ಹಲವು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಆಮದು (gadgets import) ಮೇಲೆ ಕೇಂದ್ರ ಸರ್ಕಾರ ಗುರುವಾರ ನಿರ್ಬಂಧಗಳನ್ನು (Ban On Import Of Laptops) ಹೇರಿದೆ. ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಆಲ್-ಇನ್-ಒನ್ ಪರ್ಸನಲ್ ಕಂಪ್ಯೂಟರ್‌ಗಳು, ಅಲ್ಟ್ರಾ-ಸ್ಮಾಲ್ ಕಂಪ್ಯೂಟರ್‌ಗಳು, ಸರ್ವರ್‌ಗಳು ಇದರಲ್ಲಿ ಸೇರುವೆ. ಇದು ಯಾಕೆ, ಇದರಿಂದ ಏನು ಪರಿಣಾಮವಾಗಲಿದೆ ನೋಡೋಣ.
ಇಲ್ಲಿ ನಿಷೇಧ ಎಂದರೆ ಪೂರ್ತಿ ನಿಷೇಧವಲ್ಲ. ಭಾರತಕ್ಕೆ ಲ್ಯಾಪ್‌ಟಾಪ್‌ಗಳು ಮತ್ತು ಕಂಪ್ಯೂಟರ್‌ಗಳನ್ನು ಹೊರಗಿನಿಂದ ತರಿಸಿ ಮಾರಾಟ ಮಾಡಲು ಮುಂದಾಗುವ ಕಂಪನಿ ಈಗ ತಮ್ಮ ಆಮದಿಗೆ ಸರ್ಕಾರದಿಂದ ಪರವಾನಗಿ ಪಡೆಯಬೇಕಾಗುತ್ತದೆ. ಈ ಸಂಬಂಧ ವಿದೇಶಿ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್‌ಟಿ) ಅಧಿಸೂಚನೆ ಹೊರಡಿಸಿದೆ. ಏಳು ಬಗೆಯ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಮೇಲೆ HSN ಕೋಡ್ 8471 ಅಡಿಯಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ.
HSN ಕೋಡ್ 8471 ಎಂದರೇನು?
ಹಾರ್ಮೋನೈಸ್ಡ್ ಸಿಸ್ಟಮ್ ಆಫ್ ನಾಮೆನ್‌ಕ್ಲೇಚರ್ (HSN) ಕೋಡ್ ಎನ್ನುವುದು ತೆರಿಗೆ ಉದ್ದೇಶಗಳಿಗಾಗಿ ಉತ್ಪನ್ನಗಳನ್ನು ಗುರುತಿಸಲು ಬಳಸುವ ಕಾನೂನಾತ್ಮಕ ವರ್ಗೀಕರಣ ವ್ಯವಸ್ಥೆ. ಡೇಟಾ ಸಂಸ್ಕರಣಾ ಯಂತ್ರಗಳನ್ನು HSN ಕೋಡ್ 8471 ಅಡಿಯಲ್ಲಿ ವರ್ಗೀಕರಿಸಲಾಗಿದೆ. ಡೇಟಾ ಸಂಸ್ಕರಣಾ ಕಾರ್ಯಗಳನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾದ ಸಾಧನಗಳನ್ನು ಗುರುತಿಸಲು ಈ ಕೋಡ್ ಅನ್ನು ಬಳಸಲಾಗುತ್ತದೆ.
ಏಕೆ ಈ ನಿರ್ಬಂಧ?
ಮೇಕ್ ಇನ್ ಇಂಡಿಯಾ (make in India) ಉಪಕ್ರಮದಡಿ ಕೇಂದ್ರ ಸರ್ಕಾರ ದೇಶದೊಳಗೇ ಎಲೆಕ್ಟ್ರಾನಿಕ್ ಮುಂತಾದ ಉತ್ಪನ್ನಗಳ ಉತ್ಪಾದನೆಯನ್ನು ಉತ್ತೇಜಿಸುತ್ತಿದೆ. ಇದರಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಹಾರ್ಡ್‌ವೇರ್‌ಗಳೂ ಸೇರಿವೆ. ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯಡಿಯಲ್ಲಿ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಈ ಕ್ರಮದ ಹಿನ್ನೆಲೆಯಲ್ಲಿಯೇ, ಆಮದು ಉತ್ಪನ್ನಗಳನ್ನು ಕಟ್ಟುನಿಟ್ಟಿನ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಈ ಉತ್ಪನ್ನಗಳ ವರ್ಗದಲ್ಲಿ ಪ್ರಸ್ತುತ ಗ್ಯಾಜೆಟ್‌ಗಳಿವೆ. ಇವು ಹೆಚ್ಚಾಗಿ ಚೀನಾ (china products) ಮತ್ತು ಕೊರಿಯಾದಂತಹ ದೇಶಗಳಿಂದ ಬರುತ್ತಿವೆ. ಈ ಸರಕುಗಳ ಆಮದನ್ನು ಮೊಟಕುಗೊಳಿಸುವುದು ಮುಖ್ಯ ಉದ್ದೇಶವಾಗಿದೆ.
