Site icon Vistara News

ವಿಸ್ತಾರ Explainer | Pakistan economic crisis | ಪಾಪ! ಪಾಕಿಸ್ತಾನ ಪಾಪರ್!

Pakistan crisis

ಕೇಶವ ಪ್ರಸಾದ್‌ ಬಿ. ಬೆಂಗಳೂರು

ದೇಶ ವಿಭಜನೆಯಾದ ಕಾಲದಲ್ಲಿ ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿದ್ದ ಪಾಕಿಸ್ತಾನದ ಇಂದಿನ ಪರಿಸ್ಥಿತಿ ಹೇಗೆ ಬರ್ಬಾದ್‌ ಆಗಿದೆ ನೋಡಿ! ಶ್ರೀಲಂಕಾ, ಅಪಘಾನಿಸ್ತಾನದ ದುಸ್ಥಿತಿಯ ಹಾದಿಯಲ್ಲಿ ಈಗ ಪಾಕಿಸ್ತಾನದ ಸರದಿ ಉಂಟಾಗಿದೆ. ಕಳೆದ ಕೆಲವು ವರ್ಷಗಳಿಂದ ಸಾಲದ ಹೊಡೆತಕ್ಕೆ ತತ್ತರಿಸಿ ಶಾಪಿಂಗ್‌ ಮಾಲ್‌, ಮಾರುಕಟ್ಟೆ ಪ್ರದೇಶಗಳನ್ನೇ ರಾತ್ರಿಯಾಗಲೂ ಕಾಯದಂತೆ ವಿಸ್ತಾರ Explainer | Pakistan economic crisis ಬಲವಂತವಾಗಿ ಮುಚ್ಚಿಸುತ್ತಿದೆ!

ಅಡುಗೆ ಅನಿಲ ತುಂಬಿಕೊಳ್ಳಲು ಸಿಲಿಂಡರ್‌ ಸಿಗದೆ ಜನ ಅವೈಜ್ಞಾನಿಕವಾಗಿ ಬಲೂನಿನಲ್ಲೇ ತುಂಬಿಕೊಳ್ಳುತ್ತಿದ್ದಾರೆ ಎಂದರೆ ನಿಮಗೆ ಕಲ್ಪಿಸಿಕೊಳ್ಳಲೂ ಕಷ್ಟವಾಗಬಹುದು. ಆದರೆ ಪಾಕಿಸ್ತಾನದಲ್ಲಿ ಇಂಥ ದೃಶ್ಯ ಸಾಮಾನ್ಯವಾಗಿ ಬಿಟ್ಟಿದೆ! ಅಷ್ಟು ಮಾತ್ರವಲ್ಲ, ಪಾಕ್‌ ಕರೆನ್ಸಿಯ ಬೆಲೆ ಪಾತಾಳಕ್ಕೆ ಕುಸಿದಿದೆ. ಆರ್ಥಿಕತೆಯ ಚೇತರಿಕೆಗೆ ದಿಕ್ಕೇ ತೋಚದೆ ಅಲ್ಲಿನ ಸರ್ಕಾರ ಚಿತ್ರ-ವಿಚಿತ್ರ ಆದೇಶಗಳನ್ನು ಹೊರಡಿಸುತ್ತಿದೆ. ಪಾಕಿಸ್ತಾನ ವಾಷಿಂಗ್ಟನ್‌ನಲ್ಲಿ ತನ್ನ ದೂತಾವಾಸದ ಕಚೇರಿಯ ಆಸ್ತಿಯನ್ನೂ ಮಾರಾಟಕ್ಕಿಟ್ಟಿದೆ. ಕಳೆದ ಒಂದೂವರೆ ವರ್ಷದಲ್ಲಿ ಪಾಕಿಸ್ತಾನದ ರೂಪಾಯಿ ಮೌಲ್ಯದಲ್ಲಿ 30 %ಗೂ ಹೆಚ್ಚು ಕುಸಿದಿದ್ದು, ಆಮದು ದುಬಾರಿಯಾಗಿದೆ.

