Site icon Vistara News

ವಿಸ್ತಾರ Explainer: ಕೇಂದ್ರ ಸರಕಾರ ಪೆಟ್ರೋಲ್‌, ಡೀಸೆಲ್‌ ಮೇಲೆ ಅಬಕಾರಿ ಸುಂಕವನ್ನು ಗಣನೀಯ ಇಳಿಸಿದ್ದೇಕೆ?

petrol

ನವದೆಹಲಿ: ಕೇಂದ್ರ ಸರಕಾರ ಕಳೆದ ಶನಿವಾರ ಜನ ಸಾಮಾನ್ಯರಿಗೆ ನಿರಾಳವಾಗುವಂತೆ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಗಣನೀಯವಾಗಿ ಇಳಿಸಿದ್ದೇಕೆ ಎಂಬ ಪ್ರಶ್ನೆ ಈಗ ಚರ್ಚೆಯಾಗುತ್ತಿದೆ.

ಅಬಕಾರಿ ಸುಂಕ ಕಡಿತಗೊಳಿಸಿದ ಪರಿಣಾಮವಾಗಿ ಪೆಟ್ರೋಲ್‌ ದರದಲ್ಲಿ ಲೀಟರ್‌ಗೆ 9.5 ರೂ. ಮತ್ತು ಡೀಸೆಲ್‌ ದರದಲ್ಲಿ 7 ರೂ. ಇಳಿಕೆಯಾಗಿದೆ. ಇದಲ್ಲದೆ ಉಜ್ವಲ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ 200 ರೂ.ಗಳ ಸಬ್ಸಿಡಿಯನ್ನೂ ನೀಡಲಾಗಿದೆ. ಇದರೊಂದಿಗೆ ಪೆಟ್ರೋಲ್‌ ಮೇಲಿನ ಕೇಂದ್ರದ ಅಬಕಾರಿ ಸುಂಕ ಲೀಟರ್‌ಗೆ 19.9 ರೂ.ಗೆ ಹಾಗೂ ಡೀಸೆಲ್‌ ಮೇಲೆ 15.8 ರೂ.ಗೆ ಇಳಿಕೆಯಾಗಿದೆ.

” ಜನ ಸಾಮಾನ್ಯರು ಮತ್ತು ಬಡವರಿಗೆ ಸಹಕರಿಸುವ ಮೋದಿ ಸರಕಾರದ ಬದ್ಧತೆಯ ಭಾಗವಾಗಿ ಅಬಕಾರಿ ಸುಂಕ ಕಡಿತಗೊಳಿಸಲಾಗಿದೆʼʼ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. “ಜನರ ಹಿತವೇ ಸರಕಾರದ ಧ್ಯೇಯʼʼ ಎಂಬ ಆಶಯವನ್ನು ಇದು ಬಿಂಬಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬೆಲೆ ಏರಿಕೆಯನ್ನು ಹತ್ತಿಕ್ಕುವ ಕಸರತ್ತು

ಹಣದುಬ್ಬರ ಅಥವಾ ಬೆಲೆ ಏರಿಕೆಯನ್ನು ಹತ್ತಿಕ್ಕುವ ಕಾರ್ಯತಂತ್ರದ ಅನುಸಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರಕಾರ ಕಡಿತಗೊಳಿಸಿದೆ. ಏಕೆಂದರೆ ಕಳೆದ ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರ ಶೇ.15.08ಕ್ಕೆ ಏರಿತ್ತು. ಚಿಲ್ಲರೆ ಹಣದುಬ್ಬರ ಕಳೆದ 8 ವರ್ಷಗಳಲ್ಲೇ ಗರಿಷ್ಠ ಮಟ್ಟವಾದ ಶೇ.7.7ಕ್ಕೆ ಜಿಗಿದಿತ್ತು. ಸತತ 4 ತಿಂಗಳುಗಳಿಂದ ಹಣದುಬ್ಬರವು ಆರ್‌ ಬಿಐನ ಸುರಕ್ಷತಾ ಮಟ್ಟಕ್ಕಿಂತ ಮೇಲಿದೆ.

