ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಸಣ್ಣ ಪುಟ್ಟ ವ್ಯಾಪಾರ ಮಾಡುವವರಿಗೆ ಬ್ಯಾಂಕ್‌ಗಳು ಸಾಲ ಕೊಡುವುದಿಲ್ಲ. ಅದೊಂದು ದೊಡ್ಡ ಹೋರಾಟ. ಅಸಂಘಟಿತ ವಲಯದ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಔಪಚಾರಿಕ ಹಣಕಾಸು ಮಾರುಕಟ್ಟೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಭಾರತದಲ್ಲಿ ಮುಖ್ಯವಾಗಿ ಸಣ್ಣ ಮತ್ತು ಮಧ್ಯಮ ಉದ್ದಿಮೆ ವಲಯಕ್ಕೆ (small & medium enterprises) ಸಾಲದ ಅವಶ್ಯಕತೆ ಇದ್ದರೂ, ಸುಲಭವಾಗಿ ಸಿಗುವುದಿಲ್ಲ. ಅದನ್ನು ಕ್ರೆಡಿಟ್ ಗ್ಯಾಪ್ ಎನ್ನುತ್ತಾರೆ.
ಭಾರತದಲ್ಲಿ ಜಿಡಿಪಿಯ 10% ಪಾಲಿನಷ್ಟು ಗಾತ್ರವನ್ನು ಸಣ್ಣ ಮತ್ತು ಮಧ್ಯಮ ಉದ್ದಿಮೆ (MSME) ವಲಯವು ಹೊಂದಿದೆ. ಅಂದರೆ 250 ಶತಕೋಟಿ ಡಾಲರ್ (ಅಂದಾಜು 20 ಲಕ್ಷ ಕೋಟಿ ರೂ.) ಆಗುತ್ತದೆ. ಭಾರತದ ಎಕಾನಮಿಯ ಹೃದಯ ಎಂದು ಸಣ್ಣ ಮತ್ತು ಮಧ್ಯಮ ಉದ್ದಿಮೆ ಎಂದರೆ ತಪ್ಪಲ್ಲ. ಜಿಡಿಪಿಯ ಬೆಳವಣಿಗೆಯಲ್ಲಿ ಇದರ ಪಾತ್ರ 30% ಇದೆ. 10 ಕೋಟಿಗೂ ಹೆಚ್ಚು ಮಂದಿಗೆ ಎಂಎಸ್‌ಎಂಇ ಉದ್ಯೋಗ ಕೊಟ್ಟಿದೆ. 2020-23ರಲ್ಲಿ 40% ರಫ್ತು ಎಂಎಸ್‌ಎಂಇಯಿಂದ ಬಂದಿದೆ. ಹೀಗಿದ್ದರೂ ಈ ವಲಯದಲ್ಲಿ ಕೇವಲ 11% ಮಂದಿಗೆ ಮಾತ್ರ ಔಪಚಾರಿಕ ಬ್ಯಾಂಕ್ ಸಾಲ ಸಿಗುತ್ತದೆ.
ಹಾಗಾದರೆ ಸಣ್ಣ ವ್ಯಾಪಾರ, ಬಿಸಿನೆಸ್‌ಗೆ ಯಾಕೆ ಬ್ಯಾಂಕ್ ಸಾಲ ಸಿಗುವುದಿಲ್ಲ?
ಸಣ್ಣ ಉದ್ದಿಮೆಗೆ ಸಾಲ ವಿತರಣೆಗೆ ಸಂಬಂಧಿಸಿ ಹಲವು ಸವಾಲುಗಳು ಇವೆ. ಮುಖ್ಯವಾಗಿ ಹೈ ರಿಸ್ಕ್ ಕೆಟಗರಿಗೆ (high risk) ಇದು ಬರುತ್ತದೆ. ಇಲ್ಲಿ ಸಾಲ ಪಡೆಯುವವರಿಗೆ ಕ್ರೆಡಿಟ್ ಸ್ಕೋರ್ ಸಿಗುವುದಿಲ್ಲ. ಅಥವಾ ಕಳಪೆ ಕ್ರೆಡಿಟ್ ಸ್ಕೋರ್ ಇರುತ್ತದೆ. (credit score) ಆದ್ದರಿಂದ ಬ್ಯಾಂಕ್‌ಗಳಿಗೆ ಎಷ್ಟು ರಿಸ್ಕ್ ತೆಗೆದುಕೊಳ್ಳಬಹುದು ಎಂಬ ಅಂದಾಜು ಸಿಗುವುದಿಲ್ಲ. ಬ್ಯಾಂಕ್‌ಗಳಿಗೆ ಸಾಲ ವಿತರಣೆ ಮತ್ತು ಮರು ಪಾವತಿ ಕಷ್ಟಕರವಾಗುತ್ತದೆ. ಹೀಗಾಗಿ ಬ್ಯಾಂಕ್ ಲೋನ್ ಅವುಗಳಿಗೆ ಸುಲಭವಾಗಿ ಸಿಗುವುದಿಲ್ಲ.
