ಮಂಡ್ಯ: ಬೀಭತ್ಸವಾಗಿ ರೇಣುಕಾಸ್ವಾಮಿ ಕೊಲೆ (Renuka Swamy Murder) ನಡೆಸಿದ ನಟ ದರ್ಶನ್ (Actor Darshan) ಗ್ಯಾಂಗ್ ಪೊಲೀಸರನ್ನೂ ಬಿಟ್ಟಿಲ್ಲ. ಪೊಲೀಸ್ ಕಾನ್‌ಸ್ಟೇಬಲ್ (Police Constable) ಮೇಲೂ ದರ್ಪ ಮೆರೆದಿರುವ ಡಿ ಬಾಸ್ ಗ್ಯಾಂಗ್, ತೀವ್ರ ಹಲ್ಲೆ (Assault case) ನಡೆಸಿರುವುದು ಬೆಳಕಿಗೆ ಬಂದಿದೆ. ಗಾಯಗೊಂಡ ಪೊಲೀಸ್ ಪೇದೆ ಸರ್ಕಾರಿ ಆಸ್ಪತ್ರೆಯಲ್ಲಿ ಇದಕ್ಕಾಗಿ ಚಿಕಿತ್ಸೆ ಪಡೆದ ದಾಖಲೆಯೂ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ.
ಇದು ನಡೆದಿರುವುದು ಬೇರೆಲ್ಲೂ ಅಲ್ಲ, ಮದ್ದೂರು ಶಾಸಕರ ಮನೆಯಲ್ಲಿಯೇ ಹಲ್ಲೆ ನಡೆದಿತ್ತು ಎನ್ನಲಾಗಿದೆ. ಶಾಸಕ ಕದಲೂರು ಉದಯ್ ಅವರ ಗನ್ ಮ್ಯಾನ್ ಆಗಿದ್ದ ಡಿಎಆರ್ ಪೇದೆ ನಾಗೇಶ್ ಎಂಬವರ ಮೇಲೆ ಹಲ್ಲೆ ನಡೆಸಲಾಗಿತ್ತು. ಮದ್ದೂರಿನಲ್ಲಿ ದರ್ಶನ್ ಲೋಕಸಭಾ ಚುನಾವಣೆ ಕಣದ ಪ್ರಚಾರಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ.
ಏಪ್ರಿಲ್ 22ರಂದು ಮದ್ದೂರು ಕ್ಷೇತ್ರದಲ್ಲಿ ಸ್ಟಾರ್ ಚಂದ್ರು ಪರ ದರ್ಶನ್ ಕ್ಯಾಂಪೇನ್ ನಡೆದಿತ್ತು. ಆ ವೇಳೆ ಗನ್ ಮ್ಯಾನ್ ನಾಗೇಶ್ ಜೊತೆ ದರ್ಶನ್ ಪಟಾಲಂ ಗಲಾಟೆ ತೆಗೆದಿದೆ. ಮುಖಂಡರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವ ವಿಚಾರದಲ್ಲಿ ಡಿ ಗ್ಯಾಂಗ್‌ಗ ಲಕ್ಷ್ಮಣ್, ನಾಗರಾಜು ಹಾಗೂ ಇತರರು ಜಗಳ ತೆಗೆದಿದ್ದರು. ನಂತರ ಇದೇ ಜಗಳ ಮುಂದುವರೆಸಿ ಕದಲೂರು ಉದಯ್ ಮನೆ ಮುಂದೆ ಪೇದೆ ನಾಗೇಶ್‌ಗೆ ಹಲ್ಲೆ ನಡೆಸಿದ್ದರು.
ಹಲ್ಲೆ ಮಾಡುವುದರೊಂದಿಗೆ, ʼಪೊಲೀಸರು ನಮ್ಮನ್ನೂ ಏನೂ ಮಾಡಲು ಆಗಲ್ಲ, ನಮ್ಮತ್ರ ಏನೂ ಕಿತ್ಕೊಳೋಕೆ ಆಗಲ್ಲʼ ಎಂದು ಧಮಕಿ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಕುರಿತು ಪೇದೆ ನಾಗೇಶ್ ಕೆಸ್ತೂರು ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ನಂತರ ರಾಜಿ ಸಂಧಾನದ ಮೂಲಕ ನಾಗೇಶರನ್ನು ಶಾಸಕ ಉದಯ್ ಮರಳಿ ಕಳುಹಿಸಿದ್ದರು.
ಇದಾದ ಬಳಿಕ ನೊಂದಿದ್ದ ನಾಗೇಶ್, ಶಾಸಕ ಉದಯ್ ಗನ್ ಮ್ಯಾನ್ ಕೆಲಸದಿಂದ ಹೊರಬಂದಿದ್ದರು. ಇದೀಗ ಡಿಎಆರ್ ತುಕಡಿಯಲ್ಲಿ ನಾಗೇಶ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಲ್ಲೆ ನಡೆದ ಬಳಿಕ ನಾಗೇಶ್ ಮದ್ದೂರಿನ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನೂ ಪಡೆದಿದ್ದರು.
