Site icon Vistara News

ವಿಸ್ತಾರ Explainer: ಇಂಟರ್‌ನೆಟ್ ಮಾತ್ರವಲ್ಲ, ದೇಶದ ಎಕಾನಮಿ ಸ್ಪೀಡನ್ನೂ ಹೆಚ್ಚಿಸಲಿದೆ 5G!

5G

ದೇಶದ ಎಕಾನಮಿಯನ್ನೇ ಬದಲಿಸಲು ಶೀಘ್ರದಲ್ಲಿಯೇ ಬರಲಿದೆ 5G. ಇದರ ಸ್ಪೀಡ್‌ ಎಷ್ಟೆಂದರೆ, ಈಗಿನ 4Gಗಿಂತಲೂ 10 ಪಟ್ಟು ಹೆಚ್ಚು. ಹಾಗಂತ ಇದು ಕೇವಲ ಇಂಟರ್‌ನೆಟ್ ಸ್ಪೀಡ್‌ ಹೆಚ್ಚಿಸುವುದಲ್ಲ.‌ ೫ಜಿಯ ಉಪಯೋಗಗಳು ಹಲವು. ಹಾಗಾದರೆ 5G ಬಂದ ಬಳಿಕ ಭಾರತ ಹೇಗೆ ಬದಲಾಗಲಿದೆ? ಇದರಿಂದಾಗಿ ಜನ ಸಾಮಾನ್ಯರಿಗೆ, ಇಂಡಸ್ಟ್ರಿಗಳಿಗೆ ಲಾಭವೇನು? ಎಕಾನಮಿಯ ಅಬಿವೃದ್ಧಿ ಆಗುವುದಾದರೂ ಹೇಗೆ? ಇದರ ಜಾರಿಯಲ್ಲಿ ಇರುವಂಥ ಸವಾಲುಗಳಾದರೂ ಏನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಏನಿದು 5G?

ಇದು ಐದನೇ ಪೀಳಿಗೆಯ ಸೆಲ್ಯುಲಾರ್‌ ನೆಟ್‌ವರ್ಕ್‌. ಈಗಿನ 4Gಗೆ ಹೋಲಿಸಿದರೆ 10 ಪಟ್ಟು ಹೆಚ್ಚು ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಜನರಿಗೆ ದೈನಂದಿನ ಬಳಕೆಗೆ ಹಾಗೂ ಟೆಲಿಕಾಂ ತಂತ್ರಜ್ಞಾನ ಆಧಾರಿತ ಇಂಡಸ್ಟ್ರಿಗಳಿಗೆ ನೂರಾರು ರೀತಿಯಲ್ಲಿ ಉಪಯೋಗವಾಗಲಿದೆ. ಟೆಲಿಕಾಂ ಕಂಪನಿಗಳ ಆದಾಯವನ್ನೂ ಇದು ಹೆಚ್ಚಿಸುವ ನಿರೀಕ್ಷೆ ಇದೆ.
1G ಯುಗದಲ್ಲಿ ನೋಡುವುದಾದರೆ ಬ್ರೀಫ್‌ಕೇಸ್‌ ಸೈಜಿನ ಫೋನ್‌ಗಳಿದ್ದವು. ಹೆಚ್ಚು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಸಣ್ಣ ಸಂಖ್ಯೆಯಲ್ಲಿ ವೃತ್ತಿಪರರು ಮಾತ್ರ ಬಳಸುತ್ತಿದ್ದರು.
ಆಮೇಲೆ 2G ಕಾಲದಲ್ಲಿ ಮೊಬೈಲ್‌ಗಳು ಜನಪ್ರಿಯವಾಯಿತು. 3G ಬಂದ ಬಳಿಕ ಮೊಬೈಲ್‌ಗಳ ಉಪಯೋಗ ಹೆಚ್ಚಾಯಿತು. ಎಸ್ಸೆಮ್ಮೆಸ್‌ ಮತ್ತು ಮೊಬೈಲ್‌ ಇಂಟರ್‌ನೆಟ್‌ ಯುಗ ಆರಂಭವಾಯಿತು.
