Site icon Vistara News

ಹನಿ ಟ್ರ್ಯಾಪ್‌ ಮಾಡಿ ಕೋಲ್ಕತಾಗೆ ಕರೆಸಿಕೊಂಡು ಬಾಂಗ್ಲಾದೇಶ ಸಂಸದನ ಕೊಲೆ; ಚರ್ಮ ಸುಲಿದು, ದೇಹ ಪೀಸ್‌ ಪೀಸ್‌

bangladesh mp murder ಹನಿ ಟ್ರ್ಯಾಪ್

ಹೊಸದಿಲ್ಲಿ: ಬೆಚ್ಚಿ ಬೀಳಿಸುವಂಥ ಪ್ರಕರಣವೊಂದರಲ್ಲಿ, ಬಾಂಗ್ಲಾದೇಶದ ಸಂಸತ್‌ ಸದಸ್ಯರೊಬ್ಬರನ್ನು (Bangladesh MP) ಕೋಲ್ಕತ್ತಾದಲ್ಲಿ (Kolkata) ಹತ್ಯೆ (Murder Case) ಮಾಡಲಾಗಿದೆ. ಸಂಸದ ಅನ್ವರುಲ್ ಅಜೀಮ್ ಅನಾರ್ ಅವರನ್ನು ಕೊಂದು, ಚರ್ಮು ಸುಲಿದು, ದೇಹವನ್ನು ಕತ್ತರಿಸಿ ಪ್ಲಾಸ್ಟಿಕ್‌ ಪ್ಯಾಕ್‌ಗಳಲ್ಲಿ ಪ್ಯಾಕ್‌ ಮಾಡಿ ನಗರದಾದ್ಯಂತ ಹಲವಾರು ಕಡೆ ಎಸೆಯಲಾಗಿದೆ. ಹನಿ ಟ್ರ್ಯಾಪ್‌ (Honey trap) ಮಾಡಿ ಸಂಸದರನ್ನು ಕರೆಸಿಕೊಳ್ಳಲಾಗಿತ್ತು ಎಂದು ಕೂಡ ತಿಳಿದುಬಂದಿದೆ.

ಬಾಂಗ್ಲಾ ಸಂಸದ ಅನ್ವರುಲ್ ಅಜೀಮ್ ಅನಾರ್ ಕೋಲ್ಕತ್ತಾಗೆ ಬಂದ ಎರಡು ದಿನಗಳ ನಂತರ, ಮೇ 14ರಿಂದ ನಾಪತ್ತೆಯಾಗಿದ್ದರು. ಇದರ ಬೆನ್ನು ಬಿದ್ದ ಪೊಲೀಸರು ಮುಂಬೈನಲ್ಲಿ ನೆಲೆಸಿರುವ ಬಾಂಗ್ಲಾದೇಶದ ಅಕ್ರಮ ವಲಸಿಗ ಜಿಹಾದ್ ಹವ್ಲಾದಾರ್ ಎಂಬಾತನನ್ನು ಪಶ್ಚಿಮ ಬಂಗಾಳದ ಸಿಐಡಿ (ಅಪರಾಧ ತನಿಖಾ ಇಲಾಖೆ) ಪೊಲೀಸರು ಬಂಧಿಸಿದ್ದರು. ತನಿಖೆಯ ವೇಳೆ ತಾನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡ ಜಿಹಾದ್ ಹವ್ಲಾದಾರ್, ಕೊಲೆಗೈದುದರ ವಿವರಗಳನ್ನು ನೀಡಿದ್ದಾನೆ.

ಸಿಐಡಿ ಮೂಲಗಳ ಪ್ರಕಾರ, ಕೋಲ್ಕತ್ತಾದ ನ್ಯೂ ಟೌನ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಬಾಂಗ್ಲಾದೇಶದ ಸಂಸದರನ್ನು ಈತ ಹತ್ಯೆಗೈದಿದ್ದಾನೆ. ಬಾಂಗ್ಲಾದೇಶ ಮೂಲದ, ಯುಎಸ್ ಪ್ರಜೆ ಅಖ್ತರುಜ್ಜಾಮಾನ್ ಎಂಬಾತನೇ ಇದರ ಮಾಸ್ಟರ್ ಮೈಂಡ್ ಎಂದು ಹವ್ಲಾದರ್ ಬಹಿರಂಗಪಡಿಸಿದ್ದಾನೆ. ಅಖ್ತರುಜ್ಜಾಮಾನ್ ಅಮೆರಿಕದ ನಿವಾಸಿಯಾಗಿದ್ದು, ಕೊಲೆ ನಡೆದುದು ಆತನದೇ ಫ್ಲ್ಯಾಟ್‌ನಲ್ಲಿ. ಅಖ್ತರುಜ್ಜಾಮಾನ್ ಆದೇಶದ ಮೇರೆಗೆ, ಹವ್ಲಾದರ್ ಇತರ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳೊಂದಿಗೆ ನ್ಯೂ ಟೌನ್ ಅಪಾರ್ಟ್‌ಮೆಂಟ್‌ನಲ್ಲಿ ಸಂಸದರನ್ನು ಕೊಚ್ಚಿ ಕೊಂದಿದ್ದಾನೆ.

