Site icon Vistara News

ಪಿಎಫ್‌ಐ ರ‍್ಯಾಲಿಯಲ್ಲಿ ಮಕ್ಕಳಿಂದ ದ್ವೇಷ ಘೋಷಣೆ, ನಿಷೇಧದ ಕೂಗಿಗೆ ಮತ್ತೆ ಬಲ

PFI RALLY

ಹೊಸದಿಲ್ಲಿ: ಕೇರಳದ ಅಲಪ್ಪುಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಆಯೋಜಿಸಿದ ಪ್ರತಿಭಟನೆಯ ಸಂದರ್ಭದಲ್ಲಿ ಬಾಲಕನೊಬ್ಬ ಪ್ರಚೋದನಕಾರಿಯಾಗಿ ಕೋಮುವಾದಿ ಘೋಷಣೆಗಳನ್ನು ಕೂಗಿರುವುದು ಕೋಮುವಾದ ಬೆಳೆಯುತ್ತಿರುವ ಆತಂಕಕಾರಿ ಗತಿಯನ್ನು ಸೂಚಿಸುತ್ತಿದೆ. ಇದೇ ವೇಳೆ, ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಸುತ್ತ ಈಗಾಗಲೇ ಸುತ್ತಿಕೊಂಡಿರುವ ಸಂಶಯದ ಕುಣಿಕೆ ಇನ್ನಷ್ಟು ಬಿಗಿಯಾಗುವಂತಾಗಿದೆ.

ಈ ಘಟನೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂಬ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆರೋಪಕ್ಕೆ ಹೆಚ್ಚಿನ ಪುರಾವೆಯನ್ನು ಒದಗಿಸಿದೆ. ಕೇರಳದಲ್ಲಿ ಪಿಎಫ್‌ಐ ಸೇರಿದಂತೆ ಹಲವಾರು ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು ಹೇಗೆ ಹುಟ್ಟಿಕೊಳ್ಳುತ್ತಿವೆ ಎಂಬುದನ್ನು ಎನ್‌ಐಎ ಈಗಾಗಲೇ ತನ್ನ ಹಲವು ವರದಿಗಳಲ್ಲಿ ತಿಳಿಸಿದೆ. ಆದಾಗ್ಯೂ, “ಉಗ್ರವಾದಿ” ಗುಂಪು ಪಿಎಫ್‌ಐ ಮತ್ತು ಅದರ ರಾಜಕೀಯ ಮುಖವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಅನ್ನು ನಿಷೇಧಿಸುವ ವಿಚಾರದಲ್ಲಿ ಸಿಪಿಐ (ಎಂ), ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆರೋಪಗಳ ಸರಮಾಲೆ ಮುಂದುವರೆದಿದೆ.

ಈ ಉಗ್ರ ಸಂಘಟನೆಯನ್ನು ನಿಷೇಧಿಸಿ ಕೇಂದ್ರ ಸರಕಾರವು ಕಾನೂನು ಅಂಗೀಕರಿಸುವಂತೆ ಬಿಜೆಪಿ ತನ್ನ ಪ್ರಭಾವ ಬೀರುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅದೇ ಉಸಿರಿನಲ್ಲಿ, ಸಿಪಿಐ(ಎಂ) ಸರ್ಕಾರ ಈ ಉಗ್ರ ಗುಂಪುಗಳನ್ನು ಮೊಳಕೆಯಲ್ಲೇ ಚಿವುಟಲು ಏನನ್ನೂ ಮಾಡಿಲ್ಲ ಎಂದು ದೂಷಿಸಿದೆ. ಸಿಪಿಐ(ಎಂ) ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಪಿಎಫ್‌ಐನ ಬೆಳವಣಿಗೆಗೆ ಉತ್ತೇಜನ ನೀಡುತ್ತಿವೆ ಎಂದು ಬಿಜೆಪಿ ಆರೋಪಿಸಿದೆ.

ಬಾಲಕನ ಉಗ್ರ ಘೋಷಣೆಗಳ ವೀಡಿಯೋ ಸೇರಿದಂತೆ ಇಡೀ ಘಟನೆಯು ಕೇರಳದಲ್ಲಿ ಇಸ್ಲಾಮಿಕ್‌ ಉಗ್ರವಾದ ಮತ್ತು ಸಾಮಾಜಿಕ ಧ್ರುವೀಕರಣ ಬೇರೂರಿದೆ ಎಂಬುದನ್ನು ತೋರಿಸುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಕೇರಳದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳುತ್ತಾರೆ.

“ಇದು ಕೇರಳದ ಶಾಂತಿಯುತ ರಾಜ್ಯದಲ್ಲಿ ಅಶಾಂತಿ ಮತ್ತು ಕೋಮು ಭಾವನೆಗಳನ್ನು ಸೃಷ್ಟಿಸುವ ಏಕೈಕ ಗುರಿಯೊಂದಿಗೆ ಬೆಳೆಸುತ್ತಿರುವ ಭಯೋತ್ಪಾದನೆಯೇ ಆಗಿದೆ. ಅಂತಹ ಸಂಘಟನೆಗಳನ್ನು ನಿಷೇಧಿಸಬೇಕು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಆ ನಾಯಕ ಹೇಳಿದರು.

ಇದನ್ನೂ ಓದಿ: ಐಸಿಸ್‌ಗೆ ಯುವಕರನ್ನು ಸೇರಿಸುವ ಉಗ್ರರ ಜಾಲ ಬೆಂಗಳೂರಿನಲ್ಲೂ ಸಕ್ರಿಯ, ಎನ್‌ಐಎ ತನಿಖೆಯಲ್ಲಿ ಸ್ಫೋಟಕ ವಿವರ

“ಪಿಎಫ್‌ಐಗೆ ಎಡ ಸರ್ಕಾರದ ಬೆಂಬಲವಿದೆ. ಅಲ್ಲದೆ, ಕಾಂಗ್ರೆಸ್ ಕೂಡ ತನ್ನ ಅಲ್ಪಸಂಖ್ಯಾತರ ವೋಟ್ ಬ್ಯಾಂಕ್ ಕೈತಪ್ಪದಂತೆ ನೋಡಿಕೊಳ್ಳಲು ಪಿಎಫ್‌ಐ ಬಗ್ಗೆ ಮೃದು ನಿಲುವನ್ನು ತಳೆದಿದೆ” ಎಂದು ಕೇರಳ ಬಿಜೆಪಿ ವಕ್ತಾರ ವಿವಿ ರಾಜೇಶ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಆಡಳಿತಾರೂಢ ಸಿಪಿಐ(ಎಂ) ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಪಿಎಫ್‌ಐನ ಬೆಳವಣಿಗೆಗೆ ಉತ್ತೇಜನ ನೀಡುತ್ತಿರುವ ಪ್ರಮುಖ “ಆರೋಪಿಗಳು” ಎಂದು ಅವರು ಹೇಳಿದರು.

ಕೇರಳ ಸರ್ಕಾರ ಮತ್ತು ಸಿಪಿಐ (ಎಂ)ನ ಬಲವಾದ ಬೆಂಬಲದಿಂದಾಗಿ ಪಿಎಫ್‌ಐ ಬಲಗೊಳ್ಳುತ್ತಿದೆ. ಪಿಣರಾಯಿ ವಿಜಯನ್ ಆಳ್ವಿಕೆಯಲ್ಲಿ ಪಿಎಫ್‌ಐನ ರಾಷ್ಟ್ರವಿರೋಧಿ ಚಟುವಟಿಕೆಗಳನ್ನು ಹತ್ತಿಕ್ಕಲು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಪಿಎಫ್‌ಐ ಶಕ್ತಿಶಾಲಿಯಾಗಿದೆ ಎಂದು ರಾಜೇಶ್ ಹೇಳಿದ್ದಾರೆ. ಮತ್ತೊಂದೆಡೆ, ಕೇರಳದಲ್ಲಿ ಈ ಭಯೋತ್ಪಾದನಾ ಚಟುವಟಿಕೆಗಳ ಹಿಂದೆ ಕಾಂಗ್ರೆಸ್ ಕೂಡ ಪ್ರಮುಖ ಆರೋಪಿಯಾಗಿದೆ. ಯುಡಿಎಫ್ ಮತ್ತು ಕಾಂಗ್ರೆಸ್‌ನ ಮಿತ್ರನಾಗಿರುವ ಮುಸ್ಲಿಂ ಲೀಗ್ ಪಕ್ಷವು ಎನ್‌ಡಿಎಫ್ ಮತ್ತು ಪಿಎಫ್‌ಐಗೆ ಪ್ರಮುಖ ಪ್ರಾಯೋಜಕನಾಗಿದೆ. ಅದಕ್ಕಾಗಿಯೇ ಕಾಂಗ್ರೆಸ್‌ ಮೌನವಾಗಿದೆ. ಪಿಎಫ್‌ಐ ಅನ್ನು ವಿರೋಧಿಸಿದರೆ ಅಲ್ಪಸಂಖ್ಯಾತರ ಮತಗಳನ್ನು ಕಳೆದುಕೊಳ್ಳಬೇಕಾದೀತು ಎಂಬ ಭಯ ಕಾಂಗ್ರೆಸ್‌ನದ್ದು ಎಂದು ಅವರು ನುಡಿದರು.

ಮಾಜಿ ಸಿಎಂ ಉಮ್ಮನ್ ಚಾಂಡಿ ಹೇಳೋದೇನು?
ಜಾತ್ಯತೀತತೆಯೇ ಭಾರತದ ಶಕ್ತಿಯಾಗಿದ್ದು, ಜನರನ್ನು ಈ ನೆಲೆಗಟ್ಟಿನಲ್ಲಿ ಬಲಗೊಳಿಸಬೇಕು. ಸಮಾಜದ ಜಾತ್ಯತೀತ ಸ್ವರೂಪಕ್ಕೆ ಧಕ್ಕೆ ತರುವ ಕೃತ್ಯಗಳಿಂದ ವಿಚಲಿತರಾಗಬಾರದು ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದರು.

“1993 ರಲ್ಲಿ ಬಾಬರಿ ಮಸೀದಿ ಧ್ವಂಸ ಮತ್ತು ನಂತರದ ಗಲಭೆಗಳ ನಂತರ ರಚಿಸಲಾಗಿದ್ದ ರಾಷ್ಟ್ರೀಯ ಅಭಿವೃದ್ಧಿ ರಂಗದ (ಎನ್‌ಡಿಎಫ್‌) ಎರಡನೇ ಅವತಾರ ಪಿಎಫ್‌ಐ” ಎಂದು ಹೇಳಿರುವ ಎನ್‌ಐಎ ದಾಖಲೆಗಳು ಹೇಳುತ್ತವೆ.

ದೇಶದ ಭದ್ರತೆಗೆ ಬೆದರಿಕೆಯಾಗಿರುವ ಪಿಎಫ್‌ಐ ಸೇರಿದಂತೆ ಹಲವಾರು ಮುಸ್ಲಿಂ ಮೂಲಭೂತ ಸಂಘಟನೆಗಳು ಕೇರಳದಲ್ಲಿ ಹೇಗೆ ಅಣಬೆಗಳಂತೆ ಹುಟ್ಟಿಕೊಂಡಿವೆ ಎಂಬುದನ್ನು ಎನ್‌ಐಎ ತನ್ನ ವರದಿಗಳಲ್ಲಿ ಉಲ್ಲೇಖಿಸಿದೆ. ಇದರ ಹಿಂದಿನ ಸ್ವರೂಪವಾದ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ (ಎನ್‌ಡಿಎಫ್‌), 2006 ರಲ್ಲಿ, ತಮಿಳುನಾಡಿನ ಮನಿತಾ ನೀತಿ ಪಸರೈ (ಎಂಎನ್‌ಪಿ) ಮತ್ತು ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (ಕೆಎಫ್‌ಡಿ)- ಮತ್ತು ಇತರ ಸಮಾನ ಮನಸ್ಕ ಸಂಘಟನೆಗಳೊಂದಿಗೆ ವಿಲೀನಗೊಂಡು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಚನೆಯಾಯಿತು ಎಂದು ಎನ್‌ಐಎ ತನ್ನ ದಾಖಲೆಯಲ್ಲಿ ವಿವರಿಸಿದೆ. ಇಂದು ದೇಶಾದ್ಯಂತ 23 ರಾಜ್ಯಗಳಲ್ಲಿ ಪಿಎಫ್‌ಐ ಅಸ್ತಿತ್ವವಿರುವುದನ್ನು ಅದು ಉಲ್ಲೇಖಿಸಿದೆ.