ಈಗಿನ 4G ಯುಗದಲ್ಲಿ ನಾವೆಲ್ಲ ಸ್ಮಾರ್ಟ್‌ಫೋನ್‌ ಬಳಸುತ್ತೇವೆ. ನೂರಾರು ಬಗೆಯ ಮೊಬೈಲ್‌ ಆಪ್‌ಗಳು ದಿನ ಬಳಕೆಯಲ್ಲಿವೆ. ಲಕ್ಷಾಂತರ ಮಂದಿ ಯೂಟ್ಯೂಬ್‌ ಚಾನೆಲ್‌ ಹೊಂದಿದ್ದಾರೆ. ಮನೆಯಿಂದ ಹೊರಗೆ ಕಾಲಿಟ್ಟರೆ ಈಗ ಜೇಬಿನಲ್ಲಿ ನಗದು ನೋಟು ಬೇಕಿಲ್ಲ. ಪೇಟಿಎಂ, ಗೂಗಲ್‌ ಪೇ, ಫೋನ್‌ಪೇ ಇತ್ಯಾದಿ ಆಪ್‌ಗಳಿರುವ ಸ್ಮಾರ್ಟ್‌ಫೋನ್‌ ಇದ್ದರೆ ಸಾಕು.
ಈಗ ಬರಲು ಸಜ್ಜಾಗಿರುವ 5G ಅಂತೂ ನಮ್ಮ ವೃತ್ತಿ, ಉದ್ಯೋಗ, ವೈಯಕ್ತಿಕ ಜೀವನದ ಮೇಲೆ ಗಾಢವಾದ ಮತ್ತು ಅತ್ಯಂತ ಉಪಯುಕ್ತ, ಸಕಾರಾತ್ಮಕ ಪ್ರಭಾವವನ್ನು ಬೀರಬಲ್ಲುದು. ಇಂಡಸ್ಟ್ರಿಯ ಸಮಗ್ರ ಡಿಜಿಟಲೀಕರಣವನ್ನು ಕಾಣಬಹುದು. ಮಾತ್ರವಲ್ಲದೆ ಮೆಶೀನ್‌ ಟು ಮೆಶೀನ್‌ ಕಮ್ಯುನಿಕೇಶನ್‌, ಇಂಟರ್‌ನೆಟ್‌ ಆಫ್‌ ಥಿಂಗ್ಸ್‌, ಕೃತಕ ಬುದ್ಧಿಮತ್ತೆ, ಆಟೊಮೇಟಿವ್‌, ಆರೋಗ್ಯ, ಕೃಷಿ, ಇಂಧನ, ಶಿಕ್ಷಣ ಮತ್ತಿತರ ಕ್ಷೇತ್ರಗಳ ಲಾಭವನ್ನು ಹೆಚ್ಚಿಸಲಿದೆ. 5G ಸ್ಪೆಕ್ಟ್ರಮ್‌ ಹರಾಜಿಗೆ ಮೊದಲೇ ಅದನ್ನು ಬೆಂಬಲಿಸಬಲ್ಲ ಸ್ಮಾರ್ಟ್‌ಫೋನ್‌ಗಳನ್ನು ಕಂಪನಿಗಳು ತಯಾರಿಸಿವೆ.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈಗಾಗಲೇ 5G ಕ್ರಾಂತಿಕಾರಕ ಸಕಾರಾತ್ಮಕ ಪರಿಣಾಮಗಳನ್ನು ಉಂಟು ಮಾಡಿದೆ. ಚೀನಾ ಮತ್ತು ಅಮೆರಿಕದ ಒಟ್ಟು 652 ನಗರಗಳಲ್ಲಿ 5G ನೆಟ್‌ವರ್ಕ್‌ ಬಂದಿದೆ. ಪಿಲಿಪ್ಪೀನ್ಸ್‌, ದಕ್ಷಿಣ ಕೊರಿಯಾ, ಕೆನಡಾ, ಇಟಲಿ, ಜರ್ಮನಿ, ಬ್ರಿಟನ್‌, ಸೌದಿ ಅರೇಬಿಯಾದ ನಗರಗಳಲ್ಲಿ 5G ಪ್ರಯೋಗ ನಡೆದಿದೆ.
