Site icon Vistara News

ವಿಸ್ತಾರ Explainer | ಜಾಗತಿಕ ಆರ್ಥಿಕ ಹಿಂಜರಿತ, ಸಾವಿರಾರು ಜಾಬ್‌ ಕಟ್‌; ಭಾರತದ ಮೇಲೇನು ಎಫೆಕ್ಟ್‌?

job loss

ಕೇಶವ್‌ ಪ್ರಸಾದ್‌ ಬಿ, ಬೆಂಗಳೂರು

ಇ-ಕಾಮರ್ಸ್‌ ದೈತ್ಯ ಅಮೆಜಾನ್‌, ತಂತ್ರಜ್ಞಾನ ಕಂಪನಿ ಮೈಕ್ರೊಸಾಫ್ಟ್‌, ಇಂಟರ್‌ನೆಟ್‌ ಸರ್ಚ್‌ ಎಂಜಿನ್‌ ದಿಗ್ಗಜ ಗೂಗಲ್, ಅತಿ ದೊಡ್ಡ ಸಾಮಾಜಿಕ ಜಾಲತಾಣ ಮೆಟಾ, ಟ್ವಿಟರ್‌..ಹೀಗೆ ಸಾಲು ಸಾಲು ಜನಪ್ರಿಯ ಕಂಪನಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ಕಡಿತದ ಆಘಾತಕಾರಿ ಬೆಳವಣಿಗೆ ಸಂಭವಿಸಿದೆ. ಇದು ಇಲ್ಲಿಗೇ ನಿಲ್ಲುತ್ತಿಲ್ಲ. ತಂತ್ರಜ್ಞಾನೇತರ ಕಂಪನಿಗಳಲ್ಲೂ ಇದೇ ಟ್ರೆಂಡ್‌ ಕಂಡು ಬಂದಿದೆ. ಮಾತ್ರವಲ್ಲದೆ, ಮುಂಬರುವ ತಿಂಗಳುಗಳಲ್ಲಿ ಇದೇ ಪ್ರವೃತ್ತಿ ಮತ್ತಷ್ಟು ಅಗಾಧವಾಗಿ ಹರಡಲಿದೆ ಎಂಬ ಭೀತಿ ಉಂಟಾಗಿದೆ. (ವಿಸ್ತಾರ Explainer) ಈಗಾಗಲೇ ಅಮೆರಿಕದಿಂದ ಉದ್ಯೋಗ ಕಳೆದುಕೊಂಡ ಟೆಕ್ಕಿಗಳು ಭಾರವಾದ ಹೃದಯದೊಂದಿಗೆ ಭಾರತಕ್ಕೆ (ವಿಸ್ತಾರ Explainer) ಮರಳುತ್ತಿದ್ದಾರೆ.

ಔದ್ಯೋಗಿಕ ವಲಯದ ಲೇಆಫ್ಸ್‌ ಡಾಟ್‌ ಫೈ (Layoffs.fyi) ವೆಬ್‌ ಸೈಟ್‌ ಪ್ರಕಾರ, 2022ರಲ್ಲಿ ಇದುವರೆಗೆ 853 ಕಂಪನಿಗಳು 1,37,492 ಉದ್ಯೋಗಿಗಳನ್ನು ವಜಾಗೊಳಿಸಿವೆ. ಬ್ಲೂಮ್‌ ಬರ್ಗ್‌, ಸ್ಯಾನ್‌ ಫ್ರಾನ್ಸಿಸ್ಕೊ ಬಿಸಿನೆಸ್‌ ಟೈಮ್ಸ್‌, ಟಿಸಿ ಟೆಕ್‌ ಕ್ರಂಚ್‌, ದಿ ನ್ಯೂಯಾರ್ಕ್‌ ಟೈಮ್ಸ್‌ ಮುಂತಾದ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಉದ್ಯೋಗ ನಷ್ಟ ಕುರಿತ ವರದಿಗಳನ್ನು ಆಧರಿಸಿ ಈ ಲೆಕ್ಕವನ್ನು ಅಂದಾಜಿಸಲಾಗಿದೆ. ಇದಕ್ಕೂ ಹೆಚ್ಚಿನ ಉದ್ಯೋಗ ನಷ್ಟ ಆಗಿರಬಹುದು. ಹಾಗಾದರೆ ಏನಿದು ಆರ್ಥಿಕ ಹಿಂಜರಿತ? ಇದರ ಪರಿಣಾಮಗಳೇನು? ಭಾರತಕ್ಕೂ ಕಾಡಲಿದೆಯೇ? ಇದರಿಂದ ಪಾರಾಗುವ ಬಗೆ ಹೇಗೆ? ಇಲ್ಲಿದೆ ವಿವರ.

ಏನಿದು ಆರ್ಥಿಕ ಹಿಂಜರಿತ?

