ಪ್ಯಾನ್ -ಆಧಾರ್ ಕಾರ್ಡ್ ಲಿಂಕ್ ಮಾಡಲು (PAN-Aadhaar linking deadline) ನಿಗದಿಯಾಗಿದ್ದ 2023ರ ಮಾರ್ಚ್ 31ರ ಗಡುವನ್ನು ಜೂನ್ 30ಕ್ಕೆ ವಿಸ್ತರಿಸಲಾಗಿದೆ. ಆದರೆ ಇದೊಂದೇ ಅಲ್ಲದೆ, ಇನ್ನೂ ಕೆಲವು ಹಣಕಾಸು ವಿಷಯಗಳ ಗಡುವನ್ನು ವಿಸ್ತರಿಸಲಾಗಿದೆ. ವಿವರ ಇಂತಿದೆ.
ಉದಾಹರಣೆಗೆ ಮ್ಯೂಚುವಲ್ ಫಂಡ್ ಹೂಡಿಕೆದಾರರು ತಮ್ಮ ನಾಮಿನಿ ವಿವರಗಳನ್ನು (mutual fund nomination) ಸಲ್ಲಿಸಲು ನಿಗದಿಯಾಗಿದ್ದ ಗಡುವು 2023ರ ಮಾರ್ಚ್ 31ರಿಂದ 2023ರ ಸೆಪ್ಟೆಂಬರ್ 30ಕ್ಕೆ ವಿಸ್ತರಣೆಯಾಗಿದೆ. ಮಾರುಕಟ್ಟೆ ನಿಯಂತ್ರಕ ಸೆಬಿಯು ಈ ಬಗ್ಗೆ ಮಂಗಳವಾರ ಸುತ್ತೋಲೆ ಹೊರಡಿಸಿದೆ. ಮ್ಯೂಚುವಲ್ ಫಂಡ್ ಸಂಸ್ಥೆಗಳು ನಾಮಿನೇಶನ್ ಪ್ರಕ್ರಿಯೆಯನ್ನು ಇದುವರೆಗೆ ಮಾಡದಿರುವ ಹೂಡಿಕೆದಾರರಿಗೆ, ಪೂರ್ಣಗೊಳಿಸಲು ಉತ್ತೇಜನ ನೀಡಬೇಕು. ಇ-ಮೇಲ್, ಎಸ್ಸೆಮ್ಮೆಸ್‌ಗಳನ್ನು ಕಳಿಸಬೇಕು ಎಂದು ಸೆಬಿ ತಿಳಿಸಿದೆ.
2022ರ ಜೂನ್ 15ರ ಸುತ್ತೋಲೆಯಲ್ಲಿ ಸೆಬಿಯು ಮ್ಯೂಚುವಲ್ ಫಂಡ್ ಹೂಡಿಕೆಗೆ ನಾಮಿನೇಶನ್ ಕಡ್ಡಾಯ ಎಂದು ತಿಳಿಸಿತ್ತು. ಬಳಿಕ ಗಡುವನ್ನು 2022ರ ಅಕ್ಟೋಬರ್ 1ಕ್ಕೆ ವಿಸ್ತರಿಸಲಾಯಿತು. ಬಳಿಕ 2023ರ ಮಾರ್ಚ್ 31ಕ್ಕೆ ಹಾಗೂ ಇದೀಗ 2023ರ ಸೆಪ್ಟೆಂಬರ್ 30ಕ್ಕೆ ವಿಸ್ತರಿಸಲಾಗಿದೆ.
ನಾಮಿನೇಶನ್ ಏಕೆ? ಮ್ಯೂಚುವಲ್ ಫಂಡ್ ಹೂಡಿಕೆದಾರರು ಮೃತಪಟ್ಟ ಸಂದರ್ಭದಲ್ಲಿ ಅವರ ಉತ್ತರಾಧಿಕಾರಿ ಯಾರು ಎಂಬುದನ್ನು ನಾಮಿನೇಶನ್ ಮೂಲಕ ತಿಳಿಸಲಾಗುತ್ತದೆ. ಇದರಿಂದ ಹೂಡಿಕೆಯ ಹಿಂತೆಗೆತ ಪ್ರಕ್ರಿಯೆ ಸುಗಮವಾಗುತ್ತದೆ. ಆದ್ದರಿಂದ ನಾಮಿನೇಶನ್ ಸಲ್ಲಿಕೆ ಕಡ್ಡಾಯಗೊಳಿಸಲಾಗಿದೆ. ನಿಮ್ಮ ಮ್ಯೂಚುವಲ್ ಫಂಡ್ ಸಂಸ್ಥೆಯ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲೂ ನಾಮಿನೇಶನ್ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಮ್ಯೂಚುವಲ್ ಫಂಡ್ ಖಾತೆಗೆ ನಾಮಿನಿಯನ್ನು ಸೇರಿಸುವುದು ಹೇಗೆ?
ಮ್ಯೂಚುವಲ್ ಫಂಡ್ ಹೂಡಿಕೆದಾರರು ನಾಮಿನೇಶನ್ ಅರ್ಜಿಯನ್ನು ಮೊದಲು ಭರ್ತಿಗೊಳಿಸಬೇಕು. ಸಹಿ ಹಾಕಬೇಕು, ಬಳಿಕ ಮ್ಯೂಚುವಲ್ ಫಂಡ್ ಕಂಪನಿಗೆ ಅಥವಾ ನೋಂದಾಯಿತ ಏಜೆನ್ಸಿಗೆ ರವಾನಿಸಬೇಕು. ಆನ್‌ಲೈನ್ ಮೂಲಕವೂ ನಾಮಿನಿಯನ್ನು ಸೇರಿಸಬಹುದು.
ಡಿಮ್ಯಾಟ್, ಟ್ರೇಡಿಂಗ್ ಖಾತೆಗೆ ನಾಮಿನಿ ಸೇರಿಸಲು ಗಡುವು ವಿಸ್ತರಣೆ:
ಮಾರುಕಟ್ಟೆ ನಿಯಂತ್ರಕ ಸೆಬಿಯು ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಗೆ ನಾಮಿನಿಯನ್ನು ಸೇರಿಸಲು ಗಡುವನ್ನು 2023ರ ಸೆಪ್ಟೆಂಬರ್ 30 ತನಕ ವಿಸ್ತರಿಸಿದೆ.
ಡಿಮ್ಯಾಟ್ ಖಾತೆಗೆ ನಾಮಿನಿಯನ್ನು ಸೇರಿಸುವ ವಿಧಾನ:
ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಡಿಮ್ಯಾಟ್ ಖಾತೆಗೆ ನಾಮಿನಿಯನ್ನು ಸೇರಿಸಬಹುದು. ಡಿಮ್ಯಾಟ್ ಖಾತೆಯನ್ನು ತೆರೆದು ಪ್ರೊಫೈಲ್ ಸೆಗ್ಮೆಂಟ್‌ಗೆ (Profile Segment) ತೆರಳಬೇಕು.
ಡಿಮ್ಯಾಟ್ ಅಕೌಂಟ್‌ಗೆ ಲಾಗಿನ್ ಆದ ಬಳಿಕ Add Nominee ಅಥವಾ Opt-out ಆಯ್ಕೆ ಮಾಡಿಕೊಳ್ಳಿ.
ವಿವರಗಳನ್ನು ಭರ್ತಿಗೊಳಿಸಿ, ಐಡಿ ಪ್ರೂಫ್ ಸಲ್ಲಿಸಿ.
ಆಧಾರ್ ಒಟಿಪಿ ಮೂಲಕ ಇ-ಸೈನ್ ಪ್ರಕ್ರಿಯೆ ಪೂರ್ಣಗೊಳಿಸಿ. ನಾಮಿನಿಯ ವಿವರಗಳನ್ನು ನಮೂದಿಸಿ.