Site icon Vistara News

Cryptocurrency| ವರ್ಚುವಲ್‌ ಕರೆನ್ಸಿ ನಿಷೇಧಕ್ಕೆ ರಿಸರ್ವ್‌ ಬ್ಯಾಂಕ್‌ ಒಲವು

crypto

ನವ ದೆಹಲಿ: ಕ್ರಿಪ್ಟೊ ಕರೆನ್ಸಿ ಮುಂತಾದ ವರ್ಚುವಲ್‌ ಆಸ್ತಿಗಳನ್ನು ನಿಷೇಧಿಸಲು ಆರ್‌ಬಿಐ ಒಲವು ವ್ಯಕ್ತಪಡಿಸಿದೆ. ಆದರೆ ಇವುಗಳ ನಿಷೇಧ ಅಥವಾ ನಿಯಂತ್ರಣಕ್ಕೆ ಅಂತಾರಾಷ್ಟ್ರೀಯ ಮಟ್ಟದ ಸಹಕಾರ ಅಗತ್ಯ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಕ್ರಿಪ್ಟೊ ಕರೆನ್ಸಿಗೆ ಸಂಬಂಧಿಸಿ ಸಂಸದ ತಿರುಮಾ ವಳನ್‌ ಅವರ ಲಿಖಿತ ಪ್ರಶ್ನೆಗೆ ಸಂಸತ್ತಿನಲ್ಲಿ ಉತ್ತರ ನೀಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಈ ವಿಷಯ ತಿಳಿಸಿದರು.

ಭಾರತದಲ್ಲಿ ಕಳೆದ ೧೦ ವರ್ಷಗಳಲ್ಲಿ ಕ್ರಿಪ್ಟೊ ಕರೆನ್ಸಿಗಳ ಬಿಡುಗಡೆ, ಚಲಾವಣೆ, ಮಾರಾಟ, ಖರೀದಿಗೆ ಸಂಬಂಧಿಸಿ ಆರ್‌ಬಿಐ ಯಾವುದಾದರೂ ನಿರ್ದೇಶನ ಹೊರಡಿಸಿದೆಯೇ ಎಂಬ ಸಂಸದರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

“ಆರ್‌ಬಿಐ ವರ್ಚುವಲ್‌ ಕರೆನ್ಸಿಗಳ ಬಳಕೆ ಬಗ್ಗೆ ಬಳಕೆದಾರರಲ್ಲಿ ಜಾಗೃತಿ ಮೂಡಿಸಲು ಯತ್ನಿಸುತ್ತಿದೆ. ೨೦೧೩ರ ಡಿಸೆಂಬರ್‌ ೨೪, ೨೦೧೭ರ ಫೆಬ್ರವರಿ ೧ ಮತ್ತು ೨೦೧೭ರ ಡಿಸೆಂಬರ್‌ ೫ರಂದು ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದೆ. ಇಂಥ ವರ್ಚುವಲ್‌ ಆಸ್ತಿಗಳಲ್ಲಿ ಹೂಡಿಕೆಯಿಂದ ಸಂಭವನೀಯ ಅಪಾಯಗಳ ಬಗ್ಗೆ ಎಚ್ಚರಿಸಿದೆ. ಹೀಗಿದ್ದರೂ, ಕ್ರಿಪ್ಟೊ ಕರೆನ್ಸಿಗಳಿಗೆ ಯಾವುದೇ ಗಡಿ ಇರುವುದಿಲ್ಲ. ಆದ್ದರಿಂದ ಇವುಗಳನ್ನು ನಿಷೇಧಿಸಲು ಅಥವಾ ನಿಯಂತ್ರಿಸಲು ಅಂತಾರಾಷ್ಟ್ರೀಯ ಸಹಕಾರ ಅಗತ್ಯ. ಕೇವಲ ನಿಷೇಧದ ಕಾನೂನು ಒಂದರಿಂದಲೇ ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಿಲ್ಲʼʼ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಆರ್‌ಬಿಐ ತನ್ನ ವಾರ್ಷಿಕ ವರದಿಯಲ್ಲಿ ಕ್ರಿಪ್ಟೊ ಕರೆನ್ಸಿಯಂಥ ವರ್ಚುವಲ್‌ ಕರೆನ್ಸಿಗಳೇ ನಿಜವಾಗಿ ಅಪಾಯಕಾರಿ. ಇವುಗಳು ದೇಶದ ಆರ್ಥಿಕ ವ್ಯವಸ್ಥೆಗೆ ಧಕ್ಕೆ ತರಬಲ್ಲುದು ಎಂದು ಎಚ್ಚರಿಸಿದೆ. ಜತೆಗೆ ನಿಷೇಧ ಸೂಕ್ತ ಎಂದು ಅಭಿಪ್ರಾಯಪಟ್ಟಿದೆ.

Exit mobile version