ಪಾಕಿಸ್ತಾನದ ಸ್ವಯಂಕೃತಾಪರಾಧ, ಜಾಗತಿಕ ಬಿಕ್ಕಟ್ಟಿನ ಹೊಡೆತ

ಪಾಕಿಸ್ತಾನ ಹಲವಾರು ಸ್ವಯಂಕೃತಾಪರಾಧಗಳ ದುಷ್ಪರಿಣಾಮಗಳನ್ನು ಒಂದೆಡೆ ಅನುಭವಿಸುತ್ತಿದೆ. ಮತ್ತೊಂದೆಡೆ ಕಳೆದ ವರ್ಷದ ಭೀಕರ ಪ್ರವಾಹ, ಅದಕ್ಕೂ ಹಿಂದಿನ ಕೋವಿಡ್‌ ಬಿಕ್ಕಟ್ಟು, ಎಲ್ಲ ದೇಶಗಳಿಗೆ ತಟ್ಟಿದಂತೆ ಜಾಗತಿಕ ಹಿಂಜರಿತದ ತಾಪ, ದೇಶವನ್ನು ಹಿಂಡಿ ಹಾಕಿರುವ ವಿದೇಶಿ ಸಾಲದ ಹೊರೆ, ಬೆಲೆ ಏರಿಕೆ, ಕೈ ಕೊಟ್ಟಿರುವ ಚೀನಾ, ದೂರವಾಗಿರುವ ಅಮೆರಿಕದ ನೆರವು, ಕರಗಿದ ವಿದೇಶಿ ಬಂಡವಾಳ ಹೂಡಿಕೆ, ಬರಿದಾಗಿರುವ ವಿದೇಶಿ ವಿನಿಮಯ ಸಂಗ್ರಹ, ಐಎಂಎಫ್‌ನ ಕಠಿಣ ಷರತ್ತುಗಳು, ಕುಸಿದ ಮಾರುಕಟ್ಟೆ, ನಿರುದ್ಯೋಗ, ಮೂಲಭೂತವಾದಿ ಹಾಗೂ ಭಯೋತ್ಪಾದಕರ ಉಪಟಳ ಹೀಗೆ ನಾನಾ ಕಾರಣಗಳಿಂದ ಇದೀಗ ದಿವಾಳಿಯ ಅಂಚಿಗೆ ಪತನವಾಗಿದೆ. ಚೀನಾ ಕೂಡ ಪಾಕಿಸ್ತಾನದಲ್ಲಿ ತನ್ನ ಹೂಡಿಕೆಯನ್ನು ಸದ್ಯಕ್ಕೆ ಕಡಿಮೆ ಮಾಡಿದೆ. ಒಟ್ಟು 22 ಕೋಟಿಗೂ ಹೆಚ್ಚು ಜನಸಂಖ್ಯೆ ಪಾಕಿಸ್ತಾನದಲ್ಲಿದೆ. ಇತ್ತೀಚೆಗೆ ಪಾಕಿಸ್ತಾನದ ಸ್ಟೇಡಿಯಂನಲ್ಲಿ 1,167 ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಗೆ ನೇಮಕಾತಿಗೆ ಆಹ್ವಾನಿಸಲಾಗಿತ್ತು. 30,000 ಮಂದಿ ಕೆಲಸ ಕೋರಿ ಆ ಸ್ಟೇಡಿಯಂಗೆ ಮುತ್ತಿಗೆ ಹಾಕಿದ್ದರು.

ಲೀಟರ್‌ ಪೆಟ್ರೋಲ್‌ ದರ 2೧೪ ರೂ.

ಇವೆಲ್ಲದರ ಪರಿಣಾಮವಾಗಿ, ಆ ದೇಶದಲ್ಲೀಗ ಅನೇಕ ಕಡು ಬಡವರಿಗೆ ಒಪ್ಪೊತ್ತಿನ ಊಟಕ್ಕೂ ತತ್ವಾರ ಉಂಟಾಗಿದೆ. ಪಾಕಿಸ್ತಾನದ ಖೈಬರ್‌ ಪಖ್ತೂನ್‌ಕ್ವಾ (Khyber Pakhtunkhwa) ಪ್ರಾಂತ್ಯದಲ್ಲಿ ಜನರಿಗೆ ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆಯಾಗುತ್ತಿಲ್ಲ. ರಾತ್ರಿ ಅರ್ಧದಷ್ಟು ಬೀದಿ ದೀಪಗಳು ಉರಿಯುತ್ತಿಲ್ಲ. ಡಿಸೆಂಬರ್‌ನಲ್ಲಿ ಆಹಾರ ಹಣದುಬ್ಬರ 35%ಕ್ಕೆ ಜಿಗಿದಿದೆ. ಸಾರಿಗೆ ದರಗಳು 41.2% ಹೆಚ್ಚಳವಾಗಿದೆ. ಪ್ರತಿ ಲೀಟರ್‌ ಪೆಟ್ರೋಲ್‌ ದರ ಪಾಕಿಸ್ತಾನದ ರೂಪಾಯಿ ಲೆಕ್ಕದಲ್ಲಿ 2೧೪ ರೂ.ಗೆ ಜಿಗಿದಿದೆ. ಡೀಸೆಲ್‌ ದರ 227 ರೂ.ಗಳಾಗಿದೆ. ಪ್ರತಿ ಲೀಟರ್‌ ಸೀಮೆ ಎಣ್ಣೆ ದರ 171 ರೂ. ಎಂದು ಹಣಕಾಸು ಸಚಿವ ಇಶಾಕ್‌ ದಾರ್‌ ಹೇಳಿದ್ದಾರೆ ಎಂದು ದಿ ಇಂಟರ್‌ ನ್ಯಾಶನಲ್ ನ್ಯೂಸ್‌ ವರದಿ ತಿಳಿಸಿದೆ.