ಅರ್ಥಶಾಸ್ತ್ರದ ಪ್ರಕಾರ ಆರ್ಥಿಕ ಬೆಳವಣಿಗೆಯ ಗಣನೀಯ ಇಳಿಕೆಯ ಅವಧಿಯನ್ನು ಆರ್ಥಿಕ ಹಿಂಜರಿತ ಎನ್ನುತ್ತಾರೆ. ಇದು ತಾತ್ಕಾಲಿಕ ಸ್ವರೂಪದಲ್ಲಿದ್ದರೂ, ಇದರ ಪರಿಣಾಮ ಸುದೀರ್ಘವಾಗಿರುತ್ತದೆ. ಹಿಂಜರಿತದ ಅಲೆ ಅಪ್ಪಳಿಸಿದ ಬಳಿಕ ಪೂರ್ಣಪ್ರಮಾಣದಲ್ಲಿ ಚೇತರಿಸಿಕೊಳ್ಳಲು ವರ್ಷಾನುಗಟ್ಟಲೆ ಕಾಲಾವಧಿ ಬೇಕಾಗುತ್ತದೆ. ಆದ್ದರಿಂದ ರಿಸೆಶನ್‌ ಎಂಬ ಪದ ಅನೇಕ ಮಂದಿಯಲ್ಲಿ ನಡುಕ ಹುಟ್ಟಿಸುತ್ತದೆ. ಸರ್ಕಾರಗಳಿಗೂ ಈ ಅನಿಶ್ಚಿತತೆಯನ್ನು ಎದುರಿಸುವುದು ಸವಾಲೇ ಸರಿ.

ಈ ಸಂದರ್ಭದಲ್ಲಿ ವ್ಯಾಪಾರ, ಉತ್ಪಾದನೆ ಮತ್ತು ಕೈಗಾರಿಕಾ ಚಟುವಟಿಕೆಗಳು ಕಡಿಮೆಯಾಗುತ್ತವೆ. ಸರಕು ಮತ್ತು ಸೇವೆಗಳಿಗೆ ಗ್ರಾಹಕರ ಬೇಡಿಕೆ ಕುಸಿಯುತ್ತದೆ. ಚಿಲ್ಲರೆ ಮಾರಾಟ (ರಿಟೇಲ್‌ ಸೇಲ್ಸ್) ಸೊರಗುತ್ತದೆ. ಇದರ ಪರಿಣಾಮವಾಗಿ ಕಂಪನಿಗಳು ತಮ್ಮ ಖರ್ಚು ವೆಚ್ಚಗಳನ್ನು ನಿಯಂತ್ರಿಸಲು ಸಾಮೂಹಿಕವಾಗಿ ಉದ್ಯೋಗ ಕಡಿತ ಮಾಡುತ್ತವೆ. ಹೊಸ ಯೋಜನೆಗಳನ್ನು, ಹೂಡಿಕೆಗಳನ್ನು ಮುಂದೂಡುತ್ತವೆ. ಆಗ ನಿರುದ್ಯೋಗ ಹೆಚ್ಚುತ್ತದೆ. ಸತತವಾಗಿ ಎರಡು ತ್ರೈಮಾಸಿಕಗಳಲ್ಲಿ, ಅಂದರೆ 6 ತಿಂಗಳುಗಳ ಕಾಲ ಆರ್ಥಿಕ ಬೆಳವಣಿಗೆ ಅಥವಾ ಜಿಡಿಪಿಯ ಪ್ರಮಾಣದಲ್ಲಿ ಇಳಿಕೆಯಾಗುವುದನ್ನು ಆರ್ಥಿಕ ಹಿಂಜರಿತ ಎಂದು ಕರೆಯಲಾಗುತ್ತದೆ.

ಇತಿಹಾಸದಲ್ಲಿ ಜಗತ್ತು ನಾನಾ ಕಾರಣಗಳಿಂದ ಹಲವು ಬಾರಿ ಆರ್ಥಿಕ ಹಿಂಜರಿತಕ್ಕೆ ಗುರಿಯಾಗಿದ್ದನ್ನು ಗುರುತಿಸಬಹುದು. 1974ರಲ್ಲಿ ಜ್ಯೂಲಿಯ್ಸ್‌ ಶಿಸ್ಕಿನ್‌ ಎಂಬುವರು ಸತತ ಎರಡು ತ್ರೈಮಾಸಿಕದಲ್ಲಿ ಜಿಡಿಪಿ ಕುಸಿಯುವುದನ್ನು ಆರ್ಥಿಕ ಹಿಂಜರಿತ ಎಂದು ಪರಿಗಣಿಸಬಹುದು ಎಂದು ವ್ಯಾಖ್ಯಾನಿಸಿದರು. ಇದು ಜನಪ್ರಿಯವಾಗಿದೆ. ಆರೋಗ್ಯಕರ ಎಕಾನಮಿ ಪ್ರತಿ ತ್ರೈಮಾಸಿಕದಲ್ಲೂ ಬೆಳವಣಿಗೆಯನ್ನು ದಾಖಲಿಸುತ್ತದೆ. ಹೀಗಾಗಿ ಸತತ ಎರಡು ತ್ರೈಮಾಸಿಕದಲ್ಲಿ ಮುಗ್ಗರಿಸಿದರೆ, ಆರ್ಥಿಕ ಹಿಂಜರಿತ ಎಂದು ಪರಿಗಣಿಸಬೇಕು ಎಂಬುದು ಅವರ ಸಿದ್ಧಾಂತವಾಗಿತ್ತು. ಇದು ಈಗ ಸಾರ್ವತ್ರಿಕವಾಗಿದೆ.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಏನೆನ್ನುತ್ತದೆ?

