Site icon Vistara News

Explainer: Sex work ಲೀಗಲ್‌ ಅಂದರೆ ಏನರ್ಥ?

sex work india

ವೇಶ್ಯಾವಾಟಿಕೆ ಜಗತ್ತಿನ ಅತ್ಯಂತ ಹಳೇ ವೃತ್ತಿ- ಅಂತ ಬ್ರಿಟಿಷ್‌ಲೇಖಕ ರುಡ್‌ಯಾರ್ಡ್‌ಕಿಪ್ಲಿಂಗ್‌ತುಂಬಾ ಹಿಂದೇನೇ ಹೇಳಿದ್ದ. ಇದು ನಿಜ. ಎಲ್ಲ ದೇಶಗಳಲ್ಲೂ, ಎಲ್ಲ ಕಾಲಗಳಲ್ಲೂ ವೇಶ್ಯಾವಾಟಿಕೆ ಇದ್ದೇ ಇತ್ತು. ಭಾರತದ ಹಿಸ್ಟರಿ ನೋಡಿದರೆ ಕ್ರಿಸ್ತಪೂರ್ವ ಕಾಲದಲ್ಲೇ ಆಮ್ರಪಾಲಿ ಮುಂತಾದ ವೇಶ್ಯೆಯರ ಉದಾಹರಣೆ ಸಿಗುತ್ತೆ. ಇವರನ್ನು ʼನಗರವಧುʼ ಎಂದು ಕರೆಯಲಾಗ್ತಾ ಇತ್ತು. ಇವರು ರಾಜಮನೆತನದವರಿಗೆ, ಶ್ರೀಮಂತರಿಗೆ ಸಂತೋಷ ಕೊಡುವ, ಸುಖ ನೀಡುವ ವೃತ್ತಿಯನ್ನು ಮಾಡ್ತಾ ಇದ್ದರು. ಇನ್ನು ಪುರಾಣಗಳಲ್ಲಿ ಕಂಡುಬರೋ ಸ್ವರ್ಗದ ಅಪ್ಸರೆಯರ ಕೆಲಸವಂತೂ ಅದೇ ಆಗಿತ್ತು ಎಂಬುದನ್ನು ಬೇರೆ ಹೇಳಬೇಕಿಲ್ಲ. ಆಧುನಿಕ ಕಾಲಕ್ಕೆ ಬಂದರೆ, ಮುಂಬಯಿ, ಕೋಲ್ಕೊತಾ ಮುಂತಾದ ಬೃಹತ್‌ಮೆಟ್ರೋ ನಗರಗಳಲ್ಲಿ ದೊಡ್ಡ ದೊಡ್ಡ ಕಾಲೊನಿಗಳೇ ಈ ವೃತ್ತಿಗಾಗಿ ಮೀಸಲಾಗಿವೆ. ಇನ್ನು ಎಂಜಿ ರೋಡ್‌, ಬ್ರಿಗೇಡ್‌ರೋಡ್‌ನಂಥ ಐಷಾರಾಮಿ ಪ್ರದೇಶಗಳಲ್ಲಿ ನಡೆಯುವ ಹೈಟೆಕ್‌ ವೇಶ್ಯಾವಾಟಿಕೆಯೂ ಕಡಿಮೆಯೇನಲ್ಲ. ಹಾಗೆ ನಮ್ಮ ಜನಜೀವನದಲ್ಲಿ ಹಾಸುಹೊಕ್ಕಾಗಿರೋ ಲೈಂಗಿಕ ಕಾರ್ಯಕರ್ತೆಯರ ವೃತ್ತಿಯನ್ನು ಕಾನೂನುಬಾಹಿರ ಅಂತ ಘೋಷಿಸಿದ್ದಾದರೂ ಯಾರು?

ನಂಬಿದ್ರೆ ನಂಬಿ, ಈ ದೇಶದಲ್ಲಿ ಯಾವತ್ತೂ ವೇಶ್ಯಾವಾಟಿಕೆ ಕಾನೂನುಬಾಹಿರ ಆಗಿರಲೇ ಇಲ್ಲ! ಯಾರೂ ಈ ವೃತ್ತಿಗೆ ಲೈಸೆನ್ಸ್‌, ಪರ್ಮಿಷನ್‌ ಅಂತೆಲ್ಲಾ ಮಾಡಿಲ್ಲವಾದರೂ, ಯಾರೂ ಅದನ್ನು ನಿಷೇಧಿಸಿಯೂ ಇಲ್ಲ.

