EXPLAINER
ವಿಸ್ತಾರ Explainer | ಹೂಡಿಕೆಗೆ ಈಗ ಸಾವರಿನ್ ಗೋಲ್ಡ್ ಬಾಂಡ್ ಎಂಬ ಸುವರ್ಣಾವಕಾಶ!
ನೀವು ಬಂಗಾರದಲ್ಲಿ ಹೂಡಿಕೆ ಮಾಡುವುದಿದ್ದರೆ ಮೊದಲ ಆಯ್ಕೆಯಾಗಿ ಪರಿಗಣಿಸಬಹುದಾದ ಸಾವರಿನ್ ಗೋಲ್ಡ್ ಬಾಂಡ್ ಅನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸುತ್ತಿದೆ. ಆಗಸ್ಟ್ 22-26ರ ಅವಧಿಯಲ್ಲಿ ಈ ಬಾಂಡ್ ಖರೀದಿಸಬಹುದು.
ಬಂಗಾರದಲ್ಲಿ ನಾವು ಹಲವು ವಿಧದಲ್ಲಿ ಹೂಡಿಕೆ ಮಾಡಬಹುದು. ಆಭರಣಗಳು, ಚಿನ್ನದ ನಾಣ್ಯಗಳು, ಗಟ್ಟಿಗಳನ್ನು ಖರೀದಿಸಬಹುದು. ಆದರೆ ಇದಕ್ಕೆ ಅದರದ್ದೇ ಆದ ರಿಸ್ಕ್‌ಗಳು ಇವೆ. (ವಿಸ್ತಾರ Explainer) ಆಭರಣಗಳನ್ನು ಕೊಂಡಾಗ ತಯಾರಿಕಾ ಶುಲ್ಕ ಕೊಡಬೇಕಾಗುತ್ತದೆ. ಹೀಗಾಗಿ ಹೂಡಿಕೆಯ ದೃಷ್ಟಿಯಿಂದ ಆಭರಣ ಅಷ್ಟು ಸೂಕ್ತವಲ್ಲ. ಚಿನ್ನದ ನಾಣ್ಯ, ಗಟ್ಟಿಗಳನ್ನು ಖರೀದಿಸಿದರೆ ಜೋಪಾನವಾಗಿ ಇಡುವ ರಿಸ್ಕ್ ಇದ್ದೇ ಇರುತ್ತದೆ. ಆದರೆ ಈ ರೀತಿಯ ಯಾವುದೇ ಆತಂಕ ಇಲ್ಲದೆ ಬಂಗಾರದಲ್ಲಿ ಹೂಡಿಕೆ ಮಾಡಲು ಅತ್ಯಂತ ಸೂಕ್ತ ವಿಧಾನವೇ ಸ್ವತಃ ಕೇಂದ್ರ ಸರ್ಕಾರವೇ ಬಿಡುಗಡೆಗೊಳಿಸುವ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್‌ನಲ್ಲಿ ಹೂಡಿಕೆ ಮಾಡುವುದು! ಸರ್ಕಾರದ ಬಾಂಡ್ ಯೋಜನೆಯಾದ್ದರಿಂದ ಇದು ಅತ್ಯಂತ ಸುರಕ್ಷಿತ. ಹೀಗಾಗಿ ಇದನ್ನು ಹೂಡಿಕೆಯ ಸುವರ್ಣಾವಕಾಶ ಎಂದರೆ ಉತ್ಪ್ರೇಕ್ಷೆ ಎನ್ನಿಸದು. ಭೌತಿಕ ಬಂಗಾರದಲ್ಲಿ ಹೂಡುವ ಬದಲು ಇದರಲ್ಲಿ ಹೂಡಿಕೆ ಮಾಡಬಹುದು.
ಸಾವರಿನ್ ಗೋಲ್ಡ್ ಬಾಂಡ್ (Sovereign Gold Bond-SGB) : ಕೇಂದ್ರ ಸರ್ಕಾರ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ೨೦೨೨-೨೩ ಸೀರಿಸ್-II ಯೋಜನೆಯನ್ನು ೨೦೨೨ರ ಇದೇ ಆಗಸ್ಟ್ ೨೨ರಿಂದ ಹೂಡಿಕೆದಾರರಿಗೆ ನೀಡುತ್ತಿದ್ದು, ಆಗಸ್ಟ್ ೨೬ರ ತನಕ ಖರೀದಿಸಲು ಅವಕಾಶ ಇದೆ. ಈ ಬಾಂಡ್‌ನಲ್ಲಿ ಪ್ರತಿ ಗ್ರಾಮ್ ಚಿನ್ನದ ದರ ೫,೧೯೭ ರೂ.ಗೆ ನಿಗದಿಯಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರು ಮತ್ತು ಪೇಮೆಂಟ್ ಮಾಡುವವರಿಗೆ ಪ್ರತಿ ಗ್ರಾಮ್‌ಗೆ ೫೦ ರೂ. ಡಿಸ್ಕೌಂಟ್ ಅನ್ನು ಸರ್ಕಾರ ನೀಡುತ್ತಿದೆ. ಅಂಥವರಿಗೆ ೫,೧೪೭ ರೂ.ಗೆ ಒಂದು ಗ್ರಾಮ್ ಚಿನ್ನದ ಗೋಲ್ಡ್ ಬಾಂಡ್ ಸಿಗಲಿದೆ. ಕೇಂದ್ರ ಸರ್ಕಾರದ ಪರವಾಗಿ ಆರ್‌ಬಿಐ ಈ ಬಾಂಡ್‌ಗಳನ್ನು ಬಿಡುಗಡೆಗೊಳಿಸುತ್ತದೆ.
ಎಲ್ಲಿ ಸಿಗುತ್ತದೆ? ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು ಬ್ಯಾಂಕ್‌ಗಳು ಮಾರಾಟ ಮಾಡುತ್ತವೆ. ಅಂಚೆ ಕಚೇರಿಯ ನಿಗದಿತ ಶಾಖೆಗಳಲ್ಲಿ ಸಿಗುತ್ತವೆ. ಎನ್‌ಎಸ್‌ಇ ಮತ್ತು ಬಿಎಸ್‌ಇನಲ್ಲಿ ಕೂಡ ಖರೀದಿಸಬಹುದು.
ಬಾಂಡ್‌ನ ಉದ್ದೇಶ ಏನು?: ೨೦೧೫ರ ನವೆಂಬರ್‌ನಲ್ಲಿ ಆರಂಭವಾದ ಗೋಲ್ಡ್ ಬಾಂಡ್ ಯೋಜನೆಯನ್ನು ಭೌತಿಕ ಚಿನ್ನದ ಆಮದನ್ನು ತಗ್ಗಿಸಲು ಸರ್ಕಾರ ಆರಂಭಿಸಿದೆ. ಬಂಗಾರದ ಆಮದು ಹೆಚ್ಚಳವಾದಂತೆಲ್ಲ ವಿತ್ತೀಯ ಕೊರತೆಯೂ ಹೆಚ್ಚುತ್ತಿರುವುದು ಇದಕ್ಕೆ ಕಾರಣ.
ಹೂಡಿಕೆದಾರರಿಗೆ ಲಾಭವೇನು?
- ಮೊದಲನೆಯದಾಗಿ ಅಪ್ಪಟ ಹೂಡಿಕೆಯ ಉದ್ದೇಶಕ್ಕಾಗಿ ಬಂಗಾರ ಖರೀದಿಸುವುದಿದ್ದರೆ, ಗೋಲ್ಡ್ ಬಾಂಡ್ ಸೂಕ್ತ. ಏಕೆಂದರೆ ಭೌತಿಕ ಚಿನ್ನವನ್ನು ಸೇಫ್ ಆಗಿ ಇಟ್ಟುಕೊಳ್ಳಬೇಕಾದ ಚಿಂತೆ ಇರುವುದಿಲ್ಲ.
- ಎರಡನೆಯದಾಗಿ ಮೆಚ್ಯೂರಿಟಿ ಅವಧಿಯಲ್ಲಿ ಆಗಿನ ಮಾರುಕಟ್ಟೆಯ ದರವೇ ಸಿಗುತ್ತದೆ. ಉದಾಹರಣೆಗೆ ನೀವು ಹೂಡಿಕೆ ಮಾಡಿದಾಗ ೧ ಗ್ರಾಮ್ ಚಿನ್ನದ ದರ ೫,೦೦೦ ರೂ. ಹಾಗೂ ೮ ವರ್ಷಗಳ ಮೆಚ್ಯೂರಿಟಿ ಅವಧಿಯಲ್ಲಿ ೧೦,೦೦೦ ರೂ. ಆಗಿದ್ದರೆ, ನಿಮಗೆ ೧೦,೦೦೦ ರೂ. ಸಿಗುತ್ತದೆ.
- ಮೂರನೆಯದಾಗಿ ಹೂಡಿಕೆದಾರರಿಗೆ ನಿಯಮಿತವಾಗಿ ಪ್ರತಿ ೬ ತಿಂಗಳಿಗೊಮ್ಮೆ ಬಡ್ಡಿಯೂ ಸಿಗುತ್ತದೆ. ಇದು ನಿಮಗೆ ಭೌತಿಕ ಚಿನ್ನದಲ್ಲಿನ ಹೂಡಿಕೆಯಲ್ಲಿ ಸಿಗುವುದಿಲ್ಲ. ಈಗ ಬಿಡುಗಡೆಯಾಗುತ್ತಿರುವ ಬಾಂಡ್‌ಗೆ ವಾರ್ಷಿಕ ೨.೫% ಬಡ್ಡಿ ಆದಾಯ ಸಿಗುತ್ತದೆ.
- ತಯಾರಿಕಾ ಶುಲ್ಕ ಕೊಡಬೇಕಿಲ್ಲ. ಕಳೆದು ಹೋಗುವ ಆತಂಕ ಇಲ್ಲ. ಚಿನ್ನದ ಪರಿಶುದ್ಧತೆ ಬಗ್ಗೆ ಆತಂಕ ಬೇಡ
ಹೂಡಿಕೆಯಲ್ಲಿ ರಿಸ್ಕ್ ಏನು?: ಒಂದು ವೇಳೆ ಮೆಚ್ಯೂರಿಟಿಯ ವೇಳೆ ಚಿನ್ನದ ದರ ಇಳಿಕೆಯಾಗಿದ್ದರೆ, ನಿಮ್ಮ ಹೂಡಿಕೆಯ ಮೌಲ್ಯವೂ ಇಳಿಕೆಯಾಗಬಹುದು. ಹೀಗಿದ್ದರೂ, ಹಳೆಯ ದರಗಳನ್ನು ಗಮನಿಸಿದರೆ, ಬಂಗಾರದ ದರಗಳಲ್ಲಿ ಏರಿಳಿತ ಇದ್ದರೂ, ಅಂತಿಮವಾಗಿ ದರ ಏರಿಕೆಯಾಗಿದೆ.
