Site icon Vistara News

ಏರ್‌ ಏಷ್ಯಾವನ್ನೂ ಖರೀದಿಸಲು ಮುಂದಾದ TATA: ಪೂರ್ಣ ಮಾಲೀಕತ್ವ ಕುರಿತು ಪ್ರಸ್ತಾಪ

ಬೆಂಗಳೂರು: ಸ್ವಾತಂತ್ರ್ಯದ ನಂತರ ತನ್ನ ಕೈತಪ್ಪಿದ್ದ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು 70 ವರ್ಷಸದ ನಂತರ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ ಟಾಟಾ ಸಮೂಹ ಇದೀಗ ಮತ್ತೊಂದು ವಿಮಾನಯಾನ ಸಂಸ್ಥೆ ಏರ್‌ ಏಷ್ಯಾದ ಸಂಪೂರ್ಣ ಮಾಲೀಕತ್ವ ಹೊಂದಲು ಮುಂದಾಗಿದೆ.

ಆಟೊಮೊಬೈಲ್‌ನಿಂದ ಸ್ಟೀಲ್‌ವರೆಗೆ ಅನೇಕ ಉದ್ಯಮಗಳನ್ನು ಹೊಂದಿರುವ ಟಾಟಾ ಸಮೂಹ ಇದೀಗ ಭಾರತೀಯ ಸ್ಪರ್ಧಾ ಆಯೋಗಕ್ಕೆ ( Competition Commission of India) ಈ ಕುರಿತು ಅರ್ಜಿ ಸಲ್ಲಿಸಿದೆ.

ಕಡಿಮೆ ದರದಲ್ಲಿ ವಿಮಾನಯಾನ ಸೌಲಭ್ಯ ಒದಗಿಸುವ ಹೆಗ್ಗಳಿಕೆಯನ್ನು ಏರ್‌ ಏಷ್ಯಾ ಹೊಂದಿದೆ. ಮಲೇಷ್ಯಾ ಮೂಲದ ಏರ್‌ ಏಷ್ಯಾ, ಭಾರತದಲ್ಲಿ ಏರ್‌ ಏಷ್ಯಾ ಇಂಡಿಯಾ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತದೆ. 2013ರಲ್ಲಿ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಿದ ಸಂಸ್ಥೆಯಲ್ಲಿ ಏರ್‌ ಏಷ್ಯಾ 49%, ಉದ್ಯಮಿ ಅರುಣ್‌ ಭಾಟಿಯಾ 21% ಹಾಗೂ ಟಾಟಾ ಸನ್ಸ್‌ 30% ಪಾಲು ಹೊಂದಿದ್ದವು. ಏರ್‌ ಇಂಡಿಯಾವನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆದ ನಂತರ ವಿನಾನಯಾನ ಕ್ಷೇತ್ರದಿಂದ ಟಾಟಾ ಸನ್ಸ್‌ 60 ವರ್ಷ ಹೊರಗಿತ್ತು. ಆರು ದಶಕದ ನಂತರ ಈ ಕ್ಷೇತ್ರಕ್ಕೆ ಟಾಟಾ ಮತ್ತೆ ಪಾದಾಪರ್ಪಣೆ ಮಾಡಿತ್ತು.

ಪ್ರತಿ ವರ್ಷ ನಷ್ಟಕ್ಕೆ ಸಿಲುಕಿ ಕೇಂದ್ರ ಸರ್ಕಾರಕ್ಕೂ ಭಾರೀ ಹೊರೆಯಾಗಿದ್ದ ಏರ್‌ ಇಂಡಿಯಾವನ್ನು ಇತ್ತೀಚೆಗಷ್ಟೆ $240 ಕೋಟಿ ನೀಡಿ ಖರೀದಿಸಿತ್ತು. ಸದ್ಯ ಏರ್‌ ಏಷ್ಯಾದಲ್ಲಿ ಟಾಟಾ ಸನ್ಸ್‌ 83.67% ಪಾಲು ಹೊಂದಿದೆ. ಏರ್‌ ಏಷ್ಯಾ ಇಂಡಿಯಾ ಲಿಮಿಟೆಡ್‌ ಪಾಲು 16.33% ಪಾಲು ಹೊಂದಿದೆ. ತಮ್ಮದೇ ವಿಮಾನಯಾನ ಸಂಸ್ಥೆಯನ್ನು ಹೊಂದಿರುವ ಟಾಟಾ, ಮತ್ತೊಂದು ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದುವುದು ತಾರ್ಕಿಕವಾಗಿ ಸರಿ ಕಾಣುವುದಿಲ್ಲ ಎಂಬ ಚರ್ಚೆ ನಡೆದಿತ್ತು. ಇದೀಗ ಸ್ಪರ್ಧಾ ಆಯೋಗಕ್ಕೆ ಅರ್ಜಿ ಸಲ್ಲಿಸಿರುವ ಟಾಟಾ, ಏರ್‌ ಏಷ್ಯಾದ ಸಂಪೂರ್ಣ ಮಾಲೀಕತ್ವವನ್ನು ಹೊಂದುವುದರಿಂದ ಭಾರತದಲ್ಲಿ ಸ್ಪರ್ಧಾ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ತಿಳಿಸಿದೆ.ʼಖಾಸಗಿ ಸಂಸ್ಥೆಗಳು ಮತ್ತೊಂದು ಸಂಸ್ಥೆಯನ್ನು ನಾಶ ಮಾಡಲು ಅನಾರೋಗ್ಯಕರ ಸ್ಪರ್ಧೆಗಳು, ಉತ್ಪಾದನಾ ವೆಚ್ಚಕ್ಕಿಂತಲೂ ತೀರಾ ಅಗ್ಗದಲ್ಲಿ ಉತ್ಪನ್ನಗಳನ್ನು ಮಾರುವುದು ಮುಂತಾದ ನಕಾರಾತ್ಮಕ ತಂತ್ರಗಳನ್ನು ಬಳಸುವುದನ್ನು ತಡೆಯಲು ಭಾರತೀಯ ಸ್ಪರ್ಧಾ ಆಯೋಗ ಕಾರ್ಯನಿರ್ವಹಿಸುತ್ತದೆ.

ಏರ್‌ ಇಂಡಿಯಾ ಅತ್ಯಂತ ಹೆಚ್ಚು ರನ್‌ ವೇ ಪರವಾನಗಿಯನ್ನು ಹೊಂದಿದೆಯಾದರೂ ಈಗಾಗಲೆ ಹಳೆಯದಾಗಿರುವ ವಿಮಾನಗಳನ್ನು ಬದಲಾಯಿಸುವ ಸವಾಲು ಎದುರಿಗಿದೆ.

ಇದನ್ನೂ ಓದಿ | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಬೇಡ ಎಂದ BSY: ಮುಖ್ಯಮಂತ್ರಿ ಬೊಮ್ಮಾಯಿಗೆ ಪತ್ರ

Exit mobile version