ಹಾಗಿದ್ರೆ ಈಗ ಎದ್ದಿರೋ ಪ್ರಶ್ನೆ ಏನು?
ಸುಪ್ರೀಂ ಕೋರ್ಟ್‌ ನೀಡಿರುವ ಒಂದು ತೀರ್ಪಿನ ಕಾರಣದಿಂದ ಈಗ ದೇಶಾದ್ಯಂತ ಈ ಬಗ್ಗೆ ಚರ್ಚೆ ನಡೀತಾ ಇದೆ. ಈ ತೀರ್ಪಿಗೆ ಕಾರಣವಾಗಿರೋದು ಸ್ವತಃ ಸುಪ್ರೀಂ ಕೋರ್ಟ್‌ ನೇಮಿಸಿರುವ ಒಂದು ಸಮಿತಿ ನೀಡಿರುವ ಸಲಹೆಗಳು. ಈ ಸಮಿತಿಯನ್ನು 2011ರಲ್ಲೇ ರಚಿಸಲಾಗಿತ್ತು. ಪ್ರದೀಪ್‌ ಘೋಷ್‌ಎಂಬವರು ಈ ಸಮಿತಿಯ ಅಧ್ಯಕ್ಷರಾಗಿದ್ದರು. ಜಯಂತ್‌ ಭೂಷಣ್‌ ಮುಂತಾದವರು ಇದರ ಸದಸ್ಯರಾಗಿದ್ದರು. ಒಂದು ದಶಕ ಕಾಲ ಈ ಸಮಿತಿ ವೇಶ್ಯೆಯರ ಬದುಕು ಸ್ಥಿತಿಗತಿಗಳ ಮೇಲೆ ಅಧ್ಯಯನ ನಡೆಸಿ ಹಲವಾರು ಸಲಹೆ ಸೂಚನೆಗಳನ್ನು ನೀಡಿದ್ದು, ಆ ಸೂಚನೆಗಳಿಗೆ ಅನುಗುಣವಾಗಿ ಕೋರ್ಟ್‌ ತನ್ನ ನಿರ್ಣಯಗಳನ್ನು ಪ್ರಕಟಿಸಿದೆ.

ಸುಪ್ರೀಂ ಕೋರ್ಟ್‌ ಏನು ಹೇಳಿದೆ?
ಈ ದೇಶದ ಕಾನೂನಿನ ಸುರಕ್ಷತೆಯನ್ನು ವೇಶ್ಯೆಯರು ಕೂಡ ಹೊಂದಿದ್ದಾರೆ. ಇಂಥ ಸನ್ನಿವೇಶಗಳಲ್ಲಿ ಅಪರಾಧ ಕಾಯಿದೆಯನ್ನು ವ್ಯಕ್ತಿಯ ವಯಸ್ಸು ಮತ್ತು ಒಪ್ಪಿಗೆಯನ್ನು ನೋಡಿ ಅನ್ವಯಿಸಬೇಕು. ಸೆಕ್ಸ್‌ವರ್ಕರ್‌ ಪ್ರೌಢ ವಯಸ್ಕಳು ಹಾಗೂ ಸಮ್ಮತಿಯಿಂದಲೇ ಲೈಂಗಿಕ ಕ್ರಿಯೆಗೆ ಒಪ್ಪಿದ್ದಾಳೆ ಎಂದಾಗಿದ್ದರೆ ಪೊಲೀಸರು ಆಕೆಯ ಮೇಲೆ ಕೇಸು ದಾಖಲಿಸುವಂತಿಲ್ಲ. ವೃತ್ತಿ ಯಾವುದೇ ಇರಲಿ, ಈ ದೇಶದಲ್ಲಿ ಸಂವಿಧಾನದ ಆರ್ಟಿಕಲ್‌ 21ರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಗೂ ಘನತೆಯಿಂದ ಬದುಕುವ ಹಕ್ಕಿದೆ.

ಅಂದರೆ, ಲೈಂಗಿಕ ಕಾರ್ಯಕರ್ತರ ಬದುಕು ಕೂಡ ಘನತೆಯಿಂದ ಕೂಡಿದೆ, ವೇಶ್ಯಾವಾಟಿಕೆಗೆ ಕೂಡ ಅದರದ್ದೇ ಆದ ಘನತೆ ಇದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದಂತಾಗಿದೆ.

ಕೋರ್ಟ್‌ ಇನ್ನೂ ಮುಂದುವರಿದು ಹೀಗೆ ಹೇಳಿದೆ- ವೇಶ್ಯಾಗೃಹಗಳ ಮೇಲೆ ನಡೆಯುವ ದಾಳಿಗಳ ಸಂದರ್ಭ ಪೊಲೀಸರು ವೇಶ್ಯೆಯರನ್ನು ಬಂಧಿಸುವುದು, ಚಿತ್ರಹಿಂಸೆ ಕೊಡುವುದು, ಅಪರಾಧಿಯಾಗಿಸಿ ನಿಲ್ಲಿಸುವುದು ಮಾಡುವಂತಿಲ್ಲ. ಯಾಕೆಂದರೆ ಲೈಂಗಿಕ ವೃತ್ತಿ ಅಪರಾಧವಲ್ಲ, ವೇಶ್ಯಾಗೃಹ ನಡೆಸುವುದು ಮಾತ್ರ ಅಪರಾಧ- ಎಂದಿದೆ.