ಈ ದೇಶಗಳಲ್ಲಿ ವಿದ್ಯುತ್‌ ವಿತರಣೆಯ ಗ್ರಿಡ್‌ಗಳ ಜಾಲ ಸ್ಮಾರ್ಟ್‌ ಆಗಿದೆ. ವಾಹನಗಳ ಸಂಚಾರ ದಟ್ಟಣೆಯ ದಕ್ಷತೆ ಸುಧಾರಿಸಿದ್ದು, ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ತುರ್ತು ಸಂದರ್ಭಗಳಲ್ಲಿ ಸೇವೆಗಳನ್ನು ಒದಗಿಸಲು ಉಪಯೋಗವಾಗಿದೆ. ಸೆನ್ಸರ್‌ಗಳ ಮೂಲಕ ಪ್ರಾಕೃತಿಕ ವಿಕೋಪಗಳನ್ನು ಮೊದಲೇ ಅರಿತುಕೊಳ್ಳಲು ಸುಲಭವಾಗಿದೆ. ಡ್ರೋನ್‌ಗಳ ಬಳಕೆ ವ್ಯಾಪಕವಾಗಿದೆ. ರೋಗಿಗಳಿಗೆ ತಜ್ಞ ವೈದ್ಯರಿಂದ ನೆರವು ಒದಗಿಸಲು ಬಳಕೆಯಾಗುತ್ತಿದೆ. ಇಂಡಸ್ಟ್ರಿಗಳಲ್ಲಿ ಬೇಡಿಕೆ ಮತ್ತು ಪೂರೈಕೆಯನ್ನು ತಿಳಿದುಕೊಂಡು ಉತ್ಪಾದನೆಯನ್ನು ಹೊಂದಾಣಿಕೆ ಮಾಡಲು ಸಹಾಯಕವಾಗಿದೆ. ಕೃಷಿ, ಸ್ಟಾರ್ಟಪ್‌, ಶಿಕ್ಷಣಕ್ಷೇತ್ರದ ಅಭಿವೃದ್ಧಿಗೆ ಅನುಕೂಲ ಮಾಡಿಕೊಟ್ಟಿದೆ.

ಜನ ಸಾಮಾನ್ಯರಿಗೆ ಪ್ರಯೋಜನವೇನು?
ಯಾವುದೇ ದೇಶದ ಎಕಾನಮಿ ಸುಧಾರಿಸಿದರೆ, ಬಡತನ ನಿವಾರಣೆಯ ನಿಟ್ಟಿನಲ್ಲಿ ಪ್ರಯೋಜನವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆರ್ಥಿಕ ಚಟುವಟಿಕೆ ಅಭಿವೃದ್ಧಿಯಾದಾಗ ಸರಕಾರಕ್ಕೆ ತೆರಿಗೆ ಆದಾಯ ಹೆಚ್ಚುತ್ತದೆ. ರಸ್ತೆ, ರೈಲು, ಆಸ್ಪತ್ರೆ, ಶಾಲೆ ಇತ್ಯಾದಿ ಮೂಲಸೌಕರ್ಯಗಳಿಗೆ ಹೆಚ್ಚು ಹೂಡಿಕೆ ಮಾಡುತ್ತದೆ. ಇದು ಮತ್ತಷ್ಟು ಖಾಸಗಿ ಬಂಡವಾಳ ಹೂಡಿಕೆಯನ್ನೂ ಆಕರ್ಷಿಸುತ್ತದೆ. ದೇಶ-ವಿದೇಶಗಳ ಕಂಪನಿಗಳು ಇನ್ವೆಸ್ಟ್‌ ಮಾಡುತ್ತವೆ. ಆಗ ಉಂಟಾಗುವ ಉದ್ಯೋಗ ಸೃಷ್ಟಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಎಲ್ಲಕ್ಕಿಂತ ಹೆಚ್ಚು ಅನುಕೂಲ ಮಾಡಿಕೊಡುತ್ತದೆ. ಇಂಥ ಉದ್ಯಮಸ್ನೇಹಿ ವಾತಾವರಣ ಸೃಷ್ಟಿಗೆ 5G ಅಗತ್ಯ ಎನ್ನುತ್ತಾರೆ ತಜ್ಞರು.