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೂಡ ಭಾರತದಲ್ಲಿ ಆರ್ಥಿಕ ಹಿಂಜರಿತವನ್ನು ಯಾವಾಗ ಆರಂಭವಾಯಿತು ಹಾಗೂ ಅಂತ್ಯವಾಯಿತು ಎಂಬುದನ್ನು ಗುರುತಿಸುತ್ತದೆ. ಆರ್‌ಬಿಐ ಪ್ರಕಾರವೂ ಸತತ ಆರು ತಿಂಗಳು ಅಥವಾ ಎರಡು ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆ ಕುಂಠಿತವಾದರೆ ಆರ್ಥಿಕ ಹಿಂಜರಿತವಾಗುತ್ತದೆ. ಹೀಗಿದ್ದರೂ, ನ್ಯಾಷನಲ್‌ ಬ್ಯೂರೊ ಆಫ್‌ ಎಕನಾಮಿಕ್‌ ರಿಸರ್ಚ್‌ (NBER) ಪ್ರಕಾರ ಹಲವಾರು ತಿಂಗಳುಗಳಲ್ಲಿ ಆರ್ಥಿಕ ಪ್ರಗತಿ ಮುಗ್ಗರಿಸಿದರೆ ಹಿಂಜರಿತ ಎನ್ನಬಹುದು.

ಅಮೆರಿಕದಲ್ಲಿ ಭಾರತೀಯ ಟೆಕ್ಕಿಗಳ ಯಾತನೆ

ಅಮೆರಿಕದ ಟೆಕ್‌ ಇಂಡಸ್ಟ್ರಿಯಲ್ಲಿ ಗೂಗಲ್‌, ಮೈಕ್ರೊಸಾಫ್ಟ್‌, ಟ್ವಿಟರ್‌, ಮೆಟಾ ಮತ್ತ ಅಮೆಜಾನ್‌ ಪ್ರಮುಖವಾಗಿವೆ. ಎಚ್1 ಬಿ ವೀಸಾ ಅಡಿಯಲ್ಲಿ ಅಲ್ಲಿನ ಕಂಪನಿಗಳಲ್ಲಿ ದುಡಿಯುತ್ತಿದ್ದ ಭಾರತೀಯರಲ್ಲಿ ಉದ್ಯೋಗ ಕಳೆದುಕೊಂಡವರು ತವರಿಗೆ ಮರಳುತ್ತಿದ್ದಾರೆ. ಈ ಬಗ್ಗೆ ಬಿಬಿಸಿ ಇತ್ತೀಚೆಗೆ ವರದಿ ಮಾಡಿದೆ. ನಿರುದ್ಯೋಗಿಗಳಾಗಿರುವ ಭಾರತೀಯ ಮೂಲದ ಟೆಕ್ಕಿಗಳನ್ನು ಅದು ಸಂದರ್ಶಿಸಿದೆ. ಅದರ ಸಾರಾಂಶ ಇಂತಿದೆ.

ಸುರಭಿ ಗುಪ್ತಾ ಎಂಬುವರು ಭಾರತೀಯ ಮೂಲದ ಎಂಜಿನಿಯರ್.‌ 2009ರಿಂದಲೂ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಈ ತಿಂಗಳು ಮೆಟಾ ದಿಢೀರ್‌ ಅವರನ್ನು ವಜಾಗೊಳಿಸಿದೆ. ” ನಾನು ಚೆನ್ನಾಗಿ ಕೆಲಸ ಮಾಡುತ್ತಿದ್ದೆ. ಆದರೂ ಈಗ ನಿರುದ್ಯೋಗಿಯಾಗಿದ್ದೇನೆʼʼ ಎಂದು ಅಳಲು ತೋಡಿಕೊಂಡಿದ್ದಾರೆ ಅವರು.

ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌, ವಾಟ್ಸ್ ‌ಆ್ಯಪ್‌ನ ಮಾತೃಸಂಸ್ಥೆಯಾದ ಮೆಟಾ ಕಳೆದ ನವೆಂಬರ್‌ 9ರಂದು ತನ್ನ ಸಿಬ್ಬಂದಿ ಬಲದಲ್ಲಿ 13% ಉದ್ಯೋಗ ಕಡಿತ ಘೋಷಿಸಿತ್ತು. ಕಂಪನಿಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ 11,000 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಯಾರೊಬ್ಬರಿಗೂ ಈಗ ರಾತ್ರಿ ನಿದ್ದೆ ಬರುತ್ತಿಲ್ಲ. ನನಗೆ ಬೆಳಗ್ಗೆ 6 ಗಂಟೆಗೆ ಇ-ಮೇಲ್‌ ಬಂತು. ನಾನು ಈಗ ನನ್ನ ಕಂಪ್ಯೂಟರ್‌ ಬಳಸುವಂತಿಲ್ಲ, ಆಫೀಸ್‌ ಜಿಮ್‌ಗೆ ಕೂಡ ಹೋಗುವಂತಿಲ್ಲ. ಕಂಪನಿಯಿಂದ ಬೇರೆಯಾದ ನೋವು ಅನುಭವಕ್ಕೆ ಬರುತ್ತಿದೆ ಎಂದು ಗುಪ್ತಾ ತಮ್ಮ ಯಾತನೆಯನ್ನು ಬಣ್ಣಿಸಿದ್ದಾರೆ.

