Site icon Vistara News

ವಿಸ್ತಾರ Explainer | ಹೂಡಿಕೆಗೆ ಈಗ ಸಾವರಿನ್‌ ಗೋಲ್ಡ್‌ ಬಾಂಡ್‌ ಎಂಬ ಸುವರ್ಣಾವಕಾಶ!

gold

ಬಂಗಾರದಲ್ಲಿ ನಾವು ಹಲವು ವಿಧದಲ್ಲಿ ಹೂಡಿಕೆ ಮಾಡಬಹುದು. ಆಭರಣಗಳು, ಚಿನ್ನದ ನಾಣ್ಯಗಳು, ಗಟ್ಟಿಗಳನ್ನು ಖರೀದಿಸಬಹುದು. ಆದರೆ ಇದಕ್ಕೆ ಅದರದ್ದೇ ಆದ ರಿಸ್ಕ್‌ಗಳು ಇವೆ. (ವಿಸ್ತಾರ Explainer) ಆಭರಣಗಳನ್ನು ಕೊಂಡಾಗ ತಯಾರಿಕಾ ಶುಲ್ಕ ಕೊಡಬೇಕಾಗುತ್ತದೆ. ಹೀಗಾಗಿ ಹೂಡಿಕೆಯ ದೃಷ್ಟಿಯಿಂದ ಆಭರಣ ಅಷ್ಟು ಸೂಕ್ತವಲ್ಲ. ಚಿನ್ನದ ನಾಣ್ಯ, ಗಟ್ಟಿಗಳನ್ನು ಖರೀದಿಸಿದರೆ ಜೋಪಾನವಾಗಿ ಇಡುವ ರಿಸ್ಕ್‌ ಇದ್ದೇ ಇರುತ್ತದೆ. ಆದರೆ ಈ ರೀತಿಯ ಯಾವುದೇ ಆತಂಕ ಇಲ್ಲದೆ ಬಂಗಾರದಲ್ಲಿ ಹೂಡಿಕೆ ಮಾಡಲು ಅತ್ಯಂತ ಸೂಕ್ತ ವಿಧಾನವೇ ಸ್ವತಃ ಕೇಂದ್ರ ಸರ್ಕಾರವೇ ಬಿಡುಗಡೆಗೊಳಿಸುವ ಸಾವರಿನ್‌ ಗೋಲ್ಡ್‌ ಬಾಂಡ್‌ ಸ್ಕೀಮ್‌ನಲ್ಲಿ ಹೂಡಿಕೆ ಮಾಡುವುದು! ಸರ್ಕಾರದ ಬಾಂಡ್ ಯೋಜನೆಯಾದ್ದರಿಂದ ಇದು ಅತ್ಯಂತ ಸುರಕ್ಷಿತ. ಹೀಗಾಗಿ ಇದನ್ನು ಹೂಡಿಕೆಯ ಸುವರ್ಣಾವಕಾಶ ಎಂದರೆ ಉತ್ಪ್ರೇಕ್ಷೆ ಎನ್ನಿಸದು.‌ ಭೌತಿಕ ಬಂಗಾರದಲ್ಲಿ ಹೂಡುವ ಬದಲು ಇದರಲ್ಲಿ ಹೂಡಿಕೆ ಮಾಡಬಹುದು.

ಸಾವರಿನ್‌ ಗೋಲ್ಡ್‌ ಬಾಂಡ್‌ (Sovereign Gold Bond-SGB) : ಕೇಂದ್ರ ಸರ್ಕಾರ ಸಾವರಿನ್‌ ಗೋಲ್ಡ್‌ ಬಾಂಡ್‌ ಸ್ಕೀಮ್‌ ೨೦೨೨-೨೩ ಸೀರಿಸ್-‌II ಯೋಜನೆಯನ್ನು ೨೦೨೨ರ ಇದೇ ಆಗಸ್ಟ್‌ ೨೨ರಿಂದ ಹೂಡಿಕೆದಾರರಿಗೆ ನೀಡುತ್ತಿದ್ದು, ಆಗಸ್ಟ್‌ ೨೬ರ ತನಕ ಖರೀದಿಸಲು ಅವಕಾಶ ಇದೆ. ಈ ಬಾಂಡ್‌ನಲ್ಲಿ ಪ್ರತಿ ಗ್ರಾಮ್‌ ಚಿನ್ನದ ದರ ೫,೧೯೭ ರೂ.ಗೆ ನಿಗದಿಯಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರು ಮತ್ತು ಪೇಮೆಂಟ್‌ ಮಾಡುವವರಿಗೆ ಪ್ರತಿ ಗ್ರಾಮ್‌ಗೆ ೫೦ ರೂ. ಡಿಸ್ಕೌಂಟ್‌ ಅನ್ನು ಸರ್ಕಾರ ನೀಡುತ್ತಿದೆ. ಅಂಥವರಿಗೆ ೫,೧೪೭ ರೂ.ಗೆ ಒಂದು ಗ್ರಾಮ್‌ ಚಿನ್ನದ ಗೋಲ್ಡ್‌ ಬಾಂಡ್‌ ಸಿಗಲಿದೆ. ಕೇಂದ್ರ ಸರ್ಕಾರದ ಪರವಾಗಿ ಆರ್‌ಬಿಐ ಈ ಬಾಂಡ್‌ಗಳನ್ನು ಬಿಡುಗಡೆಗೊಳಿಸುತ್ತದೆ.