ಶಾಪಿಂಗ್‌ ಮಾಲ್‌ಗಳಿಗೆ ಮುಚ್ಚಲು ಆದೇಶ

ಇನ್ನು ಮುಂದೆ ದೇಶದಲ್ಲಿ ಎಲ್ಲ ಮಾರುಕಟ್ಟೆಗಳು ರಾತ್ರಿ 8.30ಕ್ಕೆ ಮುಚ್ಚಬೇಕು ಹಾಗೆಯೇ ಮದುವೆ ಹಾಲ್‌ಗಳನ್ನು ಕೂಡ ರಾತ್ರಿ 10ರೊಳಗೆ ಮುಚ್ಚಬೇಕು ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖವಾಜ್ ಆಸಿಫ್ ಆದೇಶಿಸಿದ್ದಾರೆ. ಹೆಚ್ಚು ಕರೆಂಟ್‌ ಬಳಸುವ ಫ್ಯಾನ್‌ಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಕ್ಕೆ ಆದೇಶಿಸಲಾಗಿದೆ. ಬಲವಂತವಾಗಿ ಮಾರುಕಟ್ಟೆಗಳನ್ನು ಮುಚ್ಚಿಸುವುದರಿಂದ ವ್ಯವಹಾರಗಳಿಗೆ ಮತ್ತಷ್ಟು ಹೊಡೆತ ಬಿದ್ದರೆ ಅಚ್ಚರಿ ಇಲ್ಲ.

ಪ್ರವಾಹದ ಬಳಿಕ ಹೊಸ ಸಾಲಕ್ಕೆ ಪರದಾಟ:

ಕಳೆದ ವರ್ಷ ಪಾಕಿಸ್ತಾನದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಪರಿಣಾಮ 3 ಕೋಟಿಗೂ ಹೆಚ್ಚು ಮಂದಿ ಸಂಕಷ್ಟಕ್ಕೀಡಾಗಿದ್ದರು. ಆರ್ಥಿಕತೆಗೆ 15 ಶತಕೋಟಿ ಡಾಲರ್‌ (1.23 ಲಕ್ಷ ಕೋಟಿ ರೂ.) ನಷ್ಟವಾಗಿತ್ತು. ಹೀಗಾಗಿ ಅಂತಾರಾಷ್ಟ್ರೀಯ ಸಮುದಾಯದ ಎದುರು ಪಾಕ್‌ ಸರ್ಕಾರ ಮಂಡಿಯೂರಿ ಹೊಸ ಸಾಲವನ್ನು ಯಾಚಿಸಿತ್ತು. ಆದರೆ ನಿರೀಕ್ಷಿಸಿದಂತೆ ಸಿಗುತ್ತಿಲ್ಲ. ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ರಸ್ತೆ, ಸೇತುವೆ, ಇತರ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಸಾಲ ಬೇಕು ಎನ್ನುತ್ತಿದೆ ಪಾಕ್.

2022-23ರಲ್ಲಿ ಪಾಕ್‌ ಜಿಡಿಪಿ ಶೇ.೨ಕ್ಕೆ ಕುಸಿಯುವ ನಿರೀಕ್ಷೆ: ಪಾಕಿಸ್ತಾನದ ಜಿಡಿಪಿ ಬೆಳವಣಿಗೆಯ ಪ್ರಮಾಣ 2022-23ರಲ್ಲಿ 2%ಕ್ಕೆ ಕುಸಿಯುವ ಸಾಧ್ಯತೆ ಇದೆ. ಕಳೆದ ಡಿಸೆಂಬರ್‌ನಲ್ಲಿ ಪಾಕಿಸ್ತಾನದ ಹಣದುಬ್ಬರ ದಾಖಲೆಯ 23%ಕ್ಕೆ ಏರಿತ್ತು.