ರಷ್ಯಾ ಮತ್ತು ಉಕ್ರೇನ್‌ ನಡುವಣ ಸಂಘರ್ಷ ಮತ್ತು ಕೋವಿಡ್‌-19 ಬಿಕ್ಕಟ್ಟಿನ ಪರಿಣಾಮ ಜಗತ್ತಿನಲ್ಲಿ ಪೂರೈಕೆಯ ಸರಣಿಯಲ್ಲಿ ತೊಂದರೆಗಳು ಕಾಣಿಸಿಕೊಂಡಿವೆ. ಹಲವು ಸರಕುಗಳ ಕೊರತೆ ಉಂಟಾಗಿದೆ. ಇದರ ಪರಿಣಾಮ ಹಲವಾರು ದೇಶಗಳಲ್ಲಿ ಬೆಲೆ ಏರಿಕೆ ಮತ್ತು ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ವಿತ್ತ ಸಚಿವೆ ಹೇಳಿದ್ದಾರೆ.

ಯಾವುದರ ದರ ಎಷ್ಟು ಹೆಚ್ಚಳ?

( ಹಣದುಬ್ಬರ 2022ರ ಮಾರ್ಚ್‌ನಲ್ಲಿ ಉಲ್ಬಣಿಸಲು ಕಾರಣವಾದ ವಸ್ತುಗಳ ಬೆಲೆ ಏರಿಕೆ, ಮೂಲ: ಅಂಕಿ ಅಂಶಗಳ ಇಲಾಖೆ)

ಖಾದ್ಯ ತೈಲ18.8%
ತರಕಾರಿ11.6%
ಪಾದರಕ್ಷೆ11.3%
ಮಾಂಸ ಮತ್ತು ಮೀನು9.6%
ಬಟ್ಟೆಬರೆ9.1%
ಪರ್ಸನಲ್‌ ಕೇರ್‌ ಉತ್ಪ್ನನ್ನ8.7%
ಮಸಾಲೆ ಪದಾರ್ಥ8.5%
ಸಾರಿಗೆ ಮತ್ತು ಸಂಪರ್ಕ8.09%
ಮನೆ ಬಳಕೆಯ ವಸ್ತುಗಳು ಮತ್ತು ಸೇವೆ7.70%
ಆಹಾರ ಮತ್ತು ಪಾನೀಯ7.5%

ದಿನ ನಿತ್ಯ ಬಳಕೆಯ ವಸ್ತುಗಳ ಏರಿಕೆಯಲ್ಲಿ ಇಂಧನಗಳೂ ಪ್ರಭಾವ ಬೀರುತ್ತವೆ. ಹೀಗಾಗಿ ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಸರಕಾರ ಕಡಿತಗೊಳಿಸಿದೆ. ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಇದು ನಿರ್ಣಾಯಕ.

ಹೋಲ್‌ಸೇಲ್-ರಿಟೇಲ್‌ ಬೆಲೆ ಏರಿಕೆಯ ನಡುವೆ ಭಾರಿ ವ್ಯತ್ಯಾಸ!

ಭಾರತದಲ್ಲಿ ಸಗಟು (ಹೋಲ್‌ ಸೇಲ್) ಹಣದುಬ್ಬರ ಮತ್ತು ರಿಟೇಲ್‌ (ಚಿಲ್ಲರೆ ) ಹಣದುಬ್ಬರದ ನಡುವೆ ಭಾರಿ ಅಂತರ ಸೃಷ್ಟಿಯಾಗಿತ್ತು. ಆಹಾರ ವಸ್ತುಗಳ ಸಗಟು ಮತ್ತು ಚಿಲ್ಲರೆ ದರಗಳ ನಡುವೆ ಭಾರಿ ವ್ಯತ್ಯಾಸ ಆಗಿತ್ತು. ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರ ಶೇ.15.08 ಇದ್ದರೆ ಚಿಲ್ಲರೆ ಹಣದುಬ್ಬರ ಶೇ.7.79 ಇತ್ತು. ಇದೂ ಕೂಡ ಅಬಕಾರಿ ಸುಂಕದ ಗಣನೀಯ ಇಳಿಕೆಗೆ ಮತ್ತೊಂದು ಕಾರಣವಾಗಿದೆ. ಏಕೆಂದರೆ ಸಗಟು ಹಣದುಬ್ಬರ ಹೆಚ್ಚಳ ರಿಟೇಲ್‌ ಹಣದುಬ್ಬರದ ಮೇಲೆ ಪ್ರಭಾವ ಬೀರುವುದು ಸಹಜ. ಈ ಭಾರಿ ಅಂತರವನ್ನು ಸುದೀರ್ಘ ಕಾಲ ಉಳಿಸಿಕೊಳ್ಳುವುದು ಕಷ್ಟ ಸಾಧ್ಯ.