ಎಲ್ಲ ಕ್ಷೇತ್ರಗಳಲ್ಲೂ ‌ಯಾವುದೇ ಕಷ್ಟದ ಸಂದರ್ಭಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು, ಮಾರುಕಟ್ಟೆಗಳನ್ನು ಒಗ್ಗೂಡಿಸಲು ಇದು ಪರಿಣಾಮಕಾರಿಯಾಗಲಿದೆ. ಉದಾಹರಣೆಗೆ ನಾನಾ ರಾಜ್ಯಗಳಲ್ಲಿ ರೈತರು ಕೋವಿಡ್‌ ಲಾಕ್‌ ಡೌನ್ ಸಂದರ್ಭ ತಮ್ಮ ಉತ್ಪನ್ನಗಳನ್ನು ಆನ್‌ಲೈನ್‌ ಮೂಲಕವೇ ಮಾರಾಟ ಮಾಡಿದ್ದರು. ಅನೇಕ ಮಂದಿ ಮನೆಯಲ್ಲೇ ಮಕ್ಕಳಿಗೆ ಆನ್‌ಲೈನ್‌ ಟ್ಯೂಷನ್‌ ನೀಡಿದ್ದರು. ಸಾವಿರಾರು ಮಂದಿ ಯೂಟ್ಯೂಬ್‌ ಮೂಲಕ ಹೊಸ ಮಾರುಕಟ್ಟೆಯನ್ನು ಕಂಡುಕೊಂಡಿದ್ದರು. 5G ಮೂಲಕ ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಂತರ ಕಡಿಮೆಯಾಗಲಿದೆ. ಹಿಂದುಳಿದ ಪ್ರದೇಶಗಳಲ್ಲೂ ನಗರಗಳ ಸೌಕರ್ಯಗಳನ್ನು ಮುಟ್ಟಿಸಲು ಟೆಕ್ನಾಲಜಿ ನೆರವಾಗಲಿದೆ. ಭವಿಷ್ಯದ ದಿನಗಳಲ್ಲಿ ಬಡ ವಿದ್ಯಾರ್ಥಿಗಳು ಎಲ್ಲಿದ್ದರೂ, ಆನ್‌ಲೈನ್‌ ಮೂಲಕ ಗುಣಮಟ್ಟದ ಶಿಕ್ಷಣ ಪಡೆಯಲು ಹಾದಿ ಸುಗಮವಾಗಲಿದೆ. ಅವರೂ ವರ್ಚಯವಲ್‌ ಕ್ಲಾಸ್‌ ರೂಮ್‌ಗಳ ಮೂಲಕ ಕಲಿಯಬಹುದು. ಆನ್‌ಲೈನ್‌ ದೂರ ಶಿಕ್ಷಣದಲ್ಲಿ ಕ್ರಾಂತಿಕಾರಕ ಬದಲಾವಣೆ ಉಂಟಾಗಲಿದೆ.
ಆರೋಗ್ಯ ಕ್ಷೇತ್ರದಲ್ಲೂ 5G ಟೆಕ್ನಾಲಜಿಯಿಂದ ಸಾಕಷ್ಟು ಅನುಕೂಲವಾಗಲಿದೆ. ಹಳ್ಳಿಗಳಲ್ಲೂ ಸ್ಥಳೀಯ ಕಿಯೋಸ್ಕ್‌ಗಳ ಮೂಲಕ ನುರಿತ ವೈದ್ಯರಿಂದ ಕನ್ಸಲ್ಟೇಶನ್‌ ಪಡೆದು ಆರೋಗ್ಯ ಸುಧಾರಿಸಿಕೊಳ್ಳಬಹುದು. ಐಒಟಿ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ದೇಶದ ಹೆಲ್ತ್‌ ಕೇರ್‌ಗೆ ಹೊಸ ಆಯಾಮ ನೀಡಲಿದೆ.
ನಮ್ಮ ದೇಶದಲ್ಲಿ ಬಹುಪಾಲು ಕೃಷಿಕರೂ ಸಣ್ಣ ಹಿಡುವಳಿದಾರರು. ಅವರಿಗೆ ಕೃಷಿ ಉತ್ಪಾದನೆ ಹೆಚ್ಚಿಸಲು 5G ಸಹಕಾರಿಯಾಗಲಿದೆ. ಮಣ್ಣಿನ ಗುಣಮಟ್ಟ ಪರೀಕ್ಷೆಗೆ ಸ್ಮಾಟ್‌ ಸೆನ್ಸರ್‌, ಮಣ್ಣಿನ ತೇವಾಂಶದಿಂದ ಮಾರುಕಟ್ಟೆಯಲ್ಲಿ ಉತ್ಪನ್ನಗಳ ದರ ಏರಿಳಿತ, ಸ್ವತಃ ತಮ್ಮದೇ ಮೌಲ್ಯ ವರ್ಧಿತ ಉತ್ಪನ್ನಗಳ ಮಾರಾಟಕ್ಕೆ 5G ತಂತ್ರಜ್ಞಾನದ ಬೆಂಬಲ ಸಿಗಲಿದೆ.
ಮನರಂಜನೆಯ ಕ್ಷೇತ್ರದಲ್ಲೂ 5G ಹೊಸ ಕ್ರಾಂತಿಗೆ ಕಾರಣವಾಗಲಿದೆ. ಮುಖ್ಯವಾಗಿ ವೀಡಿಯೊ ವೀಕ್ಷಣೆಯ ಗುಣಮಟ್ಟ ವೃದ್ಧಿಸಲಿದೆ. ಡೌನ್‌ಲೋಡ್‌ ಸ್ಪೀಡ್‌ ವೃದ್ಧಿಸಲಿದೆ.