ಎಲ್ಲಿ ಸಿಗುತ್ತದೆ? ಸಾವರಿನ್‌ ಗೋಲ್ಡ್‌ ಬಾಂಡ್‌ಗಳನ್ನು ಬ್ಯಾಂಕ್‌ಗಳು ಮಾರಾಟ ಮಾಡುತ್ತವೆ. ಅಂಚೆ ಕಚೇರಿಯ ನಿಗದಿತ ಶಾಖೆಗಳಲ್ಲಿ ಸಿಗುತ್ತವೆ. ಎನ್‌ಎಸ್‌ಇ ಮತ್ತು ಬಿಎಸ್‌ಇನಲ್ಲಿ ಕೂಡ ಖರೀದಿಸಬಹುದು.

ಬಾಂಡ್‌ನ ಉದ್ದೇಶ ಏನು?: ೨೦೧೫ರ ನವೆಂಬರ್‌ನಲ್ಲಿ ಆರಂಭವಾದ ಗೋಲ್ಡ್‌ ಬಾಂಡ್‌ ಯೋಜನೆಯನ್ನು ಭೌತಿಕ ಚಿನ್ನದ ಆಮದನ್ನು ತಗ್ಗಿಸಲು ಸರ್ಕಾರ ಆರಂಭಿಸಿದೆ. ಬಂಗಾರದ ಆಮದು ಹೆಚ್ಚಳವಾದಂತೆಲ್ಲ ವಿತ್ತೀಯ ಕೊರತೆಯೂ ಹೆಚ್ಚುತ್ತಿರುವುದು ಇದಕ್ಕೆ ಕಾರಣ.

ಹೂಡಿಕೆದಾರರಿಗೆ ಲಾಭವೇನು?

ಹೂಡಿಕೆಯಲ್ಲಿ ರಿಸ್ಕ್‌ ಏನು?: ಒಂದು ವೇಳೆ ಮೆಚ್ಯೂರಿಟಿಯ ವೇಳೆ ಚಿನ್ನದ ದರ ಇಳಿಕೆಯಾಗಿದ್ದರೆ, ನಿಮ್ಮ ಹೂಡಿಕೆಯ ಮೌಲ್ಯವೂ ಇಳಿಕೆಯಾಗಬಹುದು. ಹೀಗಿದ್ದರೂ, ಹಳೆಯ ದರಗಳನ್ನು ಗಮನಿಸಿದರೆ, ಬಂಗಾರದ ದರಗಳಲ್ಲಿ ಏರಿಳಿತ ಇದ್ದರೂ, ಅಂತಿಮವಾಗಿ ದರ ಏರಿಕೆಯಾಗಿದೆ.