ಎರಡನೆಯದಾಗಿ ಸಾಲದ ವೆಚ್ಚ ಹೆಚ್ಚಳ: ಹೈ ರಿಸ್ಕ್ ಇರುವ ಕಡೆ ಬ್ಯಾಂಕ್‌ಗಳಿಗೆ ಸಾಲ ವಿತರಣೆಗೆ ತಗಲುವ ವೆಚ್ಚ ಹೆಚ್ಚುತ್ತದೆ. ಉದಾಹರಣೆಗೆ ಸಾಲ ಪಡೆದು ರಿಪೇಮೆಂಟ್ ಮಾಡದಿರುವವರ ಆಸ್ತಿ ಹರಾಜು, ಸ್ವಾಧೀನ ಪ್ರಕ್ರಿಯೆ, ಸಂಗ್ರಹದ ವೆಚ್ಚದ ಬಗ್ಗೆ ರಿಸ್ಕ್ ಅಂದಾಜು ಮಾಡುವುದು ಕಷ್ಟವಾಗುತ್ತದೆ.
ಸಾಲ ಸಿಗುವುದೇ ಕಷ್ಟ: ಈಗ ಆನ್‌ಲೈನ್ ಮತ್ತು ಆಫ್‌ಲೈನ್ ವಿಧಾನಗಳಿದ್ದರೂ, ಬಹುತೇಕ ಬ್ಯಾಂಕ್‌ಗಳು ಎಂಎಸ್‌ಎಂಇಗೆ ಸಾಲ ನೀಡಲು ಮೀನಾಮೇಷ ಎಣಿಸುತ್ತವೆ.
ಈ ಸಮಸ್ಯೆ ಅರ್ಥ ಮಾಡಿಕೊಳ್ಳಲು ಒಂದು ಉದಾಹರಣೆಯನ್ನು ಕೈಗೆತ್ತಿಕೊಳ್ಳೋಣ. ಲಲಿತಮ್ಮ ಬೀದಿ ಬದಿ ಸಣ್ಣಪುಟ್ಟ ವ್ಯಾಪಾರ ಮಾಡುತ್ತಾರೆ. ಪಡೆದ ಸಾಲಕ್ಕೆ ಪ್ರತಿ ವಾರ 3-5% ಬಡ್ಡಿ ನೀಡುತ್ತಾರೆ. ಅಂದರೆ ವರ್ಷಕ್ಕೆ 150-300% ಬಡ್ಡಿಯಾಗುತ್ತದೆ. ಹಾಗಾದರೆ ಇಂಥ ಸುಲಿಗೆಗೆ ಕೊನೆ ಇಲ್ಲವೇ? ಈ ಪ್ರಶ್ನೆಗೆ ಉತ್ತರ ಎಂಬಂತೆ ಇದೀಗ ನಡೆಯುತ್ತಿದೆ ಓಕನ್ ಟೆಕ್ನಾಲಜಿಯ ಕ್ರಾಂತಿ! ಹಾಗಾದರೆ ಏನಿದು?
Just like UPI revolutionized digital payments,
— Parsh Kothari (@parsh_kothari) June 25, 2023
OCEN has the power to do it for lending.
Here's how OCEN can fulfil the Rs. 2.7 TRILLION credit gap in India: pic.twitter.com/h1SHYWX8zo
ಏನಿದು ಓಕನ್?
