Site icon Vistara News

Assault Case: ಬೆಳ್ಳೂರು ಹಿಂದೂ ಯುವಕನ ಮೇಲೆ ಹಲ್ಲೆ; ದೂರು ಸ್ವೀಕರಿಸದ ಪಿಎಸ್‌ಐ ಸಸ್ಪೆಂಡ್‌

belluru assault case

ಮಂಡ್ಯ: ಮಂಡ್ಯ ಜಿಲ್ಲೆಯ (Mandya news) ಬೆಳ್ಳೂರು (Belluru Assault case) ಪಟ್ಟಣದಲ್ಲಿ ಹಿಂದೂ ಯುವಕನ (Hindu youth) ಮೇಲೆ ಅನ್ಯ ಕೋಮಿನ ಪುಂಡರು ಹಲ್ಲೆ ನಡೆಸಿದ ಪ್ರಕರಣದಲ್ಲಿ ದೂರು ಸ್ವೀಕರಿಸಲು ನಿರಾಕರಿಸಿದ್ದ ಪಿಎಸ್‌ಐ ಅನ್ನು ಅಮಾನತು (Suspend) ಮಾಡಲಾಗಿದೆ. ಕರ್ತವ್ಯ ಲೋಪ ಕಾರಣ ನೀಡಿ ಬೆಳ್ಳೂರು ಠಾಣೆ ಪಿಎಸ್‌ಐ ಬಸವರಾಜ ಚಿಂಚೋಳಿ ಅವರನ್ನು ಅಮಾನತು ಮಾಡಿ ಮಂಡ್ಯ ಎಸ್‌ಪಿ ಎನ್. ಯತೀಶ್ ಆದೇಶ ಹೊರಡಿಸಿದ್ದಾರೆ.

ಬೆಳ್ಳೂರು ಗ್ರಾಮಸ್ಥರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟಿಸಿದ್ದರು. ಕಡೆಗೆ ಪ್ರಕರಣದ ಗಂಭೀರತೆ ಅರಿತು ಪೊಲೀಸರು ದೂರು ಪಡೆದಿದ್ದರು. ಘಟನೆ ಸಂಬಂಧ 3 ಪ್ರತ್ಯೇಕ ದೂರು ದಾಖಲಾಗಿತ್ತು. ಈ ಹಿಂದೆ ದೂರು ಸ್ವೀಕರಿಸದ ಪಿಎಸ್‌ಐ ವಿರುದ್ಧವೂ ಕಂಪ್ಲೆಂಟ್ ದಾಖಲಾಗಿದೆ. ದೂರಿನ ಬೆನ್ನಲ್ಲೇ ಪಿಎಸ್‌ಐ ಅಮಾನತು ಮಾಡಿ ಎಸ್‌ಪಿ ಯತೀಶ್ ಆದೇಶ ನೀಡಿದ್ದಾರೆ.

ಹಲ್ಲೆ ಪ್ರಕರಣ ಸಂಬಂಧ 11ಕ್ಕೂ ಹೆಚ್ಚು ಆರೋಪಿಗಳ ಮೇಲೆ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಅಭಿಲಾಷ್ ತಂದೆ ರಾಮು ನೀಡಿದ ದೂರಿನ ಅನ್ವಯ ಎಫ್‌ಐಆರ್‌ ದಾಖಲಾಗಿದೆ. ನವೀದ್, ಸೂಫಿಯಾನ್, ಇಮ್ರಾನ್, ಸಮೀರ್, ಮುದಾಸೀರ್ ಸೇರಿ 11ಕ್ಕೂ ಹೆಚ್ಚು ಮಂದಿ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 341, 307, 504, 506 ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಏನಿದು ಪ್ರಕರಣ?

