Site icon Vistara News

RBI Policy : ಶೀಘ್ರದಲ್ಲೇ ನೀವು ಯುಪಿಐ ಮೂಲಕವೂ ಸಾಲ ಪಡೆಯಬಹುದು, ಆರ್‌ಬಿಐ ಹೊಸ ಪ್ರಸ್ತಾಪದಲ್ಲಿ ಏನಿದೆ?

UPI

UPI

ಮುಂಬಯಿ: ಖಾತೆಯಿಂದ ಹಣ ಪಡೆಯಲು ಬ್ಯಾಂಕ್‌ ಶಾಖೆಗೆ ತೆರಳುತ್ತಿದ್ದ ದಿನಗಳು ಎಟಿಎಂ ಬಂದ ನಂತರ ಮುಗಿಯಿತು. ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆ ಬಂದ ಬಳಿಕ ಎಟಿಎಂನ ಅಗತ್ಯವೂ ಕಡಿಮೆಯಾಗಿದೆ. ಇದೀಗ ಸಾಲವನ್ನೂ ಯುಪಿಐ ಮೂಲಕ ಪಡೆಯಲು ಆರ್‌ಬಿಐ ಹಾದಿ (RBI Policy) ಸುಗಮಗೊಳಿಸಿದೆ. ಇದು ಭಾರತೀಯರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಯುಪಿಐ ಮೂಲಕ ದಿನಕ್ಕೆ ಸರಾಸರಿ 36 ಕೋಟಿ ವರ್ಗಾವಣೆಗಳು (transactions) ನಡೆಯುತ್ತಿದ್ದು, ಶೀಘ್ರದಲ್ಲಿಯೇ ಗ್ರಾಹಕರಿಗೆ ತ್ವರಿತ ಸಾಲ ಸಿಗಲಿದೆ. ಗೂಗಲ್‌ ಪೇ, ಫೋನ್‌ ಪೇ ಇತ್ಯಾದಿ ಯುಪಿಐ ಆಧರಿತ ಆ್ಯಪ್‌ಗಳ ಮೂಲಕ ಬ್ಯಾಂಕಿನಿಂದ ಸಾಲ ಪಡೆಯಬಹುದು.

ಚೀನಾದ ಲೋನ್‌ ಆ್ಯಪ್‌ಗಳು ದುಬಾರಿ ಬಡ್ಡಿಯ ಸಾಲದ ಸುಳಿಗೆ ಜನರನ್ನು ಈ ಹಿಂದೆ ಸಿಲುಕಿಸಿತ್ತು. ಇಂಥ ವಂಚನೆಗಳನ್ನು ತಪ್ಪಿಸಲು ಯುಪಿಐ ಮೂಲಕ ಸಾಲ ವಿತರಣೆ ಸಹಕಾರಿಯಾಗಲಿದೆ ಎನ್ನುತ್ತಾರೆ ತಜ್ಞರು.

ಮೊದಲೇ ಮಂಜೂರಾಗಿರುವ ಸಾಲ: (pre-sanctioned credit lines)

ಬ್ಯಾಂಕ್‌ಗಳಲ್ಲಿ ಗ್ರಾಹಕರಿಗೆ ಮೊದಲೇ ಇಂತಿಷ್ಟು ಸಾಲ ಪಡೆಯಬಹುದು ಎಂದು ಮಂಜೂರಾಗಿರುತ್ತದೆ. ಈ ರೀತಿ ಬ್ಯಾಂಕ್‌ನಿಂದ ಮಂಜೂರಾಗಿರುವ ಸಾಲವನ್ನು ಯುಪಿಐ ಮೂಲಕ ಪಡೆಯಬಹುದು. ಪ್ರಸ್ತುತ ಯುಪಿಐ ವರ್ಗಾವಣೆಗಳು ಬ್ಯಾಂಕ್‌ ಖಾತೆಗಳ ನಡುವೆ ನಡೆಯುತ್ತದೆ. ಕೆಲವೊಮ್ಮೆ ಪ್ರಿ-ಪೇಯ್ಡ್‌ ವ್ಯಾಲೆಟ್‌ಗಳ ನಡುವೆಯೂ ವರ್ಗಾವಣೆಗೆ ಇದು ಸಹಕಾರಿ.

ಈ ನಡೆಯಿಂದ ಯುಪಿಐ ಮತ್ತಷ್ಟು ಜನಪ್ರಿಯವಾಗಲಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ತಿಳಿಸಿದ್ದಾರೆ. ಇದರಿಂದ ಗ್ರಾಹಕರಿಗೆ ಸಾಲ ಪಡೆಯಲು ತಗಲುವ ಸಮಯದಲ್ಲಿ ಉಳಿತಾಯವಾಗಲಿದೆ. ಇದು ಆರ್ಥಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ಬಡ್ಡಿ ದರ ಏರಿಕೆಗೆ ತಡೆ:

