Site icon Vistara News

US Sanction | ರಷ್ಯಾ ತೈಲ ಖರೀದಿಗೆ ಅಡ್ಡಿಪಡಿಸಲು ಅಮೆರಿಕದ ನಿರ್ಬಂಧ ತಂತ್ರ, ಭಾರತಕ್ಕೆ ಸವಾಲು

US president Joe Biden

ವಾಷಿಂಗ್ಟನ್:‌ ಅಮೆರಿಕ ರಷ್ಯಾದ ತೈಲ ಖರೀದಿಗೆ ಮಿತಿ ವಿಧಿಸಲು ಎರಡನೇ ಹಂತದಲ್ಲಿ ನಿರ್ಬಂಧಗಳ ಜಾರಿಗೆ ಪರಿಶೀಲಿಸುತ್ತಿದೆ. ಆದರೆ ಇದರಿಂದ ಭಾರತ, ಚೀನಾದಂಥ (US Sanction) ತೈಲ ಆಮದುದಾರ ರಾಷ್ಟ್ರಗಳಿಗೆ ಕುತ್ತಾಗುವ ಸಾಧ್ಯತೆ ಇದೆ.

ಅಮೆರಿಕದ ಉಭಯ ಪಕ್ಷಗಳ ಸಂಸದರ ನಿಯೋಗ ಬೈಡೆನ್‌ ಸರ್ಕಾರವನ್ನು ರಷ್ಯಾ ತೈಲ ದರಗಳ ಮೇಲೆ ಮಿತಿ ವಿಧಿಸಲು ಎರಡನೇ ಹಂತದ ನಿರ್ಬಂಧಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿವೆ.

ಅಮೆರಿಕದ ಡೆಮಾಕ್ರಾಟ್‌ ಸಂಸದ ಕ್ರಿಸ್‌ ವ್ಯಾನ್‌ ಹೊಲೆನ್‌, ರಿಪಬ್ಲಿಕನ್‌ ಪಕ್ಷದ ಸಂಸದ ಪ್ಯಾಟ್‌ ಟೂಮಿ ರಷ್ಯಾ ವಿರುದ್ಧ ಎರಡನೇ ಸಲ ನಿರ್ಬಂಧ ಹೇರುವ ಕಾನೂನು ಪ್ರಕ್ರಿಯೆ ಬಗ್ಗೆ ಕಾರ್ಯಪ್ರವೃತ್ತರಾಗಿದ್ದಾರೆ.

ಉಕ್ರೇನ್‌ ವಿರುದ್ಧ ಸಂಘರ್ಷ ನಿರತ ರಷ್ಯಾದ ಆರ್ಥಿಕ ಬಲವನ್ನು ಕುಂದಿಸಲು ಅದರ ತೈಲ ವಹಿವಾಟನ್ನು ಕುಗ್ಗಿಸಬೇಕು. ಹೀಗಾಗಿ ರಷ್ಯಾ ತೈಲ ಮಾರಾಟ ಕಡಿಮೆಯಾಗುವಂತೆ ನಿರ್ಬಂಧಗಳ ಅಸ್ತ್ರಗಳನ್ನು ಬಳಸಲು ಅಮೆರಿಕ ಸಜ್ಜಾಗುತ್ತಿದೆ. ವಿಶ್ವದ ಎಲ್ಲರೂ ರಷ್ಯಾ ವಿರುದ್ಧದ ನಿರ್ಬಂಧಗಳನ್ನು ಪಾಲಿಸಿದರೆ ಪರಿಣಾಮಕಾರಿಯಾಗಲಿದೆ ಎಂದು ಅಮೆರಿಕ ವಾದಿಸಿದೆ. ಒಂದು ವೇಳೆ ಎರಡನೇ ಹಂತದಲ್ಲಿ ಅಮೆರಿಕ ಕಠಿಣ ನಿರ್ಬಂಧಗಳನ್ನು ಹೇರಿದರೆ ರಷ್ಯಾದಿಂದ ಡಿಸ್ಕೌಂಟ್‌ ದರದಲ್ಲಿ ತೈಲ ಆಮದು ಮಾಡುತ್ತಿರುವ ಭಾರತ ಮತ್ತು ಚೀನಾಕ್ಕೆ ಹೊಸ ಸವಾಲು ಎದುರಾಗಲಿದೆ.

ಪ್ರಸ್ತಾಪದಲ್ಲಿ ಏನಿದೆ? ಅಮೆರಿಕದ ಇಬ್ಬರು ಸಂಸದರು ಮಾಡಿರುವ ಪ್ರಸ್ತಾಪದ ಪ್ರಕಾರ, ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು 2023ರ ಮಾರ್ಚ್‌ ಒಳಗಾಗಿ ರಷ್ಯಾದಿಂದ ಖರೀದಿಸುವ ತೈಲದ ದರದ ಮೇಲೆ ಮಿತಿ ವಿಧಿಸಬೇಕು. ಮೂರು ವರ್ಷದ ಒಳಗೆ ರಷ್ಯಾ ಅಧ್ಯಕ್ಷ ಪುಟಿನ್‌ಗೆ ತೈಲ ಮಾರಾಟದಲ್ಲಿ ಉತ್ಪಾದನೆಯ ವೆಚ್ಚಕ್ಕೆ ಮಾತ್ರ ಸಾಕಾಗುವಷ್ಟು ಆದಾಯ ಸಿಗಬೇಕು. ಯಾವುದೇ ಲಾಭ ಸಿಗುವಂತಾಗಬಾರದು ಎಂದು ಸಂಸದರು ಪ್ರಸ್ತಾಪಿಸಿದ್ದಾರೆ. ರಷ್ಯಾದಿಂದ ತೈಲ ಆಮದು ಮಾಡುವ ರಾಷ್ಟ್ರಗಳನ್ನು ದಂಡಿಸುವ ಪ್ರಸ್ತಾಪವನ್ನೂ ಮಾಡಲಾಗಿದೆ.

ಒಂದು ವೇಳೆ ಅಮೆರಿಕ ನಿರ್ಬಂಧ ಸವಾಲಾಗಿ ಪರಿಣಮಿಸಿದರೆ ಭಾರತ, ಚೀನಾ ಮತ್ತು ಇತರ ದೇಶಗಳು ಪ್ರತಿ ತಂತ್ರವನ್ನು ಮಾಡುವ ನಿರೀಕ್ಷೆ ಇದೆ.

Exit mobile version