ಕನಿಷ್ಠ ಹೂಡಿಕೆ ೧ ಗ್ರಾಮ್, ಗರಿಷ್ಠ ೪ ಕೆ.ಜಿ ಚಿನ್ನ
ಗೋಲ್ಡ್ ಬಾಂಡ್ ಅನ್ನು ಕನಿಷ್ಠ ೧ ಗ್ರಾಮ್ ಚಿನ್ನದ ಲೆಕ್ಕದಲ್ಲಿ ಖರೀದಿಸಬಹುದು. ವೈಯಕ್ತಿಕವಾಗಿ ಗರಿಷ್ಠ ೪ ಕೆ.ಜಿ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಟ್ರಸ್ಟ್‌ಗಳಾದರೆ ೨೦ ಕೆ.ಜಿ ತನಕ ಹೂಡಿಕೆ ಮಾಡಬಹುದು. ಒಂದು ಕುಟುಂಬದ ಪ್ರತಿಯೊಬ್ಬ ಸದಸ್ಯರೂ ತಲಾ ೪ ಕೆ.ಜಿಯಂತೆ ಬಾಂಡ್‌ನಲ್ಲಿ ಹೂಡಿಕೆ ಮಾಡಬಹುದು. ಜಂಟಿಯಾಗಿಯೂ ಕೊಳ್ಳಬಹುದು. ಅಪ್ರಾಪ್ತರ ಪರ ಪೋಷಕರು ಖರೀದಿಸಬಹುದು. ೨೦,೦೦೦ ರೂ. ತನಕ ನಗದು ಹೂಡಿಕೆ ಮಾಡಬಹುದು. ಅದಕ್ಕೂ ಹೆಚ್ಚಿನ ಹೂಡಿಕೆಯನ್ನು ಚೆಕ್, ಡಿಡಿ, ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್‌ಫರ್ ಮೂಲಕ ನಿರ್ವಹಿಸಬಹುದು.
ಕೆವೈಸಿ ಇದೆಯೇ?: ಹೌದು. ಕೆವೈಸಿ (Know-Your-Customer) ಪ್ರಕ್ರಿಯೆ ಇರುತ್ತದೆ. ಪ್ಯಾನ್ ಸಂಖ್ಯೆ ಇರಬೇಕು.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದೇ?: ಹೌದು. ನಿಗದಿತ ಬ್ಯಾಂಕ್‌ಗಳ ವೆಬ್‌ಸೈಟ್ ಮೂಲಕ ಆನ್‌ಲೈನ್ ವಿಧಾನದಲ್ಲೂ ಗೋಲ್ಡ್ ಬಾಂಡ್ ಖರೀದಿಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕ ಖರೀದಿಗೆ ಪ್ರತಿ ಗ್ರಾಮ್‌ಗೆ ೫೦ ರೂ. ಡಿಸ್ಕೌಂಟ್ ಕೂಡ ಲಭ್ಯವಿದೆ.
ಬಾಂಡ್‌ನ ಅವಧಿ ಎಷ್ಟು? : ಗೋಲ್ಡ್ ಬಾಂಡ್‌ನ ಅವಧಿ ೮ ವರ್ಷಗಳು. ೫ನೇ ವರ್ಷದಿಂದ ಅವಧಿಗೆ ಮುನ್ನ ಹೂಡಿಕೆಯನ್ನು ಹಿಂತೆಗೆದುಕೊಳ್ಳಬಹುದು. ಸಂಬಂಧಿಸಿದ ಬ್ಯಾಂಕ್, ಅಂಚೆ ಕಚೇರಿಗೆ ತೆರಳಿ ಅವಧಿಗೆ ಮೊದಲೇ ಹಿಂತೆಗೆದುಕೊಳ್ಳಲು ಅವಕಾಶ ಇದೆ.
ಮೆಚ್ಯೂರಿಟಿ ಪ್ರಕ್ರಿಯೆ ಹೇಗೆ?: ಗೋಲ್ಡ್ ಬಾಂಡ್‌ನ ಅವಧಿ ಮುಗಿದ ಬಳಿಕ ಆಗಿನ ಮಾರುಕಟ್ಟೆ ದರದಲ್ಲಿ ಮೆಚ್ಯುರಿಟಿಯ ಮೊತ್ತ ಹೂಡಿಕೆದಾರರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಬಡ್ಡಿ ದರವೂ ಬ್ಯಾಂಕ್ ಖಾತೆಗೆ ಸೇರುತ್ತದೆ. ಈ ಬಾಂಡ್‌ಗೆ ಟಿಡಿಎಸ್ ಅನ್ವಯವಾಗುವುದಿಲ್ಲ.
ಇದನ್ನೂ ಓದಿ:ವಿಸ್ತಾರ Explainer | ಬ್ಯಾಂಕ್‌ಗಳು ಎಫ್‌ಡಿ ದರಗಳನ್ನು ದಿಢೀರ್ ಏರಿಸುತ್ತಿರುವುದೇಕೆ?!
EXPLAINER
ವಿಸ್ತಾರ Explainer: ಹೊಸ ಸಂಸತ್ ಭವನದಲ್ಲಿ ಸ್ಥಾಪಿತಗೊಂಡ ತಮಿಳುನಾಡಿನ ಚಿನ್ನದ ಸೆಂಗೋಲ್; ಏನಿದರ ಮಹತ್ವ?
ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಆಡಳಿತ ನಡೆಸಿದ್ದ ಚೋಳ ರಾಜನ ಅವಧಿಯಲ್ಲಿ (ತಮಿಳು ರಾಜ) ಮಹತ್ವ ಪಡೆದ ರಾಜದಂಡ ಇದಾಗಿತ್ತು ಎಂದು ಅಮಿತ್ ಶಾ ತಿಳಿಸಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ಇಂದು ನೂತನ ಸಂಸತ್ ಭವನವನ್ನು (New Parliament Building) ಪ್ರಧಾನಿ ಮೋದಿ (PM Modi)ಯವರು ಉದ್ಘಾಟನೆ ಮಾಡಿದ್ದಾರೆ. ಹಾಗೇ, ಹೊಸದಾಗಿ ನಿರ್ಮಾಣವಾದ ಸಂಸತ್ ಭವನದಲ್ಲಿ ತಮಿಳುನಾಡಿನ ’ರಾಜದಂಡ’ (ಸೆಂಗೋಲ್)ವನ್ನು ಪ್ರತಿಷ್ಠಾಪಿಸಿದ್ದಾರೆ. ಸ್ಪೀಕರ್ ಕುರ್ಚಿಯ ಪಕ್ಕವೇ ರಾಜದಂಡವೂ ನಿಂತಿದೆ.
ʼ‘ಸೆಂಗೋಲ್ ಅಂದರೆ ರಾಜದಂಡ ಎಂಬುದು ಭಾರತದ ಸ್ವಾತಂತ್ರ್ಯದ ಪ್ರತೀಕವಾಗಿದೆ. ಬ್ರಿಟಿಷರು ಭಾರತಕ್ಕೆ ಆಡಳಿತ/ಅಧಿಕಾರವನ್ನು ಹಸ್ತಾಂತರ ಮಾಡಿ ಹೋದ ನಂತರ ತಮಿಳುನಾಡಿನ ಜನರು, ಅಂದಿನ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರಿಗೆ ಈ ರಾಜದಂಡ ನೀಡಿದ್ದರು. ಭಾರತದಲ್ಲಿ ಆಡಳಿತ ನಡೆಸುವ ಅಧಿಕಾರ ಭಾರತಕ್ಕೇ ಸಿಕ್ಕಿದ್ದರಿಂದ 1947ರ ಆಗಸ್ಟ್ 14ರಂದು ಬೆಳಗ್ಗೆ 10.45ಕ್ಕೆ ಈ ಸೆಂಗೋಲ್ನ್ನು ನೆಹರೂ ಅವರಿಗೆ ನೀಡಲಾಗಿತ್ತು. ಇದು ಸಂಪೂರ್ಣವಾಗಿ ಚಿನ್ನದ್ದು ʼ’ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಇದು ಎಲ್ಲಿತ್ತು?
ʼ‘ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಆಡಳಿತ ನಡೆಸಿದ್ದ ಚೋಳ ರಾಜನ ಅವಧಿಯಲ್ಲಿ (ತಮಿಳು ರಾಜ) ಮಹತ್ವ ಪಡೆದ ರಾಜದಂಡ ಇದಾಗಿತ್ತು. ಈ ರಾಜದಂಡದ ಬಗ್ಗೆ ಪ್ರಧಾನಿ ಮೋದಿಯವರಿಗೆ ಗೊತ್ತಾಗುತ್ತಿದ್ದಂತೆ, ಅದನ್ನು ಹೊಸ ಸಂಸತ್ ಭವನದಲ್ಲಿ ಇಡಲು ತೀರ್ಮಾನಿಸಿದ್ದಾರೆ. ಸೆಂಗೋಲ್ ಎಂದರೆ ತಮಿಳಿನ ಭಾಷೆಯಲ್ಲಿ ಸಮೃದ್ಧ ಸಂಪತ್ತು ಎಂದರ್ಥ’ʼ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ಇದನ್ನೂ ಓದಿ: Photo Gallery | ಆಕರ್ಷಕ ಹೊಸ ಸಂಸತ್ ಭವನ! ಗಮನ ಸೆಳೆಯುತ್ತಿವೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಚಿತ್ರಗಳು
ಏನೀ ಸೆಂಗೋಲ್‌ನ ಇತಿಹಾಸ?
ತಮಿಳುನಾಡು ಮೂಲದ ಚೋಳ ರಾಜವಂಶ ವಾಸ್ತುಶಿಲ್ಪ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಅಸಾಧಾರಣ ಕೊಡುಗೆ ನೀಡಿತ್ತು. ಚೋಳರ ಕಾಲದಲ್ಲಿ ಸೆಂಗೋಲ್ ಎಂಬುದು ರಾಜರ ಪಟ್ಟಾಭಿಷೇಕದಲ್ಲಿ ಅಪಾರ ಪ್ರಾಮುಖ್ಯತೆ ಹೊಂದಿತ್ತು. ಇದೊಂದು ಧಾರ್ಮಿಕ ಮಹತ್ವ ಹೊಂದಿರುವ ರಾಜದಂಡ. ಚಂದದ ಕೆತ್ತನೆಗಳು, ಸಂಕೀರ್ಣವಾದ ಅಲಂಕಾರಿಕ ಅಂಶಗಳು ಇದರ ವೈಶಿಷ್ಟ್ಯ. ರಾಜಪರಂಪರೆಯ ಪಾಲಿಗೆ ಇದು ಪವಿತ್ರ ಲಾಂಛನ. ಒಬ್ಬ ಆಡಳಿತಗಾರನಿಂದ ಮುಂದಿನವರಿಗೆ ಅಧಿಕಾರದ ವರ್ಗಾವಣೆಯನ್ನು ಇದು ಪ್ರತಿನಿಧಿಸುತ್ತಿತ್ತು.
ಬ್ರಿಟಿಷರು ಭಾರತೀಯರ ಕೈಗೆ ಅಧಿಕಾರ ಹಸ್ತಾಂತರಿಸಲಿದ್ದ ಸಂದರ್ಭದಲ್ಲಿ, ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರು ಪಂಡಿತ್ ಜವಾಹರಲಾಲ್ ಮುಂದೆ ಒಂದು ಪ್ರಶ್ನೆಯನ್ನು ಇಟ್ಟರು. ಈ ಮಹತ್ವದ ಘಟನೆಯನ್ನು ಸೂಚಿಸಲು ಸೂಕ್ತವಾದ ಸಮಾರಂಭ ಹೇಗೆ ಮಾಡಬಹುದು ಎಂದು ವಿಚಾರಿಸಿದರು. ನೆಹರೂ ಅವರು ಈ ಪ್ರಶ್ನೆಯನ್ನು ಆ ಕಾಲದ ದೊಡ್ಡ ಮುತ್ಸದ್ಧಿ ಸಿ.ರಾಜಗೋಪಾಲಾಚಾರಿ (ರಾಜಾಜಿ) ಯವರ ಮುಂದಿಟ್ಟರು.