ಸುರಭಿ ಗುಪ್ತಾ 2018ರಲ್ಲಿ ಮಿಸ್‌ ಭಾರತ್-ಕ್ಯಾಲಿಫೋರ್ನಿಯಾ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು. ಇತ್ತೀಚಿನ ನೆಟ್‌ಫ್ಲಿಕ್ಸ್‌ ಶೋ ಇಂಡಿಯನ್‌ ಮ್ಯಾಚ್‌ಮೇಕಿಂಗ್‌ನ ಪ್ರಚಾರ ಅಭಿಯಾನದಲ್ಲಿ ಕಾಣಿಸಿದ್ದರು. ಆದರೆ ಈಗ ಅಮೆರಿಕದ ಟೆಕ್‌ ಕಂಪನಿಗಳಲ್ಲಿ ವಜಾಗೊಂಡಿರುವ ಸಾವಿರಾರು ಭಾರತೀಯರಲ್ಲಿ ಒಬ್ಬರಾಗಿದ್ದಾರೆ. ಅವರು ಎಚ್-‌೧ಬಿ ವೀಸಾ ಅಡಿಯಲ್ಲಿ ಅಲ್ಲಿ ಕೆಲಸದಲ್ಲಿದ್ದರು. ಇದು ನಾನ್-ಇಮಿಗ್ರೆಂಟ್‌ ವೀಸಾ ಆಗಿದ್ದು, ಅಮೆರಿಕದ ಕಂಪನಿಗಳಿಗೆ ವಿದೇಶಿಯರನ್ನು 6 ವರ್ಷದ ತನಕ ಉದ್ಯೋಗಿಗಳನ್ನಾಗಿ ನೇಮಿಸಲು ಅವಕಾಶ ಸಿಗುತ್ತದೆ. ಅಮೆರಿಕದ ಕಾಯಂ ನಿವಾಸಿಯಾಗಲು ಅರ್ಜಿ ಸಲ್ಲಿಸಲು ಮತ್ತು ಆಸ್ತಿ ಖರೀದಿಸಲು ಹಾದಿ ಸುಗಮವಾಗುತ್ತದೆ. ಇದೀಗ ಉದ್ಯೋಗ ನಷ್ಟಕ್ಕೀಡಾದವರು ವೀಸಾ ಉಳಿಸಿಕೊಳ್ಳಲು ಮತ್ತೊಂದು ಕೆಲಸ ಕಂಡುಕೊಳ್ಳಬೇಕಾಗಿದೆ.

ಭಾರತೀಯ ಮೂಲದ ಟೆಕ್ಕಿಗಳಲ್ಲಿ ಎಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎಂಬುದರ ಬಗ್ಗೆ ನಿಖರ ಅಂಕಿ ಅಂಶ ಸಿಗದಿದ್ದರೂ, ಇಮಿಗ್ರೇಶನ್‌ ಅಟಾರ್ನಿ ಸ್ವೇತಾ ಖಾಂಡೆಲ್‌ವಾಲ್‌ ಪ್ರಕಾರ, ಭಾರತೀಯ ಸಮುದಾಯದ ಜನತೆಗೆ ಹೆಚ್ಚು ನಷ್ಟವಾಗಿದೆ.

ಅಮೆರಿಕದಲ್ಲಿ ಉದ್ಯೋಗ ಕಳೆದುಕೊಂಡ ಭಾರತೀಯರ ವೀಸಾವನ್ನು 60 ದಿನಗಳೊಳಗೆ ಹೊಸ ಕಂಪನಿಗೆ ವರ್ಗಾಯಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪೇಪರ್‌ ವರ್ಕ್‌ ಪೂರ್ಣವಾಗುವ ತನಕ ಅಲ್ಲಿ ಇರುವುದರ ಬದಲಿಗೆ ಭಾರತಕ್ಕೆ ಮರಳುವ ಟೆಕ್ಕಿಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ರಿಸೆಶನ್‌ ಭೂತ ಟೆಕ್ಕಿಗಳನ್ನು ಹಿಂಡತೊಡಗಿದೆ. ಅಮೆರಿಕದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಹೊಸ ಉದ್ಯೋಗ ಕಂಡುಕೊಳ್ಳುವುದು ಕೂಡ ಕಷ್ಟವಾಗುತ್ತಿದೆ ಎನ್ನುತ್ತಾರೆ ಸುರಭಿ ಗುಪ್ತಾ.