”ಪಿಎಫ್‌ಐ ನಿಷೇಧಿಸುವ ಕುರಿತು ಕೇಂದ್ರ ಸರ್ಕಾರದ ಆದೇಶಕ್ಕಾಗಿ ನಾವು ಕಾಯುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯದ ಬಿಜೆಪಿಯು ಪಿಎಫ್‌ಐ ಮತ್ತು ಎಸ್‌ಡಿಪಿಐ ಭಯೋತ್ಪಾದಕ ಸಂಘಟನೆಗಳು ಎಂಬ ದೃಢ ನಿಲುವನ್ನು ತಳೆದಿದ್ದು, ಅವುಗಳನ್ನು ತಕ್ಷಣವೇ ನಿಷೇಧಿಸಬೇಕು” ಎಂದು ರಾಜೇಶ್ ಹೇಳಿದರು.

ವೈರಲ್ ವಿಡಿಯೊವನ್ನು ತನಿಖೆ ಮಾಡಿದ ನಂತರ, ಕೇರಳ ಪೊಲೀಸರು ಇಬ್ಬರು ಪಿಎಫ್‌ಐ ಮುಖಂಡರಾದ ನವಾಜ್ ವಂದನಂ ಮತ್ತು ಮುಜೀಬ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇವರಿಬ್ಬರೂ ಪಿಎಫ್‌ಐನ ಅಲಪ್ಪುಳ ಘಟಕದ ಹಿರಿಯ ಪದಾಧಿಕಾರಿಗಳಾಗಿದ್ದಾರೆ.

ಇಂತಹ ಧಾರ್ಮಿಕ-ರಾಜಕೀಯ ರ‍್ಯಾಲಿಗಳಲ್ಲಿ ಮಕ್ಕಳು ಭಾಗವಹಿಸುವ ಮತ್ತು ಘೋಷಣೆಗಳನ್ನು ಕೂಗಲು ಬಳಸಿಕೊಳ್ಳುವ ಬಗ್ಗೆ ಕೇರಳ ಹೈಕೋರ್ಟ್ ಕೂಡ ಗಂಭೀರ ಕಳವಳ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿ ಗೋಪಿನಾಥ್ ಅವರು, ಪಿಎಫ್‌ಐ ನಂತಹ ರ‍್ಯಾಲಿಗಳಲ್ಲಿ ಮಕ್ಕಳು ಭಾಗವಹಿಸುವುದು ಕಾನೂನುಬದ್ಧವೇ ಎಂಬುದನ್ನು ಪ್ರಶ್ನಿಸಿದರು. “ಇದನ್ನು ನಿಷೇಧಿಸುವ ಯಾವುದೇ ಕಾನೂನು ಇದೆಯೇ ಎಂದು ನಾನು ತಿಳಿದುಕೊಳ್ಳಲು ಬಯಸುತ್ತೇನೆ. ಈ ಮಕ್ಕಳು ತಮ್ಮೊಳಗೆ ದ್ವೇಷದಿಂದ ಬೆಳೆಯುತ್ತಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ಪಿಎಫ್‌ಐ ಅನ್ನು ಈಗಾಗಲೇ ಹಲವಾರು ರಾಜ್ಯಗಳಲ್ಲಿ ನಿಷೇಧಿಸಲಾಗಿದೆ. ದೇಶವ್ಯಾಪಿಯಾಗಿ “ಅತಿ ಶೀಘ್ರದಲ್ಲಿ” ಪಿಎಫ್‌ಐ ಮತ್ತು ಎಸ್‌ಡಿಪಿಐ ಎರಡನ್ನೂ ನಿಷೇಧಿಸಲಾಗುವುದು ಎಂದು ಕೇಂದ್ರ ಸರ್ಕಾರದ ಮೂಲಗಳು ಖಚಿತಪಡಿಸುತ್ತವೆ.

Exit mobile version