ದುಬಾರಿಯಾದ ಆಮದು

ಭಾರತ ಮುಖ್ಯವಾಗಿ ಕಚ್ಚಾ ತೈಲ, ಚಿನ್ನ, ಎಲೆಕ್ಟ್ರಾನಿಕ್‌ ಉತ್ಪನ್ನಗಳು, ಯಂತ್ರೋಪಕರಣಗಳು, ರಾಸಾಯನಿಕ ಮತ್ತು ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. 2021-22ರಲ್ಲಿ ಕಚ್ಚಾ ತೈಲ ಆಮದು ವೆಚ್ಚ ಇಮ್ಮಡಿಯಾಗಿತ್ತು. ಕೇವಲ ಕಚ್ಚಾ ತೈಲವೊಂದಕ್ಕೇ 119 ಶತಕೋಟಿ ಡಾಲರ್‌ (9.16 ಲಕ್ಷ ಕೋಟಿ ರೂ.) ಖರ್ಚಾಗಿತ್ತು. ಕೋವಿಡ್‌-19 ಬಿಕ್ಕಟ್ಟು ಕಡಿಮೆಯಾದ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗಿತ್ತು. ಕಳೆದ ಫೆಬ್ರವರಿಯಲ್ಲಿ ರಷ್ಯಾ-ಉಕ್ರೇನ್‌ ಸಮರ ಆರಂಭವಾದ ಬಳಿಕ ತೈಲ ದರ ಪ್ರತಿ ಬ್ಯಾರೆಲ್‌ಗೆ ಶತಕದ ಗಡಿ ದಾಟಿ 110 ಡಾಲರ್‌ಗಳಿಗೆ ಜಿಗಿದಿದೆ. ಇದರ ಬಿಸಿ ಭಾರತಕ್ಕೆ ಭಾರಿ ಹೊಡೆತ ಕೊಟ್ಟಿದೆ. ಏಕೆಂದರೆ ಭಾರತ ತನ್ನ ಬೇಡಿಕೆಯ ಶೇ.85 ತೈಲವನ್ನು ಆಮದು ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಈ ಖರ್ಚನ್ನು ಭರಿಸದೆ ವಿಧಿ ಇಲ್ಲ ಎನ್ನುವಂತಾಗಿದೆ. ದುರದೃಷ್ಟವಶಾತ್‌ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಮೂರನೇ ಎರಡರಷ್ಟು ತೆರಿಗೆಯನ್ನು ವಿಧಿಸುತ್ತವೆ. ಹೀಗಾಗಿ ಅವುಗಳು ದುಬಾರಿಯಾಗಿದ್ದು, ಬೆಲೆ ಏರಿಕೆಗೆ ದೊಡ್ಡ ಕಾಣಿಕೆ ನೀಡುತ್ತಿವೆ. ಪ್ರತಿಯೊಂದು ವಸ್ತುವಿನ ಸಾಗಣೆ ವೆಚ್ಚ ಏರಲು ಕಾರಣವಾಗಿದೆ. ಕೇಂದ್ರ ಸರಕಾರ ಅಬಕಾರಿ ಸುಂಕ ಕಡಿತಗೊಳಿಸಲು ಇದೂ ಒಂದು ಕಾರಣ.