ಮನೆಯಿಂದಲೇ ಕೆಲಸ ಮಾಡಲು ಅನುಕೂಲ
ಕೋವಿಡ್‌ ಬಿಕ್ಕಟ್ಟಿನ ಲಾಕ್‌ ಡೌನ್‌ ಸಂದರ್ಭ ಭಾರತ ಎರಡೂವರೆ ತಿಂಗಳಿಗೂ ಹೆಚ್ಚು ಕಾಲ ಸ್ತಬ್ಧವಾಗಿತ್ತು. ಮನೆ ಬಿಟ್ಟು ಹೊರಗೆ ಹೋಗುವಂತಿರಲಿಲ್ಲ. ಲಾಕ್‌ ಡೌನ್‌ ಆದ ಒಂದೇ ವಾರದೊಳಗೆ ಬಹುತೇಕ ಐಟಿ ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಸೂಚಿಸಿತ್ತು. ಹೀಗಾಗಿ ದೇಶದ ಆರ್ಥಿಕತೆಗೂ ಭಾರಿ ಕುಸಿತವಾಗದಂತೆ ತಡೆಯಲು ಸಾಧ್ಯವಾಯಿತು. 5G ನೆಟ್‌ವರ್ಕ್‌ ಪರಿಣಾಮ ವರ್ಕ್‌ ಫ್ರಂ ಹೋಮ್‌ ಮತ್ತಷ್ಟು ಸುಲಭವಾಗಲಿದೆ. ಉದ್ಯೋಗಿಗಳು ಎಲ್ಲಿದ್ದರೂ ಕೆಲಸ ಮಾಡಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ, ಶಿಕ್ಷಣ ಮುಂದುವರಿಸಲು ಭಾರಿ ಅನುಕೂಲವಾಗಲಿದೆ. ವರ್ಕ್‌ ಫ್ರಂ ಹೋಮ್‌ ಪರಿಕಲ್ಪನೆ ಈಗ ಹಲವು ಇಂಡಸ್ಟ್ರಿಗಳಲ್ಲಿ ಸಾಮಾನ್ಯವಾಗಿದೆ. ಇದಕ್ಕೆ ಕಾರಣ ಟೆಲಿಕಾಂ ತಂತ್ರಜ್ಞಾನದ ಅಭಿವೃದ್ಧಿ.

5G ಜಮಾನಾ ಶೀಘ್ರದಲ್ಲೇ ಆರಂಭ
ಮೊದಲನೆಯದಾಗಿ ಭಾರತದಲ್ಲಿ ಮುಂದಿನ ಜುಲೈ ಮುಗಿಯುವುರೊಳಗೆ ಬಹು ನಿರೀಕ್ಷಿತ 5G ಸ್ಪೆಕ್ಟ್ರಮ್‌ ಹರಾಜು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಈ ಬಗ್ಗೆ ತನ್ನ ಅನುಮೋದನೆ ನೀಡಿದೆ. ಜೂನ್‌ 15ರಂದು ಈ ಬಗ್ಗೆ ಅಧಿಕೃತವಾಗಿ ಘೋಷಿಸಲಾಗಿದೆ. ಇದರೊಂದಿಗೆ ದೇಶದಲ್ಲಿ 5G ಜಮಾನಾ ಸನ್ನಿಹಿತವಾಗಿದೆ.
ಸರಕಾರ ಒಟ್ಟು 72097.85 ಮೆಗಾ ಹರ್ಟ್ಸ್‌ ಸ್ಪೆಕ್ಟ್ರಮ್‌ ಅನ್ನು ಹರಾಜಿಗಿಡಲಿದೆ. 20 ವರ್ಷಗಳ ಅವಧಿಗೆ ಈ ತರಂಗ ಗುಚ್ಛಗಳು ಸಿಗಲಿವೆ. 2022ರ ಜುಲೈ ಅಂತ್ಯದೊಳಗೆ ಹರಾಜು ನಡೆಸಲು ಸರಕಾರ ಉದ್ದೇಶಿಸಿದೆ.
600 MHz, 700MHz, 800MHz, 900MHz, 1800MHz, 2100MHz, 2300MHz ಮತ್ತು 26GHz ಶ್ರೇಣಿಗಳ ತರಂಗಾಂತರಗಳಲ್ಲಿ ಸ್ಪೆಕ್ಟ್ರಮ್‌ ಹರಾಜು ನಡೆಯಲಿದೆ.