ಸಾಮೂಹಿಕ ಉದ್ಯೋಗ ಕಡಿತ ಮಾಡಿರುವ 10 ದಿಗ್ಗಜ ಟೆಕ್‌ ಕಂಪನಿಗಳು

ಟ್ವಿಟರ್:‌ ಉದ್ಯಮಿ ಎಲಾನ್‌ ಮಸ್ಕ್‌ ಕಳೆದ ತಿಂಗಳು ಟ್ವಿಟರ್‌ ಅನ್ನು ಸ್ವಾಧೀನಕ್ಕೆ ತೆಗೆದುಕೊಂಡ ಬಳಿಕ, ಕಂಪನಿಯನ್ನು ಲಾಭದ ಹಳಿಗೆ ತರಲು ಕಸರತ್ತು ನಡೆಸುತ್ತಿದ್ದಾರೆ. ಇದರ ಭಾಗವಾಗಿ 50% ಉದ್ಯೋಗ ಕಡಿತಕ್ಕೆ ನಿರ್ಧರಿಸಿದ್ದಾರೆ. ಬೇರೆ ದಾರಿಯೇ ಇಲ್ಲ ಎಂದಿದ್ದಾರೆ. ಸುಮಾರು 7,000 ಉದ್ಯೋಗಿಗಳನ್ನು ಒಳಗೊಂಡಿರುವ ಟ್ವಿಟರ್‌ನಲ್ಲಿ 3,500 ಮಂದಿ ಕೆಲಸ ಕಳೆದುಕೊಂಡಿದ್ದಾರೆ.

ಮೆಟಾ: ಈ ವರ್ಷ ಟೆಕ್‌ ಕಂಪನಿಗಳ ಪೈಕಿ ಮೆಟಾದಲ್ಲಿ ದೊಡ್ಡ ಮಟ್ಟಿನ ಉದ್ಯೋಗ ಕಡಿತ ಸಂಭವಿಸಿದೆ. ತನ್ನ ಸಿಬ್ಬಂದಿ ಬಲದ 13% ಅಂದರೆ 11,000 ಸಿಬ್ಬಂದಿಯನ್ನು ಮೆಟಾ ವಜಾಗೊಳಿಸುತ್ತಿದೆ. ಇದು ಫೇಸ್‌ಬುಕ್‌ನ ಮಾತೃಸಂಸ್ಥೆ. ಮಾರ್ಕ್‌ ಜುಕರ್‌ ಬರ್ಗ್‌ ಇದರ ಮುಖ್ಯಸ್ಥರು.

ಎಚ್‌ಪಿ: ಐಟಿ ವಲಯದ ಹೆವ್ಲೆಟ್-ಪ್ಯಾಕರ್ಡ್‌ ಕಂಪನಿ (ಎಚ್‌ಪಿ) ಮುಂದಿನ ಮೂರು ವರ್ಷಗಳಲ್ಲಿ 6,000 ಉದ್ಯೋಗ ಕಡಿತ ಮಾಡಲಿದೆ. ಪರ್ಸನಲ್‌ ಕಂಪ್ಯೂಟರ್‌ಗಳಿಗೆ ಬೇಡಿಕೆ ಕುಸಿಯುತ್ತಿರುವುದು, ಆದಾಯ ಇಳಿಕೆಯಾಗಿರುವುದು ಇದಕ್ಕೆ ಕಾರಣವಾಗಿದೆ.

ಗೂಗಲ್:‌ ಇಂಟರ್‌ನೆಟ್‌ ಸರ್ಚ್‌ ಎಂಜಿನ್‌ ಗೂಗಲ್‌, ಶೀಘ್ರದಲ್ಲಿಯೇ 10,000 ಉದ್ಯೋಗಗಳನ್ನು ಕಡಿತಗೊಳಿಸಲಿದೆ. ವೆಚ್ಚ ನಿಯಂತ್ರಣಕ್ಕೆ ಒತ್ತಡ ಹೆಚ್ಚಿದೆ.

ಸಿಸ್ಕೊ: ನೆಟ್‌ ವರ್ಕಿಂಗ್‌ ದಿಗ್ಗಜ ಸಿಸ್ಕೊ ಸದ್ಯ 4,000 ಉದ್ಯೋಗಿಗಳನ್ನು ಮನೆಗೆ ಕಳಿಸಲು ನಿರ್ಧರಿಸಿದೆ. ಒಟ್ಟು ಸಿಬ್ಬಂದಿ ಬಲದ 5% ಕಡಿತವಾಗಲಿದೆ.

ಅಮೆಜಾನ್:‌ ಇ-ಕಾಮರ್ಸ್‌ ದಿಗ್ಗಜ ಅಮೆಜಾನ್‌ ತನ್ನ ನಷ್ಟವನ್ನು ನಿಯಂತ್ರಿಸಲು 10,000 ಉದ್ಯೋಗಿಗಳನ್ನು ವಜಾಗೊಳಿಸಲು ಉದ್ದೇಶಿಸಿದೆ.