ಓಕನ್ (OCEN) ಎಂದರೆ ಓಪನ್ ಕ್ರೆಡಿಟ್ ಎನೇಬಲ್‌ಮೆಂಟ್ ನೆಟ್ ವರ್ಕ್ (OCEN) ಎನ್ನುವುದು ಓಪನ್ ನೆಟ್‌ವರ್ಕ್ ಆಗಿದೆ. ( Open Credit Enablement Networks) ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳು ಹಾಗೂ ಉದ್ದಿಮೆದಾರರ ವಹಿವಾಟುಗಳ ಕುರಿತ ಡೇಟಾಗಳನ್ನು ಸಂಗ್ರಹಿಸಿ ಬ್ಯಾಂಕ್‌ಗಳಿಗೆ ಒದಗಿಸುತ್ತವೆ. ಬ್ಯಾಂಕ್‌ಗಳು ಈ ಡೇಟಾಗಳನ್ನು ಆಧರಿಸಿ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳು, ಉದ್ದಿಮೆದಾರರಿಗೆ ಸಾಲ ಕೊಡುತ್ತವೆ. ಫಿನ್‌ಟೆಕ್ ಕಂಪನಿಗಳು, ಇ-ಕಾಮರ್ಸ್ ಪ್ಲೇಯರ್ಸ್, ಬ್ಯಾಂಕ್‌ಗಳು, ನಾನ್-ಬ್ಯಾಂಕ್ ಫೈನಾನ್ಷಿಯಲ್ ಕಂಪನಿಗಳು ಹಾಗೂ ಸಾಲಗಾರರ ನಡುವೆ ಸೇತುವಾಗಿ ಓಕನ್ ಕಾರ್ಯನಿರ್ವಹಿಸುತ್ತದೆ. ಭವಿಷ್ಯದ ದಿನಗಳಲ್ಲಿ ಯುಪಿಐ ಓಪನ್ ಕ್ರೆಡಿಟ್ ಎನೇಬಲಿಂಗ್ ನೆಟ್ ವರ್ಕ್ (Open credit enablement network ) ಮತ್ತು ಓಪನ್ ನೆಟ್ ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (Open Network for digital commerce) ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಅಸೊಚೆಮ್-ಪಿಡಬ್ಲ್ಯುಸಿ ವರದಿ ತಿಳಿಸಿದೆ. 2022ರಲ್ಲಿ ಕೇಂದ್ರ ಸರ್ಕಾರ ಆರಂಭಿಸಿತು. ಸಾಲ ವಿತರಣೆಯನ್ನು ಪ್ರಜಾಸತ್ತಾತ್ಮಕಗೊಳಿಸುವ ಪ್ರಕ್ರಿಯೆ ಇದು ಎಂದು ಸರ್ಕಾರ ತಿಳಿಸಿದೆ. ಆಧಾರ್ ಆರ್ಕಿಟೆಕ್ಟ್ ನಂದನ್ ನಿಲೇಕಣಿ ಅವರು 2020ರಲ್ಲಿ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನಲ್ಲಿ ಈ ಓಕನ್‌ಗೆ ಚಾಲನೆ ನೀಡಿದ್ದಾರೆ.
ಓಕನ್ ಹೇಗೆ ಕಾರ್ಯನಿರ್ವಹಿಸುತ್ತದೆ?
ವ್ಯಾಪಾರಿಗಳ ವಹಿವಾಟಿನಲ್ಲಿ ದಿನ ನಿತ್ಯ ನಡೆಯುವ ನಗದು ವ್ಯವಹಾರವನ್ನು ಆಧರಿಸಿ ಡೇಟಾ ಸಂಗ್ರಹಿಸಲಾಗುತ್ತದೆ. ಆಧಾರ್, ಯುಪಿಐ, ಜಿಎಸ್‌ಟಿಯ ಮೂಲಕ ಸಿಗುವ ಡೇಟಾಗಳ ಆಧಾರದಲ್ಲಿ ಇದು ನಡೆಯುತ್ತದೆ. ಓಪನ್ ಕ್ರೆಡಿಟ್ ಎನೇಬಲ್‌ಮೆಂಟ್ ನೆಟ್ ವರ್ಕ್‌ನಲ್ಲಿ ಮೂರು ಸ್ತರಗಳು ಇವೆ. ಮೊದಲನೆಯದಾಗಿ ಐಡೆಂಟಿಟಿ ಲೇಯರ್. ಇದರಲ್ಲಿ ಆಧಾರ್ ಮತ್ತು ಡಿಜಿ ಲಾಕರ್ ನಿರ್ಣಾಯಕ. ಬಿಸಿನೆಸ್ ಮತ್ತು ಬಿಸಿನೆಸ್ ಮಾಡುವವರ ಐಡೆಂಟಿಟಿಯನ್ನು ಬೇರೆ ಭೌತಿಕ ದಾಖಲಾತಿ ಇಲ್ಲದೆಯೂ ಬ್ಯಾಂಕ್ ದೃಢಪಡಿಸಬಹುದು.
