ಟು ವಿಮೆ ಹೊಂದಿರುವುದಿಲ್ಲ, ಅಥವಾ ತಪ್ಪಾಗಿ ವಿಮೆ ಖರೀದಿಸಿರುತ್ತಾರೆ.
ಜೀವ ವಿಮೆ ಪಾಲಿಸಿಗಳಲ್ಲಿ ಮೂರು ಪ್ರಮುಖ ಪಾಲಿಸಿಗಳು ಇವೆ. ಮೊದಲನೆಯದಾಗಿ ಸಮಗ್ರ ಜೀವ ವಿಮೆ ಪಾಲಿಸಿ. ಎರಡನೆಯದಾಗಿ ಎಂಡೊಮೆಂಟ್ ಪಾಲಿಸಿ. ಮೂರನೆಯದಾಗಿ ಟರ್ಮ್ ಪಾಲಿಸಿ. ಮೊದಲನೆಯದಾಗಿ ಸಮಗ್ರ ಜೀವ ವಿಮೆ ಪಾಲಿಸಿ ಎಂದರೇನು ಎಂದು ನೋಡೋಣ. ಇದು ಪಾಲಿಸಿದಾರರ ಜೀವನ ಪರ್ಯಂತ ವಿಮೆ ಕವರೇಜ್ ಅನ್ನು ನೀಡುತ್ತದೆ. 99 ವರ್ಷದ ತನಕ ಇದು ಲಭಿಸುತ್ತದೆ. ಈ ಅವಧಿಯಲ್ಲಿ ಪಾಲಿಸಿದಾರ ಮೃತಪಟ್ಟರೆ ಕುಟಂಬದ ಆರ್ಥಿಕ ಭದ್ರತೆಗೆ ವಿಮೆ ಆಸರೆಯಾಗುತ್ತದೆ. ಎಂಡೊಮೆಂಟ್ ಪಾಲಿಸಿಯಲ್ಲಿ ಪಾಲಿಸಿದಾರ ಮೃತಪಟ್ಟಾಗ ಅಥವಾ ಪಾಲಿಸಿ ಮೆಚ್ಯೂರ್ ಆದಾಗ ಲಂಪ್ಸಮ್ ಮೊತ್ತವೊಂದನ್ನು ನೀಡಲಾಗುವುದು. ಸಾಮಾನ್ಯವಾಗಿ ಮೆಚ್ಯೂರಿಟಿಯ ಅವಧಿ 10 ವರ್ಷ, 15 ಅಥವಾ 20 ವರ್ಷವಾಗಿರುತ್ತದೆ.
ಟರ್ಮ್ ಲೈಫ್ ಇನ್ಷೂರೆನ್ಸ್‌ನಲ್ಲಿ ಅತಿ ಕಡಿಮೆ ಖರ್ಚಿನಲ್ಲಿ ಅಪ್ಪಟ ವಿಮೆಯನ್ನು ಒದಗಿಸಲಾಗುತ್ತದೆ. ಇಲ್ಲಿ ಪಾಲಿಸಿಯ ಮೆಚ್ಯೂರಿಟಿ ಆದಾಗ ಕಟ್ಟಿದ ಪ್ರೀಮಿಯಂ ಸಿಗುವುದಿಲ್ಲ. ಆದರೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಮೊತ್ತದ ವಿಮೆ ಕವರೇಜ್ ಸಿಗುತ್ತದೆ. ಇದು ಕೂಡ ವಾಹನ ವಿಮೆ ಪ್ರೀಮಿಯಂ ಇದ್ದಂತೆ. ವಾಹನ ಅಪಘಾತವಾದಾಗ ವಿಮೆ ಕ್ಲೇಮ್ ಮಾಡಿಕೊಳ್ಳಬಹುದು. ಅದೇ ರೀತಿ ಪಾಲಿಸಿದಾರ ಮೃತಪಟ್ಟಾಗ ವಿಮೆ ಪರಿಹಾರ ಕ್ಲೇಮ್ ಮಾಡಿಕೊಳ್ಳಬಹುದು. ಸಮಗ್ರ ಜೀವ ವಿಮೆ ಪಾಲಿಸಿ ಮತ್ತು ಎಂಡೊಮೆಂಟ್ ಪಾಲಿಸಿಯಲ್ಲಿ, ಪಾಲಿಸಿ ಮೆಚ್ಯೂರ್ ಆದಾಗ ಒಂದಷ್ಟು ಮೊತ್ತದ ಇಂಟರೆಸ್ಟ್ ಹಾಗೂ ಬೋನಸ್ ಸಿಗುತ್ತದೆ. ಎಂಡೊಮೆಂಟ್ ಪಾಲಿಸಿಗಳು 10-20 ವರ್ಷ ಅವಧಿಯದ್ದು. ಹೋಲ್ ಲೈಫ್ ಇನ್ಷೂರೆನ್ಸ್ ಅಥವಾ ಸಮಗ್ರ ಜೀವ ವಿಮೆ 99 ವರ್ಷದ ತನಕ ಸುದೀರ್ಘಾವಧಿಗೆ ಸಿಗುತ್ತವೆ. ಸಮಗ್ರ ಜೀವ ವಿಮೆಗೆ ಹೋಲಿಸಿದರೆ ಎಂಡೊಮೆಂಟ್ ಪಾಲಿಸಿಯ ಪ್ರೀಮಿಯಂ ದುಬಾರಿ. ಟರ್ಮ್ ಇನ್ಷೂರೆನ್ಸ್ ಅತ್ಯಂತ ಅಗ್ಗ.