ದೂರ ಸಂಪರ್ಕ ಇಲಾಖೆ ಕೂಡಲೇ ಹರಾಜಿಗೆ ಸಂಬಂಧಿಸಿ ಅರ್ಜಿಗಳನ್ನು ಆಹ್ವಾನಿಸಲಿದೆ ( Notice Inviting Applications- NIA) ದೂರಸಂಪರ್ಕ ಇಲಾಖೆಯು ಈ ಅರ್ಜಿಗಳನ್ನು ಆಹ್ವಾನಿಸಿದ ಬಳಿಕ ಹರಾಜು ನಡೆಸಲು ಕೆಲ ವಾರಗಳ ಅವಧಿ ಬೇಕಾಗುತ್ತದೆ. ಟ್ರಾಯ್‌ ಶಿಫಾರಸಿನ ಮೇರೆಗೆ ಕೇಂದ್ರ ಸರಕಾರ ಹರಾಜಿನ ಮೂಲ ದರಗಳನ್ನು ನಿಗದಿಪಡಿಸಲಿದೆ. ದೇಶದ ಅತಿ ದೊಡ್ಡ ಸ್ಪೆಕ್ಟ್ರಮ್‌ ಹರಾಜು ಇದಾಗಲಿದೆ.

ಮೂಲ ದರ ಇಳಿಸಲು ಖಾಸಗಿ ಟೆಲಿಕಾಂ ಕಂಪನಿಗಳ ಪಟ್ಟು
ಸ್ಪೆಕ್ಟ್ರಮ್‌ ದುಬಾರಿಯಾಗಲಿದ್ದು, ಟೆಲಿಕಾಂ ಕಂಪನಿಗಳು ಈ ಹೊರೆಯನ್ನು ಹೊತ್ತುಕೊಳ್ಳುವುದು ಅನಿವಾರ್ಯವಾಗಲಿದೆ. ಈಗಾಗಲೇ ಖಾಸಗಿ ಟೆಲಿಕಾಂ ಕಂಪನಿಗಳು ಭಾರಿ ದರ ವಿಧಿಸಬಾರದು ಎಂದಿವೆ. ಮೂಲ ದರ ಅತ್ಯಧಿಕ ಮಟ್ಟದಲ್ಲಿ ಇದ್ದರೆ ಭಾಗವಹಿಸುವುದಿಲ್ಲ ಎಂದು ಏರ್‌ಟೆಲ್‌ ತಿಳಿಸಿದೆ.
ಕಳೆದ ತಿಂಗಳು ಡಿಜಿಟಲ್‌ ಕಮ್ಯುನಿಕೇಶನ್ಸ್‌ ಕಮೀಶನ್‌ 5G ಹರಾಜಿಗೆ ಅನುಮೋದಿಸಿತ್ತು. ಮೂಲ ದರದಲ್ಲಿ 90% ಕಡಿತಕ್ಕೆ ಮೊಬೈಲ್‌ ಸೇವೆಗಳನ್ನು ನೀಡುವ ಕಂಪನಿಗಳು ಲಾಬಿ ನಡೆಸಿವೆ.
ಮೊದಲ ಬಾರಿಗೆ ಬಿಡ್‌ನಲ್ಲಿ ಗೆದ್ದವರು ಸ್ಪೆಕ್ಟ್ರಮ್‌ ಖರೀದಿಗೆ ಮುಂಗಡ ಪಾವತಿಸಬೇಕಿಲ್ಲ. 20 ಕಂತುಗಳಲ್ಲಿ ಶುಲ್ಕ ಪಾವತಿಸಬಹುದು. 10 ವರ್ಷಗಳ ಬಳಿಕ ಬಿಡ್ಡರ್‌ಗಳು ಸ್ಪೆಕ್ಟ್ರಮ್‌ ಅನ್ನು ಹಿಂತಿರುಗಿಸಲೂ ಅವಕಾಶ ನೀಡಲಾಗಿದೆ. ಟ್ರಾಯ್‌ ಈ ಹಿಂದೆ 5 ಲಕ್ಷ ಕೋಟಿ ರೂ.ಗಳ ಮೂಲ ದರವನ್ನು ಶಿಫಾರಸು ಮಾಡಿತ್ತು.

