OPS VS NPS ಕರ್ನಾಟಕ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಸರ್ಕಾರಿ ನೌಕರರ ಸಂಘಟನೆಗಳು ಇತ್ತೀಚೆಗೆ ಒಪಿಎಸ್ , ಓಲ್ಡ್ ಪೆನ್ಷನ್ ಸ್ಕೀಮ್ ಅಥವಾ ಹಳೆಯ ಪಿಂಚಣಿ ಪದ್ಧತಿಯನ್ನು (Old penstion scheme) ಜಾರಿಗೊಳಿಸಬೇಕು ಎಂದು ಒತ್ತಾಯಿಸುತ್ತಿವೆ. ದಿನ ಕಳೆದಂತೆ ಇದು ಹೋರಾಟದ ಸ್ವರೂಪ ಪಡೆದುಕೊಳ್ಳುತ್ತಿದೆ. ರಾಜಕೀಯದ ಬಣ್ಣವೂ ಇದಕ್ಕಿದೆ. ಹಿಮಾಚಲಪ್ರದೇಶ, ಜಾರ್ಖಂಡ್, ಪಂಜಾಬ್, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಸರ್ಕಾರಗಳು ಹಳೆಯ ಪಿಂಚಣಿ ಯೋಜನೆಗೆ ಮರಳಿವೆ. ( New pension scheme ) ಕರ್ನಾಟಕ, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲೂ ಒಪಿಎಸ್‌ಗೆ ಕೂಗು ಕೇಳಿ ಬರುತ್ತಿದೆ. ಸರ್ಕಾರದ ಮಟ್ಟದಲ್ಲಿ ಸಮಾಲೋಚನೆ ನಡೆಯುತ್ತಿದೆ. ಮತ್ತೊಂದು ಕಡೆ ಆರ್‌ಬಿಐ ಕೂಡ ಒಪಿಎಸ್ ಜಾರಿಗೆ ತರುವುದರಿಂದ ರಾಜ್ಯಗಳ ಆರ್ಥಿಕತೆಗೆ ಬಿಕ್ಕಟ್ಟು ಸೃಷ್ಟಿಯಾಗಬಹುದು ಎಂದು ಎಚ್ಚರಿಸಿದೆ. ಹಾಗಾದರೆ ಏನಿದು ಒಪಿಎಸ್ ವರ್ಸಸ್ ಎನ್‌ಪಿಎಸ್ ವಿವಾದ? ಸರ್ಕಾರಿ ನೌಕರರ ಸಂಘಟನೆಗಳು ಏಕೆ ಒಪಿಎಸ್‌ಗೆ ಒತ್ತಾಯಿಸುತ್ತಿವೆ. ಈ ವಿವಾದ ಹುಟ್ಟಿದ್ದು ಹೇಗೆ?
ಭಾರತದಲ್ಲಿ ಹೆಚ್ಚುತ್ತಿರುವ ಹಿರಿಯ ನಾಗರಿಕರ ಸಂಖ್ಯೆ:
ಭಾರತದಲ್ಲಿ 1961ರಿಂದೀಚೆಗೆ ಹಿರಿಯ ನಾಗರಿಕರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. 2011ರ ಜನಗಣತಿಯ ಪ್ರಕಾರ ದೇಶದಲ್ಲಿ 60 ವರ್ಷ ದಾಟಿದವರ ಸಂಖ್ಯೆ ಆಗ 10 ಕೋಟಿ ಇತ್ತು. ವಿಶ್ವಸಂಸ್ಥೆಯ ವರದಿಯ ಪ್ರಕಾರ 2026ಕ್ಕೆ ಹಿರಿಯ ನಾಗರಿಕರ ಸಂಖ್ಯೆ 17 ಕೋಟಿಗೆ ಏರಿಕೆಯಾಗಲಿದೆ. ಹಿರಿಯರ ಸಂಖ್ಯೆ ಭವಿಷ್ಯದ ದಿನಗಳಲ್ಲಿ ಹೀಗೆ ಏರಿಕೆಯಾಗುತ್ತಾ ಹೋಗಲಿದೆ. ಕೇರಳ, ತಮಿಳುನಾಡು, ಹಿಮಾಚಲ ಪ್ರದೇಶ, ಆಂಧ್ರಪ್ರದೇಶ, ಪಂಜಾಬ್‌ನಲ್ಲಿ ಜನಸಂಖ್ಯೆಯ 16%ರಿಂದ 20% ತನಕ ಹಿರಿಯ ನಾಗರಿಕರು ಇದ್ದಾರೆ. ಆದ್ದರಿಂದ ನಿವೃತ್ತರಿಗೆ ಸಾಮಾಜಿಕ ಭದ್ರತೆ ನಿರ್ಣಾಯಕ.