ರಾಜಾಜಿಯವರು ಚೋಳ ರಾಜವಂಶದ ʼರಾಜದಂಡʼದ ಕ್ರಮದಿಂದ ಸ್ಫೂರ್ತಿ ಪಡೆಯುವಂತೆ ನೆಹರೂಗೆ ಸಲಹೆ ನೀಡಿದರು. ರಾಜಾಜಿಯವರ ಪ್ರಕಾರ ಚೋಳ ಮಾದರಿಯ ಅಧಿಕಾರ ಹಸ್ತಾಂತರ ʼಸೆಂಗೋಲ್ʼನ ಸಾಂಕೇತಿಕ ಹಸ್ತಾಂತರವನ್ನು ಒಳಗೊಂಡಿತ್ತು. ಒಬ್ಬ ರಾಜ ತನ್ನ ಉತ್ತರಾಧಿಕಾರಿಗೆ ಅಧಿಕಾರ ಮತ್ತು ಶಕ್ತಿಯ ಸಂಕೇತವಾದ ಸೆಂಗೋಲ್ ಹಸ್ತಾಂತರಿಸುತ್ತಿದ್ದ. ಇದು ʼಧರ್ಮʼವನ್ನು ಪ್ರತಿನಿಧಿಸುತ್ತಿತ್ತು. ಧರ್ಮ ಹಾಗೂ ನ್ಯಾಯಯುತವಾಗಿ ಅಧಿಕಾರವನ್ನು ನಡೆಸುವ ವಚನವನ್ನು ಈ ಮೂಲಕ ತೆಗೆದುಕೊಳ್ಳಲಾಗುತ್ತಿತ್ತು.
ಸೆಂಗೋಲ್ ಅನ್ನು ಪಡೆಯಲು ರಾಜಾಜಿಯವರು ತಮಿಳುನಾಡಿನ ತಂಜಾವೂರು ಜಿಲ್ಲೆಯ ʼತಿರುವವಾಡುತುರೈ ಅಧೀನಂʼ ಎಂಬ ಧಾರ್ವಿುಕ ಮಠವನ್ನು ಸಂಪರ್ಕಿಸಿದರು. ಇದು ಶಿವನ ಬೋಧನೆ ಮತ್ತು ಸಂಪ್ರದಾಯ ಅನುಸರಿಸುವ ಬ್ರಾಹ್ಮಣೇತರ ಸನ್ಯಾಸಿಗಳ ಸಂಸ್ಥೆ. 500ಕ್ಕೂ ಹೆಚ್ಚು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಸೆಂಗೋಲ್ ತಯಾರಿಕೆಯಲ್ಲಿ ಇವರ ನೆರವನ್ನು ರಾಜಾಜಿ ಬಯಸಿದರು.
ತಿರುವವಾಡುತುರೈ ಅಧೀನಂ ಮುಖ್ಯಸ್ಥರು ಸೆಂಗೋಲ್ ಅನ್ನು ರಚಿಸುವ ಹೊಣೆ ಹೊತ್ತರು. ಆಗಿನ ಕಾಲದ ಹೆಸರಾಂತ ಆಭರಣ ತಯಾರಕ ಹಾಗೂ ವ್ಯಾಪಾರಿಗಳಾದ ಚೆನ್ನೈನ ವುಮ್ಮಿಡಿ ಬಂಗಾರು ಚೆಟ್ಟಿ ಎಂಬವರಿಗೆ ಇದನ್ನು ತಯಾರಿಸುವ ಕೆಲಸವನ್ನು ವಹಿಸಲಾಯಿತು. ವುಮ್ಮಿಡಿ ಕುಟುಂಬವು ಸೆಂಗೋಲ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿತ್ತು. ಅಂದು ಸೆಂಗೋಲ್ ತಯಾರಿಯಲ್ಲಿ ಭಾಗವಹಿಸಿದ್ದ ಇಬ್ಬರು ಕುಶಲಕರ್ಮಿಗಳು ಇಂದಿಗೂ ಜೀವಂತವಿದ್ದಾರೆ. ಅವರೇ ವುಮ್ಮಿಡಿ ಎತ್ತಿರಾಜುಲು (96) ಮತ್ತು ವುಮ್ಮಿಡಿ ಸುಧಾಕರ್ (88).
ನೋಡಲು ಸುಂದರವಾಗಿರುವ ಈ ಸೆಂಗೋಲ್ ಸುಮಾರು ಐದು ಅಡಿ ಉದ್ದವಿದೆ. ನ್ಯಾಯ ಹಾಗೂ ಪರಿಶ್ರಮದ ಸಂಕೇತವಾದ ನಂದಿಯ ಪ್ರತಿಕೃತಿ ಸೆಂಗೋಲ್‌ನ ತುದಿಯಲ್ಲಿದೆ.
ಇದರ ತಯಾರಿಯ ಬಳಿಕ ಇದನ್ನು ತೆಗೆದುಕೊಂಡು, ಐತಿಹಾಸಿಕ ದಿನವಾದ 1947ರ ಆಗಸ್ಟ್ 14ರಂದು ಅಧಿಕಾರ ಹಸ್ತಾಂತರದಲ್ಲಿ ಭಾಗವಹಿಸಲು ತಮಿಳುನಾಡಿನಿಂದ ಮೂವರು ದಿಲ್ಲಿಗೆ ತೆರಳಿದರು. ತಿರುವವಾಡುತುರೈ ಅಧೀನಂನ ಪ್ರಧಾನ ಅರ್ಚಕರು, ನಾದಸ್ವರಂ ವಾದಕ ರಾಜರತ್ನಂ ಪಿಳ್ಳೈ ಮತ್ತು ಓದುವರ್ (ಗಾಯಕ) ತಂಡದಲ್ಲಿದ್ದರು. ಪ್ರಧಾನ ಅರ್ಚಕರು ಸೆಂಗೋಲ್ ಅನ್ನು ಲಾರ್ಡ್ ಮೌಂಟ್ ಬ್ಯಾಟನ್‌ಗೆ ಅರ್ಪಿಸಿದರು. ನಂತರ ವೈಸರಾಯ್ ಕಡೆಯಿಂದ ಅದನ್ನು ಪಡೆದು, ಅದನ್ನು ಪವಿತ್ರ ನೀರಿನಿಂದ ಶುದ್ಧೀಕರಿಸಿ, ಪಂಡಿತ್ ಜವಾಹರಲಾಲ್ ನೆಹರು ಅವರ ನಿವಾಸಕ್ಕೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಅಲ್ಲಿ ಅದನ್ನು ನೆಹರೂ ಅವರಿಗೆ ಹಸ್ತಾಂತರಿಸಲಾಯಿತು.
ಹೀಗೆ ದೇಶದ ಇತಿಹಾಸದ ಮಹತ್ವದ ಮೈಲಿಗಲ್ಲೊಂದನ್ನು ಪ್ರತಿನಿಧಿಸಿದ, ಸ್ವತಂತ್ರ ರಾಷ್ಟ್ರವಾಗಿ ತನ್ನ ಪ್ರಯಾಣವನ್ನು ದೇಶ ಆರಂಭಿಸಿದ ಇತಿಹಾಸಕ್ಕ ಸಾಕ್ಷಿಯಾದ ಸೆಂಗೋಲ್ ಇನ್ನು ಮುಂದೆ ಸಂಸತ್ತಿನಲ್ಲಿಯೇ ಇರಲಿದೆ.
ಇದನ್ನೂ ಓದಿ: New Parliament Building: ನೂತನ ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕರಿಸಿದ ಟಿಎಂಸಿ, ಆಪ್; ಕೊಟ್ಟ ಕಾರಣ ಹೀಗಿದೆ
EXPLAINER
ವಿಸ್ತಾರ Explainer: New Parliament Building: ಹೇಗಿದೆ ಹೊಸ ಸಂಸತ್ ಭವನ? ಇಲ್ಲಿದೆ ನೋಡಿ ವಿಡಿಯೊ
ಮೇ 28ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾರತದ ಭವ್ಯವಾದ ಹೊಸ ಸಂಸತ್ ಕಟ್ಟಡವನ್ನು (New Parliament Building) ಉದ್ಘಾಟಿಸಲಿದ್ದಾರೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ದೇಗುಲವೆನಿಸಲಿದೆ ಈ ಭವ್ಯ ಭವನ. ಈ ಮಹತ್ವದ ಭವನದ ವಿಶೇಷತೆಗಳು ಇಲ್ಲಿವೆ.
ನಮ್ಮ ದೇಶದ ವೃತ್ತಾಕಾರದ ಸಂಸತ್ ಭವನ ಸ್ವಾತಂತ್ರ್ಯೋತ್ತರ ಕಾಲದ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಹಲವು ಅಧಿಕಾರ ಹಸ್ತಾಂತರಗಳು, ಹಲವು ಚಾರಿತ್ರಿಕ ಕಲಾಪಗಳು, ಹಲವು ಜಾಗತಿಕ ಖ್ಯಾತಿಯ ಮುತ್ಸದ್ಧಿಗಳು ಹಾಗೂ ಚರ್ಚೆಗಳು…ಇತ್ಯಾದಿ. ಇಷ್ಟರಲ್ಲಿಯೇ ಈ ಸಂಸತ್ ಭವನ ಇತಿಹಾಸ ಸೇರಲಿದೆ. ಹೊಸ, ಭವ್ಯ ಸಂಸತ್ ಭವನ (New Parliament Building) ಹೊಸದೊಂದು ಇತಿಹಾಸಕ್ಕೆ ಮುನ್ನುಡಿ ಬರೆಯಲಿದೆ.
ಮೂಲ ಸಂಸತ್ ಭವನ ಕಟ್ಟಡ ರಚನೆಯಾದುದು 1927ರಲ್ಲಿ. ಹತ್ತಿರ ಹತ್ತಿರ ಒಂದು ಶತಮಾನ ಇದಕ್ಕೆ ಪೂರ್ಣಗೊಂಡಿದೆ. ಶತಮಾನ ಹಳೆಯದಾದ ಈ ರಚನೆ ಇಂದಿನ ಹಾಗೂ ಮುಂದಿನ ಅವಶ್ಯಕತೆಗಳನ್ನು ಪೂರೈಸಲು ಸಾಕಾಗದು. ಇದನ್ನು ಗಮನದಲ್ಲಿಟ್ಟುಕೊಂಡು ಲೋಕಸಭೆ ಮತ್ತು ರಾಜ್ಯಸಭೆ ಸಂಸತ್ತಿಗೆ ಹೊಸ ಕಟ್ಟಡ ನಿರ್ಮಿಸಲು ನಿರ್ಣಯಗಳನ್ನು ಅಂಗೀಕರಿಸಿದವು. ಡಿಸೆಂಬರ್ 10, 2020ರಂದು ಪ್ರಧಾನಿ ನರೇಂದ್ರ ಮೋದಿ ಹೊಸ ಭವನಕ್ಕೆ ಶಂಕುಸ್ಥಾಪನೆ ಮಾಡಿದರು.