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (RBI) ಕೊನೆಗೂ ಸಾಲದ ಬಡ್ಡಿ ದರ ಏರಿಕೆಗೆ ಗುರುವಾರ ಬ್ರೇಕ್‌ ಹಾಕಿ ಅಚ್ಚರಿಗೊಳಿಸಿದೆ. ಅಮೆರಿಕ, ಯುರೋಪ್‌ ಮೊದಲಾದೆಡೆಗಳಲ್ಲಿ ಸೆಂಟ್ರಲ್‌ ಬ್ಯಾಂಕ್‌ಗಳು ಇತ್ತೀಚೆಗೆ ಬಡ್ಡಿ ದರ ಏರಿಸಿರುವುದರಿಂದ ಆರ್‌ಬಿಐ ಕೂಡ ಬಡ್ಡಿ ದರ ಏರಿಸಲಿದೆ ( RBI Repo rate) ಎಂದೇ ನಿರೀಕ್ಷಿಸಲಾಗಿತ್ತು. ಆದರೆ ರೆಪೊ ದರವನ್ನು 6.5%ರ ಯಥಾಸ್ಥಿತಿಯಲ್ಲಿ ಇರಿಸಲಾಗಿದೆ. ಆದರೆ ಈ ಹಿಂದಿನ ಬಡ್ಡಿ ದರ ಏರಿಕೆಯು ಹಣದುಬ್ಬರವನ್ನು ತಗ್ಗಿಸುವ ನಿಟ್ಟಿನಲ್ಲಿ ನಿರೀಕ್ಷಿತ ಪರಿಣಾಮ ಬೀರದಿರುವುದರಿಂದ ಆರ್‌ಬಿಐ ಯಥಾಸ್ಥಿತಿಯಲ್ಲಿರಿಸಿದೆ.

ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಐ ಈ ನಿರ್ಧಾರ ಕೈಗೊಂಡಿದೆ ಎಂದು ಗವರ್ನರ್‌ ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ. 2022ರ ಮೇ ಬಳಿಕ ಆರ್‌ಬಿಐ ಸತತ 6 ಸಲ ಒಟ್ಟು 2.50% ರಷ್ಟು ಬಡ್ಡಿ ದರ ಏರಿಸಿದೆ. ರೆಪೊ ದರ ಎಂದರೆ ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯವ ಹಣಕ್ಕೆ ನೀಡುವ ಬಡ್ಡಿ ದರ.

2023 ಆಶಾದಾಯಕ ಎಂದ ಗವರ್ನರ್:‌ ಈ 2023 ಆಶಾದಾಯಕವಾಗಿ ಆರಂಭವಾಗಿದೆ. ಆರ್ಥಿಕ ಮಾರುಕಟ್ಟೆಗಳು ಚೇತೋಹಾರಿಯಾಗಿವೆ. ಹೀಗಿದ್ದರೂ, ಜಾಗತಿಕವಾಗಿ ಅಭಿವೃದ್ಧಿ ಹೊಂದಿರುವ ಎಕಾನಮಿಗಳಲ್ಲಿ ಬ್ಯಾಂಕಿಂಗ್‌ ವಲಯದ ಬಿಕ್ಕಟ್ಟು ತಲೆದೋರಿದೆ.

ಭಾರತದ ಜಿಡಿಪಿ 2023-24ರಲ್ಲಿ 6.5%ಕ್ಕೆ ಏರಿಕೆಯಾಗಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ಈ ನಡುವೆ ಹಣದುಬ್ಬರದ ಮುನ್ನೋಟವನ್ನು 5.3%ರಿಂದ 5.2%ಕ್ಕೆ ಕಡಿತಗೊಳಿಸಲಾಗಿದೆ.

ರಿಯಲ್‌ ಎಸ್ಟೇಟ್‌ ಮಾರುಕಟ್ಟೆ ದೃಷ್ಟಿಯಿಂದ ಬಡ್ಡಿ ದರ ಏರಿಕೆಯನ್ನು ತಡೆದಿರುವುದು ಉತ್ತಮ ಬೆಳವಣಿಗೆ ಎಂದು ಅನಾರಾಕ್‌ ಗ್ರೂಪ್‌ ಅಧ್ಯಕ್ಷ ಅಂಜು ಪುರಿ ತಿಳಿಸಿದ್ದಾರೆ. ಆರ್ಥಿಕ ಸ್ಥಿರತೆಗೆ ಆರ್‌ಬಿಐನ ಹಣಕಾಸು ನೀತಿ ಆದ್ಯತೆ ನೀಡಿದೆ. ಜಾಗತಿಕ ಬ್ಯಾಂಕಿಂಗ್‌ ಸಂಕಷ್ಟದಲ್ಲಿರುವ ಸಂದರ್ಭ ಭಾರತೀಯ ಬ್ಯಾಂಕಿಂಗ್‌ ಉತ್ತಮ ಸ್ಥಿತಿಯಲ್ಲಿದೆ ಎಂದು ಕೋಟಕ್‌ ಬ್ಯಾಂಕ್‌ ಸ್ಥಾಪಕ ಉದಯ್‌ ಕೋಟಕ್‌ ಹೇಳಿದ್ದಾರೆ.

Exit mobile version