ಖಾಸಗಿ ನೆಟ್‌ವರ್ಕ್‌ ಅಭಿವೃದ್ಧಿಗೆ ಅವಕಾಶ
ಸರಕಾರ ಪ್ರೈವೇಟ್‌ ಕ್ಯಾಪ್ಟಿವ್‌ ನೆಟ್‌ವರ್ಕ್‌ಗಳನ್ನು (Private captive networks) ಸ್ಥಾಪಿಸಲು ಕೂಡ ಹಾದಿ ಸುಗಮಗೊಳಿಸಿದೆ. ಇದರಿಂದ ಉದ್ಯಮ ಕ್ಷೇತ್ರದಲ್ಲಿ ಹೊಸ ಬಗೆಯ ಮೆಶೀನ್-ಟು ಮೆಶೀನ್‌ ಕಮ್ಯುನಿಕೇಶನ್‌, ಇಂಟರ್‌ನೆಟ್‌ ಆಫ್‌ ಥಿಂಗ್ಸ್‌, ಕೃತಕ ಬುದ್ಧಿಮತ್ತೆ (ಎಐ), ಆಟೊಮೇಟಿವ್‌ ತಂತ್ರಜ್ಞಾನಗಳ ವ್ಯಾಪಕ ಅಭಿವೃದ್ಧಿ ನಿರೀಕ್ಷಿಸಲಾಗಿದೆ. ಆರೋಗ್ಯ, ಕೃಷಿ, ಇಂಧನ ಮತ್ತಿತರ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಪ್ರಗತಿಗೆ ಹಾದಿ ತೆರೆದುಕೊಳ್ಳಲಿದೆ ಎನ್ನುತ್ತಾರೆ ತಜ್ಞರು. 5G ಸ್ಪೆಕ್ಟ್ರಮ್‌ ಹರಾಜಿಗೆ ಅನುಮತಿ ನೀಡುವುದರೊಂದಿಗೆ ಭಾರತದ ಟೆಲಿಕಾಂ ವಲಯದಲ್ಲಿ ಹೊಸ ಯುಗಾರಂಭ ಆದಂತಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ.

ಬೆಂಗಳೂರಿಗೆ ಮೊದಲು ಸಿಗಲಿದೆ 5G
ಬೆಂಗಳೂರು ಸೇರಿದಂತೆ 13 ನಗರಗಳಲ್ಲಿ ಮೊದಲ ಬಾರಿಗೆ 5G ಸೇವೆ ಸಿಗಲಿದೆ.
ಬೆಂಗಳೂರು, ಅಹಮದಾಬಾದ್‌, ಚಂಡೀಗಢ, ಚೆನ್ನೈ, ನವದೆಹಲಿ, ಗಾಂಧಿನಗರ, ಗುರ್‌ಗಾಂವ್‌, ಹೈದರಾಬಾದ್‌, ಜಾಮ್‌ನಗರ್‌, ಕೋಲ್ಕೊತಾ, ಲಖನೌ, ಮುಂಬಯಿ ಮತ್ತು ಪುಣೆಯಲ್ಲಿ ಮೊದಲು 5G ನೆಟ್‌ ವರ್ಕ್‌ ಸೌಲಭ್ಯ ಸಿಗಲಿದೆ.

ಪ್ರಧಾನಿ ನರೇಂದ್ರ ಮೋದಿ 5G ಬಗ್ಗೆ ಹೇಳಿದ್ದೇನು?
ಇಪ್ಪತ್ತೊಂದನೇ ಶತಮಾನದಲ್ಲಿ ದೇಶದ ಆರ್ಥಿಕ ಬೆಳವಣಿಗೆಗೆ ಸಂಪರ್ಕ ಕ್ಷೇತ್ರದಲ್ಲಿ ಸುಧಾರಣೆ ಅವಶ್ಯಕ. 5G ಅಂಥ ಸಕಾರಾತ್ಮಕ ಬದಲಾವಣೆಯನ್ನು ಉಂಟು ಮಾಡಲಿದೆ. ಇದರಿಂದಾಗಿ ಮುಂದಿನ 10 ವರ್ಷಗಳಲ್ಲಿ ಭಾರತದ ಜಿಡಿಪಿ ಪ್ರಗತಿಗೆ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಇತ್ಯಾದಿಗಳ ಮೂಲಕ 450 ಶತಕೋಟಿ ಡಾಲರ್‌, ಅಂದರೆ ಅಂದಾಜು 35 ಲಕ್ಷ ಕೋಟಿ ರೂ. ಸೇರ್ಪಡೆಯಾಗಲಿದೆ ಎನ್ನುತ್ತಾರೆ ಪ್ರಧಾನಿ ನರೇಂದ್ರ ಮೋದಿ. ಆದ್ದರಿಂದ 2030ರ ವೇಳೆಗೆ 6G ಅನ್ನು ಜಾರಿಗೊಳಿಸಲೂ ಸರ್ಕಾರ ಈಗಾಗಲೇ ಕಾರ್ಯಪಡೆಯನ್ನು ರಚಿಸಿದೆ. 