ಎಷ್ಟು ದೊಡ್ಡದು?
ಈ ಕಟ್ಟಡವನ್ನು 64,500 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಸೆಂಟ್ರಲ್ ವಿಸ್ಟಾ ಕಟ್ಟಡಗಳ ಮಾದರಿಯಲ್ಲಿ ನಿರ್ಮಿಸಲಾದ ಹೊಸ ಸಂಸತ್ತು ತ್ರಿಕೋನಾಕೃತಿಯಲ್ಲಿದೆ. ಇದು ಲೋಕಸಭೆ, ರಾಜ್ಯಸಭೆ, ಸೆಂಟ್ರಲ್ ಲಾಂಜ್ ಮತ್ತು ಸಾಂವಿಧಾನಿಕ ಅಧಿಕಾರಿಗಳ ಕಚೇರಿಗಳನ್ನು ಹೊಂದಿದೆ. ಹೊಸ ಲೋಕಸಭೆಯನ್ನು ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲಿನ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹೊಸ ರಾಜ್ಯಸಭೆಯು ರಾಷ್ಟ್ರೀಯ ಪುಷ್ಪವಾದ ಕಮಲದ ಹೋಲಿಕೆಯನ್ನು ಹೊಂದಿದೆ. ರಾಷ್ಟ್ರಪತಿ ಭವನದಂತಹ ಭಾರತದ ಪ್ರಮುಖ ಪಾರಂಪರಿಕ ಕಟ್ಟಡಗಳಿಂದಲೂ ವಿವಿಧ ವಾಸ್ತುಶಿಲ್ಪದ ಪ್ರಭಾವಗಳನ್ನು ಪಡೆದಿದೆ.
ಹಳೆಯ ಕಟ್ಟಡದಲ್ಲಿ ಲೋಕಸಭೆಯಲ್ಲಿ 543 ಮತ್ತು ರಾಜ್ಯಸಭೆಯಲ್ಲಿ 250 ಸದಸ್ಯರು ಕುಳಿತುಕೊಳ್ಳಬಹುದು. ಹೊಸ ಸಂಸತ್ ಕಟ್ಟಡ ಲೋಕಸಭೆಯಲ್ಲಿ 888 ಸದಸ್ಯರು ಮತ್ತು 384 ಸದಸ್ಯರಿಗೆ ಸ್ಥಳಾವಕಾಶವನ್ನು ಹೊಂದಿದೆ. ಕೇಂದ್ರ ಪ್ರಾಂಗಣದಲ್ಲಿ ಎರಡೂ ಸದನಗಳ ಸದಸ್ಯರು ಮುಕ್ತವಾಗಿ ಸಭೆ ಸೇರಲು ಸ್ಥಳವಿದೆ. ಜಂಟಿ ಅಧಿವೇಶನ ನಡೆದಾಗ ಇದನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ಪುನರಾಭಿವೃದ್ಧಿಯಾದ ಶ್ರಮ ಶಕ್ತಿ ಭವನದಲ್ಲಿ ಸಂಸದರಿಗಾಗಿ ಸುಮಾರು 800 ಕೋಣೆಗಳನ್ನು ನಿರ್ಮಿಸಲಾಗುತ್ತಿದೆ.
ನೂತನ ಕಟ್ಟಡವು ಆರು ಸಮಿತಿ ಕೊಠಡಿಗಳನ್ನು ಹೊಂದಿರುತ್ತದೆ. ಪ್ರಸ್ತುತ ಕಟ್ಟಡದಲ್ಲಿ ಅಂತಹ ಮೂರು ಕೊಠಡಿಗಳಷ್ಟೇ ಇವೆ. ಮಂತ್ರಿಮಂಡಲದ ಬಳಕೆಗೆ 92 ಕೊಠಡಿಗಳು ಇರುತ್ತವೆ. ಹೊಸ ಕಟ್ಟಡದಲ್ಲಿ, ಲೋಕಸಭೆ ಮತ್ತು ರಾಜ್ಯಸಭೆಗಳ ಪ್ರತಿ ಬೆಂಚ್‌ನಲ್ಲಿ ಇಬ್ಬರು ಸದಸ್ಯರು ಅಕ್ಕಪಕ್ಕದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿ ಆಸನದಲ್ಲಿ ಡಿಜಿಟಲ್ ವ್ಯವಸ್ಥೆಗಳು ಮತ್ತು ಟಚ್ ಸ್ಕ್ರೀನ್‌ಗಳನ್ನು ಅಳವಡಿಸಲಾಗುತ್ತಿದೆ.
ಹಳೆಯ ಸಂಸತ್ ಕಟ್ಟಡದ ಬಳಕೆ ಮುಂದುವರಿಯಲಿದೆ. ಎರಡು ಕಟ್ಟಡಗಳು ಒಂದಕ್ಕೊಂದು ಪೂರಕವಾಗಿರುವಂತೆ ಇವೆ. ಇವುಗಳ ಮೂಲ ವಾಸ್ತುಶಿಲ್ಪದ ತಂತ್ರವೇ ಹಾಗಿದೆ. ಹಳೆಯ ಕಟ್ಟಡದ ಐತಿಹಾಸಿಕ ಪರಂಪರೆಯನ್ನು ಉಳಿಸಿಕೊಳ್ಳಲು ಕಾಳಜಿ ವಹಿಸಲಾಗುತ್ತದೆ. ಸಂಸತ್ತಿನ ಸಂಕೀರ್ಣದಲ್ಲಿರುವ ಎಲ್ಲಾ ಪ್ರತಿಮೆಗಳನ್ನು ಸಹ ಪುನಃಸ್ಥಾಪಿಸಲಾಗುತ್ತದೆ. ಉನ್ನತ ಮಟ್ಟದ ಭದ್ರತಾ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ.
ಹೊಸ ಕಟ್ಟಡದಲ್ಲಿ ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸುವ ಸಂವಿಧಾನ ಭವನ ಇರಲಿದೆ. ಲಕ್ಷಾಂತರ ಮುದ್ರಿತ ಹಾಗೂ ಡಿಜಿಟಲ್ ಬುಕ್‌ಗಳನ್ನು ಹೊಂದಿರುವ ಗ್ರಂಥಾಲಯವಿರುತ್ತದೆ. ಊಟದ ಕೋಣೆ ಮತ್ತು ಸದಸ್ಯರಿಗೆ ಸಾಕಷ್ಟು ಪಾರ್ಕಿಂಗ್ ವ್ಯವಸ್ಥೆ ಸೇರಿವೆ. ಹೊಸ ಕಟ್ಟಡವು ಮಳೆನೀರು ಕೊಯ್ಲು ಮತ್ತು ನೀರಿನ ಮರುಬಳಕೆ ವ್ಯವಸ್ಥೆಯನ್ನು ಹೊಂದಿದೆ. ಕಟ್ಟಡದಾದ್ಯಂತ 100% ಯುಪಿಎಸ್ ಪವರ್ ಬ್ಯಾಕಪ್ ಒದಗಿಸಲಾಗಿದೆ.
ಹೊಸ ಕಟ್ಟಡದ ವಿನ್ಯಾಸವನ್ನು ಅಹಮದಾಬಾದ್ ಮೂಲದ HCP ಡಿಸೈನ್ ಮತ್ತು ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮಾಡಿದೆ. ಕೇಂದ್ರದ ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಗಳ ಭಾಗವಾದ ಹೊಸ ಸಂಸತ್ ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ಟಾಟಾ ಪ್ರಾಜೆಕ್ಟ್ಸ್ ಪಡೆದಿದ್ದು, ಇದನ್ನು ನಿರ್ಮಿಸಿದೆ.
ಅಧಿಕಾರದ ಹಸ್ತಾಂತರಕ್ಕೆ ಸೆಂಗೋಲ್
ಹೊಸ ಸಂಸತ್ ಭವನದ ಇನ್ನೊಂದು ಆಕರ್ಷಣೆ ಎಂದರೆ, ಪುರಾತನ ಭಾರತದಲ್ಲಿ ಅಧಿಕಾರದ ಹಸ್ತಾಂತರಕ್ಕೆ ಬಳಸುತ್ತಿದ್ದ ಸೆಂಗೋಲ್ ಅಥವಾ ರಾಜದಂಡ. ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಆಡಳಿತ ನಡೆಸಿದ್ದ ಚೋಳ ರಾಜನ ಅವಧಿಯಲ್ಲಿ ಮಹತ್ವ ಪಡೆದ ರಾಜದಂಡ ಇದಾಗಿತ್ತು. ಸೆಂಗೋಲ್ ಸದ್ಯ ಅಲಹಾಬಾದ್ ಮ್ಯೂಸಿಯಂನಲ್ಲಿದೆ. ಅದನ್ನು ತಮಿಳಿನ ಹಿರಿಯರು ಪ್ರಧಾನಿಗೆ ನೀಡಲಿದ್ದು, ಅದನ್ನು ಲೋಕಸಭೆಯ ಸ್ಪೀಕರ್ ಕುರ್ಚಿಯ ಸಮೀಪ ಪ್ರಧಾನಿ ಇಡಲಿದ್ದಾರೆ. ಚಿನ್ನದಿಂದ ಮಾಡಿದ ಈ ದಂಡವನ್ನು ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ರಾಜಾಜಿಯವರು ತಮಿಳುನಾಡಿನ ಚಿನ್ನಾಭರಣ ತಯಾರಕರಿಂದ ಮಾಡಿಸಿ ತರಿಸಿ ನೆಹರೂ ಅವರಿಗೆ ನೀಡಿದ್ದರು. ನಂತರ ಇದು ಮ್ಯೂಸಿಯಂ ಸೇರಿತ್ತು.
ಬೃಹತ್ ರಾಷ್ಟ್ರ ಲಾಂಛನ
ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್ತಿನ ಕಟ್ಟಡದ ಮೇಲಿರುವ ರಾಷ್ಟ್ರೀಯ ಲಾಂಛನವಾದ ನಾಲ್ಕು ಸಿಂಹಗಳನ್ನು ಅನಾವರಣಗೊಳಿಸಿದ್ದಾರೆ. 6.5 ಮೀಟರ್ ಎತ್ತರವಾಗಿರುವ ಈ ಲಾಂಛನ 9,500 ಕೆಜಿ ತೂಕ ಹೊಂದಿದ್ದು ಕಂಚಿನಿಂದ ಮಾಡಲ್ಪಟ್ಟಿದೆ.
ಈ ಕಟ್ಟಡದ ನಿರ್ಮಾಣಕ್ಕೆಂದು ತೆಗೆದಿರಿಸಲಾದ ಹಣದ 2600 ಕೋಟಿ ರೂ. ಇದುವರೆಗೆ ಇದರ ನಿರ್ಮಾಣದಲ್ಲಿ ಸುಮಾರು 23,04,095 ಮಾನವ ದಿನಗಳಷ್ಟು ಉದ್ಯೋಗ ನೀಡಲಾಗಿದೆ. 26,045 ಟನ್ ಸ್ಟೀಲ್ ಬಳಸಲಾಗಿದೆ. 63,807 ಟನ್ ಸಿಮೆಂಟ್ ಹಾಗೂ 9,689 ಘನ ಮೀಟರ್ ಹಾರುಬೂದಿ ಬಳಸಲಾಗಿದೆ.