ವೇಶ್ಯಾವಾಟಿಕೆಯ ಬಗ್ಗೆ ನಮ್ಮ ಕಾನೂನು ಏನು ಹೇಳುತ್ತೆ ?
ಭಾರತೀಯ ದಂಡ ಸಂಹಿತೆಯ ಪ್ರಕಾರ, ಇಬ್ಬರು ವಯಸ್ಕರ ನಡುವೆ ಸಮ್ಮತಿಯಿಂದ ನಡೆಯುವ ಲೈಂಗಿಕ ಕ್ರಿಯೆ ಅಪರಾಧವೇ ಅಲ್ಲ. ಆದರೆ ಈ ಸೇವೆಯ ಸುತ್ತ ನಡೆಯುವ ಇತರ ಕೆಲವು ಚಟುವಟಿಕೆಗಳು ಅಪರಾಧ ಎನಿಸಿಕೊಳ್ಳುತ್ತವೆ. ಉದಾಹರಣೆಗೆ ಸಾರ್ವಜನಿಕ ಸ್ಥಳಗಳಲ್ಲಿ ವೇಶ್ಯಾವಾಟಿಕೆಯ ಸೇವೆಗಳನ್ನು ಪ್ರದರ್ಶಿಸುವುದು ಕಾನೂನುಬಾಹಿರ. ಹೋಟೆಲ್‌ಗಳಲ್ಲಿ ವೇಶ್ಯಾವಾಟಿಕೆ ನಡೆಸುವುದು ಕಾನೂನುಬಾಹಿರ. ಲೈಂಗಿಕ ಕಾರ್ಯಕರ್ತೆಯನ್ನು ಸಂಪರ್ಕಿಸಿಕೊಡುವುದು ಕಾನೂನುಬಾಹಿರ. ವೇಶ್ಯಾವಾಟಿಕೆಗೆ ಗಿರಾಕಿಗಳನ್ನು ಹೊಂದಿಸುವುದು ಕಾನೂನುಬಾಹಿರ.

ಅನೈತಿಕ ವ್ಯವಹಾರಗಳ (ತಡೆ) ಕಾಯಿದೆ- 1986ರ ಪ್ರಕಾರ, ವೇಶ್ಯಾವೃತ್ತಿಗಾಗಿ ಇತರರನ್ನು ಆಕರ್ಷಿಸುವುದು, ಪ್ರಚೋದಿಸುವುದು ಅಪರಾಧ ಎನಿಸಿಕೊಳ್ಳುತ್ತದೆ. ಕಾಲ್‌ಗರ್ಲ್‌ಗಳು ತಮ್ಮ ಫೋನ್‌ ನಂಬರ್‌ಗಳನ್ನು ಸಾರ್ವಜನಿಕಗೊಳಿಸುವುದು ಅಪರಾಧ. ಈ ಅಪರಾಧಗಳಿಗಾಗಿ ಅವರನ್ನು ಆರು ತಿಂಗಳ ಕಾರಾಗೃಹವಾಸಕ್ಕೆ ಒಳಪಡಿಸಬಹುದು.

ಭಾರತೀಯ ದಂಡಸಂಹಿತೆಯ ಸೆಕ್ಷನ್‌372 ಹಾಗೂ 373ರ ಪ್ರಕಾರ, ಅಪ್ರಾಪ್ತ ವಯಸ್ಕರನ್ನು ಲೈಂಗಿಕ ಕೃತ್ಯಗಳಿಗೆ ಬಳಸಿಕೊಳ್ಳುವುದು ಅಪರಾಧ. ಇನ್ನು ಸಂವಿಧಾನದ ಆರ್ಟಿಕಲ್‌23ರ ಪ್ರಕಾರ, ವೇಶ್ಯಾವಾಟಿಕೆಗಾಗಿ ಮಹಿಳೆಯರ ಕಳ್ಳಸಾಗಣೆ ಮತ್ತು ಅವರನ್ನು ಬಲವಂತವಾಗಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ.

ಇನ್ನು ಶಿಕ್ಷೆಯ ಪ್ರಮಾಣ ಏನೇನು ಅಂತ ನೋಡೋಣ. ವೇಶ್ಯಾಗೃಹ ನಡೆಸುವವರಿಗೆ ಕನಿಷ್ಠ ಒಂದು ವರ್ಷ, ವೇಶ್ಯೆಯರ ಆದಾಯದಿಂದ ಬದುಕುವವನಿಗೆ ಕನಿಷ್ಠ ಎರಡು ವರ್ಷ, ಸೆಕ್ಸ್‌ವರ್ಕ್‌ಗಾಗಿ ಅಪ್ರಾಪ್ತ ವಯಸ್ಕ ಹುಡುಗಿಯರನ್ನು ಕಿಡ್‌ನ್ಯಾಪ್‌ಮಾಡುವವನಿಗೆ ಕನಿಷ್ಠ ಏಳು ವರ್ಷ, ವೇಶ್ಯಾಗೃಹದಲ್ಲಿ ಮಕ್ಕಳನ್ನು ಕೂಡಿ ಹಾಕುವವನಿಗೆ ಕನಿಷ್ಠ ಏಳು ವರ್ಷ, ಸಾರ್ವಜನಿಕ ಪ್ರದೇಶದಲ್ಲಿ ವೇಶ್ಯಾವಾಟಿಕೆಗೆ ಪ್ರಚೋದನೆ ಮಾಡುವವನಿಗೆ ಮೂರು ತಿಂಗಳು, ವೇಶ್ಯಾವಾಟಿಕೆಗೆ ಪ್ರೋತ್ಸಾಹ ನೀಡುವವನಿಗೆ ಆರು ತಿಂಗಳು, ಅಪ್ತಾಪ್ತರನ್ನು ವೇಶ್ಯಾವಾಟಿಕೆಗೆ ಪ್ರಚೋದಿಸುವವರಿಗೆ ಕನಿಷ್ಠ ಏಳು ವರ್ಷ ಶಿಕ್ಷೆ ನೀಡಲಾಗುತ್ತದೆ.

ಇದನ್ನೂ ಓದಿ : Sex work legal: ವೇಶ್ಯೆಯರನ್ನು ಬಂಧಿಸುವಂತಿಲ್ಲ, ದಂಡ ವಿಧಿಸುವಂತಿಲ್ಲ ಎಂದ ಸುಪ್ರೀಂಕೋರ್ಟ್

ಹಾಗಾಗಿ ಇದೆಲ್ಲದರ ಒಟ್ಟಾರೆ ಅರ್ಥ ಏನಂದ್ರೆ, ಸಮ್ಮತಿ ಮೂಲಕ ಗಿರಾಕಿಯ ಜೊತೆ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧವಲ್ಲ. ಆದ್ರೆ ಅಂಥ ವೇಶ್ಯಾವಾಟಿಕೆಗೆ ಸಪೋರ್ಟ್‌ ಮಾಡುವ ಎಲ್ಲರೂ ಶಿಕ್ಷಾರ್ಹರು. ಈ ಕಾನೂನನ್ನು ಬಿಗಿಯಾಗಿ ಜಾರಿ ಮಾಡಿದ್ರೆ ಏನಾಗುತ್ತೆ? ಲೈಂಗಿಕ ಕಾರ್ಯಕರ್ತರು ತಮ್ಮ ಗಿರಾಕಿಗಳನ್ನು ತಾವೇ ಹುಡುಕಿಕೊಳ್ಳಬೇಕಾಗುತ್ತೆ, ಪಿಂಪ್‌ಗಳನ್ನು ಅವಲಂಬಿಸುವಂತಿಲ್ಲ. ಆದ್ರೂ ಸಾರ್ವಜನಿಕ ಸ್ಥಳದಲ್ಲಿ ಹಾವಭಾವಗಳಿಂದ ಯಾರನ್ನೂ ಪ್ರಚೋದಿಸುವಂತಿಲ್ಲ. ಅದು ಶಿಕ್ಷಾರ್ಹ.

ತೀರ್ಪಿನಿಂದ ಏನಾದರೂ ಬದಲಾಗುತ್ತಾ?
ಹೌದು, ಈ ತೀರ್ಪು ವೇಶ್ಯಾವಾಟಿಕೆಯಲ್ಲಿ ತೊಡಗಿದ ಮಹಿಳೆಯರಿಗೆ ಒಂದು ದೊಡ್ಡ ಮಟ್ಟದ ಧೈರ್ಯವನ್ನು ನೀಡಬಹುದು. ಕೋರ್ಟ್‌ ಹೇಳಿರೋ ಈ ಮಾತುಗಳನ್ನು ಕೇಳಿ-

ಹೆಚ್ಚಿನ ಸಲ ಪೊಲೀಸರು ವೇಶ್ಯೆಯ ಜತೆಗೆ ಹಿಂಸಾತ್ಮಕವಾಗಿ, ಕ್ರೌರ್ಯದಿಂದ ನಡೆದುಕೊಳ್ಳುತ್ತಾರೆ. ಇದು ತಪ್ಪು. ಸೆಕ್ಸ್‌ ವರ್ಕರ್‌ಗಳೂ ಅನೇಕ ಸಲ ಲೈಂಗಿಕ ಆಕ್ರಮಣ, ರೇಪ್‌ಇತ್ಯಾದಿಗಳಿಗೆ ತುತ್ತಾಗುತ್ತಾರೆ. ಇದನ್ನು ಪೊಲೀಸರು ಗಮನದಲ್ಲಿ ಇಟ್ಟುಕೊಬೇಕು ಹಾಗೂ ವೇಶ್ಯೆಯರು ದೂರು ನೀಡಲು ಬಂದಾಗ ಅವರ ವಿಚಾರದಲ್ಲಿ ತಾರತಮ್ಯ ತೋರಬಾರದು. ಅವರಿಗೆ ಸೂಕ್ತ ವೈದ್ಯಕೀಯ ಹಾಗೂ ಕಾನೂನು ನೆರವು ಒದಗಿಸಬೇಕು. ಯಾವುದೇ ವೇಶ್ಯಾಗೃಹದಲ್ಲಿ ಮಕ್ಕಳು ಸಿಕ್ಕಿದರೆ, ಅವರನ್ನು ವೇಶ್ಯಾವಾಟಿಕೆಗಾಗಿ ಬಳಸಲಾಗುತ್ತಿದೆ ಎಂಬ ತೀರ್ಮಾನಕ್ಕೆ ಏಕಾಏಕಿ ಬರಬಾರದು. ಅವರು ವೇಶ್ಯೆಯರ ಮಕ್ಕಳಾಗಿರಬಹುದು. ಅವರಿಗೂ ಮೂಲಭೂತ ಸುರಕ್ಷತೆ, ಶಿಕ್ಷಣ ಇತ್ಯಾದಿಗಳ ಅಗತ್ಯವಿದೆ. ಮೂಲಭೂತ ಮಾನವ ಘನತೆಯು ವೇಶ್ಯೆಯರಿಗೂ ಅನ್ವಯವಾಗುತ್ತದೆ ಹಾಗೂ ಮಕ್ಕಳನ್ನು ಅವರಿಂದ ಪ್ರತ್ಯೇಕಗೊಳಿಸುವಂತಿಲ್ಲ. ವೇಶ್ಯೆಯರ ಬಳಿ ಸಂಗ್ರಹಿಸಿದ ಕಾಂಡೋಮ್‌ಗಳನ್ನು ಅವರ ವಿರುದ್ಧ ಅಪರಾಧಕ್ಕೆ ಸಾಕ್ಷಿಯಾಗಿ ಬಳಸುವಂತಿಲ್ಲ. ರೈಡ್‌ನಲ್ಲಿ ಸಿಕ್ಕಿಬಿದ್ದ ಲೈಂಗಿಕ ಕಾರ್ಯಕರ್ತೆಯನ್ನು ಮರುವಸತಿ ಕೇಂದ್ರಗಳಿಗೆ ಕಳಿಸಬೇಕು. ತಾವು ಸಮ್ಮತಿಪೂರ್ವಕ ಕೃತ್ಯ ಎಸಗಿದೆವು ಎಂದು ಅವರು ತಿಳಿಸಿದರೆ ಮ್ಯಾಜಿಸ್ಟ್ರೇಟ್‌ ಅವರನ್ನು ಬಿಟ್ಟುಬಿಡಬಹುದು.

ಇವಿಷ್ಟು ವೇಶ್ಯಾವಾಟಿಕೆ ಬಗ್ಗೆ ಕೋರ್ಟ್‌ ಹೇಳಿರೋ ಮಾತು. ಅಂದರೆ, ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸೋಕೆ ವೇಶ್ಯೆಯರನ್ನು ಯಾರೂ ತಡೆಯುವಂತಿಲ್ಲ. ಆದರೆ ಅವರು ತಮ್ಮ ವಹಿವಾಟು ನಡೆಸೋಕೆ ಇನ್ನೊಬ್ಬರನ್ನು ಅವಲಂಬಿಸುವಂತಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಇನ್ನೊಬ್ಬರನ್ನು ಪ್ರಚೋದಿಸುವಂತಿಲ್ಲ. ತಮ್ಮ ಫೋನ್‌ ನಂಬರ್‌ಗಳನ್ನು ಬಹಿರಂಗಪಡಿಸುವಂತಿಲ್ಲ. ಪಿಂಪ್‌ಗಳನ್ನು ಬಳಸುವಂತಿಲ್ಲ.

ಗಿರಾಕಿಗಳನ್ನು ಶಿಕ್ಷಿಸಬಹುದಾ?
ಹಾಗಾದ್ರೆ ವೇಶ್ಯೆಯರನ್ನು ತಮ್ಮ ದೈಹಿಕ ತೃಪ್ತಿಗಾಗಿ ಬಳಸಿಕೊಳ್ಳುವ ಗಂಡಸರನ್ನು ಶಿಕ್ಷೆಗೆ ಒಳಪಡಿಸಬಹುದಾ ಎಂಬ ಪ್ರಶ್ನೆ ಏಳುತ್ತೆ. ಇದರ ಬಗ್ಗೆ ಕೂಡ ಕೋರ್ಟ್‌ಗಳು ತಮ್ಮ ಅಭಿಪ್ರಾಯ ಹೇಳಿವೆ.

