ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರ ವಿರುದ್ಧ ಸಿಬಿಐ ದಾಖಲಿಸಿಕೊಂಡಿರುವ ಅಕ್ರಮ ಆಸ್ತಿ ಸಂಪಾದನೆ ಪ್ರಕರಣವನ್ನು (CBI Case against DK Shivakumar) ಹಿಂದಕ್ಕೆ ಪಡೆಯುವ ರಾಜ್ಯ ಸಚಿವ ಸಂಪುಟದ (State Cabinet meeting) ತೀರ್ಮಾನವನ್ನು ಪ್ರಶ್ನಿಸಿ ಬಿಜೆಪಿ ನಾಯಕ ಬಸನ ಗೌಡ ಪಾಟೀಲ್ ಯತ್ನಾಳ್ (Basanagowda pateel Yatnal) ಅವರು ಹೈಕೋರ್ಟ್ (Karnataka High court) ಮೆಟ್ಟಿಲೇರಿದ್ದಾರೆ. ಸರ್ಕಾರದ ಈ ನಡೆ ಕಾನೂನುಬಾಹಿರವಾಗಿದ್ದು, ಇದನ್ನು ತಡೆಯಬೇಕು ಎಂದು ಹೈಕೋರ್ಟ್‌ಗೆ ಸಲ್ಲಿಸಿದ ದಾವೆಯಲ್ಲಿ ಮನವಿ ಮಾಡಲಾಗಿದೆ.
ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಕೋರ್ಟ್‌ಗೆ ಹೋಗುವುದಾಗಿ ಬಸನಗೌಡ ಪಾಟೀಲ್ ಯತ್ನಾಳ್ ಹಿಂದೆಯೇ ಪ್ರಕಟಿಸಿದ್ದು, ಅದರಂತೆ ನಡೆದುಕೊಂಡಿದ್ದಾರೆ. ಸಿಬಿಐ ತನಿಖೆ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಈ ಹಂತದಲ್ಲಿ ತನಿಖೆಯನ್ನೇ ನಿಷ್ಫಲಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ. ಇದು ಕಾನೂನುಬಾಹಿರ ಕ್ರಮವಾಗಿದೆ ಎಂದು ಯತ್ನಾಳ್ ತಮ್ಮ ದಾವೆಯಲ್ಲಿ ಹೇಳಿದ್ದಾರೆ.
ಮುಕ್ತಾಯದ ಹಂತಕ್ಕೆ ಬಂದಿರುವ ಪ್ರಕರಣವನ್ನು ಕೆಲವೊಂದು ಸಂಬಂಧವಿಲ್ಲದ ತಾಂತ್ರಿಕ ತೊಡಕುಗಳನ್ನು ಮುಂದಿಟ್ಟು ಮೊಟಕುಗೊಳಿಸುವ ಉದ್ದೇಶವನ್ನು ಸರ್ಕಾರದ ನಿರ್ಧಾರ ಹೊಂದಿದೆ. ಈ ಮೂಲಕ ನ್ಯಾಯಾಂಗದ ಕಾರ್ಯ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನ ನಡೆದಿದೆ ಎಂದಿರುವ ಯತ್ನಾಳ್, ಈ ವಿಚಾರಕ್ಕೆ ಸೀಮಿತವಾಗಿ ಪ್ರಕರಣದ ವಿಚಾರಣೆಯನ್ನು ನಡೆಸಬೇಕು, ಪ್ರಕರಣ ವಾಪಸ್ ಪಡೆಯಲು ಅವಕಾಶ ನೀಡಬಾರದು ಎಂದು ಕೋರಿದ್ದಾರೆ.