ದರ್ಶನ್ ಡಿಎನ್‌ಎ ಪರೀಕ್ಷೆಗೆ ಮುಂದಾದ ಪೊಲೀಸರು
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renuka Swamy Murder Case) ಪ್ರಕರಣಕ್ಕೆ ಸಂಬಂಧಿಸಿ ಎ2 ನಟ ದರ್ಶನ್ (Actor Darshan) ಸೇರಿದಂತೆ 9 ಆರೋಪಿಗಳಿಗೆ ಡಿಎನ್‌ಎ ಪರೀಕ್ಷೆ (DNA test) ನಡೆಸಲು ಪೊಲೀಸರು ಮುಂದಾಗಿದ್ದಾರೆ. ಪವಿತ್ರಾ ಗೌಡ (Pavithra Gowda) ಡಿಎನ್‌ಎ ಟೆಸ್ಟ್ ಕೂಡ ನಡೆಯಲಿದೆ.
ಇದಕ್ಕಾಗಿ ಆರೋಪಿಗಳ ರಕ್ತ, ಕೂದಲಿನ ಮಾದರಿ ಸಂಗ್ರಹಿಸಲಾಗಿದೆ. ಕೊಲೆ ನಡೆದ ಜಾಗದಲ್ಲಿ ಪತ್ತೆಯಾದ ಕೂದಲು, ರಕ್ತದ ಮಾದರಿಗೂ ಇದಕ್ಕೂ ಮ್ಯಾಚ್ ಮಾಡುವ ಪ್ರಕ್ರಿಯೆ ನಡೆಯಲಿದೆ. ಎಫ್ಎಸ್ಎಲ್‌ಗೆ ಈ ಕೂದಲು, ರಕ್ತದ ಮಾದರಿ ಕಳುಹಿಸಿ ತಾಳೆ ನೋಡಲಾಗುತ್ತದೆ. ಕೊಲೆಯಾದ ಸ್ಥಳದಲ್ಲಿ ಪತ್ತೆಯಾದ ಕೂದಲು, ರಕ್ತದ ಮಾದರಿಗಳು ಒಂದೇ ಆದಲ್ಲಿ ಕೊಲೆಗೆ ಮತ್ತಷ್ಟು ಸಾಕ್ಷ್ಯ ಲಭ್ಯವಾಗಲಿದೆ. ಹೀಗಾಗಿ ಆರೋಪಿಗಳ ಡಿಎನ್ಎ ಟೆಸ್ಟ್‌ಗೆ ಪೊಲೀಸರು ತೊಡಗಿದ್ದಾರೆ.
ಹಿಂಸೆಯ ಕರಾಳತೆಗೆ ಬೆಚ್ಚಿದ ಪೊಲೀಸರು
ಪ್ರಕರಣದಲ್ಲಿ ದಿನೇ ದಿನೆ ಹೊರಬರುತ್ತಿರುವ, ರೇಣುಕಾಸ್ವಾಮಿಗೆ ನೀಡಿದ ಚಿತ್ರಹಿಂಸೆಯ ಕರಾಳತೆ ಎಲ್ಲರನ್ನೂ ಬೆಚ್ಚಿಬೀಳಿಸುವಂತಿದೆ. ರೇಣುಕಾಸ್ವಾಮಿ ದೇಹವೆಲ್ಲಾ ಛಿದ್ರಛಿದ್ರವಾಗುವಂತೆ ಹಿಂಸಿಸಲಾಗಿದೆ. ಬಾಸುಂಡೆಗಳು ಎದ್ದು ಕಾಣುವಂತಿದ್ದು, ರಕ್ತ ಮೈಮೇಲೆ ಹೆಪ್ಪುಗಟ್ಟಿತ್ತು. ಆರಂಭದಲ್ಲಿ ಒದ್ದು, ಹೊಡೆದು ಕೊಲ್ಲಲಾಯಿತು ಎಂದಿದ್ದ ಪ್ರಕರಣದಲ್ಲಿ ಮುಂದೆ ಮರ್ಮಾಂಗಕ್ಕೆ ಬಿದ್ದ ಹೊಡೆತ, ದೇಹದಲ್ಲಿ ಹರಿದ ಕರೆಂಟ್‌ನ ಮಾಹಿತಿ ಹೊರಬರುತ್ತಾ ಹೋಯಿತು, ದೊಣ್ಣೆ, ಬೂಟು, ರಿಪೀಸ್ ಪಟ್ಟಿಗಳಿಂದ ರೇಣುಕಾಸ್ವಾಮಿಯ ದೇಹದ ಮೇಲೆ ಬಿದ್ದ ಹೊಡೆತದಿಂದ ಬೆನ್ನಿನ ಮೇಲಿನ ಒಂದಡಿ ಜಾಗದ ಚರ್ಮವೇ ಕಾಣದಂತಾಗಿದೆ. ಸಿಗರೇಟ್‌ನಿಂದ ಸುಟ್ಟಂತಿರುವ ಗಾಯಗಳು, ತಲೆ, ಮುಖ, ಹೊಟ್ಟೆಯ ಭಾಗಗಳಿಗೆ ಬಿದ್ದ ಹೊಡೆತ ಮತ್ತು ಗಾಯದ ಗುರುತುಗಳು ರೇಣುಕಾಸ್ವಾಮಿ ಮೇಲೆ ಆದ ಹಲ್ಲೆಯ ತೀವ್ರತೆಯನ್ನು ಸಾರಿ ಸಾರಿ ಹೇಳಿವೆ.
ಇದನ್ನೂ ಓದಿ: Pavithra Gowda: ಪವಿತ್ರಾ ಗೌಡಳ ಸಮಪಾಲು- ಸಮಬಾಳು ಪಾಲಿಸಿ! ದರ್ಶನ್ ಪತ್ನಿ ಜತೆ ಇರುವುದೆಲ್ಲ ಇವಳಿಗೂ ಬೇಕಿತ್ತು!