Site icon Vistara News

RBI Guideline: ಬ್ಯಾಂಕುಗಳಿಗೆ ಬಿಸಿ ಮುಟ್ಟಿಸಿದ ಆರ್‌ಬಿಐ; ಸಂಗ್ರಹಿಸಿದ ಹೆಚ್ಚುವರಿ ಶುಲ್ಕ ಮರುಪಾವತಿಗೆ ಸೂಚನೆ

RBI Guideline

RBI Guideline

ನವದೆಹಲಿ: ಕೆಲವು ಬ್ಯಾಂಕುಗಳು ಮತ್ತು ಸಾಲ ನೀಡುವ ಸಂಸ್ಥೆಗಳು ಅವೈಜ್ಞಾನಿಕವಾಗಿ ಬಡ್ಡಿ ವಿಧಿಸಿ ಗ್ರಾಹಕರಿಗೆ ಅನ್ಯಾಯ ಎಸಗುತ್ತಿರುವ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಕೂಡಲೇ ಈ ತಪ್ಪು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಮತ್ತು ಗ್ರಾಹಕರಿಂದ ಪಡೆದುಕೊಂಡ ಹೆಚ್ಚುವರಿ ಶುಲ್ಕವನ್ನು ಮರುಪಾವತಿಸಬೇಕು ಎಂದು ನಿರ್ದೇಶನ ನೀಡಿದೆ (RBI Guideline).

2003ರಲ್ಲಿ ವಿವಿಧ ನಿಯಂತ್ರಿತ ಘಟಕಗಳಿಗೆ (REs) ಹೊರಡಿಸಲಾದ ನ್ಯಾಯೋಚಿತ ಆಚರಣೆಗಳ ಸಂಹಿತೆಯ ಮಾರ್ಗಸೂಚಿ ಪ್ರಕಾರ, ಸಾಲ ನೀಡುವವರು ಬಡ್ಡಿ ವಿಧಿಸುವಾಗ ನಿಯಮಗಳನ್ನು ಪಾಲಿಸಬೇಕು ಮತ್ತು ಪಾರದರ್ಶಕತೆಯನ್ನು ಪ್ರದರ್ಶಿಸಬೇಕು. “2023ರ ಮಾರ್ಚ್ 31ಕ್ಕೆ ಕೊನೆಗೊಂಡ ಅವಧಿಯ ಆರ್‌ಇಗಳ ಆನ್‌ಸೈಟ್‌ ಪರಿಶೀಲನೆಯ ಸಮಯದಲ್ಲಿ, ಸಾಲದಾತರು ಬಡ್ಡಿ ವಿಧಿಸುವಾಗ ಕೆಲವೊಂದು ನಿಯಮಗಳನ್ನು ಮುರಿದಿರುವುದು ಕಂಡು ಬಂದಿದೆʼʼ ಎಂದು ಆರ್‌ಬಿಐ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.

“ನ್ಯಾಯಸಮ್ಮತ ಮತ್ತು ಪಾರದರ್ಶಕತೆಯ ಹಿತದೃಷ್ಟಿಯಿಂದ ಸಾಲಗಳ ವಿತರಣೆಯ ವಿಧಾನ, ಬಡ್ಡಿ ವಿಧಿಸುವುದು ಮತ್ತು ಇತರ ಶುಲ್ಕಗಳಿಗೆ ಸಂಬಂಧಿಸಿದಂತೆ ಈಗಿರುವ ನಿಯಮಗಳನ್ನು ಪರಿಶೀಲಿಸಲು ಮತ್ತು ಅಗತ್ಯವಿದ್ದರೆ ಸಿಸ್ಟಮ್ ಮಟ್ಟದ ಬದಲಾವಣೆಗಳು ಸೇರಿದಂತೆ ಹಲವು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲು ಎಲ್ಲ ಆರ್‌ಇಗಳಿಗೆ ನಿರ್ದೇಶಿಸಲಾಗಿದೆ” ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಆರ್‌ಬಿಐ ಗಮನಿಸಿದ್ದೇನು?

