ಭೋಪಾಲ್: ದೇಶದಲ್ಲಿ ಬಾಲಕಿಯರು ಸೇರಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದು, ಅತ್ಯಾಚಾರ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಎಷ್ಟೇ ಕಠಿಣ ಕ್ರಮ ಜಾರಿಗೆ ತಂದರೂ ಕ್ರೂರ ಜನ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಮಧ್ಯಪ್ರದೇಶದಲ್ಲಿ (Madhya Pradesh) 12 ವರ್ಷದ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಲೈಂಗಿಕ ದೌರ್ಜನ್ಯದ ಬಳಿಕ ಬಾಲಕಿಯು ಸಹಾಯಕ್ಕಾಗಿ ಅಂಗಲಾಚಿಕೊಂಡು ಮನೆ ಮನೆಗೆ ಹೋದರೂ ಯಾರೂ ಸಹಾಯ ಮಾಡದಿರುವುದು ಜನರ ಮನಸ್ಥಿತಿಗೂ ಕನ್ನಡಿ ಹಿಡಿದಂತಿದೆ.
ಉಜ್ಜಯಿನಿಯ ಬದ್ನಗರದ ಬಳಿ 12 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಇದಾದ ಬಳಿಕ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕಿಯು ಅರೆಬೆತ್ತಲೆಯಾಗಿ ರಸ್ತೆ ಮೇಲೆ ನಡೆದುಕೊಂಡು ಹೋಗಿದ್ದಾಳೆ. ನನಗೆ ಸಹಾಯ ಮಾಡಿ ಎಂದು ಮನೆ ಮನೆಗೆ ತೆರಳಿ ಅಂಗಲಾಚಿದರೂ ಯಾರೋಬ್ಬರು ಕೂಡ ಬಾಲಕಿಗೆ ಸಹಾಯ ಮಾಡಿಲ್ಲ. ಬಾಲಕಿಯ ದುಸ್ಥಿತಿಯನ್ನು ನೋಡಿಕೊಂಡು ಸುಮ್ಮನಿದ್ದರೇ ಹೊರತು, ಏನಾಯ್ತಮ್ಮ ಎಂದು ಕೇಳಿಲ್ಲ, ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡಿಲ್ಲ. ಇಂತಹ ಭೀಕರ ದೃಶ್ಯಗಳಿರುವ ವಿಡಿಯೊ ವೈರಲ್ ಆಗಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಆಸ್ಪತ್ರೆಗೆ ಸಾಗಿಸಿದ ಸಂತ
ಗೋಳಾಡುತ್ತ ಗೋಳಾಡುತ್ತ ಬಾಲಕಿಯು ಆಶ್ರಮವೊಂದನ್ನು ಪ್ರವೇಶಿಸಿದ್ದಾಳೆ. ಅಲ್ಲಿರುವ ಸಂತರೊಬ್ಬರು ಬಾಲಕಿಗೆ ಟವೆಲ್ ಹೊದಿಸಿ, ಆಕೆಯನ್ನು ಉಜ್ಜಯಿನಿ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ನಿಜ ಎಂಬುದು ವೈದ್ಯಕೀಯ ತಪಾಸಣೆ ಬಳಿಕ ಗೊತ್ತಾಗಿದೆ. ರಕ್ತಸ್ರಾವ, ಮೈತುಂಬ ಗಾಯಗಳಾದ ಕಾರಣ ಬಾಲಕಿಯನ್ನು ಇಂದೋರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಆಕೆಯ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ದೂರು ನೀಡಲು ಹೋದ ದಲಿತ ಮಹಿಳೆ ಮೇಲೆಯೇ ಅತ್ಯಾಚಾರ ಎಸಗಿದ ಪಿಎಸ್‌ಐ; ಇದೆಂಥಾ ಅನಾಚಾರ!
ಬಾಲಕಿ ಮೇಲೆ ಯಾರು ಅತ್ಯಾಚಾರ ಎಸಗಿದ್ದಾರೆ ಎಂಬ ಕುರಿತು ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ. ಬಾಲಕಿಯಂತೂ ಪೊಲೀಸರ ಒಂದು ಪ್ರಶ್ನೆಗೂ ಉತ್ತರಿಸಲು ಆಗದಷ್ಟು ಕುಗ್ಗಿಹೋಗಿದ್ದಾಳೆ. ಅಪರಿಚಿತರ ವಿರುದ್ಧ ಪೊಲೀಸರು ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಗೆಯೇ, ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡವೊಂದನ್ನು ರಚಿಸಿದ್ದಾರೆ. ಹಾಗೆಯೇ, ಆರೋಪಿಗಳ ಕುರಿತು ಸುಳಿವು ಸಿಕ್ಕರೆ ಮಾಹಿತಿ ಕೊಡಿ ಎಂಬುದಾಗಿಯೂ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.