2019ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಡಿ.ಕೆ. ಶಿವಕುಮಾರ್ ವಿರುದ್ಧ ಅಕ್ರಮ ಆಸ್ತಿ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಡಿ.ಕೆ. ಶಿವಕುಮಾರ್ ಅವರು ಗೊತ್ತಾದ ಆದಾಯ ಮೂಲಕ್ಕಿಂತ ಹೆಚ್ಚು ಸಂಪತ್ತು ಹೊಂದಿದ್ದಾರೆ ಎಂಬ ಆಪಾದನೆಯ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಈ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ಸಿಬಿಐ ತನಿಖೆ ನಡೆಸುತ್ತಿದೆ. ಸಿಬಿಐ ತನಿಖೆಯನ್ನು ತಡೆ ಹಿಡಿಯಬೇಕು ಎಂದು ಡಿ.ಕೆ. ಶಿವಕುಮಾರ್ ಅವರು ಹೈಕೋರ್ಟ್ ಮೊರೆ ಹೊಕ್ಕಿದ್ದು, ಅದು ಕೆಲವು ಕಾಲ ತಡೆಯಾಜ್ಞೆ ನೀಡಿ ಬಳಿಕ ಗ್ರೀನ್ ಸಿಗ್ನಲ್ ನೀಡಿತ್ತು. ಈ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಅವರು ಸುಪ್ರೀಂಕೋರ್ಟ್ ಕದವನ್ನೂ ತಟ್ಟಿದ್ದಾರೆ. ಸುಪ್ರೀಂಕೋರ್ಟ್ ರಾಜ್ಯ ಹೈಕೋರ್ಟ್ ಕಡೆಗೆ ಕೈ ತೋರಿಸಿದೆ.
ಈ ನಡುವೆ, ರಾಜ್ಯ ಸರ್ಕಾರ ನವೆಂಬರ್ 23ರಂದು ನಡೆದ ರಾಜ್ಯ ಸಚಿವ ಸಂಪುಟದಲ್ಲಿ ಕೇಸ್ ವಾಪಸ್ ಪಡೆಯುವ ನಿರ್ಧಾರವನ್ನು ಪ್ರಕಟಿಸಿದೆ. ಇದು ಬಿಜೆಪಿ ಮತ್ತು ಜೆಡಿಎಸ್ ನಾಯಕರನ್ನು ಕೆರಳಿಸಿದೆ. ಯಾವ ಕಾರಣಕ್ಕೂ ಇಂಥ ನಿರ್ಧಾರ ಮಾಡಬಾರದು. ಇದು ಒಂದು ಕೆಟ್ಟ ಉದಾಹರಣೆಯಾಗುತ್ತದೆ. ರಾಜಕೀಯ ಪ್ರೇರಿತವಾಗಿ ಇಂಥ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಬಿಜೆಪಿ-ಜೆಡಿಎಸ್ ನಾಯಕರು ಹೇಳಿದ್ದರು.
ಇದನ್ನೂ ಓದಿ: DK Shivakumar : ನ್ಯಾಯಾಂಗದಿಂದ ತಪ್ಪಿಸಿಕೊಳ್ಳಲು ಕ್ಲಾಸಿಕ್ ಎಕ್ಸಾಂಪಲ್; ಕೋರ್ಟ್ ಕದ ತಟ್ಟಲು ಯತ್ನಾಳ್ ರೆಡಿ
ಆದರೆ, ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ರಾಜಕೀಯ ಪ್ರೇರಿತವಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ಇದಕ್ಕೆ ಸ್ಪೀಕರ್ ಅನುಮತಿ ಪಡೆಯಲಾಗಿಲ್ಲ, ರಾಜ್ಯ ಗೃಹ ಇಲಾಖೆಯ ಅನುಮೋದನೆ ಇಲ್ಲ ಎನ್ನುವ ತಾಂತ್ರಿಕ ಅಂಶವನ್ನು ಎತ್ತಿ ಹೇಳುತ್ತಿದೆ. ಯಾವುದೇ ಪ್ರಕರಣ ಸಿಬಿಐಗೆ ನೀಡಬೇಕು ಎಂದರೆ ಸ್ಥಳೀಯ ಮಟ್ಟದಲ್ಲಿ ತನಿಖೆ ನಡೆಯಬೇಕು. ಅದಾದ ಬಳಿಕ ಅದರಲ್ಲಿ ವಿಶ್ವಾಸವಿಲ್ಲದೆ ಹೋದರೆ ಅದನ್ನು ಸಿಬಿಐಗೆ ವಹಿಸಲಾಗುತ್ತದೆ. ಇಲ್ಲಿ ನಿಯಮ ಮುರಿಯಲಾಗಿದೆ ಎಂದಿದೆ. ಈ ನಡುವೆ, ಪ್ರಕರಣವನ್ನು ಸಿಬಿಐ ಕೈಯಿಂದ ಕಿತ್ತು ರಾಜ್ಯದ ತನಿಖಾ ಸಂಸ್ಥೆಗಳಿಗೆ ಒಪ್ಪಿಸುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ.