ನವ ದೆಹಲಿ: ವಿಶ್ವಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಭಾರತೀಯ ಮೂಲದ ಅಜಯ್ ಬಂಗಾ (Ajay Banga) ಅವರು ನೇಮಕವಾಗಿದ್ದಾರೆ. (World Bank President) ಬಂಗಾ ಅವರು 5 ವರ್ಷಗಳ ಅವಧಿಗೆ ವಿಶ್ವಬ್ಯಾಂಕ್‌ನ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಮೇ 3ರಂದು ಬಂಗಾ ನೇಮಕವನ್ನು ಘೋಷಿಸಲಾಗಿತ್ತು. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ ಹಾಗೂ ವಿಶ್ವ ಬ್ಯಾಂಕ್ ಎರಡಕ್ಕೂ ಅಧ್ಯಕ್ಷರಾಗಿ ನೇಮಕವಾದ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ವಿಶ್ವಬ್ಯಾಂಕ್ ಟ್ವೀಟ್ ಮಾಡಿದ್ದು, ನೂತನ ಅಧ್ಯಕ್ಷ ಅಜಯ್ ಬಂಗಾ ಅವರಿಗೆ ಸ್ವಾಗತ ಕೋರಿದೆ. ನಾವು ವಿಶ್ವವನ್ನು ಬಡತನದಿಂದ ಮುಕ್ತಿಗೊಳಿಸಲು ಹಾಗೂ ವಾಸಿಸಲು ಯೋಗ್ಯ ಗ್ರಹವಾಗಿಸಲು ಪಣ ತೊಟ್ಟಿದ್ದೇವೆ ಎಂದು ಟ್ವೀಟ್ ಮಾಡಿದೆ. ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಾಲಿನಾ ಜಾರ್ಜಿವಾ ಕೂಡ ಟ್ವೀಟ್ ಮೂಲಕ ಸ್ವಾಗತಿಸಿದ್ದಾರೆ.
Join us in welcoming Ajay Banga as the new President of the World Bank Group. We are committed to creating a world free from poverty on a livable planet. pic.twitter.com/8SwKQ4txVO
— World Bank (@WorldBank) June 2, 2023
ಅಜಯ್ ಬಂಗಾ ಅವರು (63) 1959ರಲ್ಲಿ ಪುಣೆಯಲ್ಲಿ ಜನಿಸಿದರು. ಐಐಎಂ ಅಹಮದಾಬಾದ್‌ನಲ್ಲಿ ಎಂಬಿಎ ಮಾಡಿರುವ ಅವರು, 2010-2021 ರ ಅವಧಿಯಲ್ಲಿ ಮಾಸ್ಟರ್ ಕಾರ್ಡ್ ಕಂಪನಿಯ ಸಿಇಒ ಆಗಿದ್ದರು.
ಚೀನಾ ಆಕ್ಷೇಪ ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಅಜಯ್ ಬಂಗಾ ಬದಲಿಗೆ ಬೇರೆ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಚೀನಾ ಹೇಳಿತ್ತು. ಅಮೆರಿಕದ ಜತೆಗೆ ಚೀನಾದ ಸಂಬಂಧ ಬಿಗಡಾಯಿಸುತ್ತಿರುವುದನ್ನೂ ಇದು ಬಿಂಬಿಸಿತ್ತು. ಮೆರಿಟ್ ಆಧಾರದಲ್ಲಿ ಬೇರೆ ಅಭ್ಯರ್ಥಿಯನ್ನು ಬೆಂಬಲಿಸಲು ಬಯಸಿರುವುದಾಗಿ ಚೀನಾ ಹೇಳಿತ್ತು. ವಿಶ್ವಬ್ಯಾಂಕ್ ಜಾಗತಿಕ ಮಟ್ಟದಲ್ಲಿ ಪ್ರಭಾವಿ ಹಣಕಾಸು ಸಂಸ್ಥೆಯಾಗಿದ್ದು, ಜಾಗತಿಕ ಬಡತನ ನಿರ್ಮೂಲನೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುತ್ತದೆ. ಹಣಕಾಸು ನೆರವು ನೀಡುತ್ತದೆ. ಇದರಲ್ಲಿ ಇದುವರೆಗೆ ಅಮೆರಿಕ ಮೂಲದವರೇ ಅಧ್ಯಕ್ಷರಾಗಿದ್ದಾರೆ. ಅಜಯ್ ಬಾಂಗಾ ಭಾರತೀಯ ಮೂಲದವರಾಗಿದ್ದರೂ, ಈಗ ಅಮೆರಿಕದ ನಾಗರಿಕರಾಗಿದ್ದಾರೆ. ಈ ಅಮೆರಿಕದ ಪ್ರಾಬಲ್ಯವನ್ನು ಅಂತ್ಯಗೊಳಿಸಲು ಚೀನಾ ಬಯಸುತ್ತಿದೆ. ತಾಂತ್ರಿಕವಾಗಿ ವಿಶ್ವಬ್ಯಾಂಕ್ ಮಂಡಳಿಯ 25 ಕಾರ್ಯಕಾರಿ ನಿರ್ದೇಶಕರು ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ.
ಭಾರತೀಯ ಮೂಲದವರಿಂದ ದೇಶಕ್ಕೆ ಲಾಭವಾಗಿದೆಯೇ?
ಬ್ರಿಟನ್ ಪ್ರಧಾನಿ ರಿಷಿ ಸುನಕ್, ಅಜಯ್ ಬಾಂಗಾ, ಸುಂದರ್ ಪಿಚೈ, ಸತ್ಯ ನಾಡೆಳ್ಳಾ, ಪರಾಗ್ ಅಗ್ರವಾಲ್, ಇಂದ್ರಾ ನೂಯಿ ಮೊದಲಾದವರು ಭಾರತೀಯ ಮೂಲದವರಾದರೂ, ಭಾರತೀಯರಲ್ಲ. ದ್ವಿಪೌರತ್ವಕ್ಕೆ ಭಾರತ ಅವಕಾಶ ನೀಡುವುದಿಲ್ಲ. ಹೀಗಿದ್ದರೂ ಅವರನ್ನು ಭಾರತದ ಮಕ್ಕಳೆಂದು ಭಾರತೀಯರು ಆದರಿಸುತ್ತಾರೆ. ಆದರೆ ಅವರಿಂದ ಭಾರತಕ್ಕೆ ಏನಾದರೂ ಲಾಭವಾಗಿದೆಯೇ, ಇಲ್ಲಿ ಉದ್ಯೋಗಗಳನ್ನು ಸೃಷ್ಟಿಸಿದ್ದಾರೆಯೇ ಎಂದರೆ ನಿರಾಸೆ ಕಟ್ಟಿಟ್ಟ ಬುತ್ತಿ. ಹಾಗೆ ನಿರೀಕ್ಷಿಸುವುದೂ ಸಮಂಜಸವಲ್ಲ ಎನ್ನುತ್ತಾರೆ ತಜ್ಞರು.