ʼʼವೇಶ್ಯೆಯರ ಜೊತೆಗೆ ಸಿಕ್ಕಿಬಿದ್ದ ಗಂಡಸರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತಿಲ್ಲʼʼ ಎಂದು ಕರ್ನಾಟಕ ಹೈಕೋರ್ಟ್‌ ಹಾಗೂ ಆಂಧ್ರಪ್ರದೇಶ ಹೈಕೋರ್ಟ್‌ಗಳು ರೂಲಿಂಗ್‌ ನೀಡಿವೆ. ಕೋರ್ಟ್‌ಗಳ ಪ್ರಕಾರ, ವೇಶ್ಯೆಯರ ಗಿರಾಕಿಗಳು ಕೂಡ ಶಿಕ್ಷಾರ್ಹರಲ್ಲ. ಯಾಕೆಂದರೆ ಅವರು ಆ ಮಹಿಳೆಯ ಜೊತೆ ಸಮ್ಮತಿ ಸೆಕ್ಸ್‌ನಲ್ಲಿ ಪಾಲ್ಗೊಂಡವರು ಅಷ್ಟೇ. ಅಂದ್ರೆ ವೇಶ್ಯೆಯ ಜೊತೆಗೆ ಆಕೆಯ ಗಿರಾಕಿಗಳೂ ಸುರಕ್ಷಿತ.

ಸರಿ ಹಾಗಾದ್ರೆ, ಬೇರೆ ದೇಶಗಳಲ್ಲೂ ನಮ್ಮದೇ ಥರ ಕಾನೂನು ಇದೆಯಾ? ಯಾವ್ಯಾವ ದೇಶಗಳಲ್ಲಿ ವೇಶ್ಯಾವಾಟಿಕೆ ಕಾನೂನುಬದ್ಧ? ಎಲ್ಲೆಲ್ಲಿ ಕಾನೂನುಬಾಹಿರ? ಅದನ್ನೂ ನೋಡೋಣ.

ಹೆಚ್ಚಿನ ಎಲ್ಲಾ ಮುಂದುವರಿದ ದೇಶಗಳಲ್ಲೂ ವೇಶ್ಯಾವಾಟಿಕೆ ಅನ್ನೋದು ಒಂದು ಅಪರಾಧವೇ ಅಲ್ಲ. ಅಮೆರಿಕ, ಯುರೋಪ್‌ನ ಹೆಚ್ಚಿನ ದೇಶಗಳಲ್ಲಿ ವೇಶ್ಯೆಯರು ಯಾವುದೇ ಭೀತಿಯಿಲ್ಲದೆ ಇತರ ಸಾರ್ವಜನಿಕರ ಸಮಾನವಾಗಿ ಓಡಾಡುವುದು, ತಮ್ಮ ಹಕ್ಕುಗಳನ್ನು ಪಡೆಯೋದನ್ನು ಕಾಣಬಹುದು. ಕೆನಡಾದಲ್ಲಿ ಲೈಂಗಿಕ ಕಾರ್ಯಕರ್ತರಿಗೆ ಎಲ್ಲ ಬಗೆಯ ಕಾನೂನಾತ್ಮಕ ರಕ್ಷಣೆಗಳಿವೆ. ಜರ್ಮನಿಯಲ್ಲಿ ವೇಶ್ಯಾವಾಟಿಕೆ ಕಾನೂನುಬದ್ಧ. ಇಲ್ಲಿ ಸರಕಾರವೇ ನಡೆಸುವ ಬ್ರಾತೆಲ್‌ಗಳಿವೆ ಹಾಗೂ ಲೈಂಗಿಕ ಕಾರ್ಯಕರ್ತೆಯರಿಗೆ ಆರೋಗ್ಯ ವಿಮೆ, ಪಿಂಚಣಿ ಥರದ ಸೋಶಿಯಲ್‌ಬೆನಿಫಿಟ್‌ಗಳಿವೆ. ಇವರು ಸರಕಾರಕ್ಕೆ ಟ್ಯಾಕ್ಸನ್ನೂ ಕೊಡಬೇಕಾಗುತ್ತೆ. ಫ್ರಾನ್ಸ್‌ನಲ್ಲಿ ವೇಶ್ಯಾವಾಟಿಕೆ ಓಕೆ, ಆದರೆ ಭಾರತದಂತೆಯೇ ಇಲ್ಲಿ ಕೂಡ ಅದರ ಸಾರ್ವಜನಿಕ ಪ್ರದರ್ಶನ ಇತ್ಯಾದಿಗಳು ನಿಷೇಧಿತವಾಗಿವೆ. ನ್ಯೂಜಿಲ್ಯಾಂಡ್‌ನಲ್ಲಿ 2003ರಿಂದೀಚೆಗೆ ಸೆಕ್ಸ್‌ವರ್ಕ್‌ ಕಾನೂನುಬದ್ಧವಾಗಿದೆ ಹಾಗೂ ಲೈಸೆನ್ಸ್‌ ಪಡೆದ ಬ್ರಾತೆಲ್‌ಗಳು ಕಾರ್ಯ ನಿರ್ವಹಿಸ್ತಾವೆ. ಗ್ರೀಸ್ ಮುಂತಾದ ದೇಶಗಳಲ್ಲಿ ಇವರಿಗೆ ಪುಗಸಟ್ಟೆ ಹೆಲ್ತ್‌ ಚೆಕಪ್‌ ಕೂಡ ಇದೆ. ಇನ್ನು ಆಫ್ರಿಕಾದಂಥ ಹಿಂದುಳಿದ ದೇಶಗಳಲ್ಲಿ, ಲೈಂಗಿಕ ಕಾರ್ಯಕರ್ತೆಯರನ್ನು ಎಚ್‌ಐವಿ ಅಥವಾ ಏಡ್ಸ್‌ ಹಬ್ಬಿಸುವವರು ಎನ್ನುವ ಅಸಹ್ಯ ದೃಷ್ಟಿಯಿಂದ ನೋಡಲಾಗ್ತಾ ಇತ್ತು. ಆದರೆ ಇತ್ತೀಚೆಗೆ ಅನೇಕ ಎನ್‌ಜಿಒಗಳು ಕಾಂಡೋಮ್‌ ಬಳಕೆ ಮುಂತಾದ ಸುರಕ್ಷತಾ ಕ್ರಮಗಳ ಬಗ್ಗೆ ಜಾಗ್ರತಿ ಮೂಡಿಸಿವೆ.

