ಮೈಸೂರು/ಮಂಡ್ಯ: ಮಂಡ್ಯ ಹಾಗೂ ಮೈಸೂರಿನಲ್ಲಿ ಪ್ರತ್ಯೇಕ ಕಡೆಗಳಲ್ಲಿ ನಡೆದ ಅಪಘಾತದಲ್ಲಿ (Accident Case) ವೃದ್ಧೆಯರಿಬ್ಬರು ಅಸುನೀಗಿದ್ದಾರೆ. ಮೈಸೂರಿನ ನಂಜನಗೂಡಿನಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್‌ವೊಂದು ವೃದ್ಧೆ ಮೇಲೆ ಹರಿದಿದೆ. ಪರಿಣಾಮ ವೃದ್ಧೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪಾರ್ವತಮ್ಮ (75) ಮೃತ ದುರ್ದೈವಿ.
ಪಾರ್ವತಮ್ಮ ನಂಜನಗೂಡಿನ ಮೇದಾರ ಬೀದಿ ನಿವಾಸಿಯಾಗಿದ್ದರು. ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದಾಗ, ಚಾಮರಾಜನಗರ ಕಡೆಯಿಂದ ಬರುತ್ತಿದ್ದ ಕೆಎಸ್ಆರ್‌ಟಿಸಿ ಬಸ್‌ವೊಂದು ಡಿಕ್ಕಿ ಹೊಡೆದು ವೃದ್ಧೆ ಮೇಲೆ ಹರಿದಿದೆ. ತೀವ್ರ ರಕ್ತಸ್ರಾವಗೊಂಡ ಪಾರ್ವತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ನಂಜನಗೂಡು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.
ಇದನ್ನೂ ಓದಿ: Physical Abuse : ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಮೇಲೆ ಅತ್ಯಾಚಾರಗೈದು ಕೊಲೆಗೆ ಯತ್ನಿಸಿದ ಕಾಮುಕ
ಹಳಿ ದಾಟುವಾಗ ರೈಲಿಗೆ ಸಿಲುಕಿ ವೃದ್ಧೆ ಮೃತ್ಯು
ರೈಲಿಗೆ ಸಿಲುಕಿ ವೃದ್ಧೆಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಮಂಡ್ಯ ತಾಲೂಕಿನ ಹನಕೆರೆ ಬಳಿ ಘಟನೆ ನಡೆದಿದೆ. ಹೊನ್ನಗಳ್ಳಿ ಮಠದ ನಿಂಗಮ್ಮ (70) ಮೃತ ದುರ್ದೈವಿ.
ಮಂಡ್ಯಕ್ಕೆ ತೆರಳುವ ಮಾರ್ಗದಲ್ಲಿ ಹನಕೆರೆ ಬಳಿ ರೈಲ್ವೆ ಗೇಟ್ ಹಾಕಲಾಗಿತ್ತು. ರೈಲ್ವೆ ಗೇಟ್ ಬಳಿ ದಾಟುವ ವೇಳೆ ತಿರುಪತಿ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ನಿಂಗಮ್ಮ ಮೃತಪಟ್ಟಿದ್ದಾರೆ. ರೈಲು ವೇಗವಾಗಿ ಬಂದು ಡಿಕ್ಕಿ ಹೊಡೆದ ರಭಸಕ್ಕೆ 100 ಮೀಟರ್ ದೂರ ವೃದ್ಧೆಯ ದೇಹ ಎಸೆಯಲ್ಪಟ್ಟಿದೆ. ತಲೆಗೆ ಗಂಭೀರ ಪೆಟ್ಟಾಗಿದ್ದು ನಿಂಗಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಮಂಡ್ಯ ರೈಲ್ವೇ ಹೊರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. ಇನ್ನೂ ಹನಕೆರೆ ಬಳಿ 20ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ದಾರಿ ಇದಾಗಿದೆ. ಮೇಲ್ಸುತುವೆ ನಿರ್ಮಿಸುವ ಬಗ್ಗೆ ಹಲವು ವರ್ಷಗಳ ಬೇಡಿಕೆ ಇದ್ದರೂ ಹಲವು ಕಾರಣಗಳಿಂದ ನೆರವೇರದೇ ಸಾರ್ವಜನಿಕರಿಗೆ ತೀವ್ರ ಅನಾನುಕೂಲವಾಗಿದೆ. ಇದರಿಂದಾಗಿ ಅಪಘಾತಗಳಿಗೆ ಆಹ್ವಾನ ನೀಡಿದಂತಾಗಿದೆ ಎಂದು ಜನರು ಕಿಡಿಕಾರಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