ಅಪಾರ್ಟ್‌ಮೆಂಟ್‌ಗೆ ಸಂಸದನನ್ನು ಹನಿ ಟ್ರ್ಯಾಪ್‌ ಬಳಸಿ ಸೆಳೆಯಲಾಗಿತ್ತು ಎಂದು ಊಹಿಸಲಾಗಿದೆ. ಸಂಸದರ ಆಪ್ತೆಯೂ ಆಗಿರುವ ಮಹಿಳೆಯನ್ನು ಮುಂದಿಟ್ಟುಕೊಂಡು ಸಂಸದರನ್ನು ಕರೆಸಲಾಗಿದ್ದು, ಅಲ್ಲಿ ಕೊಲೆಗಾರರು ಇವರಿಗಾಗಿ ಕಾಯುತ್ತಿದ್ದರು ಎಂದು ಹೇಳಲಾಗಿದೆ. ಸಂಸದರು ಅಪಾರ್ಟ್‌ಮೆಂಟ್‌ ಒಳಗೆ ಹೋದುದರ ಸಿಸಿಟಿವಿ ಫೂಟೇಜ್‌ಗಳು ಲಭ್ಯವಾಗಿವೆ. ಆದರೆ ಅಲ್ಲಿಂದ ಅವರು ಹೊರಗೆ ಬಂದಿಲ್ಲ.

ನ್ಯೂ ಟೌನ್ ಅಪಾರ್ಟ್‌ಮೆಂಟ್‌ನಲ್ಲಿ ರಕ್ತದ ಕಲೆಗಳನ್ನು ಕಂಡುಹಿಡಿಯಲಾಗಿದೆ ಮತ್ತು ದೇಹದ ಭಾಗಗಳನ್ನು ಎಸೆಯಲು ಬಳಸಲಾಗಿರುವ ಹಲವಾರು ಪ್ಲಾಸ್ಟಿಕ್ ಚೀಲಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಸಂಸದರನ್ನು ಮೊದಲು ಕತ್ತು ಹಿಸುಕಿ ಸಾಯಿಸಲಾಗಿದೆ. ನಂತರ ಅವರ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಲಾಗಿದೆ ಎಂದು ಸಾಂದರ್ಭಿಕ ಪುರಾವೆಗಳು ಸೂಚಿಸಿವೆ. ಪಾತಕಿಗಳ ಕ್ರೌರ್ಯ ಹಾಗೂ ನಿರ್ಭಾವುಕತೆ ಪೊಲೀಸರನ್ನು ಬೆಚ್ಚಿಸಿದೆ.

ಅನಾರ್ ಅವರನ್ನು ಕೊಂದ ನಂತರ ಈ ಪಾತಕಿಗಳ ಗುಂಪು ದೇಹದ ಚರ್ಮವನ್ನು ಸುಲಿದು, ಎಲ್ಲಾ ಮಾಂಸವನ್ನು ತೆಗೆದುಹಾಕಿದೆ. ದೇಹವನ್ನು ಗುರುತಿಸುವ ಯಾವುದೇ ಸಾಧ್ಯತೆಯನ್ನು ಅಳಿಸಿಹಾಕಲು ಅದನ್ನು ಕೊಚ್ಚಿ ಹಾಕಿದೆ. ನಂತರ ಅವಶೇಷಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಲಾಯಿತು. ಮೂಳೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಲಾಯಿತು. ಈ ಪ್ಯಾಕೆಟ್‌ಗಳನ್ನು ಕೋಲ್ಕತ್ತಾ ನಗರದಾದ್ಯಂತ ಬೇರೆ ಬೇರೆ ಕಡೆ ಕೊಂಡೊಯ್ದು ವಿಲೇವಾರಿ ಮಾಡಲಾಗಿದೆ.

ಇದನ್ನೂ ಓದಿ: Physical Abuse & Murder: ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಬರ್ಬರವಾಗಿ ಕೊಲೆ; ದೃಶ್ಯಂ ಸಿನಿಮಾ ರೀತಿಯಲ್ಲಿ ಎಸ್ಕೇಪ್‌ಗೆ ಯತ್ನ

Exit mobile version