ಇದರ ಜತೆಗೆ ಇನ್ನೂ ಕೆಲವು ಕಾರಣಗಳಿವೆ. ನಮ್ಮ ದೇಶದ ನಾಗರಿಕರ ಭದ್ರತೆ ಇನ್ನೊಂದು ಕಾರಣ. ದೇಶದ ಪ್ರಜೆಗಳ ಸಂಪೂರ್ಣ ಸುರಕ್ಷತೆ, ಖಾಸಗಿತನದ ರಕ್ಷಣೆಯ (privacy protection) ಖಾತರಿಗಾಗಿ ವಿದೇಶಿ ಗ್ಯಾಜೆಟ್‌ಗಳ ಮೇಲೆ ಕಣ್ಣಿಡಲಾಗುತ್ತಿದೆ. “ಕೆಲವು ಹಾರ್ಡ್‌ವೇರ್‌ಗಳು ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರಬಹುದು. ದೇಶದ ಸೂಕ್ಷ್ಮ ಮತ್ತು ವೈಯಕ್ತಿಕ ಡೇಟಾದ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಹುದು. ನಾವು ಅಂತಹ ಕೆಲವು ಸರಕುಗಳ ಮೇಲೆ ನಿಗಾ ಇಟ್ಟಿದ್ದೇವೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿನಾಯಿತಿಗಳಿವೆಯೇ?
ವಿದೇಶಿ ವ್ಯಾಪಾರ ನೀತಿಯ (ಎಫ್‌ಟಿಪಿ) ಪರಿವರ್ತನೆಯ ನಿಬಂಧನೆಗಳ ಅಡಿಯಲ್ಲಿ, ಆಗಸ್ಟ್ 3ರ ಮೊದಲು ಲೇಡಿಂಗ್ ಮತ್ತು ಕ್ರೆಡಿಟ್ ಪತ್ರವನ್ನು ನೀಡಿದ್ದರೆ, ಸರಕುಗಳನ್ನು ಆಮದು ಮಾಡಿಕೊಳ್ಳಬಹುದು. ಆಮದುದಾರರು ಆಗಸ್ಟ್ 4ರಿಂದ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು. ಪರವಾನಗಿ ಪಡೆಯಲು ವ್ಯಾಪಾರಿ ನಿಯಮಿತ ಆಮದುದಾರರಾಗಿರಬೇಕು.
ಒಂದು ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಆಲ್-ಇನ್-ಒನ್ ಪರ್ಸನಲ್ ಕಂಪ್ಯೂಟರ್ ಅಥವಾ ಅಲ್ಟ್ರಾ-ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಕಂಪ್ಯೂಟರ್‌ನ ಆಮದಿಗೆ ಸಹ ವಿನಾಯಿತಿ ನೀಡಲಾಗಿದೆ, ಇ-ಕಾಮರ್ಸ್ ಪೋರ್ಟಲ್‌ಗಳಿಂದ ಪೋಸ್ಟ್ ಅಥವಾ ಕೊರಿಯರ್ ಮೂಲಕ ಖರೀದಿಸುವುದಕ್ಕೂ ವಿನಾಯಿತಿ ಇದೆ. ಆದರೂ ಇವುಗಳಿಗೆ ಸುಂಕ ಪಾವತಿ ಮಾಡಬೇಕು.
R&D, ಪರೀಕ್ಷೆ, ಬೆಂಚ್‌ಮಾರ್ಕಿಂಗ್ ಮತ್ತು ಮೌಲ್ಯಮಾಪನ, ರಿಪೇರಿ, ರಿಟರ್ನ್ ಮತ್ತು ಉತ್ಪನ್ನ ಅಭಿವೃದ್ಧಿ ಉದ್ದೇಶಗಳಿಗಾಗಿ 20 ಐಟಂಗಳವರೆಗೆ ಆಮದು ಮಾಡಿಕೊಳ್ಳಲು ಪರವಾನಗಿ ಪಡೆಯುವುದರಿಂದ ವಿನಾಯಿತಿ ಇದೆ. ಬ್ಯಾಗೇಜ್ ನಿಯಮಗಳ ಅಡಿಯಲ್ಲಿ ಮಾಡಿಕೊಳ್ಳುವ ಆಮದುಗಳಿಗೂ ಇದು ಅನ್ವಯಿಸುವುದಿಲ್ಲ.
ಇದರಿಂದ ಏನಾಗುತ್ತದೆ?