ಈಗ ಸುಪ್ರೀಂ ಕೋರ್ಟ್‌ ತೀರ್ಪಿನ ಪರಿಣಾಮ ಲೈಂಗಿಕ ಕಾರ್ಯಕರ್ತೆಯರಿಗೆ ಕಾನೂನು ರಕ್ಷಣೆ ಸಿಕ್ಕಿದಂತಾಗಿದೆ. ಇವರನ್ನು ಪೊಲೀಸರು ವಿನಾಕಾರಣ ಬೆದರಿಸುವುದು, ಸುಳ್ಳು ಕೇಸು ದಾಖಲಿಸುವುದು ಮಾಡುವ ಹಾಗಿಲ್ಲ. ಇವರಿಂದ ಮಕ್ಕಳನ್ನು ಪ್ರತ್ಯೇಕಿಸುವಂತಿಲ್ಲ. ಇವರ ಗಿರಾಕಿಗಳಿಗೆ ಕಿರುಕುಳ ಕೊಡುವಂತಿಲ್ಲ.

ತನ್ನ ಮೇಲೆ ಲೈಂಗಿಕ ದೌರ್ಜನ್ಯ, ಹಲ್ಲೆ ನಡೆದಿದೆ ಎಂದು ದೂರು ಕೊಡೋಕೆ ವೇಶ್ಯೆ ಪೊಲೀಸ್‌ ಠಾಣೆಗೆ ಬಂದರೆ ಆಕೆಯನ್ನು ಇತರ ಸಾರ್ಜನಿಕರಂತೆಯೇ ಗೌರವದಿಂದ ಕಂಡು, ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು. ಯಾವುದೆ ಬ್ರಾತೆಲ್‌ಗೆ ಪೊಲೀಸ್‌ ರೈಡ್‌ ನಡೆದರೆ, ಅಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವೇಶ್ಯೆಯರನ್ನಾಗಲೀ, ಗ್ರಾಹಕರನ್ನಾಗಲೀ ಕಿರುಕುಳಕ್ಕೆ ಒಳಪಡಿಸುವಂತಿಲ್ಲ.

ಇದನ್ನೂ ಓದಿ : ವಿಸ್ತಾರ Explainer: ಅಮೆರಿಕದ ಯುವಕರೇಕೆ ಕಿಲ್ಲರ್ ಆಗುತ್ತಿದ್ದಾರೆ?

ಕೋರ್ಟ್‌ ತೀರ್ಪಿನಿಂದ ವೇಶ್ಯೆಯರ ಸಬಲೀಕರಣ ಆಗುತ್ತೆ ಎಂದು ಈ ಕುರಿತು ಹೋರಾಡ್ತಾ ಇರುವ ಎನ್‌ಜಿಒಗಳು ಹೇಳುತ್ತವೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಹಾಗೂ ಸೇವಾ ಯೋಜನೆಗಳನ್ನು ಪಡೆಯುವಂತೆ ಮಾಡುವುದು ಸುಲಭವಾಗಲಿದೆ. ಯಾಕೆಂದರೆ ಹೆಚ್ಚಾಗಿ ಈ ದೇಹ ಮಾರುವ ದಂಧೆಗೆ ಇಳಿಯೋರು ಬಡತನದ ಹಿನ್ನೆಲೆಯಿಂದ ಬರುವವರು. ಶ್ರೀಮಂತರ್ಯಾರೂ ಇಂಥ ಕೆಲಸಕ್ಕೆ ಇಳಿಯುವುದಿಲ್ಲ. ಹೈಟೆಕ್‌ ವೇಶ್ಯಾವಾಟಿಕೆಗಳ ಹಿನ್ನೆಲೆ ಹಾಗೂ ಸಮಸ್ಯೆಗಳು ಬೇರೆಯಾದರೂ ಇದೇ ಕಾನೂನುಗಳೇ ಅಲ್ಲಿಯೂ ಅನ್ವಯವಾಗುತ್ತವೆ. ಆದರೆ ದುರ್ಬಲ ವರ್ಗದ ವೇಶ್ಯೆಯರ ಆರೋಗ್ಯ, ಅವರ ಮಕ್ಕಳ ಶಿಕ್ಷಣ ಇತ್ಯಾದಿಗಳು ಸದಾಕಾಲ ಸಂಕಷ್ಟದಲ್ಲಿರುತ್ತವೆ. ಇವರ ಬದುಕಿನ ಸ್ಥಿತಿಗತಿಗಳನ್ನು ಉತ್ತಮಪಡಿಸಬಹುದು ಹಾಗೂ ಎರಡನೇ ತಲೆಮಾರು ಮತ್ತೆ ಈ ವ್ಯವಹಾರಕ್ಕೆ ಇಳಿಯದಂತೆ ನೋಡಿಕೊಳ್ಳಬಹುದು- ಎಂದು ವೇಶ್ಯೆಯರ ಪರ ವಾದಿಸುವವರು ಹೇಳ್ತಾರೆ.