ಏನಿದು ಒಪಿಎಸ್?
ಭಾರತ ಅತ್ಯಂತ ಸಂಕೀರ್ಣವಾಗಿರುವ ಪಿಂಚಣಿ ವ್ಯವಸ್ಥೆಯನ್ನು ಹೊಂದಿದೆ. ಮುಖ್ಯವಾಗಿ ಹಿರಿಯ ನಾಗರಿಕರಿಗೆ, ಬಡವರಿಗೆ ಪಿಂಚಣಿ ನೀಡುವ ಗ್ರಾಮೀಣಾಭಿವೃದ್ಧಿ ಸಚಿವಾಲಯದ ನ್ಯಾಶನಲ್ ಸೋಶಿಯಲ್ ಅಸಿಸ್ಟೆನ್ಸ್ ಪ್ರೋಗ್ರಾಮ್ (NSAP̧) OSP ಮತ್ತು ಎನ್‌ಪಿಎಸ್ ಹಾಗೂ ಇಪಿಎಫ್‌ಒ ಅಡಿಯಲ್ಲಿನ ಪಿಂಚಣಿ ಯೋಜನೆ. ಹೀಗಿದ್ದರೂ, ಈ ಎಲ್ಲ ಪಿಂಚಣಿ ಯೋಜನೆಗಳ ಸುತ್ತಮುತ್ತ ವಿವಾದಗಳು, ಸಾಧ್ಯಾಸಾಧ್ಯತೆಯ ಪ್ರಶ್ನೆಗಳು ಮತ್ತು ಹೋರಾಟಗಳು ನಡೆಯುತ್ತಿವೆ. ಸದ್ಯಕ್ಕೆ ಒಪಿಎಸ್ ಅತ್ಯಂತ ವಿವಾದದಲ್ಲಿದೆ.
ಓಪಿಸ್‌ನಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ಮೊದಲೇ ನಿರ್ಧರಿಸಿದ ಲೆಕ್ಕಾಚಾರದ ಅಡಿಯಲ್ಲಿ ಡಿಫೈನ್ಡ್ ಪಿಂಚಣಿ ಸಿಗುತ್ತದೆ. ನಿವೃತ್ತಿಗೆ ಮುನ್ನ ಕೊನೆಯ ತಿಂಗಳಿನ ವೇತನದ 50% ಮೊತ್ತದಷ್ಟು ಪಿಂಚಣಿಯನ್ನು ಪಡೆಯುತ್ತಾರೆ. ಉದಾಹರಣೆಗೆ ನಿವೃತ್ತಿಯ ಕೊನೆಯ ತಿಂಗಳು 1 ಲಕ್ಷ ರೂ. ವೇತನ ಇದ್ದರೆ ಮಾಸಿಕ 50,000 ರೂ. ಪಿಂಚಣಿ ಸಿಗುತ್ತದೆ. ವರ್ಷಕ್ಕೆ ಎರಡಿ ಸಲ ಡಿಎ ಪರಿಷ್ಕರಣೆಯಾದಾಗ ಅದರ ಪ್ರಯೋಜನವೂ ಸಿಗುತ್ತದೆ. ಆದರೆ ಈ ವೆಚ್ಚದ ಬಹುಪಾಲು ವೆಚ್ಚವನ್ನು ಆಯಾ ಸರ್ಕಾರಗಳೇ ಭರಿಸಬೇಕಾಗುತ್ತದೆ. ಇಲ್ಲೂ ಜನರಲ್ ಪ್ರಾವಿಡೆಂಟ್ ಫಂಡ್ (GPF) ಖಾತೆ ಕೂಡ ಇರುತ್ತದೆ. ಇದರಲ್ಲಿ ಸರ್ಕಾರಿ ಉದ್ಯೋಗಿಗಳೂ ವೇತನದಲ್ಲಿ ಭವಿಷ್ಯನಿಧಿ ಅಥವಾ ಪ್ರಾವಿಡೆಂಡ್ ಫಂಡ್‌ಗೆ ತಮ್ಮ ಪಾಲು ನೀಡುತ್ತಾರೆ. ನಿವೃತ್ತಿಯಾಗುವಾಗ ಉದ್ಯೋಗಿಗೆ ಎಲ್ಲವೂ ಸೇರಿ ನೀಡುತ್ತಾರೆ.
