ಹೊಸದಿಲ್ಲಿ: ಕೇಂದ್ರ ಸರಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಬಳಿಕ ಪೆಟ್ರೋಲ್ ದರ ಲೀಟರ್‌ಗೆ 111 ರೂ.ಗಳಿಂದ 101 ರೂ.ಗೆ ಇಳಿಕೆಯಾಗಿದೆ. ಡೀಸೆಲ್ ದರ ಲೀಟರ್‌ಗೆ 94 ರೂ.ಗಳಿಂದ 87 ರೂ.ಗೆ ತಗ್ಗಿದೆ.
ಹೀಗಿದ್ದರೂ, ಸಾರ್ವಜನಿಕ ತೈಲ ಕಂಪನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯ ದರಗಳಿಗೆ ಅನ್ವಯ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ದರ ಏರಿಕೆ ಮಾಡಬಹುದೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿದೆ. ಡೀಲರ್‌ಗಳ ಪ್ರಕಾರ, ಅಂಥ ಸಾಧ್ಯತೆ ಇದೆ. ಆದರೆ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಈ ಬಗ್ಗೆ ವಿವರಣೆ ನೀಡಿದ್ದಾರೆ.
“ಕಳೆದ ವರ್ಷ ನವೆಂಬರ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕವನ್ನು ಕಡಿತಗೊಳಿಸಲಾಗತ್ತು. ಇದರ ಮುಂದುವರಿದ ಭಾಗವಾಗಿ ಮತ್ತೊಮ್ಮೆ ಸುಂಕ ಕಡಿತಗೊಳಿಸಲಾಗಿದೆ. ತೈಲ ಕಂಪನಿಗಳು ದರ ನಿಗದಿಪಡಿಸುವ ಸ್ವಾತಂತ್ರ್ಯವನ್ನು ಹೊಂದಿವೆ. ನಷ್ಟದಲ್ಲಿದ್ದರೆ ದರಗಳನ್ನು ಪರಿಷ್ಕರಿಸಲೂಬಹುದು. ಆದರೆ ಅವುಗಳು ಕೂಡ ಕಚ್ಚಾ ತೈಲ ದರ ಅತ್ಯುನ್ನತ ಮಟ್ಟದಲ್ಲಿ ಇದ್ದಾಗ ಜವಾಬ್ದಾರಿಯುತ ರೀತಿಯಲ್ಲಿ ದರಗಳನ್ನು ನಿಯಂತ್ರಿಸಬೇಕಾಗುತ್ತದೆʼʼ ಎಂದು ವಿವರಿಸಿದ್ದಾರೆ.
1 ಲಕ್ಷ ಕೋಟಿ ರೂ. ಸಾಲ ಹೆಚ್ಚುವರಿ ಸಾಲ
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಕಡಿತದ ಪರಿಣಾಮ ಕೇಂದ್ರ ಸರಕಾರದ ಬೊಕ್ಕಸಕ್ಕೆ 1 ಲಕ್ಷ ಕೋಟಿ ರೂ. ನಷ್ಟವಾಗಲಿದ್ದು, ಇದನ್ನು ಸರಿದೂಗಿಸಲು ಭಾರತ ಹೆಚ್ಚುವರಿಯಾಗಿ 1 ಲಕ್ಷ ಕೋಟಿ ರೂ. ಸಾಲ ಪಡೆಯುವ ಸಾಧ್ಯತೆ ಇದೆ.
ಜಿಎಸ್‌ಟಿ ಸಂಗ್ರಹ ಮತ್ತು ವೈಯಕ್ತಿಕ ಆದಾಯ ತೆರಿಗೆ ಸಂಗ್ರಹದಲ್ಲಿ ಉಂಟಾಗಿರುವ ಏರಿಕೆಯ ಪರಿಣಾಮ ಆಹಾರ ಭದ್ರತೆ ಮತ್ತು ರಸಗೊಬ್ಬರ ಸಬ್ಸಿಡಿಗೆ ತಗಲುವ ವೆಚ್ಚದ ಹೊರೆಯನ್ನು ಭರಿಸಬಹುದು. ಆದರೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ಕಡಿತದಿಂದ ಉಂಟಾಗುವ ನಷ್ಟ ಭರಿಸಲು ಹೆಚ್ಚುವರಿಯಾಗಿ ಸಾಲ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಜೆಟ್ ಪ್ರಕಾರ ಭಾರತ 2022-23ರಲ್ಲಿ 14.3 ಲಕ್ಷ ಕೋಟಿ ರೂ. ಸಾಲ ಪಡೆಯುವ ಸನ್ನಾಹದಲ್ಲಿದೆ. ಬಾಂಡ್ ಬಿಡುಗಡೆಯ ಮೂಲಕ ಭಾರತ ಈ ಸಾಲ ಪಡೆಯಲಿದೆ. ಈ ಬಾಂಡ್‌ಗಳನ್ನು ಬ್ಯಾಂಕ್ ಗಳು ಮತ್ತು ವಿಮೆ ಕಂಪನಿಗಳು ಮುಖ್ಯವಾಗಿ ಖರೀದಿಸಲಿವೆ.
ಇದನ್ನೂ ಓದಿ: ಕೇಂದ್ರ ಸರಕಾರ 2.2 ಲಕ್ಷ ಕೋಟಿ ರೂ. ತೈಲ ತೆರಿಗೆ ನಷ್ಟ ಭರಿಸಲಿದೆ ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್