ಆರ್‌ಇಗಳ ಆನ್‌ಸೈಟ್‌ ಪರಿಶೀಲನೆ ವೇಳೆ ಗ್ರಾಹಕರಿಗೆ ಹಣವನ್ನು ವಿತರಿಸಿದ ದಿನಾಂಕದ ಬದಲಾಗಿ ಸಾಲ ಮಂಜೂರಾದ ದಿನದಿಂದ ಅಥವಾ ಸಾಲ ಒಪ್ಪಂದವನ್ನು ನಡೆಸಿದ ತಾರೀಕಿನಿಂದ ಬಡ್ಡಿ ವಿಧಿಸುವುದನ್ನು ಆರ್‌ಬಿಐ ಗಮನಿಸಿದೆ. ಅಲ್ಲದೆ ಚೆಕ್ ಅನ್ನು ಗ್ರಾಹಕರಿಗೆ ಹಸ್ತಾಂತರಿಸುವ ಮೊದಲೇ ಬಡ್ಡಿ ವಿಧಿಸಿದ ನಿದರ್ಶನವೂ ಬೆಳಕಿಗೆ ಬಂದಿದೆ ಎಂದು ಆರ್‌ಬಿಐ ಹೇಳಿದೆ.

ಗ್ರಾಹಕರಿಗೆ ಮರುಪಾವತಿಸಲು ಸೂಚನೆ

ಕೆಲವು ಸಂದರ್ಭಗಳಲ್ಲಿ ಒಂದು ಅಥವಾ ಹೆಚ್ಚಿನ ಕಂತುಗಳನ್ನು ಮುಂಚಿತವಾಗಿ ಸಂಗ್ರಹಿಸುತ್ತಿರುವುದು ಮತ್ತು ಬಡ್ಡಿಯನ್ನು ವಿಧಿಸಲು ಪೂರ್ಣ ಸಾಲದ ಮೊತ್ತವನ್ನು ಲೆಕ್ಕ ಹಾಕುತ್ತಿರುವುದನ್ನೂ ಗಮನಿಸಲಾಗಿದೆ. ಜತೆಗೆ ಗ್ರಾಹಕರೊಂದಿಗೆ ವ್ಯವಹರಿಸುವಾಗ ಬಡ್ಡಿ ವಿಧಿಸುವ ಕೆಲವೊಂದು ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕೂಡ ಕಂಡು ಬಂದಿದೆ ಎಂದಿರುವ ಆರ್‌ಬಿಐ, “ಇವು ರಿಸರ್ವ್ ಬ್ಯಾಂಕ್‌ಗೆ ಅತ್ಯಂತ ಗಂಭೀರ ವಿಷಯವಾಗಿದೆ. ಇಂತಹ ಸಂದರ್ಭದಲ್ಲಿ ಸಂಗ್ರಹಿಸಿದ ಹೆಚ್ಚುವರಿ ಬಡ್ಡಿ ಮತ್ತು ಇತರ ಶುಲ್ಕಗಳನ್ನು ಗ್ರಾಹಕರಿಗೆ ಮರುಪಾವತಿಸಲು ಸಲಹೆ ನೀಡಲಾಗಿದೆʼʼ ಎಂದು ತಿಳಿಸಿದೆ.

ತಕ್ಷಣದಿಂದ ಜಾರಿ

ಸಾಲ ವಿತರಣೆಯ ಸಂದರ್ಭಗಳಲ್ಲಿ ನೀಡಲಾಗುವ ಚೆಕ್‌ಗಳಿಗೆ ಬದಲಾಗಿ ಆನ್‌ಲೈನ್‌ ಖಾತೆ ವರ್ಗಾವಣೆಗಳನ್ನು ಬಳಸಲು ಆರ್‌ಇಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಲಾಗಿದೆ. ಈ ನಿಯಮ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಆರ್‌ಬಿಐ ಪ್ರಕಟಿಸಿದೆ. ಸದ್ಯ ಆರ್‌ಬಿಐ ಹೊರಟಿಸಿರುವ ಈ ಪ್ರಕಟಣೆಯಿಂದ ದೇಶದ ಅನೇಕ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಮೂಲಗಳು ತಿಳಿಸಿವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Kotak Mahindra Bank: ಹೊಸ ಕ್ರೆಡಿಟ್ ಕಾರ್ಡ್ ನೀಡದಂತೆ ಕೊಟಕ್‌ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ; ಕಾರಣ ಇಲ್ಲಿದೆ

Exit mobile version