ಎರಡನೇ ಸ್ತರದಲ್ಲಿ ಪೇಮೆಂಟ್ ಲೇಯರ್ ಇದೆ. ಸಾಲ ಮಂಜೂರಾತಿ ಬಳಿಕ ವ್ಯಾಪಾರಸ್ಥರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತದೆ. ಇದರಲ್ಲಿ ಸಾಲ ಮರು ಪಾವತಿಗೆ ಯುಪಿಐ ನಿರ್ಣಾಯಕ ಪಾತ್ರ ವಹಿಸುತ್ತದೆ. ಮೂರನೇ ಸ್ತರದಲ್ಲಿ ಡೇಟಾ ಲೇಯರ್ ಇರುತ್ತದೆ. ಇದರಲ್ಲಿ ಸಾಲ ಪಡೆಯುವವರ ಮಾಹಿತಿಗಳು ಲಭ್ಯ. ಇದು ಬ್ಯಾಂಕಿಗೆ ನಿರ್ಧರಿಸಲು ಸಹಕಾರಿಯಾಗುತ್ತದೆ.
ಇದನ್ನೂ ಓದಿ: Vande Bharat Express: ಧಾರವಾಡ- ಬೆಂಗಳೂರು ವಂದೇ ಭಾರತ್ ರೈಲು; ಟೈಮಿಂಗ್ ಹೇಗೆ? ಪ್ರಯಾಣ ದರ ಎಷ್ಟು?
ಎಷ್ಟು ಬ್ಯಾಂಕ್‌ಗಳು ಓಕೆನ್ ನೆಟ್ ವರ್ಕ್‌ನಲ್ಲಿ ಇವೆ?
ಓಕೆನ್‌ನಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಸೇರಿದಂತೆ 7 ಬ್ಯಾಂಕ್‌ಗಳು ಇವೆ. ಈ ವರೆಗೆ 15 ಕೋಟಿ ರೂ. ಸಾಲ ವಿತರಿಸಲಾಗಿದೆ. ಸರಾಸರಿ ಸಾಲದ ಗಾತ್ರ 40,000 ರೂ. ಆಗಿದೆ. 160 ರೂ.ಗಳಿಂದ 10 ಲಕ್ಷ ರೂ. ತನಕ ಸಾಲ ವಿತರಿಸಲಾಗಿದೆ. ಅರ್ಜಿ ಸಲ್ಲಿಸಿದ ಕೆಲವೇ ನಿಮಿಷಗಳಲ್ಲಿ ಸಾಲ ವಿತರಿಸಲಾಗಿದೆ. ಇದರಿಂದ ಸಣ್ಣ ವ್ಯಾಪಾರಿಗಳಿಗೆ ಭಾರಿ ಅನುಕೂಲವಾಗುವ ನಿರೀಕ್ಷೆ ಇದೆ. ಬಿಸಿನೆಸ್ ಸಂಕಷ್ಟಕರವಾಗಿರುವ ಸಂದರ್ಭದಲ್ಲಿ ಕೂಡ ತ್ವರಿತ ಸಾಲ ಸಿಗಲು ಇದೀಗ ಹಾದಿ ಸುಗಮವಾಗಿದೆ. ಎಂಎಸ್‌ಎಂಇಗೆ ಸುಲಭವಾಗಿ ಸಾಲದ ನೆರವು ಸಿಕ್ಕಿದರೆ ಅವುಗಳ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ವ್ಯಾಪಾರ ಚುರುಕಾಗಿ ತೆರಿಗೆ ಸಂಗ್ರಹವೂ ಹೆಚ್ಚಲಿದೆ.