ಮೈಕ್ರೊಸಾಫ್ಟ್:‌ ಆರ್ಥಿಕ ಹಿಂಜರಿತದ ಪರಿಣಾಮಗಳನ್ನು ಎದುರಿಸುತ್ತಿರುವ ಮೈಕ್ರೊಸಾಫ್ಟ್‌ ಅಕ್ಟೋಬರ್‌ನಲ್ಲಿ 1,000 ಉದ್ಯೋಗಿಗಳನ್ನು ವಜಾಗೊಳಿಸಿದೆ.

ಬೈಜೂಸ್:‌ ಆನ್‌ಲೈನ್‌ ಶಿಕ್ಷಣ ವಲಯದ ದಿಗ್ಗಜ ಬೈಜೂಸ್‌, ಮುಂದಿನ 6 ತಿಂಗಳುಗಳಲ್ಲಿ 2,500 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಈಗಾಗಲೇ 15 ದಿನಗಳ ನೋಟಿಸ್‌ ಅನ್ನು ನೀಡಲು ಆರಂಭಿಸಿದೆ.

ನೆಟ್‌ಫ್ಲಿಕ್ಸ್‌ : ನೆಟ್‌ ಫ್ಲಿಕ್ಸ್‌ನಲ್ಲಿ ಈಗಾಗಲೇ ಎರಡು ಸುತ್ತಿನಲ್ಲಿ ಉದ್ಯೋಗ ಕಡಿತ ನಡೆದಿದೆ. ಕಂಪನಿಯ ಆದಾಯ ಕುಸಿಯುತ್ತಿರುವುದು ಇದಕ್ಕೆ ಕಾರಣ.

ಸ್ನ್ಯಾಪ್:‌ ಸ್ಯ್ನಾಪ್‌ ಸಿಇಒ ಇವಾನ್‌ ಸ್ಪೈಗೆಲ್‌, 1,000 ಕ್ಕೂ ಹೆಚ್ಚು ಮಂದಿಯನ್ನು ವಜಾಗೊಳಿಸಿದ್ದಾರೆ.

ಅಮೆರಿಕದಲ್ಲಿ ಮುಂದಿನ ವರ್ಷ ಆರ್ಥಿಕ ಹಿಂಜರಿತ?

ನಮ್ಮಲ್ಲಿ ಆರ್‌ಬಿಐ ಹೇಗೆಯೋ, ಅದೇ ರೀತಿ ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ಕಾರ್ಯನಿರ್ವಹಿಸುತ್ತದೆ. ಅದರ ಅರ್ಥಶಾಸ್ತ್ರಜ್ಞರ ಪ್ರಕಾರ, ಅಮೆರಿಕದಲ್ಲಿ ಮುಂದಿನ ವರ್ಷ ಆರ್ಥಿಕ ಹಿಂಜರಿತವಾಗುವ ಸಾಧ್ಯತೆ ಇದೆ. ಮಾರುಕಟ್ಟೆಯಲ್ಲಿ ಗ್ರಾಹಕರ ವೆಚ್ಚಗಳು ಇಳಿಕೆಯಾಗುತ್ತಿರುವುದು, ಬಡ್ಡಿ ದರ ಏರಿಕೆ, ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಮುಂದಿನ ವರ್ಷ ಆರ್ಥಿಕ ಹಿಂಜರಿತ ಸಂಭವಿಸಬಹುದು.

ಭಾರತಕ್ಕೆ ಆರ್ಥಿಕ ಹಿಂಜರಿತದ ಆತಂಕ ಇದೆಯೇ?

ಈ ಹಿಂದೆ 2008-09ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಸಂಭವಿಸಿದ್ದಾಗ (Great Recession) ಭಾರತವು ಅದರ ನೇರ ಪರಿಣಾಮಗಳಿಂದ ಪಾರಾಗಿತ್ತು. ಏಕೆಂದರೆ ಭಾರತದ ಹಣಕಾಸು ವಲಯದಲ್ಲಿ ಮುಖ್ಯವಾಗಿ ಬ್ಯಾಂಕ್‌ಗಳು ಜಾಗತಿಕ ಮಾರುಕಟ್ಟೆ ಅಥವಾ ಬ್ಯಾಂಕ್‌ಗಳ ಜತೆಗೆ ನೇರವಾಗಿ ಸಂಪರ್ಕದಲ್ಲಿ ಇದ್ದಿರಲಿಲ್ಲ. ಬಾಹ್ಯ ಮಾರುಕಟ್ಟೆಗಳಿಂದ ಸ್ವತಂತ್ರವಾಗಿತ್ತು. ಹೀಗಾಗಿ ಅದರ ಅಪಾಯವೂ ತಟ್ಟಿರಲಿಲ್ಲ. ಸ್ಥಳೀಯ ಮಾರುಕಟ್ಟೆಯೂ, ಬೇಡಿಕೆಯೂ ಪ್ರಬಲವಾಗಿದ್ದರಿಂದ ವ್ಯಾಪಾರೋದ್ದಿಮೆಗಳಿಗೂ ಭಾರಿ ಸಮಸ್ಯೆ ಆಗಿರಲಿಲ್ಲ. ಅಮೆರಿಕ ಮತ್ತು ಯುರೋಪಿನಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಸೆಂಟ್ರಲ್‌ ಬ್ಯಾಂಕ್‌ಗಳು ಬಡ್ಡಿ ದರವನ್ನು ಏರಿಸುತ್ತಿವೆ. ಆದರೆ ಈ ಬಡ್ಡಿ ದರ ಏರಿಕೆಯ ಪರಿಣಾಮ ಆರ್ಥಿಕ ಚಟುವಟಿಕೆಗಳೇ ಮಂದಗತಿಗೆ ತಿರುಗಿ ಹಿಂಜರಿತಕ್ಕೀಡಾಗದಂತೆ ನೋಡಿಕೊಳ್ಳಬೇಕಾಗಿದೆ. ಆರ್ಥಿಕ ತಜ್ಞರೂ ಕೂಡ ಬಡ್ಡಿ ದರ ಏರಿಕೆಯ ಪ್ರಮಾಣವನ್ನು ತಗ್ಗಿಸುವಂತೆ ಫೆಡರಲ್‌ ರಿಸರ್ವ್‌ಗೆ ಸಲಹೆ ನೀಡಿರುವುದನ್ನು ಗಮನಿಸಬಹುದು.