ಕಚ್ಚಾ ತೈಲ ದರ ಏರಿಕೆಯ ಸವಾಲು
ಭಾರತಕ್ಕೆ ಅತಿ ದೊಡ್ಡ ಸವಾಲು ಕಚ್ಚಾ ತೈಲ ದರದ್ದಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗಿಂತ ಮೇಲ್ಮಟ್ಟದಲ್ಲಿದೆ. ಈಗ ಬ್ರೆಂಟ್‌ ಕಚ್ಚಾ ತೈಲ ದರ 110 ಡಾಲರ್‌ನ ಮಟ್ಟದಲ್ಲಿದೆ. ಆದರೆ ರಷ್ಯಾ-ಉಕ್ರೇನ್‌ ಸಮರ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಆದ್ದರಿಂದ ಸೆಂಟ್ರಲ್‌ ಬ್ಯಾಂಕ್‌ ಗಳು 2022-23ರಲ್ಲಿ ಹಣದುಬ್ಬರದ ಮುನ್ನೋಟವನ್ನು ಏರಿಸಿವೆ. ಆರ್‌ಬಿಐ ಕಳೆದ ಏಪರಿಲ್‌ ಮೊದಲ ಭಾಗದಲ್ಲಿ ಅಂದಾಜಿಸಿದ ಪ್ರಕಾರ 2022-23ರಲ್ಲಿ ಹಣದುಬ್ಬರದ ದರ ಸರಾಸರಿ ಶೇ.5.7ರ ಮಟ್ಟದಲ್ಲಿ ಇರಬಹುದು. ಕ್ರಿಸಿಲ್‌ ಪ್ರಕಾರ ಶೇ. 6.3 ಇರಬಹುದು. ಆರ್‌ ಬಿಐ ಕೂಡ ತನ್ನ ಜೂನ್‌ 6-8ರ ಸಭೆಯಲ್ಲಿ ಹಣದುಬ್ಬರದ ಅಂದಾಜನ್ನು ಪರಿಷ್ಕರಿಸುವ ನಿರೀಕ್ಷೆ ಇದೆ.

ರಷ್ಯಾ-ಉಕ್ರೇನ್‌ ಸಮರದ ಎಫೆಕ್ಟ್‌
ರಷ್ಯಾ ಮತ್ತು ಉಕ್ರೇನ್‌ ನಡುವಣ ಸಂಘರ್ಷ ಫೆಬ್ರವರಿಯಿಂದ ತಾರಕಕ್ಕೇರಿತು. ಫೆಬ್ರವರಿ 24ರಂದು ರಷ್ಯಾ, ಉಕ್ರೇನ್‌ ಮೇಲೆ ದಾಳಿಯನ್ನು ತೀವ್ರಗೊಳಿಸಿತ್ತು. ಇದಾದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಹಾರ ಧಾನ್ಯಗಳು, ಖಾದ್ಯ ತೈಲ, ಕಚ್ಚಾ ತೈಲ, ರಸಗೊಬ್ಬರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಏಕೆಂದರೆ ರಷ್ಯಾ ತೈಲ ಮತ್ತು ಅನಿಲ ಉತ್ಪಾದನೆಯಲ್ಲಿ ಪ್ರಭಾವಿಯಾಗಿದ್ದರೆ, ಕೃಷಿ ಉತ್ಪಾದನೆಯಲ್ಲಿ ಉಕ್ರೇನ್‌ ಮುಂಚೂಣಿಯಲ್ಲಿದೆ. 2022 ರ ಜನವರಿ-ಮಾರ್ಚ್‌ ತ್ರೈಮಾಸಿಕದ ಅಂಕಿ ಅಂಶಗಳ ಪ್ರಕಾರ, ಗೋಧಿ, ಜೋಳ, ಹತ್ತಿಯ ದರಗಳು ಅವುಗಳ ಅಂತಾರಾಷ್ಟ್ರೀಯ ದರಗಳಿಗೆ ಅನುಗುಣವಾಗಿ ವೃದ್ಧಿಸಿವೆ. ಉದಾಹರಣೆಗೆ ಗೋಧಿಯ ದರ ಮಾರ್ಚ್‌ ನಲ್ಲಿ ಶೇ.25, ಜೋಳದ ದರ ಶೇ.14 ಸಕ್ಕರೆಯ ದರ ಶೇ.8ರಷ್ಟು ವೃದ್ಧಿಸಿದೆ. ಬೆಲೆ ಏರಿಕೆಯ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ರೂಪಾಯಿ ಕುಸಿತದ ಎಫೆಕ್ಟ್‌
ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತದ ಪರಿಣಾಮ ಆಮದು ಖರ್ಚು ಹೆಚ್ಚುತ್ತಿದೆ. ಟಿ.ವಿ, ರೆಫ್ರಿಜರೇಟರ್‌, ವಾಷಿಂಗ್‌ಮೆಷೀನ್‌, ಏಸಿ ಸೇರಿದಂತೆ ನಾನಾ ಗೃಹ ಬಳಕೆಯ ಸಾಧನಗಳ ದರಗಳು ಶೇ.3ರಿಂದ 5ರ ತನಕ ಏರಿಕೆಯಾಗಲಿದೆ.
ಕನ್‌ಸ್ಯೂಮರ್‌ ಎಲೆಕ್ಟ್ರಾನಿಕ್ಸ್‌ ಆಂಡ್‌ ಅಪ್ಲೈಯನ್ಸ್‌ ಮಾನ್ಯುಫಾಕ್ಚರರ್ಸ್‌ ಅಸೋಸಿಯೇಶನ್‌ (CEAMA) ಪ್ರಕಾರ ಮೇ ಅಂತ್ಯ ಅಥವಾ ಜೂನ್‌ ಮೊದಲ ವಾರ ದರ ಏರಿಕೆ ಜಾರಿಯಾಗುವ ನಿರೀಕ್ಷೆ ಇದೆ. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಲು ಕಂಪನಿಗಳು ನಿರ್ಧರಿಸಿವೆ. ಚಿನ್ನ, ಬೆಳ್ಳಿ, ಕಚ್ಚಾ ತೈಲದ ಆಮದು ದುಬಾರಿಯಾಗಲು ರೂಪಾಯಿ ಮೌಲ್ಯ ಕುಸಿತವೂ ಮತ್ತೊಂದು ಕಾರಣವಾಗಿದೆ. ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳು ಮತ್ತು ಬಿಡಿಭಾಗಗಳ ಆಮದು ದುಬಾರಿಯಾಗಿ ಪರಿಣಮಿಸಿದೆ. ಕಚ್ಚಾ ಸಾಮಾಗ್ರಿಗಳಿಗೆ ಆಮದನ್ನು ಉದ್ದಿಮೆ ಬಹುವಾಗಿ ಅವಲಂಬಿಸಿದೆ. ಕೋವಿಡ್‌-19 ಕೇಸ್‌ಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಶಾಂಘೈನಲ್ಲಿ ಕಠಿಣ ಲಾಕ್‌ ಡೌನ್‌ ಜಾರಿಯಲ್ಲಿದೆ. ಇದು ಕೂಡ ಕಚ್ಚಾ ಸಾಮಾಗ್ರಿಗಳ ಆಮದಿಗೆ ಸವಾಲಾಗಿ ಪರಿಣಮಿಸಿದೆ.

ಬೆಲೆ ಏರಿಕೆಯನ್ನು ನಿಯಂತ್ರಿಸುವುದು ಹೇಗೆ?
ಬೆಲೆ ಏರಿಕೆಯನ್ನು ತಡೆಯಲು ತಕ್ಷಣದ ಪರಿಹಾರೋಪಾಯ ಹಾಗೂ ದೀರ್ಘಕಾಲೀನ ಕಾರ್ಯತಂತ್ರಗಳನ್ನು ಭಾರತ ಕೈಗೊಳ್ಳಬೇಕಾಗಿದೆ. ಇದು ಜಾಗತಿಕ ಸಮಸ್ಯೆಯಾದ್ದರಿಂದ ಇಡೀ ವಿಶ್ವ ಸಮುದಾಯವೂ ಸಂಘಟಿತ ಯತ್ನ ನಡೆಸುವುದು ಅತ್ಯಂತ ಅನಿವಾರ್ಯ.

ಇದನ್ನೂ ಓದಿ: ಸಗಟು ಹಣದುಬ್ಬರ ಶೇ.15.08 ಕ್ಕೆ ಏರಿಕೆ

Exit mobile version