ಒಪಿಎಸ್ ರದ್ದಾಗಿದ್ದು ಯಾವಾಗ? ಅದು ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿದೆಯೇ?
2004ರಲ್ಲಿ ಒಪಿಎಸ್ ಅನ್ನು ಅಂದಿನ ಎನ್‌ಡಿಎ ಸರ್ಕಾರ ತೆರವುಗೊಳಿಸಿತು. ಈಗಿನ ನ್ಯಾಶನಲ್ ಪೆನ್ಷನ್ ಸ್ಕೀಮ್ ಅಥವಾ ಎನ್‌ಪಿಎಸ್‌ಗೆ ಬದಲಾಯಿತು. ಆದರೆ ಎನ್‌ಪಿಎಸ್ ಮಾದರಿಯ ಯೋಜನೆ ಬೇಕು ಎಂಬ ಪರಿಕಲ್ಪನೆ 1998ರಲ್ಲಿ ಆಗಿನ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನೀಡಿರುವ ವರದಿಯಲ್ಲಿ ಪ್ರಸ್ತಾಪವಾಗಿತ್ತು.
ರಾಜ್ಯ ಸರ್ಕಾರಗಳ ಬೊಕ್ಕಸಕ್ಕೆ ಒಪಿಎಸ್ ಹೊರೆ ಎಷ್ಟು?
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ (CMIE) ಅಂಕಿ ಅಂಶಗಳ ಪ್ರಕಾರ, ಪಿಂಚಣಿ ಸಲುವಾಗಿ ರಾಜ್ಯ ಸರ್ಕಾರಗಳ ವೆಚ್ಚ ಪ್ರತಿ ವರ್ಷ ಏರಿಕೆಯಾಗುತ್ತಿದೆ. ಆರಂಭದಲ್ಲಿ ರಾಜ್ಯದ ಆದಾಯದ 10% ಇದ್ದ ವೆಚ್ಚ 2020-21ರ ವೇಳೆಗೆ 25% ಕ್ಕೆ ಏರಿಕೆಯಾಗಿದೆ.
ಹಿಮಾಚಲ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಜಾರ್ಖಂಡ್ ಒಪಿಎಸ್‌ಗೆ ಮರಳಿವೆ. ಎಸ್‌ಬಿಐ ಎಕೋರಾಪ್ ವರದಿಯ ಪ್ರಕಾರ ಇದರಿಂದಾಗಿ ಈ ರಾಜ್ಯಗಳಿಗೆ 3 ಲಕ್ಷ ಕೋಟಿ ರೂ.ಗೂ ಹೆಚ್ಚು ಖರ್ಚಾಗಲಿದೆ. ಎಲ್ಲ ರಾಜ್ಯಗಳೂ ಒಪಿಎಸ್‌ಗೆ ಹಿಂತಿರುಗಿದರೆ ಸರ್ಕಾರಗಳ ಬೊಕ್ಕಸಕ್ಕೆ 31 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ. ಇದನ್ನು ಭರಿಸುವುದು ಹೇಗೆ ಎಂಬುದು ಈಗಿನ ಪ್ರಶ್ನೆಯಾಗಿದೆ. ಎರಡನೆಯದಾಗಿ 20 ವರ್ಷ ಉದ್ಯೋಗದಲ್ಲಿ ಇದ್ದವರಿಗೆ ಮಾತ್ರ ಒಪಿಎಸ್ ಸಿಗುತ್ತದೆ.
ಸರ್ಕಾರ ಪಿಂಚಣಿಯನ್ನು ಹೇಗೆ ಪಾವತಿಸುತ್ತದೆ?
ಸರ್ಕಾರಗಳು ಪಿಂಚಣಿಗೋಸ್ಕರ ನಿರ್ದಿಷ್ಟ ನಿಧಿಯನ್ನು ಹೊಂದಿಲ್ಲ. ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆಯ ಹಣದಿಂದಲೇ ನೀಡುತ್ತವೆ. ಸುಮಾರು 77 ಲಕ್ಷ ಪಿಂಚಣಿದಾರರು ಹಾಗೂ ಹಾಲಿ ಕರ್ತವ್ಯದಲ್ಲಿರುವ ಉದ್ಯೋಗಿಗಳ ಸಂಖ್ಯೆ 50 ಲಕ್ಷ ಇದೆ. ಭಾರತದಲ್ಲಿ ಸುಮಾರು 31 ಕೋಟಿ ಉದ್ಯೋಗದಲ್ಲಿದ್ದಾರೆ. ಇವರಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಇರುವವರು ಕಡಿಮೆ. ಬಹುತೇಕ ಮಂದಿ ಖಾಸಗಿ ವಲಯದಲ್ಲಿ ಹಾಗೂ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಒಟ್ಟು 31 ಕೋಟಿ ದುಡಿಯುವ ವರ್ಗದಲ್ಲಿ ಕೇವಲ 11% ಮಂದಿ ಮಾತ್ರ ಅಂದರೆ 3.4 ಕೋಟಿಗೆ ಮಾತ್ರ ವೃದ್ಧಾಪ್ಯದಲ್ಲಿ ಪಿಂಚಣಿ ಆದಾಯ ಸಿಗುತ್ತಿದೆ.
ಏನಿದು ಎನ್‌ಪಿಎಸ್?
ಕೇಂದ್ರ ಸರ್ಕಾರ 2003ರಲ್ಲಿ ಪರಿಚಯಿಸಿದ ಎನ್‌ಪಿಎಸ್ ಅನ್ನು 2004ರ ಜನವರಿ 1ರ ಬಳಿಕ ಎಲ್ಲ ಸರ್ಕಾರಿ ಉದ್ಯೋಗಿಗಳಿಗೆ ಅನ್ವಯಿಸಲಾಗಿದೆ. ಪೆನ್ಷನ್ ಫಂಡ್ ರೆಗ್ಯುಲೇಟರಿ ಆಂಡ್ ಡೆವಲಪ್‌ಮೆಂಟ್ ಅಥಾರಿಟಿ ಇದನ್ನು ವಿನ್ಯಾಸಗೊಳಿಸಿದೆ. 2009ರಲ್ಲಿ ಎಲ್ಲ ನಾಗರಿಕರಿಗೂ ಇದನ್ನು ವಿಸ್ತರಿಸಲಾಯಿತು. ಖಾಸಗಿ ವಲಯದ ಉದ್ಯೋಗಿಗಳೂ, ಸ್ವ ಉದ್ಯೋಗಿಗಳೂ ಇದರಲ್ಲಿ ಹೂಡಿಕೆ ಮಾಡಬಹುದು. ಸರ್ಕಾರ ಉದ್ಯೋಗಿಗಳಾದರೆ ಮೂಲವೇತನದ 10% ಅನ್ನು ಉದ್ಯೋಗಿ ತನ್ನ ವೇತನದಲ್ಲಿ ನೀಡಬೇಕು. ಸರ್ಕಾರ ಇದಕ್ಕೆ 14% ಸೇರಿಸುತ್ತದೆ. ಇದು ಮಾರುಕಟ್ಟೆ ಆಧರಿತವಾಗಿದ್ದು, ನಿರ್ದಿಷ್ಟ ಪಾಲನ್ನು ಷೇರು, ಬಾಂಡ್ ಸೇರಿದಂತೆ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಎಸ್‌ಬಿಐ, ಎಲ್‌ಐಸಿ ಮತ್ತು ಯುಟಿಐ ಮತ್ತು ಇತರ ಸಂಸ್ಥೆಗಳು ಇದರ ಫಂಡ್ ಮ್ಯಾನೇಜರ್‌ಗಳಾಗಿವೆ.
ಎನ್‌ಪಿಎಸ್‌ನಲ್ಲಿ ಟೈರ್ 1 ಮತ್ತು ಟೈರ್ 2 ಎಂಬ ಎರಡು ಆಯ್ಜೆಗಳಿದೆ. ಟೈರ್ 1 ಪ್ರೈಮರಿ ಖಾತೆಯಾಗಿದ್ದು, ಹೂಡಿಕೆಯ ಖಾತೆಯಾಗಿದೆ. ಟೈರ್ 1 ಖಾತೆಯಲ್ಲಿ ವರ್ಷಕ್ಕೆ ಕನಿಷ್ಠ 1000 ರೂ. ಹೂಡಿಕೆ ಅಗತ್ಯ. ವಾರ್ಷಿಕ 1.5 ಲಕ್ಷ ರೂ. ತನಕ ಹೂಡಿಕೆ ಮಾಡಬಹುದು. ಟೈರ್-2 ಖಾತೆಯಲ್ಲಿ ಹೂಡಿಕೆಗೆ ಮಿತಿ ಇಲ್ಲ. ಇದು ಮ್ಯೂಚುವಲ್ ಫಂಡ್‌ನಂತೆ ಕಾರ್ಯನಿರ್ವಹಿಸುತ್ತದೆ.
ಸರ್ಕಾರಿ ಉದ್ಯೋಗಿಗಳು ಒಪಿಎಸ್ ಬೇಕು ಎಂದು ಒತ್ತಾಯಿಸುತ್ತಿರುವುದೇಕೆ?
ಒಪಿಎಸ್‌ನಂತೆ ಎನ್‌ಪಿಎಸ್‌ನಲ್ಲಿ ಪಿಂಚಣಿ ಹಣ ಎಷ್ಟು ಬರುತ್ತದೆ ಎಂದು ಖಾತರಿಯಲ್ಲಿ ಹೇಳಲು ಸಾಧ್ಯ ಇಲ್ಲ. ಏಕೆಂದರೆ ಇದು ಮಾರುಕಟ್ಟೆ ಆಧಾರಿತ. ಹೀಗಾಗಿ ಅಪಾಯಕಾರಿ ಎನ್ನುತ್ತಾರೆ. ಎನ್‌ಪಿಎಸ್‌ನಲ್ಲಿ ಉದ್ಯೋಗಿಗಳು ತಮ್ಮ ಮೂಲವೇತನದ 10% ಪಾಲನ್ನು ನೀಡಬೇಕಾಗುತ್ತದೆ. ಒಪಿಎಸ್‌ನಲ್ಲಿ ಉದ್ಯೋಗಿಗಳು ಪಿಂಚಣಿಗೆ ಏನನ್ನೂ ಕೊಡಬೇಕಿಲ್ಲ.
ಒಪಿಎಸ್‌ಗೆ ತೆರಳುವುದರಿಂದ ಸದ್ಯಕ್ಕೆ ರಾಜ್ಯಗಳಿಗೆ ಲಾಭ ಇದೆಯೇ?
ಇದೆ. ಎನ್‌ಪಿಎಸ್ 2004ರಿಂದ ಜಾರಿಗೆ ಬಂದಿದೆ. ಆಗ ಉದ್ಯೋಗಿಯೊಬ್ಬನ ವಯಸ್ಸು 30 ವರ್ಷ ಎಂದರೆ ಆತ ನಿವೃತ್ತಿಯಾಗುವುದು 2034ರಲ್ಲಿ. ಅಲ್ಲಿಯವರೆಗೆ ಒಪಿಎಸ್ ಅಡಿಯಲ್ಲಿ ಸರ್ಕಾರಕ್ಕೆ ಯಾವುದೇ ವೆಚ್ಚ ಇರುವುದಿಲ್ಲ. ಆದರೆ ಎನ್‌ಪಿಎಸ್ ಅಡಿಯಲ್ಲಿ ಪ್ರತಿ ವರ್ಷ ತನ್ನ ಪಾಲಿನ ದೇಣಿಗೆಯನ್ನು ಸರ್ಕಾರ ನೀಡಬೇಕಾಗುತ್ತದೆ. ಆದರೆ ಒಪಿಎಸ್ ಅಡಿಗೆ ಸೇರಿದರೆ 2034ರ ಬಳಿಕ ಸರ್ಕಾರದ ಪಿಂಚಣಿ ವೆಚ್ಚ ಗಣನೀಯ ಏರಿಕೆಯಾಗಲಿದೆ.
ಎನ್‌ಪಿಎಸ್ vs ಒಪಿಎಸ್ ವಿವಾದಕ್ಕೆ ರಾಜಕೀಯ ಆಯಾಮ ಇದೆಯೇ?
ಸರ್ಕಾರಿ ಉದ್ಯೋಗಿಗಳು ದೊಡ್ಡ ಮತ ಬ್ಯಾಂಕ್ ಆಗಿರುವುದರಿಂದ ರಾಜಕೀಯ ಪಕ್ಷಗಳು ಕಡೆಗಣಿಸುವಂತಿಲ್ಲ. ಅವರ ವಿವಾದಗಳು ಚುನಾವಣೆಯ ವಿಷಯವಾಗುತ್ತವೆ. ಹೀಗಾಗಿ ಒಪಿಎಸ್ ಹಿಂತೆಗೆತ ದೊಡ್ಡ ರಾಜಕೀಯ ವಿಷಯವಾಗಿದೆ. ಹಿಮಾಚಲ ಪ್ರದೇಶ, ಗುಜರಾತ್ ಚುನಾವಣೆ ವೇಳೆ ಕಾಂಗ್ರೆಸ್ ಒಪಿಎಸ್ ಜಾರಿಗೊಳಿಸುವ ಭರವಸೆ ನೀಡಿತ್ತು.
ಒಪಿಎಸ್ ಬಗ್ಗೆ ಆರ್‌ಬಿಐ ಏನೆನ್ನುತ್ತದೆ? ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಿಲುವು ಏನು?
ಕೆಲವು ರಾಜ್ಯಗಳು ಒಪಿಎಸ್‌ಗೆ ಹಿಂತಿರುವುತ್ತಿರುವುದಕ್ಕೆ ಆರ್‌ಬಿಐ ಕಳವಳ ವ್ಯಕ್ತಪಡಿಸಿದೆ. ಇದರಿಂದಾಗಿ ಆರೋಗ್ಯ, ಶಿಕ್ಷಣ, ಹಸಿರು ಇಂಧನ ಅಭಿವೃದ್ಧಿಗೆ ಸರ್ಕಾರದ ಹೂಡಿಕೆ ಕಡಿಮೆಯಾಗಬಹುದು. ಪಿಂಚಣಿಗೋಸ್ಕರ ಹೆಚ್ಚು ಹಣವನ್ನು ಸರ್ಕಾರವೇ ವ್ಯಯಿಸುವುದು ದೀರ್ಘಕಾಲೀನವಾಗಿ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದೆ. ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಸೇರಿದಂತೆ ಆರ್ಥಿಕ ತಜ್ಞರೂ ಒಪಿಎಸ್ ಅನ್ನು ವಿರೋಧಿಸಿದ್ದಾರೆ.
ಕೇಂದ್ರ ಸರ್ಕಾರ ಈಗ ಎನ್‌ಪಿಎಸ್ ವ್ಯಾಪ್ತಿಯಲ್ಲಿರುವ ಉದ್ಯೋಗಿಗಳು ಒಪಿಎಸ್‌ಗೆ ಮರಳಲು 2023ರ ಆಗಸ್ಟ್ 31 ತನಕ ಒಂದು ಸಲದ ಅವಕಾಶ ನೀಡಿದೆ. ಒಪಿಎಸ್‌ನಲ್ಲಿ ಇದ್ದು, ತಡವಾಗಿ ಸೇವೆಗೆ ಸೇರಿದವರಿಗೆ ಹಾಗೂ 2004ರಿಂದ ಎನ್‌ಪಿಎಸ್‌ಗೆ ಬಂದವರಿಗೆ ಇದು ಅನ್ವಯವಾಗಲಿದೆ. ಏಕೆಂದರೆ ತಡವಾಗಿ ಉದ್ಯೋಗಕ್ಕೆ ಸೇರಿದವರಿಗೆ ಎನ್‌ಪಿಎಸ್‌ನಲ್ಲಿ ಬರಬಹುದಾದ ಪಿಂಚಣಿಯೂ ಕಡಿಮೆಯಾಗಿರುತ್ತದೆ. ಹಣಕಾಸು ತಜ್ಞರ ವಿಶ್ಲೇಷಣೆ ಪ್ರಕಾರ ದೀರ್ಘಾವಧಿಗೆ ಹೂಡಿದರೆ ಎನ್‌ಪಿಎಸ್ ಉಳಿದೆಲ್ಲ ಪಿಂಚಣಿಗಿಂತ ಹೆಚ್ಚು ಆದಾಯವನ್ನು ನೀಡಬಲ್ಲುದು.