ಕನಿಷ್ಠ ಹೂಡಿಕೆ ೧ ಗ್ರಾಮ್‌, ಗರಿಷ್ಠ ೪ ಕೆ.ಜಿ ಚಿನ್ನ

ಗೋಲ್ಡ್ ಬಾಂಡ್‌ ಅನ್ನು ಕನಿಷ್ಠ ೧ ಗ್ರಾಮ್ ಚಿನ್ನದ ಲೆಕ್ಕದಲ್ಲಿ ಖರೀದಿಸಬಹುದು. ವೈಯಕ್ತಿಕವಾಗಿ ಗರಿಷ್ಠ ೪ ಕೆ.ಜಿ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಟ್ರಸ್ಟ್‌ಗಳಾದರೆ ೨೦ ಕೆ.ಜಿ ತನಕ ಹೂಡಿಕೆ ಮಾಡಬಹುದು. ಒಂದು ಕುಟುಂಬದ ಪ್ರತಿಯೊಬ್ಬ ಸದಸ್ಯರೂ ತಲಾ ೪ ಕೆ.ಜಿಯಂತೆ ಬಾಂಡ್‌ನಲ್ಲಿ ಹೂಡಿಕೆ ಮಾಡಬಹುದು. ಜಂಟಿಯಾಗಿಯೂ ಕೊಳ್ಳಬಹುದು. ಅಪ್ರಾಪ್ತರ ಪರ ಪೋಷಕರು ಖರೀದಿಸಬಹುದು. ೨೦,೦೦೦ ರೂ. ತನಕ ನಗದು ಹೂಡಿಕೆ ಮಾಡಬಹುದು. ಅದಕ್ಕೂ ಹೆಚ್ಚಿನ ಹೂಡಿಕೆಯನ್ನು ಚೆಕ್‌, ಡಿಡಿ, ಎಲೆಕ್ಟ್ರಾನಿಕ್‌ ಫಂಡ್‌ ಟ್ರಾನ್ಸ್‌ಫರ್‌ ಮೂಲಕ ನಿರ್ವಹಿಸಬಹುದು.

ಕೆವೈಸಿ ಇದೆಯೇ?: ಹೌದು. ಕೆವೈಸಿ (Know-Your-Customer) ಪ್ರಕ್ರಿಯೆ ಇರುತ್ತದೆ. ಪ್ಯಾನ್‌ ಸಂಖ್ಯೆ ಇರಬೇಕು.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದೇ?: ಹೌದು. ನಿಗದಿತ ಬ್ಯಾಂಕ್‌ಗಳ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ ವಿಧಾನದಲ್ಲೂ ಗೋಲ್ಡ್‌ ಬಾಂಡ್‌ ಖರೀದಿಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಖರೀದಿಗೆ ಪ್ರತಿ ಗ್ರಾಮ್‌ಗೆ ೫೦ ರೂ. ಡಿಸ್ಕೌಂಟ್‌ ಕೂಡ ಲಭ್ಯವಿದೆ.

ಬಾಂಡ್‌ನ ಅವಧಿ ಎಷ್ಟು? : ಗೋಲ್ಡ್‌ ಬಾಂಡ್‌ನ ಅವಧಿ ೮ ವರ್ಷಗಳು. ೫ನೇ ವರ್ಷದಿಂದ ಅವಧಿಗೆ ಮುನ್ನ ಹೂಡಿಕೆಯನ್ನು ಹಿಂತೆಗೆದುಕೊಳ್ಳಬಹುದು. ಸಂಬಂಧಿಸಿದ ಬ್ಯಾಂಕ್‌, ಅಂಚೆ ಕಚೇರಿಗೆ ತೆರಳಿ ಅವಧಿಗೆ ಮೊದಲೇ ಹಿಂತೆಗೆದುಕೊಳ್ಳಲು ಅವಕಾಶ ಇದೆ.

ಮೆಚ್ಯೂರಿಟಿ ಪ್ರಕ್ರಿಯೆ ಹೇಗೆ?: ಗೋಲ್ಡ್‌ ಬಾಂಡ್‌ನ ಅವಧಿ ಮುಗಿದ ಬಳಿಕ ಆಗಿನ ಮಾರುಕಟ್ಟೆ ದರದಲ್ಲಿ ಮೆಚ್ಯುರಿಟಿಯ ಮೊತ್ತ ಹೂಡಿಕೆದಾರರ ಬ್ಯಾಂಕ್‌ ಖಾತೆಗೆ ಜಮೆಯಾಗುತ್ತದೆ. ಬಡ್ಡಿ ದರವೂ ಬ್ಯಾಂಕ್‌ ಖಾತೆಗೆ ಸೇರುತ್ತದೆ. ಈ ಬಾಂಡ್‌ಗೆ ಟಿಡಿಎಸ್‌ ಅನ್ವಯವಾಗುವುದಿಲ್ಲ.

ಇದನ್ನೂ ಓದಿ:ವಿಸ್ತಾರ Explainer | ಬ್ಯಾಂಕ್‌ಗಳು ಎಫ್‌ಡಿ ದರಗಳನ್ನು ದಿಢೀರ್ ಏರಿಸುತ್ತಿರುವುದೇಕೆ?!

Exit mobile version