ಇದನ್ನೂ ಓದಿ: New Parliament Building: ಹೊಸ ಸಂಸತ್ ಭವನ ಉದ್ಘಾಟನೆಗೆ 20 ಪ್ರತಿಪಕ್ಷಗಳ ಬಹಿಷ್ಕಾರ, 17 ಪಕ್ಷಗಳ ಬೆಂಬಲ
EXPLAINER
ವಿಸ್ತಾರ Explainer: Aritificial Intelligence : ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನಿಮ್ಮ ಉದ್ಯೋಗವನ್ನು ಕಸಿದುಕೊಳ್ಳಲಿದೆಯೇ?
Aritificial Intelligence ಕೃತಕ ಬುದ್ದಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅನೇಕ ಉದ್ಯೋಗಗಳನ್ನು ಕಸಿಯಲಿದೆ ಎಂಬ ಆತಂಕ ಸೃಷ್ಟಿಸಿದೆ. ಕಾರಣವೇನು? ಆ ಉದ್ಯೋಗಗಳು ಯಾವುದು? ಇಲ್ಲಿದೆ ವಿವರ.
ನವ ದೆಹಲಿ: ಕೋವಿಡ್ ಬಿಕ್ಕಟ್ಟಿನ ಸಂದರ್ಭ ಅನೇಕ ಉದ್ಯೋಗಗಳು ನಷ್ಟವಾಗಿತ್ತು. ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವಾಗಲೇ ಅತಿ ದೊಡ್ಡ ಆತಂಕವೊಂದು ಕೃತಕ ಬುದ್ದಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (Artificial Intelligence) ಕ್ಷೇತ್ರದಿಂದ ಬಂದಿದೆ. ಈ ಟೆಕ್ನಾಲಜಿ ಐಟಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಜಗತ್ತಿನಾದ್ಯಂತ ಲಕ್ಷಾಂತರ ಉದ್ಯೋಗಗಳನ್ನು ಕಸಿದುಕೊಳ್ಳಲಿದೆ ಎಂಬ ಭೀತಿ ಅಕ್ಷರಶಃ ಆವರಿಸಿದೆ. ChatGPT ಮತ್ತು Generative artificial intelligence (Gen-AI) ಕಾರ್ಪೊರೇಟ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಮೈಕ್ರೊಸಾಫ್ಟ್ ಬೆಂಬಲಿತ ಓಪನ್ ಎಐ (Open-AI) ಕಳೆದ ವರ್ಷ ನವೆಂಬರ್‌ನಲ್ಲಿ ChatGPT ಅನ್ನು ಬಿಡುಗಡೆಗೊಳಿಸಿದ ಬಳಿಕ ಅನೇಕ ಆತಂಕಗಳಿಗೆ ಕಾರಣವಾಗಿದೆ.
ChatGPT: ಎರಡೇ ತಿಂಗಳಲ್ಲಿ 10 ಕೋಟಿ ಡೌನ್‌ಲೋಡ್! ಚಾಟ್ ಜಿಪಿಟಿ ಆ್ಯಪ್ ಬಿಡುಗಡೆಯಾದ ಎರಡೇ ತಿಂಗಳಿನಲ್ಲಿ 10 ಕೋಟಿ ಸಕ್ರಿಯ ಬಳಕೆದಾರರು ಡೌನ್‌ಲೋಡ್ ಮಾಡಿದ್ದರು. ಇದರೊಂದಿಗೆ ಚಾಟ್ ಜಿಪಿಟಿ (ChatGPT) ಸೃಜನಶೀಲತೆಯ ಹೊಸ ಯುಗಾರಂಭವಾಗಿದೆ. ಜತೆಗೆ Interactive AI ನಾನಾ ಇಂಡಸ್ಟ್ರಿಗಳಲ್ಲಿ ಅನೇಕ ಉದ್ಯೋಗಗಳ ಮೇಲೆ ಹಿಂದೆಂದೂ ಕಂಡರಿಯದಷ್ಟು ಪ್ರಭಾವ ಬೀರಲಿದೆ.
ChatGPT ಮೊಟ್ಟ ಮೊದಲಿಗೆ ಸಾರ್ವಜನಿಕರ ಬಳಕೆಗೆ ಲಭ್ಯವಾಗಿರುವ ಎಐ ಆ್ಯಪ್ ಆಗಿದ್ದರೆ, ಅದೇ ಮಾದರಿಯಲ್ಲಿ ಮತ್ತೆ ಹಲವಾರು ಆ್ಯಪ್‌ಗಳು ಬಿಡುಗಡೆಯಾಗಿವೆ. ಆಗುತ್ತಿವೆ. ಗೂಗಲ್‌ನಿಂದ BARD, ಮೈಕ್ರೊಸಾಫ್ಟ್‌ನಿಂದ Bing ಚೀನಾದ Baidu app ನಿಂದ ChatSoni̧c Ernie ಚಾಟ್ ಜಿಪಿಟಿ ಮಾದರಿಯ ಇತರ ಎಐ ಆ್ಯಪ್‌ಗಳಿಗೆ ಉದಾಹರಣೆಯಾಗಿದೆ.
30 ಕೋಟಿ ಉದ್ಯೋಗ ನಷ್ಟ ಸಂಭವ: ಗೋಲ್ಡ್‌ಮನ್ ಸ್ಯಾಕ್ಸ್
ಗೋಲ್ಡ್‌ಮನ್ ಸ್ಯಾಕ್ಸ್ ಪ್ರಕಾರ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಟೂಲ್‌ಗಳ ಪರಿಣಾಮ ಜಗತ್ತಿನಾದ್ಯಂತ 30 ಕೋಟಿ ಉದ್ಯೋಗಗಳು ನಷ್ಟವಾಗಲಿದೆ.
ಇದು ಖಂಡಿತವಾಗಿಯೂ Inflection point̤ ಕಂಪ್ಯೂಟರ್, ಇಂಟರ್‌ನೆಟ್ ಸಂಶೋಧಿಸಿದಾಗ ಆಗಿರುವಂತೆ ಚಾಟ್ ಜಿಪಿಟಿ ಹೊರಹೊಮ್ಮಿದೆ ಎನ್ನುತ್ತಾರೆ ತಜ್ಞರು. ಇದು ಬ್ಲೂ ಕಲರ್ ಜಾಬ್‌ಗಳ ಬದಲಿಗೆ ಹೆಚ್ಚಾಗಿ ವೈಟ್ ಕಲರ್ ಜಾಬ್‌ಗಳನ್ನು ಕಿತ್ತುಕೊಳ್ಳಲಿದೆ. ಹಾಗಾದರೆ ಏನಿದು Gen-AI?
ಏನಿದು ಚಾಟ್ ಜಿಪಿಟಿ & Gen-AI? ಇದರಿಂದ ಕಲೆ, ಸಂಗೀತದ ಸೃಷ್ಟಿಯೂ ಸಾಧ್ಯ!
Generative AI ಅಂದರೆ ಒಂದು ವಿಧದದ ಕೃತಕ ಬುದ್ದಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟಲಿಜೆನ್ಸ್. ಈ ಹಿಂದಿನ ಡೇಟಾ ಇಲ್ಲವೇ ಮಾಹಿತಿಯನ್ನು ಆಧರಿಸಿ ಹೊಸ ವಿಷಯವನ್ನು (Content) ಉತ್ಪಾದಿಸುವುದು. ಸಂಗೀತ, ಕಲೆಗಳಿಗೂ ಈಗ ಎಐ ನಂಟಿದೆ!
ಚಾಟ್ ಜಿಪಿಟಿ ಎಂದರೆ (ChatGPT) Text ಮತ್ತು ಭಾಷೆ ಆಧರಿಸಿದ Gen-AI ಆಗಿದೆ. ಇದರ ಫುಲ್ ಫಾರ್ಮ್ ಹೀಗಿದೆ- ( Chat Generative Pre-trained Transformer) ಕಲಾ ಸೃಷ್ಟಿಗೆ DALL-E2, ಸಂಗೀತಕ್ಕೆ AIVA , Soundful, Murf ̤ai ಇತ್ಯಾದಿ ಎಐ ಆ್ಯಪ್‌ಗಳಿವೆ.
ChatGPT ಎಂದರೆ ಹೆಚ್ಚು ಸುಧಾರಿತ ಚಾಟ್ ಬೋಟ್. ಅದು ದೊಡ್ಡ ಪ್ರಮಾಣದ ಇನ್‌ಪುಟ್ ಟೆಕ್ಸ್ಟ್ ಗಳನ್ನು (Input text) ಆಧರಿಸಿ ಹೊಸ ಕಂಟೆಂಟ್ ಅನ್ನೇ ಸೃಷ್ಟಿಸಬಲ್ಲುದು. ಹಾಗೂ ಅದು ಬಹುತೇಕ ಮನುಷ್ಯರೇ ಸೃಷ್ಟಿಸಿದಂತೆ ಇರುವುದು. ಇದು ಗೂಗಲ್ ಸರ್ಚ್ ಎಂಜಿನ್ ಕೂಡ ಮಾಡಲಾರದಷ್ಟು ಸಹಜ ಕಂಟೆಂಟ್‌ಗಳನ್ನು ನಾನಾ ಭಾಷೆಗಳಲ್ಲಿ ಕೊಡಬಲ್ಲುದು. ಆದ್ದರಿಂದ ಜನರಿಗೆ ಉಪಯುಕ್ತ ಎನ್ನಿಸಲಿದೆ.
ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ನಿಮಗೆ ನಾನಾ ಲಿಂಕ್‌ಗಳ ಆಯ್ಕೆ ಸಿಗುತ್ತದೆ. ಆದರೆ ಚಾಟ್ ಜಿಪಿಟಿಯಲ್ಲಿ ನಿಮಗೆ ಬೇಕಾದಂತೆ ಸಿದ್ಧಪಡಿಸಿಟ್ಟ ಮಾಹಿತಿ ಸಿಗುತ್ತದೆ. ಅಂದರೆ ರೆಡಿಮೇಡ್ ಬಟ್ಟೆಯ ಹಾಗೆ. ವಸ್ತ್ರವನ್ನು ಖರೀದಿಸಿ ಬಟ್ಟೆ ಹೊಲಿದುಕೊಳ್ಳಬೇಕಾದ ಅಗತ್ಯ ಇಲ್ಲ. ಸಿದ್ಧಪಡಿಸಿಟ್ಟ ಆಹಾರದ ಹಾಗೆಯೂ ಎನ್ನಬಹುದು. ಸುದೀರ್ಘ ಲೇಖನ, ವಿವರಣೆ, ಕೋಡ್-ಮ್ಯೂಸಿಕ್‌ಗಳನ್ನು ಇದು ಸೃಷ್ಟಿಸಬಲ್ಲುದು.
ಚಾಟ್ ಜಿಪಿಟಿ ಉಚಿತವೇ? ದರ ಇದೆಯೇ?