ಒಪಿಎಸ್ vs ಎನ್‌ಪಿಎಸ್ ಗೊಂದಲ ಇರುವುದರಿಂದ ಸಾರ್ವಜನಿಕರು, ಉದ್ಯೋಗಿಗಳು ಏನು ಮಾಡಬಹುದು?
ಒಪಿಎಸ್ ಬರಲಿ ಅಥವಾ ಬರದಿರಲಿ, ಅವರವರ ನಿವೃತ್ತಿ ಕಾಲದ ಹಣಕಾಸು ಭದ್ರತೆಯ ಜವಾಬ್ದಾರಿಯನ್ನು ಅವರವರೇ ವಹಿಸಿಕೊಳ್ಳುವುದು ಸೂಕ್ತ. ಈ ನಿಟ್ಟಿನಲ್ಲಿ ಎನ್‌ಪಿಎಸ್, ಅಟಲ್ ಪೆನ್ಷನ್ ಸ್ಕೀಮ್, ಮ್ಯೂಚುಯಲ್ ಫಂಡ್, ಷೇರು, ಬಾಂಡ್, ಚಿನ್ನ, ರಿಯಾಲ್ಟಿ ಹೀಗೆ ವೈವಿಧ್ಯಮ ಹೂಡಿಕೆಯ ಸಾಧನಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ವಿಧಾನವಾಗಿದೆ. ಯಾವುದೇ ಒಂದು ಪಿಂಚಣಿ ಮಾತ್ರ ಈಗಿನ ಹಣದುಬ್ಬರ ಮತ್ತು ಖರ್ಚುವೆಚ್ಚಗಳ ಏರಿಕೆಯ ದಿನಗಳಲ್ಲಿ ಸಾಕು ಎನ್ನಿಸದಿರುವುದು ಇದಕ್ಕೆ ಕಾರಣ. ಸರ್ಕಾರಗಳ ನೀತಿಗಳು ನಾನಾ ಕಾರಣಗಳಿಂದ ಬದಲಾಗಬಹುದು. ಬಹುಶಃ ಒಪಿಎಸ್ ಸುಧಾರಿತ ರೂಪದಲ್ಲಿ ಜಾರಿಗೆ ಬರಬಹುದು, ಅಥವಾ ಎನ್‌ಪಿಎಸ್ ಅನ್ನು ಮತ್ತಷ್ಟು ಆಕರ್ಷಕಗೊಳಿಸಬಹುದು. ಆದರೆ ಈ ಬಗ್ಗೆ ಸದ್ಯಕ್ಕೆ ಸ್ಪಷ್ಟತೆ ಇಲ್ಲ. ಹೀಗಾಗಿ ಜನ ಸಾಮಾನ್ಯರು, ಮಧ್ಯಮ ವರ್ಗದ ಜನತೆ ಕಾಯುತ್ತಾ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಲಭ್ಯವಿರುವ ವಿಧಾನಗಳಲ್ಲಿಯೇ ಇಳಿ ವಯಸ್ಸಿನ ಅಗತ್ಯದ ಹಣಕಾಸು ಭದ್ರತೆ ಮತ್ತು ಸ್ವಾವಲಂಬನೆಯನ್ನು ಅವರವರೇ ಮಾಡಿಕೊಳ್ಳುವುದು ನಿರ್ಣಾಯಕವಾಗುತ್ತದೆ.