ಸಮಾಜಕ್ಕೆ ಹಾನಿಕರ?
ಕೋರ್ಟ್‌ ತೀರ್ಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವವರೂ ತುಂಬಾ ಮಂದಿ ಇದ್ದಾರೆ. ಭಾರತದಂಥ ದೇಶದಲ್ಲಿ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವುದು ಸರಿಯಲ್ಲ. ಇಲ್ಲಿನ ಸಾಂಪ್ರದಾಯಿಕ ಜೀವನಪದ್ಧತಿಗೆ ಇದರಿಂದ ಇನ್ನಷ್ಟು ಹೊಡೆತ ಬೀಳಲಿದೆ. ಈಗಾಗಲೇ ಇಂಟರ್‌ನೆಟ್‌ ಮುಂತಾದ ಆಧುನಿಕ ಮಾಧ್ಯಮಗಳ ಮೂಲಕ ಪೋರ್ನೋಗ್ರಫಿ ಮೊದಲಾದ ಪ್ರಚೋದನಕಾರಿ ಕಂಟೆಂಟ್‌ಗಳಿಗೆ ಯುವಜನತೆ ತೆರೆದುಕೊಂಡಿದ್ದಾರೆ. ವೇಶ್ಯಾವಾಟಿಕೆ ಇನ್ನಷ್ಟು ಮುಕ್ತಗೊಂಡರೆ, ಆಗ ನಮ್ಮ ಯುವಜನತೆ ಇದರತ್ತ ಹೆಚ್ಚೆಚ್ಚು ಆಕರ್ಷಿತವಾಗಬಹುದು ಹಾಗೂ ಸುಲಭವಾಗಿ ಹಣ ಮಾಡುವ ದಾರಿಗಳನ್ನು ಕಂಡುಕೊಳ್ಳಬಹುದು. ಸಮಾಜ ಕಾಪಾಡಿಕೊಂಡುಬಂದ ನೈತಿಕ ಮೌಲ್ಯಗಳು ಗಾಳಿಯಲ್ಲಿ ತೂರಿಹೋಗಲಿವೆ. ವೇಶ್ಯಾವಾಟಿಕೆಯಲ್ಲಿ ತೊಡಗಿದವರು ಇನ್ನಷ್ಟು ಧೈರ್ಯವಾಗಿ ತಮ್ಮ ವಹಿವಾಟನ್ನು ನಡೆಸುವುದರಿಂದ, ಸಭ್ಯ ಸಾಮಾಜಿಕ ಜೀವನವನ್ನು ನಡೆಸುವವರಿಗೆ ಮುಜುಗರ ಉಂಟಾಗುವ ಸನ್ನಿವೇಶಗಳು ಅಧಿಕಗೊಳ್ಳಬಹುದು. ಭಾರತೀಯ ಸಮಾಜದ ಸೂಕ್ಷ್ಮ ಹೆಣಿಗೆಯಲ್ಲಿ ಬಿರುಕುಗಳು ಉಂಟಾಗಬಹುದು ಎಂದು ಹಲವರು ಆತಂಕಪಡುತ್ತಾರೆ.

ವೇಶ್ಯಾವಾಟಿಕೆಯಲ್ಲಿ ತೊಡಗಿದವರಿಗೂ ಸಾಮಾಜಿಕ ಮಾನ್ಯತೆ ಮತ್ತು ಸರಕಾರದ ಕಲ್ಯಾಣ ಯೋಜನೆಗಳು ಸಿಗಲಿವೆಯಾ? ಅವರಿಗೂ ಗುರುತುಪತ್ರ ಮುಂತಾದವು ಸಿಗುತ್ತವಾ? ಸಮಾಜದಲ್ಲಿ ಅವರ ಬಗ್ಗೆ ಇರೋ ಹೀನಾಯ ಭಾವನೆ ನಿವಾರಣೆ ಆಗುತ್ತಾ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

ಇದನ್ನೂ ಓದಿ: ವಿಸ್ತಾರ EXPLAINER: ವೇಶ್ಯಾವಾಟಿಕೆಗೆ ಇನ್ನು ಓಪನ್‌ ಪರ್ಮಿಟ್‌ ಸಿಗುತ್ತಾ?

Exit mobile version