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ಸೋಮವಾರ (ಮೇ 27) ಸಂಜೆ ಅಭಿಲಾಷ್​ ಎಂಬ ಯುವಕನ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದರು. ಅತಿ ವೇಗದಲ್ಲಿ ಕಾರು ಚಾಲನೆ ಮಾಡಿದ್ದನ್ನು ಪ್ರಶ್ನಿಸಿದ್ದ ಅಭಿಲಾಷ್​ ಮೇಲೆ ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ಮಾಡಿತ್ತು. ಘಟನೆ ಬಳಿಕ ಬೆಳ್ಳೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಗಂಭೀರವಾಗಿ ಪೆಟ್ಟು ತಿಂದಿರುವ ಅಭಿಲಾಷ್​ ಅವರನ್ನು ಬೆಳ್ಳೂರಿನ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಳೆದ ಶುಕ್ರವಾರ ಮುಸ್ಲಿಂ ಯುವಕರ ಗುಂಪು ಬೆಳ್ಳೂರಿನ ಸಂತೆ ಬೀದಿಯಲ್ಲಿ ಅತಿ ವೇಗದಲ್ಲಿ ಪಟ್ಟಣದೊಳಗೆ ಕಾರು ಓಡಿಸಿಕೊಂಡು ಹೋಗಿದೆ. ಅಪಾಯಕಾರಿ ರೀತಿಯಲ್ಲಿ ವಾಹನ ಓಡಿಸಿದ್ದನ್ನು ಹಲ್ಲೆಗೆ ಒಳಗಾಗಿರುವ ಅಭಿಲಾಷ್ ಹಾಗೂ ಅವರ ಜತೆಗಾರ ನಾಗೇಶ್​ ಎಂಬುವರು ಪ್ರಶ್ನಿಸಿದ್ದರು. ಮಿತಿ ಮೀರಿದ ವೇಗದಲ್ಲಿ ಕಾರು ಓಡಿಸದಂತೆ ಆ ಗುಂಪಿಗೆ ಬುದ್ಧಿವಾದ ಹೇಳಿದ್ದರು. ಈ ವೇಳೆ ಸಣ್ಣ ಮಟ್ಟಿನ ಮಾತಿನ ಚಕಮಕಿ ನಡೆದಿತ್ತು. ಅದೇ ದ್ವೇಷವನ್ನು ಇಟ್ಟುಕೊಂಡಿದ್ದ ಮುಸ್ಲಿಂ ಯುವಕರ ಗುಂಪಿ ಇನ್ನಷ್ಟು ದೊಡ್ಡ ಗುಂಪನ್ನು ಕಟ್ಟಿಕೊಂಡು ಬಂದು ಸೋಮವಾರ ಸಂಜೆ ಹಲ್ಲೆ ಮಾಡಿದ್ದರು.

ದೊಡ್ಡ ಗುಂಪು ಹಲ್ಲೆ ಮಾಡಿದ್ದ ಅಭಿಲಾಷ್​ ಅವರಿಗೆ ಗಂಭೀರ ಗಾಯಗಳಾಗಿವೆ ಎಂದು ಅವರ ಆಪ್ತರು ಹೇಳಿದ್ದಾರೆ. ತಕ್ಷಣ ಸ್ಥಳೀಯರು ಅವರನ್ನು ಏಮ್ಸ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸುದ್ದಿಯಾದ ಬಳಿಕ ಬೆಳ್ಳೂರು ಪಟ್ಟಣದಲ್ಲಿ ಆತಂಕ ಮನೆ ಮಾಡಿತ್ತು. ಗಲಾಟೆ ಸಂಭವಿಸುವ ಸಾಧ್ಯತೆಗಳನ್ನು ಮನಗಂಡಿರುವ ಪೊಲೀಸರು ಬೆಳ್ಳೂರು ಪಟ್ಟಣ ಹಾಗೂ ಬಿಜಿಎಸ್ ಆಸ್ಪತ್ರೆಗೆ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಿದ್ದಾರೆ.

ಇದನ್ನೂ ಓದಿ | Physical Abuse: 7ನೇ ಕ್ಲಾಸ್‌ ಹುಡುಗಿ 3 ತಿಂಗಳ ಗರ್ಭಿಣಿ! ಅತ್ಯಾಚಾರವೆಸಗಿದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಅರೆಸ್ಟ್‌

Exit mobile version