ಚಾಟ್ ಜಿಪಿಟಿ (ChatGPT) ಉಚಿತವಾಗಿ chat.openai.com ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಪೇಯ್ಡ್ ವರ್ಶನ್ ChatGPTPlus ಎಂಬ ಎಐ ಆ್ಯಪ್ ಬಳಕೆದಾರರಿಗೆ ಮಾಸಿಕ 20 ಡಾಲರ್ (ಅಂದಾಜು 1,650 ರೂ.) ಶುಲ್ಕದಲ್ಲಿ ದೊರೆಯುತ್ತದೆ. ChatGPT-4 ಇತ್ತೀಚಿನ ವರ್ಶನ್.
GEN -AI ಪರಿಣಾಮ ಬೀರಬಲ್ಲ 10 ಉದ್ಯೋಗಗಳು ಯಾವುವು?
- ಸಾಫ್ಟ್‌ವೇರ್
- ಗ್ರಾಫಿಕ್ ಡಿಸೈನಿಂಗ್ & ವೆಬ್ ಡೆವಲಪ್‌ಮೆಂಟ್
- ಕಸ್ಟಮರ್ ಸರ್ವೀಸ್
- ಕಾನೂನು &ಅಕೌಂಟಿಂಗ್ ಸೇವೆ
- ಹಣಕಾಸು
- ಮಾಧ್ಯಮ
- ಮಾರ್ಕೆಟ್ ರೀಸರ್ಚ್ & ಅನಾಲಿಸಿಸ್
- ಅನುವಾದ
- ಬೋಧನೆ(ಶಿಕ್ಷಣ)
- ಎಚ್ ಆರ್ ನೇಮಕಾತಿ
ಉದ್ಯೋಗಿಗಳು, ಉದ್ಯೋಗಾಕಾಂಕ್ಷಿಗಳು ಏನು ಮಾಡಬಹುದು?
ಎಐ ತಂತ್ರಜ್ಞಾನದ ಬಗ್ಗೆ ಅಪ್ ಡೇಟ್ ಆಗಿರುವುದು ಮುಖ್ಯ. ಎಐ ಸಂಬಂಧಿತ ಉನ್ನತ ಶಿಕ್ಷಣ, ಕೌಶಲ ಪಡೆಯುವುದು ಸೂಕ್ತ. Gen-AI ಟೂಲ್ಸ್ ಬಗ್ಗ ತಿಳಿದುಕೊಳ್ಳುವುದು ಉತ್ತಮ.
ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆಯೇ?
ಎಐ ಟ್ರೈನರ್ಸ್, ಎಐ ಎತಿಕ್ಸ್ ಎಕ್ಸ್‌ಪರ್ಟ್ಸ್, ಎಐ ಸಿಸ್ಟಮ್ ಮ್ಯಾನೇಜರ್ಸ್, ಡೇಟಾ ಅನ್ನೊಶನ್ ಸ್ಪೆಶಲಿಸ್ಟ್, ಹ್ಯೂಮನ್ ಎಐ ಇಂಟರಾಕ್ಷನ್ ಸ್ಪೆಶಲಿಸ್ಟ್, ಎಐ ಸೇಲ್ಸ್ ಸ್ಪೆಶಲಿಸ್ಟ್, ಎಐ ಪ್ರಾಡಕ್ಟ್ ಮ್ಯಾನೇಜರ್ಸ್, ಪ್ರಾಮ್ಟ್ ಎಂಜಿನಿಯರ್ಸ್. ಈ ಹುದ್ದೆಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.
EXPLAINER
ವಿಸ್ತಾರ Explainer: ಮಣಿಪುರದಲ್ಲಿ ಮತ್ತೆ ಹಿಂಸೆಯ ಭುಗಿಲು; ಬುಡಕಟ್ಟು ಜನರ ಕದನಕ್ಕೆ ಇಲ್ಲಿದೆ ಕಾರಣ
ಮಣಿಪುರದಲ್ಲಿ ಎರಡು ಬುಡಕಟ್ಟು ಸಮುದಾಯಗಳ ನಡುವಿನ ಅಪನಂಬಿಕೆ, ಅವಿಶ್ವಾಸ, ಎಸ್‌ಟಿ ಸಮುದಾಯಕ್ಕಾಗಿನ ಹೋರಾಟ, ಅರಣ್ಯದಿಂದ ತೆರವು ಕಾರ್ಯಾಚರಣೆಗಳೆಲ್ಲ ಸೇರಿ ಇಂದು ಭಾರಿ ಹಿಂಸಾಚಾರ, (manipur violence) ಘರ್ಷಣೆಗೆ ಕಾರಣವಾಗಿವೆ.
ಮಣಿಪುರದಲ್ಲಿ ಹಿಂಸಾಚಾರ (manipur violence) ಮತ್ತೆ ಭುಗಿಲೆದ್ದಿದೆ. ಮೂರು ವಾರಗಳ ಹಿಂದೆ ಇಲ್ಲಿ ಹಿಂಸಾಚಾರ ತೀವ್ರಗೊಂಡು, ನಂತರ ತಣ್ಣಗಾಗಿತ್ತು. ಇದೀಗ ರಾಜಧಾನಿ ಇಂಫಾಲದ ಮಾರುಕಟ್ಟೆಯೊಂದರಲ್ಲಿ ಮೈತೆಯಿ ಬುಡಕಟ್ಟಿನವರ ಅಂಗಡಿಗಳ ಮೇಲೆ ಕೆಲವರು ದಾಳಿ ಮಾಡುವುದರೊಂದಿಗೆ ಮತ್ತೆ ಹಿಂಸೆ ತೊಡಗಿದೆ. ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಅರೆ ಸೇನಾಪಡೆಗಳು ಸ್ಥಳಕ್ಕೆ ಧಾವಿಸಿದ್ದು , ಸೆಕ್ಷನ್ 144 ವಿಧಿಸಲಾಗಿದೆ.
ಫೆಬ್ರವರಿಯಲ್ಲಿ ಇಲ್ಲಿ ಶಾಂತಿ ಕದಡಿತ್ತು; ಎರಡು ಬುಡಕಟ್ಟುಗಳು ಕಾದಾಟದಲ್ಲಿ ತೊಡಗಿದ್ದರಿಂದ ಸಾವು- ಗಾಯ- ಹಿಂಸೆ ಸೃಷ್ಟಿಯಾಗಿತ್ತು. 7,500ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿತ್ತು. ಮನೆ- ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. 50ಕ್ಕೂ ಅಧಿಕ ಮಂದಿ ಸತ್ತಿದ್ದರು. ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಮಣಿಪುರ ರಾಜ್ಯಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದವು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರೊಂದಿಗೆ ಸಂಪರ್ಕದಲ್ಲಿದ್ದು ಪರಿಸ್ಥಿತಿಯ ನಿಗಾ ವಹಿಸಿದ್ದರು.
ಆದರೆ ಇದ್ದಕ್ಕಿದ್ದಂತೆ ಮಣಿಪುರ ಹೊತ್ತಿಕೊಂಡು ಉರಿಯಲು ಕಾರಣವೇನು? ಈ ಹಿಂಸೆಯ ಹಿಂದೆ ಏನಿದೆ? ವಿವರವಾಗಿ ನೋಡೋಣ:
ಮೇ ತಿಂಗಳ ಮೊದಲ ವಾರದಲ್ಲಿ ಆಲ್ ಟ್ರೈಬಲ್ ಸ್ಟೂಡೆಂಟ್ ಯೂನಿಯನ್ ಮಣಿಪುರ (ATSUM) ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ಯನ್ನು ಚುರಾಚಂದ್‌ಪುರ ಜಿಲ್ಲೆಯ ಟೋರ್ಬಂಗ್ ಪ್ರದೇಶದಲ್ಲಿ ಆಯೋಜಿಸಿತ್ತು. ಮೈತೈ (Meitei) ಬುಡಕಟ್ಟಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವುದನ್ನು ವಿರೋಧಿಸಿ ಈ ಪ್ರತಿಭಟನೆ ನಡೆದಿತ್ತು. ನಾಗಾಗಳು, ಜೋಮಿಗಳು ಮತ್ತು ಕುಕಿಗಳು ಸೇರಿದಂತೆ ಹಲವು ಬುಡಕಟ್ಟು ಜನಾಂಗದವರು ಒಟ್ಟು ಸೇರಿ ಈ ಮೆರವಣಿಗೆಯನ್ನು ಆಯೋಜಿಸಿದ್ದರು. ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು 40 ಪ್ರತಿಶತ ಈ ಸಮುದಾಯಗಳ ಜನಸಂಖ್ಯೆ ಇದೆ.
ಇದಕ್ಕೂ ಮುನ್ನ, ಎಸ್‌ಟಿ ಸ್ಥಾನಮಾನಕ್ಕಾಗಿ ಮೈತೈ ಬುಡಕಟ್ಟಿನ ಬೇಡಿಕೆಯ ಕುರಿತು ನಾಲ್ಕು ವಾರಗಳಲ್ಲಿ ಕೇಂದ್ರಕ್ಕೆ ಶಿಫಾರಸು ಕಳುಹಿಸುವಂತೆ ರಾಜ್ಯ ಸರ್ಕಾರಕ್ಕೆ ಮಣಿಪುರ ಹೈಕೋರ್ಟ್ ಕಳೆದ ತಿಂಗಳು ಸೂಚಿಸಿತ್ತು. ಮೈತೈಗಳು ರಾಜ್ಯದ ಜನಸಂಖ್ಯೆಯ ಸುಮಾರು 53 ಪ್ರತಿಶತದಷ್ಟು ಇದ್ದಾರೆ. ಆದರೆ ಇವರು ರಾಜ್ಯದ ಕೇವಲ 10 ಪ್ರತಿಶತದಷ್ಟು ಜಾಗದಲ್ಲಿ ಇದ್ದಾರೆ. ರಾಜ್ಯ ವಿಧಾನಸಭೆಯ 2/3ನೇ ಭಾಗವನ್ನು ಮೈತೈಗಳು ಹೊಂದಿದ್ದಾರೆ. ಆದರೆ ಇತರ ಬುಡಕಟ್ಟು ಜನಾಂಗದವರು, ಅರ್ಧಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿದ್ದರೂ, 90 ಪ್ರತಿಶತದಷ್ಟು ಭೂಪ್ರದೇಶದಲ್ಲಿ ಹರಡಿದ್ದಾರೆ.
ಈಗ ಮೈತೈಗಳ ಬೇಡಿಕೆ ಎಂದರೆ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಿಂದ ನಿರಂತರವಾಗಿ ನಡೆಯುತ್ತಿರುವ ದೊಡ್ಡ ಪ್ರಮಾಣದ ಅಕ್ರಮ ವಲಸೆಯಿಂದಾಗಿ ತಮ್ಮ ಅಸ್ತಿತ್ವಕ್ಕೆ, ಬದುಕುವ ಅವಕಾಶಗಳಿಗೆ ಧಕ್ಕೆಯಾಗಿದೆ. ಹೀಗಾಗಿ ST ಸ್ಥಾನಮಾನ ಬೇಕು.
ಕುಕೀ, ನಾಗಾಗಳ ಆತಂಕವೇನು?
ಆದರೆ ಅದನ್ನು ಇತರ ಬುಡಕಟ್ಟುಗಳು ವಿರೋಧಿಸುತ್ತಿವೆ. ಮೈತೈಯಂತಹ ಹೆಚ್ಚು ಮುಂದುವರಿದ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ನೀಡುವುದು ತಪ್ಪು. ಇದರಿಂದ ಇತರ ತಳ ಸಮುದಾಯಗಳ ಉದ್ಯೋಗಾವಕಾಶ ನಷ್ಟವಾಗಲಿದೆ. ಹೆಚ್ಚಿನ ಮೈತೈಗಳು ಮಾತನಾಡುವ ಭಾಷೆಯಾದ ಮಣಿಪುರಿಯನ್ನು ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ಈಗಾಗಲೇ ಸೇರಿಸಲಾಗಿದೆ. ಮೈತೈ ಸಮುದಾಯದ ಕೆಲವು ವಿಭಾಗಗಳನ್ನು ಈಗಾಗಲೇ ಪರಿಶಿಷ್ಟ ಜಾತಿಗಳು (SC) ಅಥವಾ ಇತರೆ ಹಿಂದುಳಿದ ವರ್ಗಗಳ (OBC) ಅಡಿಯಲ್ಲಿ ವರ್ಗೀಕರಿಸಲಾಗಿದೆ ಮತ್ತು ಅದರಿಂದ ಒದಗಿಸಲಾದ ಅವಕಾಶಗಳನ್ನು ಅವು ಪಡೆಯುತ್ತಿವೆ.
ಮಣಿಪುರದ ಕೆಲವು ಶಾಸಕರು ಎಸ್‌ಟಿ ಸ್ಥಾನಮಾನಕ್ಕಾಗಿ ಮೈತೈ ಸಂಘಟನೆಗಳ ಬೇಡಿಕೆಯನ್ನು ಈ ಹಿಂದೆ ಬಹಿರಂಗವಾಗಿ ಅನುಮೋದಿಸಿದ್ದರು. ಇದರಿಂದ ಪರಿಶಿಷ್ಟ ಸಮುದಾಯಗಳು ವ್ಯಗ್ರಗೊಂಡಿದ್ದವು. ರಾಜ್ಯದ ಹೆಚ್ಚಿನ ಭೂಮಿ ಗುಡ್ಡಗಾಡು ಜಿಲ್ಲೆಗಳಿಂದ ಕೂಡಿದೆ. ಇಲ್ಲಿ ಹೆಚ್ಚಾಗಿ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಮುಖ್ಯವಾಗಿ ಕ್ರಿಶ್ಚಿಯನ್ನರಾದ ನಾಗಾಗಳು ಮತ್ತು ಕುಕಿಗಳು.
ಇದೀಗ ಹಲವು ಕಡೆ ಅರಣ್ಯ ಭೂಮಿಗಳಿಂದ ಆದಿವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ. ತಲೆಮಾರುಗಳಿಂದ ಇಲ್ಲಿ ವಾಸಿಸುತ್ತಿರುವ ತಮ್ಮನ್ನು ತೆರವು ಮಾಡಲಾಗುತ್ತಿದೆ ಎಂಬುದು ಕುಕಿಗಳ ಹಾಗೂ ನಾಗಾಗಳ ಸಿಟ್ಟು. ರಾಜ್ಯ ಸರ್ಕಾರ ಒಂದೆಡೆಯಿಂದ ಮೈತೈಗಳನ್ನು ಓಲೈಸುತ್ತಿದೆ; ತಮ್ಮನ್ನು ಹಣಿಸಯುತ್ತಿದೆ ಎಂಬುದು ಇವರ ಆಕ್ರೋಶ.
ಸಂವಿಧಾನದ ಆರ್ಟಿಕಲ್ 371ಸಿ ಗುಡ್ಡಗಾಡು ಪ್ರದೇಶಗಳಿಗೆ ಕೆಲವು ಆಡಳಿತಾತ್ಮಕ ಸ್ವಾಯತ್ತತೆಯನ್ನು ನೀಡುತ್ತದೆ. ಅದನ್ನು ಸರ್ಕಾರ ಉಲ್ಲಂಘಿಸಿದೆ ಎಂದು ಕುಕಿ ನಾಯಕರು ಆರೋಪಿಸಿದ್ದಾರೆ. ಆದರೆ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು, “ಅಕ್ರಮ ನಿವಾಸಿಗಳು ಮೀಸಲು ಅರಣ್ಯಗಳು, ಸಂರಕ್ಷಿತ ಅರಣ್ಯಗಳು ಮತ್ತು ವನ್ಯಜೀವಿ ಅಭಯಾರಣ್ಯಗಳನ್ನು ಅತಿಕ್ರಮಿಸಿ ಅಲ್ಲಿ ಗಾಂಜಾ ಮತ್ತಿತರ ಮಾದಕ ದ್ರವ್ಯ ವ್ಯವಹಾರ ನಡೆಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಮೈತೈಗಳು ಎಸ್‌ಟಿ ಸ್ಥಾನಮಾನ ಬಯಸಿದ್ದಾರೆ. ಆದರೆ ಮುಂದುವರಿದ ಸಮುದಾಯವಾದ ಅವರು ಎಸ್‌ಟಿ ಸ್ಥಾನಮಾನ ಹೊಂದಲು ಹೇಗೆ ಸಾಧ್ಯ? ಅವರು ಎಸ್‌ಟಿ ಸ್ಥಾನಮಾನ ಪಡೆದರೆ ನಮ್ಮ ಎಲ್ಲಾ ಭೂಮಿಯನ್ನು ವಶಪಡಿಸಿಕೊಳ್ಳುತ್ತಾರೆ” ಎಂಬುದು ಆಲ್ ಮಣಿಪುರ ಬುಡಕಟ್ಟು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆಲ್ವಿನ್ ನೆಹ್ಸಿಯಲ್ ಅವರ ಆತಂಕ. ʼʼಕುಕಿಗಳು ಅತ್ಯಂತ ಬಡವರು. ಶಾಲಾ ಶಿಕ್ಷಣ ಇಲ್ಲಿ ಇಲ್ಲದುದರಿಂದ ಜುಮ್ಮಾ ಕೃಷಿಯ ಮೇಲೆ ಬದುಕುಳಿದಿದ್ದಾರೆ. ಇದೀಗ ಮೈತೈಗಳು ಅದರ ಮೇಲೆ ಕಣ್ಣು ಹಾಕಿದ್ದಾರೆʼʼ ಎಂಬುದು ಅವರ ದೂರು. ಇತ್ತೀಚೆಗೆ ಸರ್ಕಾರ ಮೀಸಲು ಅರಣ್ಯ ಪ್ರದೇಶಗಳಿಂದ ಅಕ್ರಮ ವಲಸಿಗರನ್ನು ಹೊರಹಾಕಲು ಆರಂಭಿಸಿದೆ. ಇದರಿಂದ ಕುಕಿಗಳು ವಿಚಲಿತರಾಗಿದ್ದಾರೆ.
ಅಕ್ರಮ ವಲಸೆಯ ಆತಂಕ
ಇತ್ತ ಮೈತೈಗಳ ಹಾಗೂ ಸರ್ಕಾರ ನಡೆಸುತ್ತಿರುವ ಬಿಜೆಪಿಯ ಆತಂಕವೆಂದರೆ ಅಕ್ರಮ ವಲಸೆಯದ್ದು. ಈ ವರ್ಷದ ಮಾರ್ಚ್‌ನಲ್ಲಿ, ಹಲವಾರು ಮಣಿಪುರಿ ಸಂಘಟನೆಗಳು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದವು. 1951 ಅನ್ನು ಮೂಲ ವರ್ಷವಾಗಿಟ್ಟುಕೊಂಡು ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಅನುಷ್ಠಾನಿಸಲು ಒತ್ತಾಯಿಸಿದವು.
ಮಣಿಪುರದಲ್ಲಿ ಹಠಾತ್ ಜನಸಂಖ್ಯೆಯ ಏರಿಕೆಯಾಗಿದೆ. ರಾಷ್ಟ್ರೀಯ ಸರಾಸರಿ 17.64 ಪ್ರತಿಶತಕ್ಕೆ ಬದಲಾಗಿ ಶೇಕಡಾ 24.5ರ ಬೆಳವಣಿಗೆಯ ದರ ಕಂಡುಬಂದಿದೆ. ಇದಕ್ಕೆ ಕಾರಣ ಮಣಿಪುರದ ಗುಡ್ಡಗಾಡು ಪ್ರದೇಶಗಳನ್ನು ಮ್ಯಾನ್ಮಾರ್ ಹಾಗೂ ಬಾಂಗ್ಲಾದವರು ಬಂದು ಸೇರಿಕೊಳ್ಳುತ್ತಿರುವುದು. ಎನ್‌ಆರ್‌ಸಿಯಿಂದ ಮಣಿಪುರದ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಬಹುದು ಎಂದು ಮೈತೈ ಸಂಸ್ಥೆಗಳು ಆಗ್ರಹಿಸಿವೆ.
“ಕುಕಿಗಳು ಮ್ಯಾನ್ಮಾರ್ ಗಡಿಯಿಂದ ಅಕ್ರಮವಾಗಿ ವಲಸೆ ಬರುತ್ತಿದ್ದಾರೆ ಮತ್ತು ಮಣಿಪುರದಲ್ಲಿ ಅರಣ್ಯ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ. ಇತ್ತೀಚೆಗೆ ಮಣಿಪುರ ಸರ್ಕಾರ ಮೀಸಲು ಅರಣ್ಯ ಪ್ರದೇಶಗಳಲ್ಲಿನ ಅಕ್ರಮ ವಸಾಹತುಗಳನ್ನು ತೆರವುಗೊಳಿಸಲು ಕಾರ್ಯಾಚರಣೆ ಪ್ರಾರಂಭಿಸಿತು. ಕುಕೀಗಳು ಪ್ರತಿಭಟಿಸಿದರು. ಮೈತೈಗಳನ್ನೂ ವಿರೋಧಿಸುತ್ತಿದ್ದಾರೆʼʼ ಎಂದು ಆಲ್ ಮೈತೈ ಕೌನ್ಸಿಲ್ ಅಧ್ಯಕ್ಷರು ಹೇಳುತ್ತಾರೆ.
ತೆರವು ಕಾರ್ಯಾಚರಣೆ ಮತ್ತು ಮೈತೈಗಳ ಎಸ್‌ಟಿ ಸ್ಥಾನಮಾನದ ಬೇಡಿಕೆ ತಮ್ಮನ್ನು ನಮ್ಮದೇ ಭೂಮಿಯಿಂದ ಓಡಿಸುವ ಕಾರಸ್ಥಾನ ಎಂದು ಕುಕಿಗಳು ಬಲವಾಗಿ ನಂಬಿದ್ದಾರೆ.
ರ್ಯಾಲಿಯ ಬಳಿಕ ಏನಾಯಿತು?
ಮೇ ಮೊದಲ ವಾರ ನಡೆದ ರ್ಯಾಲಿಯಲ್ಲಿ ಸಾವಿರಾರು ನಾಗಾ ಹಾಗೂ ಕುಕೀ ಬುಡಕಟ್ಟುಗಳ ಚಳವಳಿಗಾರರು ಭಾಗವಹಿಸಿದ್ದರು. ಈ ಮೆರವಣಿಗೆಯ ವೇಳೆ, ಶಸ್ತ್ರಸಜ್ಜಿತ ಗುಂಪೊಂದು ಮೈತೈ ಸಮುದಾಯದ ಜನರ ಮೇಲೆ ದಾಳಿ ನಡೆಸಿತು. ಪ್ರತಿಸ್ಪರ್ಧಿ ಸಮುದಾಯಗಳ ನಡುವೆ ಹಿಂಸಾತ್ಮಕ ಘರ್ಷಣೆ ನಡೆಯಿತು. ಇದು ಕಣಿವೆ ಜಿಲ್ಲೆಯ ಮೂಲೆ ಮೂಲೆಗೂ ಹಬ್ಬಿತು. ನಂತರ ಇತರ ಜಿಲ್ಲೆಗಳಲ್ಲೂ ಇದಕ್ಕೆ ಪ್ರತೀಕಾರದ ದಾಳಿಗಳು ನಡೆದವು. ಇದು ರಾಜ್ಯದಾದ್ಯಂತ ಹಿಂಸಾಚಾರವನ್ನು ಉಲ್ಬಣಗೊಳಿಸಿತು.
ಟೋರ್ಬಂಗ್‌ನಲ್ಲಿ ಹೆಚ್ಚು ಗಲಭೆ ನಡೆದಿದೆ. ಮೂರು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಗಲಭೆಯಲ್ಲಿ ಅನೇಕ ಅಂಗಡಿಗಳು ಮತ್ತು ಮನೆಗಳನ್ನು ಧ್ವಂಸಗೊಳಿಸಲಾಯಿತು ಮತ್ತು ಸುಟ್ಟು ಹಾಕಲಾಯಿತು. ನೂರಾರು ಜನರು ಗಾಯಗೊಂಡರು. ಬಂಗ್‌ಮುಯಲ್, ಸಿಂಗ್ನಾತ್, ಮುಅಲ್ಲಮ್ ಮತ್ತು ಮಾತಾ ಮುಲ್ತಮ್‌ನಂತಹ ಸ್ಥಳಗಳಲ್ಲಿ ಅರಣ್ಯ ಇಲಾಖೆ ಕಚೇರಿಗಳಿಗೆ ಬೆಂಕಿ ಹಚ್ಚಲಾಯಿತು.
ದಾಳಿಗಳು ಮತ್ತು ಪ್ರತಿದಾಳಿಗಳು ರಾತ್ರಿಯಿಡೀ ಮುಂದುವರಿದವು. ಎರಡೂ ಕಡೆಯ ಬುಡಕಟ್ಟು ಜನಾಂಗದವರು ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟರು. ರಾಜ್ಯದ ಕೆಲವು ಭಾಗಗಳಲ್ಲಿ ಕೆಲವು ಮನೆಗಳಿಗೆ ಬೆಂಕಿ ಹಚ್ಚಿದ ಚಿತ್ರಗಳನ್ನು ಪ್ರಸಾರ ಮಾಡಲಾಗುತ್ತಿದೆ. ಪಶ್ಚಿಮ ಇಂಫಾಲ್, ಕಾಕ್ಚಿಂಗ್, ತೌಬಲ್, ಜಿರಿಬಾಮ್, ಬಿಷ್ಣುಪುರ್, ಚುರಾಚಂದ್‌ಪುರ, ಕಾಂಗ್‌ಪೋಕ್ಪಿ ಮತ್ತು ತೆಂಗ್‌ನೌಪಾಲ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದೆ.
ಇಂಫಾಲ್ ಕಣಿವೆಯಲ್ಲಿ ಕುಕಿ ಬುಡಕಟ್ಟು ಜನಾಂಗದ ಹಲವರ ಮನೆಗಳನ್ನು ದರೋಡೆ ಮಾಡಲಾಗಿದೆ. ಅವರನ್ನು ಮನೆ ಬಿಟ್ಟು ಓಡಿಸಲಾಗಿದೆ. ಇಂಫಾಲ್ ವೆಸ್ಟ್‌ನಲ್ಲಿರುವ ಕುಕಿ ಪ್ರಾಬಲ್ಯದ ಲಾಂಗೋಲ್ ಪ್ರದೇಶದ 500ಕ್ಕೂ ಹೆಚ್ಚು ನಿವಾಸಿಗಳು ತಮ್ಮ ಮನೆಗಳನ್ನು ತೊರೆದಿದ್ದಾರೆ. ಪ್ರಸ್ತುತ ಲ್ಯಾಂಫೆಲ್‌ಪಟ್‌ನಲ್ಲಿರುವ ಸಿಆರ್‌ಪಿಎಫ್ ಶಿಬಿರದಲ್ಲಿ ತಂಗಿದ್ದಾರೆ. ಇಂಫಾಲ್ ಕಣಿವೆಯಲ್ಲಿ ಕೆಲವು ಪೂಜಾ ಸ್ಥಳಗಳಿಗೆ ಬೆಂಕಿ ಹಚ್ಚಲಾಗಿದೆ.
ಬುಡಕಟ್ಟು ಪ್ರಾಬಲ್ಯದ ಚುರಾಚಂದ್‌ಪುರ ಜಿಲ್ಲೆಯ ಸುಮಾರು 1,000 ಮೈತೈಗಳು ಕ್ವಾಕ್ಟಾ ಮತ್ತು ಮೊಯಿರಾಂಗ್ ಸೇರಿದಂತೆ ಬಿಷ್ಣುಪುರ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಓಡಿಹೋಗಿದ್ದಾರೆ. ಕಾಂಗ್‌ಪೋಕ್ಪಿ ಜಿಲ್ಲೆಯ ಮೋಟ್‌ಬಂಗ್ ಪ್ರದೇಶದಲ್ಲಿ ಇಪ್ಪತ್ತಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೆಂಗ್ನೌಪಾಲ್ ಜಿಲ್ಲೆಯ ಮ್ಯಾನ್ಮಾರ್ ಗಡಿ ಬಳಿಯ ಮೊರೆಃನಿಂದಲೂ ಹಿಂಸಾಚಾರ ವರದಿಯಾಗಿದೆ.
“ಪರಿಸ್ಥಿತಿ ಉದ್ವಿಗ್ನವಾಗಿದೆ. ಕೋಮು ಘರ್ಷಣೆ ತಡೆಯಲು ನಾವು ಸೈನ್ಯ ಮತ್ತು ಅರೆಸೈನಿಕ ಪಡೆಗಳೊಂದಿಗೆ ಯುದ್ಧದೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸಮುದಾಯದ ಮುಖಂಡರನ್ನು ಸಂವಾದದಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ” ಎಂದು ಈ ಪ್ರದೇಶದ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದರು.
ಇದನ್ನೂ ಓದಿ: ಮಣಿಪುರ ಸಿಎಂ ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು; ಉದ್ವಿಗ್ನತೆ
ಸೈನಿಕ ಪಡೆಗಳು ಮತ್ತು ಅರೆಸೇನಾ ಪಡೆಗಳು, ಅಸ್ಸಾಂ ರೈಫಲ್ಸ್ ದಳಗಳು ವಿವಿಧ ಸಮುದಾಯಗಳ 7,500ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿ, ಸೈನಿಕರ ಶಿಬಿರಗಳು ಮತ್ತು ಸರ್ಕಾರಿ ಆವರಣದಲ್ಲಿ ಅವರಿಗೆ ಆಶ್ರಯ ನೀಡಿದವು. ಗುರುವಾರ ಭಾರತೀಯ ಸೇನೆಯ ಯೋಧರು ಜಿಲ್ಲೆಯಲ್ಲಿ ಪಥಸಂಚಲನ, ಧ್ವಜ ಮೆರವಣಿಗೆ ನಡೆಸಿದರು.
ಮುಖ್ಯಮಂತ್ರಿ ಬಿರೇನ್ ಸಿಂಗ್ ಶಾಂತಿ ಕಾಪಾಡಲು ಜನರನ್ನು ಒತ್ತಾಯಿಸಿದ್ದಾರೆ. ಹಿಂಸಾಚಾರದಲ್ಲಿ ತೊಡಗಿರುವ ವ್ಯಕ್ತಿಗಳು ಮತ್ತು ಗುಂಪುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಪಡೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ. ನೆರೆಯ ಮಿಜೋರಾಂನ ಮುಖ್ಯಮಂತ್ರಿ ಝೋರಾಂತಂಗ ಅವರು ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಯಾಕೆಂದರೆ ನಾಗಾಗಳು, ಕುಕೀಗಳು ಹಾಗೂ ಮೈತೈಗಳೂ ಅಲ್ಲೂ ಇದ್ದಾರೆ. ಈ ಹಿಂಸಾಚಾರ ಅಲ್ಲಿಗೆ ಹಬ್ಬದಿರಲಿ ಎಂಬ ಆಶಯ ಅವರದು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರೊಂದಿಗೆ ಮಾತನಾಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ.
ʼಬೀರೇನ್ ಸಿಂಗ್ ಸರ್ಕಾರ ದ್ವೇಷದ ರಾಜಕಾರಣ ನಡೆಸುತ್ತಿದೆ’ ಎಂದು ಕಾಂಗ್ರೆಸ್ ಆರೋಪಿಸಿದೆ. ʼಬಿಜೆಪಿ ತನ್ನ ದ್ವೇಷದ ರಾಜಕಾರಣದಿಂದ ಸಮುದಾಯಗಳ ನಡುವೆ ಬಿರುಕುಗಳನ್ನು ಸೃಷ್ಟಿಸಿರುವುದರಿಂದ ಮಣಿಪುರ ಹೊತ್ತಿ ಉರಿಯುತ್ತಿದೆʼ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಇದನ್ನೂ ಓದಿ: ಮಣಿಪುರದಲ್ಲಿ ತೀವ್ರ ಹಿಂಸಾಚಾರ; ರಕ್ಷಿಸಿ ಎಂದು ಟ್ವೀಟ್ ಮಾಡಿ, ಪ್ರಧಾನಿ ಮೋದಿಯನ್ನು ಟ್ಯಾಗ್ ಮಾಡಿದ ಮೇರಿ ಕೋಮ್
-
ಕರ್ನಾಟಕ22 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ22 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕಿರುತೆರೆ21 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ16 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕ್ರಿಕೆಟ್12 hours ago
World Cup 2023 : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ
-
ದೇಶ5 hours ago
New Parliament Building: ಇಂದು ಹೊಸ ಸಂಸತ್ ಭವನ ಉದ್ಘಾಟನೆ; ಹೇಗೆ ನಡೆಯಲಿದೆ ಕಾರ್ಯಕ್ರಮ?
-
ಕರ್ನಾಟಕ13 hours ago
Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ
-
EXPLAINER3 hours ago
ವಿಸ್ತಾರ Explainer: ಹೊಸ ಸಂಸತ್ ಭವನದಲ್ಲಿ ಸ್ಥಾಪಿತಗೊಂಡ ತಮಿಳುನಾಡಿನ ಚಿನ್ನದ ಸೆಂಗೋಲ್; ಏನಿದರ ಮಹತ್ವ?