ವಿಶ್ವಬ್ಯಾಂಕ್‌, ಐಎಂಎಫ್‌ ಸೇರಿದಂತೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು 2023ರಲ್ಲಿ ಭಾರತದ ಜಿಡಿಪಿ ಮುನ್ನೋಟವನ್ನು ಕಡಿತಗೊಳಿಸಿದ ಬಳಿಕವೂ, ವಿಶ್ವದಲ್ಲೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ ಹೊರಹೊಮ್ಮಲಿದೆ. ಜಾಗತಿಕ ಜಿಡಿಪಿ 2023ರಲ್ಲಿ 3.1% ರಿಂದ 2.2%ಕ್ಕೆ ಇಳಿಕೆಯಾಗಬಹುದು. ಹೀಗಿದ್ದರೂ ಭಾರತವು ೨೦೨೨ರಲ್ಲಿ 6.6% ಹಾಗೂ 2023ರಲ್ಲಿ 5.7% ಪ್ರಗತಿ ದಾಖಲಿಸಬಹುದು ಎಂದು ಬಹುತೇಕ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಭವಿಷ್ಯ ನುಡಿದಿವೆ.

ಸೆನ್ಸೆಕ್ಸ್‌ ಸಾರ್ವಕಾಲಿಕ ಜಿಗಿತ: ಸಾಮಾನ್ಯವಾಗಿ ಷೇರು ಮಾರುಕಟ್ಟೆ ಸೂಚ್ಯಂಕಗಳು ಭವಿಷ್ಯದ ಮುನ್ನೋಟವನ್ನೂ ಬಿಂಬಿಸುತ್ತವೆ ಎಂಬ ಮಾತಿದೆ. ಈ ವಾದವನ್ನು ಆಧರಿಸಿ ಹೇಳುವುದಿದ್ದರೆ, ಸೆನ್ಸೆಕ್ಸ್‌ ಮತ್ತು ನಿಫ್ಟಿ ಇದೀಗ ಸಾರ್ವಕಾಲಿಕ ದಾಖಲೆಯ ಎತ್ತರಕ್ಕೇರಿವೆ. ವಿದೇಶಿ ಸಾಂಸ್ಥಿಕ ಹೂಡಿಕೆಯ ಏರಿಳಿತಗಳ ಹೊರತಾಗಿಯೂ, ರಿಟೇಲ್‌ ಹೂಡಿಕೆಯ ಪ್ರಮಾಣ ಕೂಡ ಹೆಚ್ಚುತ್ತಿದೆ. ಇದು ಭಾರತದ ಆರ್ಥಿಕತೆಯ ಬೆಳವಣಿಗೆಯ ಮೇಲೆ ಹೂಡಿಕೆದಾರರಿಗೆ ಇರುವ ವಿಶ್ವಾಸವನ್ನು ಬಿಂಬಿಸಿದೆ.

2023ರ ಆರ್ಥಿಕ ಹಿಂಜರಿತ ಭೀತಿಗೆ ಕಾರಣವೇನು?