ಸರ್ಕಾರ ಇದನ್ನು ಪ್ರಕಟಿಸಿದ ಸ್ವಲ್ಪ ಹೊತ್ತಿನಲ್ಲಿ ದೇಶಿ ಗುತ್ತಿಗೆ ಎಲೆಕ್ಟ್ರಾನಿಕ್ಸ್ ತಯಾರಕರ ಷೇರುಗಳ ಬೆಲೆ ಏರಿತು. ಅಂಬರ್ ಎಂಟರ್‌ಪ್ರೈಸಸ್ ಇಂಡಿಯಾ ಲಿ. 3.3%, ಡಿಕ್ಸನ್ ಟೆಕ್ನಾಲಜೀಸ್ ಇಂಡಿಯಾ ಲಿ. 5.5% ಮತ್ತು PG ಎಲೆಕ್ಟ್ರೋಪ್ಲಾಸ್ಟ್ ಲಿ. 2.8%ರಷ್ಟು ಏರಿಕೆ ಕಂಡಿದೆ. ದೇಶೀಯ ಸರ್ವರ್ ಉತ್ಪಾದನಾ ಕಂಪನಿಯಾದ ನೆಟ್‌ವೆಬ್ ಷೇರುಗಳು 4%, ಡಿಕ್ಸನ್ ಟೆಕ್ನಾಲಜೀಸ್ ಸುಮಾರು 8% ಏರಿಕೆ ಕಂಡಿದೆ.
ಭಾರತದ ಹೊರಗಿನಿಂದ ಹೆಚ್ಚಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಕಂಪನಿಗಳ ಮೇಲೆ ಇದು ಪರಿಣಾಮ ಬೀರುವ ನಿರೀಕ್ಷೆಯಿದೆ. ಇದರಿಂದಾಗಿ ಆಪಲ್‌ನಂತಹ ಟೆಕ್ ದೈತ್ಯರು ಭಾರತದಲ್ಲೇ ತಮ್ಮ ಲ್ಯಾಪ್‌ಟಾಪ್‌ಗಳನ್ನು ತಯಾರಿಸಲು ಪ್ರಾರಂಭಿಸಬೇಕು. ಗ್ಯಾಜೆಟ್‌ಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಇದೇ ನಿಯಮ ಇತರ PC ತಯಾರಕರಾದ Lenovo, HP, Asus, Acer, Samsungಗಳಿಗೂ ಅನ್ವಯಿಸುತ್ತದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್‌ಗಳು, ಮ್ಯಾಕ್‌ಬುಕ್ಸ್ ಮತ್ತು ಮ್ಯಾಕ್ ಮಿನಿಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಬಹುದು.
ಲ್ಯಾಪ್‌ಟಾಪ್‌ಗಳ ಮೇಲಿನ ಆಮದು ನಿರ್ಬಂಧದ ಪರಿಣಾಮ ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬಹುದು. ಸದ್ಯ ಆಪಲ್ ಮತ್ತು ಇತರ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿರುವ ಲ್ಯಾಪ್‌ಟಾಪ್‌ಗಳ ಬೆಲೆಗಳನ್ನು ಬದಲಾಯಿಸಿಲ್ಲ. ಆದರೆ ಆಮದು ನಿರ್ಬಂಧವು ಚಿಲ್ಲರೆ ವ್ಯಾಪಾರಿಗಳು ಮತ್ತು ಕಂಪನಿಗಳು ಕಾಲಕಾಲಕ್ಕೆ ನೀಡುವ ಮಾರಾಟ ಮತ್ತು ರಿಯಾಯಿತಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ. ಬೇಡಿಕೆ ಹೆಚ್ಚಾದರೂ ಲ್ಯಾಪ್‌ಟಾಪ್‌ಗಳ ಮೇಲೆ ಯಾವುದೇ ರಿಯಾಯಿತಿ ನೀಡಲು ಚಿಲ್ಲರೆ ವ್ಯಾಪಾರಿಗಳಿಗೆ ಸಾಧ್ಯವಾಗದು.
ಭಾರತದಲ್ಲಿ ಮಾರಾಟವಾಗುವ ಹೆಚ್ಚಿನ ಲ್ಯಾಪ್‌ಟಾಪ್‌ಗಳು ಮತ್ತು ಪರ್ಸನಲ್ ಕಂಪ್ಯೂಟರ್‌ಗಳನ್ನು ಚೀನಾದಲ್ಲಿ ತಯಾರಿಸಲಾಗುತ್ತದೆ ಅಥವಾ ಜೋಡಿಸಲಾಗುತ್ತದೆ. ಸರ್ಕಾರ ಇದನ್ನು ಭಾರತಕ್ಕೆ ವರ್ಗಾಯಿಸಲು ಚಿಂತಿಸಿದೆ. ಹಾಗಾದರೆ, ಈ ಗ್ಯಾಜೆಟ್‌ಗಳ ಬೆಲೆ ಕಡಿಮೆಯಾಗಬಹುದು.
ಇದನ್ನೂ ಓದಿ: ವಿಸ್ತಾರ Explainer: ಇನ್ನು ಜನನ ಮತ್ತು ಮರಣ ನೋಂದಣಿ ಕಡ್ಡಾಯ! ಏನಿದು ಹೊಸ ವಿಧೇಯಕ, ಯಾಕೆ?