ಪಾಕಿಸ್ತಾನದ ಒಟ್ಟು ಸಾಲದ ಹೊರೆ 22 ಲಕ್ಷ ಕೋಟಿ ರೂ.

ಪಾಕಿಸ್ತಾನದ ಒಟ್ಟು ಸಾಲ ೨೭೪ ಶತಕೋಟಿ ಡಾಲರ್.‌ ಭಾರತೀಯ ರೂಪಾಯಿ ಲೆಕ್ಕದಲ್ಲಿ 22 ಲಕ್ಷ ಕೋಟಿ ರೂ. ಆಗುತ್ತದೆ. ಅದರಲ್ಲಿ ವಿದೇಶಿ ಸಾಲ 10 ಲಕ್ಷ ಕೋಟಿ ರೂ. ಅತಿಯಾದ ಸಾಲದ ಪರಿಣಾಮ ವಿದೇಶಿ ವಿನಿಮಯ ಸಂಗ್ರಹ ಬರಿದಾಗುತ್ತಿದೆ. ಹಣದುಬ್ಬರ ಎದುರಿಸಲು ಸಾಧ್ಯವಾಗುತ್ತಿಲ್ಲ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್‌ನಿಂದ ಪಾಕಿಸ್ತಾನ 1950ರಿಂದೀಚೆಗೆ ಇಪ್ಪತ್ತೆರಡು ಸಲ ಸಾಲ ಪಡೆದುಕೊಂಡಿದೆ. ಇತ್ತೀಚೆಗೆ ಅಂದರೆ 2019ರಲ್ಲಿ ಪಡೆದುಕೊಂಡಿದೆ. ಮತ್ತೆ 7 ಶತಕೋಟಿ ಡಾಲರ್‌ (56,700 ಕೋಟಿ ರೂ.) ಹೊಸ ಸಾಲಕ್ಕೆ ಮನವಿ ಮಾಡಿದ್ದರೂ, ಸಿಕ್ಕಿಲ್ಲ. ತನ್ನಿಂದ ಹೊಸ ಸಾಲ ಬೇಕಾದರೆ, ವಿತ್ತೀಯ ಸುಧಾರಣೆಗೆ ಕಠಿಣ ಷರತ್ತುಗಳನ್ನು ಪಾಲಿಸಬೇಕು ಎಂದು ಐಎಂಎಫ್‌ ಪಟ್ಟಿ ಮಾಡಿದೆ. ಅದರಲ್ಲಿ ವಿದ್ಯುತ್‌ ದರ ಹೆಚ್ಚಳ, ಪೆಟ್ರೋಲ್-ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳ, ಸಬ್ಸಿಡಿ ಹಿಂತೆಗೆತ ಮತ್ತಿತರ ಷರತ್ತುಗಳನ್ನು ವಿಧಿಸಿದೆ.

ಕರಗಿದ ವಿದೇಶಿ ವಿನಿಮಯ ಸಂಗ್ರಹ:

ಪಾಕಿಸ್ತಾನದ ವಿದೇಶಿ ವಿನಿಮಯ ಸಂಗ್ರಹ ಕೇವಲ 5.82 ಶತಕೋಟಿ ಡಾಲರ್‌ನಷ್ಟಿದೆ. (47,142 ಕೋಟಿ ರೂ.) ಆದರೆ ಮುಂದಿನ ಮೂರು ತಿಂಗಳಿನಲ್ಲಿ 8 ಶತಕೋಟಿ ಡಾಲರ್‌ (64,800 ಕೋಟಿ ರೂ.) ಅನ್ನು ವಿದೇಶಿ ಸಾಲಗಳ ಮರು ಪಾವತಿಗೆ ನೀಡಬೇಕಾಗಿದೆ. ಹೀಗಾಗಿ ಪಾಕಿಸ್ತಾನ ದಿವಾಳಿಯಾಗುವ ಅಂಚಿನಲ್ಲಿದೆ ಎಂದು ವರದಿಯಾಗಿದೆ. ಈ ವಿದೇಶಿ ವಿನಿಮಯ ಸಂಗ್ರಹ ಕೇವಲ ಒಂದು ತಿಂಗಳಿನ ಆಮದು ವೆಚ್ಚಕ್ಕೆ ಮಾತ್ರ ಸಾಕು.

