ನವದೆಹಲಿ: ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ (International Market) ಕಚ್ಚಾ ತೈಲ (Crude Oil) ಬೆಲೆ ಭಾರೀ ಇಳಿಕೆ ಕಂಡ ಪರಿಣಾಮ ದೇಶದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗುವ ಸಾಧ್ಯತೆಗಳಿವೆ! (Petrol, Diesel price) ಒಂದು ವರ್ಷದಿಂದ ಈ ಬೆಲೆಗಳಲ್ಲಿ ಅಂಥ ಬದಲಾವಣೆಗಳಾಗಿರಲಿಲ್ಲ. ಈಗ ಲಾಭದ ಪಾಲನ್ನು ಗ್ರಾಹಕರಿಗೆ ವರ್ಗಾವಣೆ ಮಾಡುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಭಾರೀ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.
2022ರಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ 17 ರೂ. ಮತ್ತು ಡೀಸೆಲ್ಗೆ 35 ರೂ.ನಷ್ಟು ಗರಿಷ್ಠ ನಷ್ಟ ಅನುಭವಿಸುತ್ತಿದ್ದ ತೈಲ ಮಾರಾಟ ಕಂಪನಿಗಳು ಈಗ ಪ್ರತಿ ಲೀಟರ್ಗೆ ಪೆಟ್ರೋಲ್ಗೆ 8-10 ರೂ. ಮತ್ತು ಡೀಸೆಲ್ನಲ್ಲಿ 3-4 ರೂ. ಲಾಭ ಗಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಇಂಧನ ಸಚಿವಾಲಯವು ಈಗಾಗಲೇ ತೈಲ ಮಾರಾಟ ಕಂಪನಿಗಳೊಂದಿಗೆ ಕಚ್ಚಾ ಮತ್ತು ಚಿಲ್ಲರೆ ಇಂಧನ ಬೆಲೆಯ ಸನ್ನಿವೇಶಗಳ ಕುರಿತು ಚರ್ಚಿಸಿದೆ.
ತೈಲ ಮಾರಾಟ ಕಂಪನಿಗಳು ಲಾಭವನ್ನು ಮಾಡಿಕೊಳ್ಳುತ್ತಿರುವುದರಿಂದ, ಅದರ ಲಾಭವನ್ನು ಜನರಿಗೂ ದಾಟಿಸುವ ಕುರಿತು ಕೇಂದ್ರ ಸರ್ಕಾರವು ಚರ್ಚೆ ನಡೆಸಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಕಚ್ಚಾ ತೈಲ ಬೆಲೆಯ ಸನ್ನಿವೇಶದ ಬಗ್ಗೆ ಹಣಕಾಸು ಸಚಿವಾಲಯ ಮತ್ತು ತೈಲ ಸಚಿವಾಲಯ ಚಿಂತನೆ ನಡೆಸುತ್ತಿದೆ. ತೈಲ ಮಾರಾಟ ಕಂಪನಿಗಳ ಲಾಭದಾಯಕತೆಯ ಜೊತೆಗೆ, ಅವರು ಜಾಗತಿಕ ಪರಿಸ್ಥಿತಿಗಳ ಕುರಿತೂ ಅವರು ಚರ್ಚಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಮೂರು ತ್ರೈಮಾಸಿಕಗಳಲ್ಲಿ ಬಲವಾದ ಲಾಭದ ಕಾರಣವಾಗಿ ತೈಲ ಮಾರಾಟ ಕಂಪನಿಗಳ ಒಟ್ಟಾರೆ ನಷ್ಟದ ಪ್ರಮಾಣ ಕಡಿಮೆಯಾಗಿದೆ. ಕಳೆದ ತ್ರೈಮಾಸಿಕದಲ್ಲಿ ಐಒಸಿ, ಎಚ್ಪಿಸಿಎಲ್ ಮತತು ಬಿಪಿಸಿಎಲ್ ಮೂರು ತೈಲ ಮಾರಾಟ ಕಂಪನಿಗಳ ಒಟ್ಟು ಲಾಭ 28,000 ಕೋಟಿಗಳಷ್ಟಾಗಿದೆ. ನಷ್ಟವನ್ನು ಭರಿಸಿಕೊಳ್ಳುತ್ತಿವೆ ಎಂಬ ಪರಿಸ್ಥಿತಿಯಿಂದ ಕಂಪನಿಗಳು ಹೊರ ಬಂದಿರುವುದರಿಂದ ಸರ್ಕಾರವು ಲಾಭವನ್ನು ಜನರಿಗೂ ದಾಟಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಬೇಡಿಕೆಯಲ್ಲಿನ ಕುಸಿತ ಮತ್ತು ಒಪೆಕ್ ಪೂರೈಕ ಕಡಿತ ಆಳ ಮತ್ತು ಅವಧಿಯ ಮೇಲಿನ ಅನಿಶ್ಚಿತತೆಯು ಈ ವಾರಂಭದಲ್ಲಿ ತೈಲ ಬೆಲೆಗಳ ಕುಸಿತಕ್ಕೆ ಕಾರಣವಾಯಿತು. ನೈಜೀರಿಯಾ ಮತ್ತು ಇರಾಕ್ ತಮ್ಮ ರಫ್ತು ಪ್ರಮಾಣವನ್ನು ಕಡಿಮೆ ಮಾಡಿವೆ. ಸೌದಿ ಅರೇಬಿಯಾ ಮತ್ತು ಒಪೆಕ್ ಪ್ಲಸ್ ಮೈತ್ರಿಯ ಇತರ ಸದಸ್ಯರಿಂದ ನಡೆಯುತ್ತಿರುವ ಮಾರುಕಟ್ಟೆ-ಬೆಂಬಲಿತ ಕಡಿತದ ಪರಿಣಾಮವಾಗಿ ಜುಲೈ ನಂತರದ ಮೊದಲ ಮಾಸಿಕ ಕುಸಿತದ ಬಳಿಕ, ಒಪೆಕ್ ತೈಲ ಉತ್ಪಾದನೆಯು ನವೆಂಬರ್ನಲ್ಲಿ ಮತ್ತೆ ಕುಸಿತವನ್ನು ದಾಖಲಿಸಿತು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿಯುತ್ತಿರುವ ತೈಲ ಬೆಲೆಗಳು ದೇಶದಲ್ಲಿ ಹಣದುಬ್ಬರ ಇಳಿಕೆಗೆ ಕೊಡುಗೆಯನ್ನು ನೀಡಬಲ್ಲವು. ಅಲ್ಲದೇ, ಕುಸಿತ್ತಿರುವ ತೈಲ ಬೆಲೆಗಳು ಭಾರತೀಯ ಷೇರು ಮಾರುಕಟ್ಟೆಗೆ ಬಲ ನೀಡಲಿವೆ. ವಿಶೇಷವಾಗಿ ಕಚ್ಚಾ ತೈಲವನ್ನು ಕಚ್ಚಾ ವಸ್ತುವಾಗಿ ಬಳಸುವ ವಲಯದ ಕಂಪನಿಗಳಿಗೆ ಭಾರೀ ಲಾಭವಾಗಲಿವೆ. ಇದೇ ವೇಳೆ, ಕೆಲವು ವಲಯಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನೂ ಕಾಣಬಹುದು.
ಈ ಸುದ್ದಿಯನ್ನೂ ಓದಿ: Crude Oil Price: ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ; ಕಚ್ಚಾ ತೈಲ ಬೆಲೆ ಏರಿಕೆ, ಭಾರತದ ಮೇಲೆ ಪರಿಣಾಮ ನಿಶ್ಚಿತ?