ಅಜಯ್ ಬಂಗಾ ಬಗ್ಗೆ 5 ವಿಚಾರ ನಿಮಗೆ ತಿಳಿದಿರಲಿ
- ಅಜಯ್ ಬಂಗಾ (63) ಭಾರತದಲ್ಲಿ ಜನಿಸಿದವರು. ಅವರ ವೃತ್ತಿಜೀವನ ಇಲ್ಲಿಯೇ ಆರಂಭವಾಯಿತು. 2007ರಿಂದ ಅಮೆರಿಕ ಪ್ರಜೆಯಾಗಿದ್ದಾರೆ. ಅಜಯ್ ಬಂಗಾ ಇತ್ತೀಚೆಗೆ ಜನರಲ್ ಅಟ್ಲಾಂಟಿಕ್ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
- ಅಜಯ್ ಬಂಗಾ ಅವರು ಹಣಕಾಸು ಮತ್ತು ಅಭಿವೃದ್ಧಿ ಪರಿಣಿತರು. 2020-2022ರಲ್ಲಿ ಇಂಟರ್ನ್ಯಾಷನಲ್ ಚೇಂಬರ್ ಆಫ್ ಕಾಮರ್ಸ್ನ ಗೌರವ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಟ್ರಂಪ್ ಆಡಳಿತದ ಅವಧಿಯಲ್ಲಿ ಅರ್ಥಶಾಸ್ತ್ರಜ್ಞ ಮತ್ತು ದೇಶದ ಖಜಾನೆ ಅಧಿಕಾರಿಯಾಗಿದ್ದ ಡೇವಿಡ್ ಮಾಲ್ಪಾಸ್ ಅವರು ವಿಶ್ವಬ್ಯಾಂಕ್ ಮುಖ್ಯಸ್ಥರ ಸ್ಥಾನದಿಂದ ನಿರ್ಗಮಿಸುತ್ತಿರುವ ಬಳಿಕ ಆ ಸ್ಥಾನಕ್ಕೆ ಅಜಯ್ ಏಕೈಕ ಸ್ಪರ್ಧಿಯಾಗಿದ್ದಾರೆ.
- ಬಂಗಾ ಅವರು 2016ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ಫೆಬ್ರವರಿ ಅಂತ್ಯದಲ್ಲಿ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಹುದ್ದೆಗೆ ನಾಮನಿರ್ದೇಶನ ಮಾಡಿದರು.
- ಬಂಗಾ ಅವರು ನಾಮನಿರ್ದೇಶನಗೊಂಡಾಗಿನಿಂದ 96 ಸರ್ಕಾರಗಳ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಮೂರು ವಾರಗಳ ವಿಶ್ವ ಪ್ರವಾಸದಲ್ಲಿ ಸರ್ಕಾರಿ ಅಧಿಕಾರಿಗಳು, ವ್ಯಾಪಾರ ಮುಖಂಡರು ಮತ್ತು ಸಾಮುದಾಯಿಕ ಸಂಸ್ಥೆಗಳನ್ನು ಭೇಟಿ ಮಾಡಲು ಎಂಟು ದೇಶಗಳಿಗೆ ಭೇಟಿ ನೀಡಿದ್ದಾರೆ. ಒಟ್ಟು 39,546 ಮೈಲುಗಳಷ್ಟು ಪ್ರವಾಸ ಮಾಡಿದ್ದಾರೆ.
- ವಿಶ್ವ ಬ್ಯಾಂಕ್ ಸಮೂಹದ ಅಧ್ಯಕ್ಷರಾಗಿ ಬಂಗಾ ಅವರು ಇಂಟರ್ನ್ಯಾಷನಲ್ ಬ್ಯಾಂಕ್ ಫಾರ್ ರೀಕನ್ಸ್ಟ್ರಕ್ಷನ್ ಆಂಡ್ ಡೆವಲಪ್ಮೆಂಟ್ (IBRD) ನ ಕಾರ್ಯನಿರ್ವಾಹಕ ನಿರ್ದೇಶಕರ ಮಂಡಳಿಯ ಅಧ್ಯಕ್ಷರೂ ಆಗಿರುತ್ತಾರೆ. ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಅಸೋಸಿಯೇಷನ್ (IDA) ಮತ್ತು ಇತರ ಕೆಲವು ಅಂತಾರಾಷ್ಟ್ರೀಯ ಮಂಡಳಿಗಳ ನಿರ್ದೇಶಕರ ಮಂಡಳಿಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ.
ಇದನ್ನೂ ಓದಿ: HCL : ಎಚ್‌ಸಿಎಲ್ ಸಹ ಸಂಸ್ಥಾಪಕ ಅಜಯ್ ಚೌಧುರಿ ಬರೆದ ಜಸ್ಟ್ ಆಸ್ಪೈರ್ ಬಿಡುಗಡೆ, ಪುಸ್ತಕದಲ್ಲೇನಿದೆ?