ಹಣದುಬ್ಬರ 23%ಕ್ಕೆ ಏರಿಕೆ

ಪಾಕಿಸ್ತಾನದಲ್ಲಿ ಹಣದುಬ್ಬರ ಕೂಡ ಬೃಹತ್‌ ಸವಾಲಾಗಿ ಪರಿಣಮಿಸಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಇದು 23% ಕ್ಕೆ ಏರಿಕೆಯಾಗಿದೆ.

ಬಿನ್‌ ಲಾಡೆನ್‌ಗೆ ಆಶ್ರಯ ಕೊಟ್ಟ ಬಳಿಕ ದಿಕ್ಕೆಟ್ಟ ಪಾಕ್

ಅಂತಾರಾಷ್ಟ್ರೀಯ ಭಯೋತ್ಪಾದಕ ಒಸಾಮಾ ಬಿನ್‌ ಲಾಡೆನ್‌ಗೆ ಆಶ್ರಯ ಕೊಟ್ಟ ಬಳಿಕ ಪಾಕಿಸ್ತಾನಕ್ಕೆ ಅಮೆರಿಕದ ಬೆಂಬಲ ಸ್ಥಗಿತವಾಯಿತು. ಪಾಕಿಸ್ತಾನಕ್ಕೆ ನುಗ್ಗಿ ಅಮೆರಿಕದ ಸೇನಾ ಪಡೆಯ ವಿಶೇಷ ದಳ ಬಿನ್‌ ಲಾಡೆನ್‌ನನ್ನು ಹೊಡೆದುರುಳಿಸಿತ್ತು. ಬಳಿಕ ಅಮೆರಿಕದಿಂದ ಪಾಕ್‌ಗೆ ನೆರವು ನಿಂತು ಹೋಯಿತು. ಈಗ ಚೀನಾದ ನೆರವು ಕೂಡ ಅಷ್ಟಾಗಿ ಲಭಿಸುತ್ತಿಲ್ಲ.

2023ರಲ್ಲಿ ಪಾಕಿಸ್ತಾನದ ಪರಿಸ್ಥಿತಿ ಹೇಗಿರಬಹುದು?

ಅಂತಾರಾಷ್ಟ್ರೀಯ ವಿಶ್ಲೇಷಕರ ಪ್ರಕಾರ ಪಾಕಿಸ್ತಾನ 2023ರಲ್ಲಿ ದಿವಾಳಿಯಾಗವುದನ್ನು ತಪ್ಪಿಸಲು ಯತ್ನಿಸಬಹುದು. ಏಕೆಂದರೆ ದಿವಾಳಿಯಾದರೆ ಅದರ ರಾಜಕೀಯ ಪರಿಣಾಮಗಳೂ ವ್ಯಾಪಕ. ಹೀಗಾಗಿ ಪಾಕ್‌ ಸರ್ಕಾರ ತನ್ನೆಲ್ಲ ಸಂಪನ್ಮೂಲಗಳನ್ನು ಬಳಸಿ ದಿವಾಳಿ ಕಳಂಕ ತಟ್ಟದಂತೆ ಎಚ್ಚರ ವಹಿಸುವ ನಿರೀಕ್ಷೆ ಇದೆ. ಎರಡನೆಯದಾಗಿ ಅಂತಾರಾಷ್ಟ್ರೀಯವಾಗಿ ಪಾಕಿಸ್ತಾನದ ಜತೆ ಪಾಲುದಾರಿಕೆ ಹೊಂದಿರುವ, ಸಾಲ ಕೊಟ್ಟಿರುವ ದೇಶಗಳು ದಿವಾಳಿಯಾಗುವುದನ್ನು ತಪ್ಪಿಸುವ ನಿರೀಕ್ಷೆ ಇದೆ. ಹೀಗಿದ್ದರೂ, ಪಾಕಿಸ್ತಾನ ಆರ್ಥಿಕ ಸುಧಾರಣೆ ಕ್ರಮಗಳನ್ನು ಗಂಭೀರವಾಗಿ ಕೈಗೊಳ್ಳದಿದ್ದರೆ, ದೀರ್ಘಾವಧಿಯಲ್ಲಿ ಅದು ದಿವಾಳಿಯಾಗುವುದನ್ನು ತಪ್ಪಿಸುವುದೂ ಸಾಧ್ಯವಾಗದು ಎನ್ನುತ್ತಾರೆ ತಜ್ಞರು.

Exit mobile version