ಕೋವಿಡ್-‌19 ಬಿಕ್ಕಟ್ಟಿನ ಬಳಿಕ ಜಾಗತಿಕ ಆರ್ಥಿಕತೆ ಅಯೋಮಯವಾಗಿದೆ. ನಾನಾ ದೇಶಗಳಲ್ಲಿ ತಿಂಗಳಾನುಗಟ್ಟಲೆ ಲಾಕ್‌ಡೌನ್‌ ಹಾಗೂ ನಿರ್ಬಂಧಗಳ ಪರಿಣಾಮ ವಿಶ್ವ ಆರ್ಥಿಕತೆ ಹಳಿ ತಪ್ಪಿತ್ತು. ಕೋವಿಡ್‌ ಪ್ರಕರಣಗಳು ಕಡಿಮೆಯಾದ ಬಳಿಕ ಆರ್ಥಿಕತೆ ಚೇತರಿಸಿದರೂ, ಹಣದುಬ್ಬರದ ಆಘಾತಕ್ಕೆ ಜಗತ್ತಿನ ನಾನಾ ದೇಶಗಳು ತತ್ತರಿಸಿವೆ. ಇದನ್ನು ನಿಯಂತ್ರಿಸಲು ಸೆಂಟ್ರಲ್‌ ಬ್ಯಾಂಕ್‌ಗಳು ಕೈಗೊಳ್ಳುತ್ತಿರುವ ಬಡ್ಡಿ ದರ ಏರಿಕೆಯಿಂದ ಆರ್ಥಿಕ ಚಟುವಟಿಕೆಗಳು ಮಂದಗತಿಗೆ ತಿರುಗಿ ಆರ್ಥಿಕ ಹಿಂಜರಿತ ಸಂಭವಿಸುವ ಭೀತಿ ಕಾಣಿಸಿದೆ.

ವಿದೇಶಗಳಲ್ಲಿ ಉಂಟಾಗಿರುವ ರಾಜಕೀಯ ವಿಪ್ಲವಗಳು, ಮುಖ್ಯವಾಗಿ ರಷ್ಯಾ-ಉಕ್ರೇನ್‌ ಸಂಘರ್ಷದ ಬಳಿಕ ಆರ್ಥಿಕ ಹಿಂಜರಿತದ ಭೀತಿ ಹೆಚ್ಚಿದೆ. ಉಕ್ರೇನ್‌ ವಿರುದ್ಧ ರಷ್ಯಾದ ದಾಳಿಯು 1945ರಿಂದೀಚೆಗೆ ಯುರೋಪ್‌ನಲ್ಲಿ ಅತಿ ದೊಡ್ಡ ಭೂ ಸಂಘರ್ಷವಾಗಿ ಪರಿಣಮಿಸಿದೆ.

ಅಮೆರಿಕ ಮತ್ತು ಚೀನಾದ ಸಂಬಂಧ ಹಳಸಿರುವುದು ಕೂಡ ಉದ್ವಿಗ್ನತೆಗೆ ಕಾರಣವಾಗಿದೆ. ಅಮೆರಿಕ ಮತ್ತು ಯುರೋಪ್‌ನಲ್ಲಿ ಕೋವಿಡ್‌ ಬಿಕ್ಕಟ್ಟಿನ ಬಳಿಕ ಹಣದುಬ್ಬರ ಉಲ್ಬಣಿಸಿದೆ. ಕಳೆದ ನಾಲ್ಕು ದಶಕಗಳಲ್ಲಿಯೇ ಗರಿಷ್ಠ ಮಟ್ಟದ ಹಣದುಬ್ಬರ ಈ ಪಾಶ್ಚಿಮಾತ್ಯ ವಲಯವನ್ನು ಕಾಡುತ್ತಿದೆ. ಹೀಗಿದ್ದರೂ, ಅಮೆರಿಕದಲ್ಲಿ ತೀವ್ರ ಪ್ರಮಾಣದ ಆರ್ಥಿಕ ಹಿಂಜರಿತದ ಅಪಾಯ ಇಲ್ಲ ಎಂಬ ವರದಿಗಳೂ ಇವೆ.‌

————–

” ಅಮೆರಿಕ-ಯುರೋಪ್‌ನಲ್ಲಿನ ತಂತ್ರಜ್ಞಾನ ಕಂಪನಿಗಳಲ್ಲಿ ಉದ್ಯೋಗ ನಷ್ಟ ಸಂಭವಿಸುತ್ತಿದ್ದರೂ, ಇದು ವಿಶ್ವವ್ಯಾಪಿ ಟ್ರೆಂಡ್‌ ಆಗಿಲ್ಲ. ಇದು ನಿರ್ದಿಷ್ಟ ಕಂಪನಿಗಳ ಅಗತ್ಯಗಳಿಗೆ ಸೀಮಿತವಾಗಿದೆ. ಹೀಗಿದ್ದರೂ, ಎಚ್ಚರದ ಅಗತ್ಯತೆ ಇದೆ. ಭಾರತದಲ್ಲೂ ಐಟಿ ಮತ್ತು ಸಂಬಂಧಿತ ಕಂಪನಿಗಳಲ್ಲಿ ಮಾತ್ರ ಸದ್ಯಕ್ಕೆ ಉದ್ಯೋಗ ನಷ್ಟದ ಆತಂಕ ಇದೆಯೇ ಹೊರತು ಉಳಿದ ವಲಯಗಳಲ್ಲಿ ಕಂಡು ಬಂದಿಲ್ಲʼʼ – ಋತುಪರ್ಣ ಚಕ್ರವರ್ತಿ, ಮುಖ್ಯಸ್ಥರು, ಟೀಮ್‌ಲೀಸ್

==============

Exit mobile version