2G ಕಾಲದಲ್ಲಿ ಭ್ರಷ್ಟಾಚಾರ, ದೊಡ್ಡ ಹಗರಣಗಳು, ಅರಾಜಕತೆ ಇತ್ತು. ನಾವು ಇವುಗಳನ್ನೆಲ್ಲ ದಾಟಿ 3Gಯಿಂದ 4G ಹಾಗೂ ಇದೀಗ 5G ಮತ್ತು 6G ಯುಗಕ್ಕೆ ವೇಗವಾಗಿ ಬಂದಿದ್ದೇವೆ. ಹಲವಾರು ಸಮಸ್ಯೆಗಳನ್ನು ಬಗೆಹರಿಸಿರುವುದರಿಂದ ಟೆಲಿಕಾಂ ಕ್ಷೇತ್ರಕ್ಕೆ ಈಗ ವಿದೇಶಿ ಹೂಡಿಕೆಯ ಹರಿವು ಹೆಚ್ಚಿದೆ. 2014ಕ್ಕೆ ಮೊದಲು ದೇಶದಲ್ಲಿ 100 ಗ್ರಾಮ ಪಂಚಾಯಿತಿಗಳಿಗೂ ಇಂಟರ್‌ನೆಟ್ ಸಂಪರ್ಕ ಇದ್ದಿರಲಿಲ್ಲ. ಈಗ 1.75 ಲಕ್ಷ ಗ್ರಾಮಪಂಚಾಯಿತಿಗಳಿಗೆ ನೆಟ್‌ ಸಂಪರ್ಕವಿದೆ. ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಇದೆ ಎನ್ನುತ್ತಾರೆ ಮೋದಿ.

ಸವಾಲುಗಳೇನು?
ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್‌ ಟವರ್‌ಗಳ ಸಂಖ್ಯೆ ಹೆಚ್ಚಳವಾಗಲಿದೆ. 4G ಮೊಬೈಲ್‌ಗಳ ಬದಲಿಗೆ 5G ಮೊಬೈಲ್‌ಗಳನ್ನು ಖರೀದಿಸಬೇಕಾಗುತ್ತದೆ. 5Gಗೆ ಬೇಕಾಗುವ ಅಗಾಧ ಮೂಲಸೌಕರ್ಯ ಸವಾಲಾಗಿ ಪರಿಣಮಿಸಬಹುದು. ಎರಡನೆಯದಾಗಿ 5G ಸ್ಪೆಕ್ಟ್ರಮ್‌ ಹರಾಜಿನಲ್ಲಿ ಬಿಡ್ಡಿಂಗ್‌ನ ದುಬಾರಿ ಮೂಲ ದರದ ಪರಿಣಾಮ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಖರೀದಿ ಕಷ್ಟವಾಗಬಹುದು. ಕಾರ್ಪೊರೇಟ್‌ ಕಂಪನಿಗಳಿಗೆ ಅವುಗಳ ಅಗತ್ಯಕ್ಕೆ ತಕ್ಕಂತೆ ಖಾಸಗಿ ಸಂಪರ್ಕ ನೆಟ್‌ವರ್ಕ್‌ಗಳನ್ನು ಅಳವಡಿಸಲು ನೇರವಾಗಿ ದೂರಸಂಪರ್ಕ ಇಲಾಖೆ ಮೂಲಕ 5G ವಿತರಣೆಗೂ ಸರ್ಕಾರ ಪ್ರಸ್ತಾಪಿಸಿದೆ. ಆದರೆ ಇದರಿಂದ ತಮ್ಮ ಬಿಸಿನೆಸ್‌ಗೆ ಎಲ್ಲಿ ಹೊಡೆತ ಬೀಳುವುದೋ ಎಂಬ ಆತಂಕ ಟೆಲಿಕಾಂ ಕಂಪನಿಗಳಿಗೆ ಇವೆ. ಇಂಥ ಸವಾಲುಗಳನ್ನು ಸರ್ಕಾರ ಹೇಗೆ ನಿಭಾಯಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಆದರೆ 5G ಮತ್ತು 6G ನೀಡಲಿರುವ ಪ್ರಯೋಜನಗಳು ದೊಡ್ಡದು ಎಂಬುದರಲ್ಲಿ ಅನುಮಾನವಿಲ್ಲ

Exit mobile version