ಬೆಂಗಳೂರು/ ಮುಂಬಯಿ: ಹೊಸ ಬಗೆಯ ಸೈಬರ್ ಅಪರಾಧ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಜನತೆ ಇದರ ಪರಿಣಾಮ ಲಕ್ಷಾಂತರ ರೂ. ಕಳೆದುಕೊಂಡು ಪರದಾಡುತ್ತಿದ್ದಾರೆ. ವಂಚಕರು ಮೊದಲಿಗೆ ನಿಮ್ಮ ಗೂಗಲ್ ಪೇ, ಫೋನ್ ಪೇ ಇತ್ಯಾದಿ ಯುಪಿಐ ಖಾತೆಗೆ ಹಣ ಕಳಿಸುತ್ತಾರೆ. ಬಳಿಕ ತಪ್ಪಾಗಿ ನಿಮ್ಮ ಖಾತೆಗೆ ಹಣ ಜಮೆಯಾಗಿದ್ದು, ಹಿಂತಿರುಗಿಸುವಂತೆ ಕೋರುತ್ತಾರೆ. ನೀವು ಅದನ್ನು ನಂಬಿ ನಿಮ್ಮ ಖಾತೆಯಿಂದ ಅವರು ಕಳಿಸಿದ ಲಿಂಕ್ ಒತ್ತಿ ಹಣ ಕಳಿಸಿದರೆ, ಕೆಲ ನಿಮಿಷಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಯಿಂದಲೇ ಹಣ ವಿತ್ ಡ್ರಾ ಆಗುತ್ತದೆ. ಲಕ್ಷಾಂತರ ರೂ. ಹಣ ನಿಮ್ಮ ಬ್ಯಾಂಕ್ ಖಾತೆಯಿಂದಲೇ ಹೋಗುತ್ತದೆ. ಇದಕ್ಕೆ ಕಾರಣ ಸೈಬರ್ ಪಾತಕಿಗಳು ನಿಮ್ಮ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ವಂಚಿಸುವುದು.
ಇತ್ತೀಚಿನ ದಿನಗಳಲ್ಲಿ ಇಂಥ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಜನತೆ ಜಾಗೃತಿ ಹೊಂದುವುದು ಮುಖ್ಯ. ಒಂದು ವೇಳೆ ವಂಚಕರು ಗೂಗಲ್ ಪೇ, ಫೋನ್ ಪೇ ಇತ್ಯಾದಿಗಳ ಮೂಲಕ ಹಣ ಕಳಿಸಿ, ಮತ್ತೆ ಹಿಂತಿರುಗಿಸಲು ತಿಳಿಸಿ ಲಿಂಕ್ ಕಳಿಸಿದರೆ, ಅದನ್ನು ಕ್ಲಿಕ್ ಮಾಡಬಾರದು. ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಬೇಕು. ಆರ್‌ಬಿಐ ಒಂಬುಡ್ಸ್‌ಮನ್ ಅನ್ನೂ ಸಂಪರ್ಕಿಸಬೇಕು ಎಂದು ಎಚ್‌ಕೆ ಐಟಿ ಸೆಕ್ಯುರಿಟಿ ಸಲ್ಯೂಷನ್ಸ್‌ನ (HKIT Security Solutions) ಮುಖ್ಯ ಸೈಬರ್ ಸೆಕ್ಯುರಿಟಿ ಸಲಹೆಗಾರರಾದ ಡಾ. ಹರ್ಷ ತೆನ್ನರಸು ( Dr. Harsha Thennarasu ) ಅವರು ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.
ಬಳಕೆದಾರರು ಏನು ಮಾಡಬಹುದು?
ಯಾವುದೇ ಕಾರಣಕ್ಕೂ ಅಪರಿಚಿತರು ಕಳಿಸುವ ವೆಬ್‌ಸೈಟ್ ಲಿಂಕ್‌ಗಳನ್ನು ತೆರೆಯಕೂಡದು. ಇದುವೇ ಸೈಬರ್ ವಂಚಕರಿಂದ ದೂರವಿರಲು ಮೊದಲ ಹೆಜ್ಜೆ ಎನ್ನುತ್ತಾರೆ ಡಾ. ಹರ್ಷ ಅವರು. ಒಂದು ವೇಳೆ ನೀವೇ ಪ್ರಮಾದವಶಾತ್ ತಪ್ಪಿ ಅನ್ಯರ ಖಾತೆಗೆ ಯುಪಿಐ ಮೂಲಕ ಹಣ ರವಾನಿಸಿದ್ದರೂ, ಸ್ಥಳೀಯ ಪೊಲೀಸ್ ಠಾಣೆ ಸಂಪರ್ಕಿಸಿ, ಅವರ ಸಮ್ಮುಖದಲ್ಲಿಯೇ ಪಡೆಯುವುದು ಸುರಕ್ಷಿತ. ವಂಚಕರು ನಿಮ್ಮ ಖಾತೆಗೆ ಹಣ ವರ್ಗಾಯಿಸಿ, ಹಿಂತಿರುಗಿಸಲು ತಿಳಿಸಿದರೆ ಕೂಡ ಪೊಲೀಸ್ ಠಾಣೆ ಸಂಪರ್ಕಿಸುವುದು ಸೂಕ್ತ ಎನ್ನುತ್ತಾರೆ ಅವರು.
ಒಟಿಪಿ ಬರದಿದ್ದರೂ, ಬ್ಯಾಂಕ್ ಖಾತೆಗೆ ಕನ್ನ ಹಾಕುವ ಅಪಾಯ:
ಇತ್ತೀಚೆಗೆ ಆಧಾರ್-ಕೆವೈಸಿ ಅಪ್‌ಡೇಟ್ ಮಾಡುವ ನೆಪದಲ್ಲಿ ಸೈಬರ್ ವಂಚಕರು ಜನತೆಯ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿರುವ ಘಟನೆಗಳು ಹೆಚ್ಚುತ್ತಿವೆ. ನೀವು ಅಪರಿಚಿತ ಲಿಂಕ್ ಅನ್ನು ತೆರೆದ ಕೂಡಲೇ ನಿಮ್ಮ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ವಂಚಕರ ನಿಯಂತ್ರಣಕ್ಕೆ ಸಿಗುತ್ತದೆ. ಬ್ಯಾಂಕ್ ಒಟಿಪಿ ಕೂಡ ಅವರಿಗೇ ಹೋಗುತ್ತದೆ. ಹೀಗಾಗಿ ಬಳಕೆದಾರರು ಯಾವುದೇ ಆನ್‌ಲೈನ್ ವಂಚನೆಗೆ ಒಳಗಾದರೆ ಮೊದಲು ಸೈಬರ್ ಕ್ರೈಂ ಹೆಲ್ಪ್‌ಲೈನ್ 1930ಕ್ಕೆ ಕರೆ ಮಾಡಿ (Cyber Crime Helpline) ಸಹಾಯ ಪಡೆಯಬೇಕು.
16 ದಿನಗಳಲ್ಲಿ 81 ಮುಂಬಯಿಗರಿಗೆ 1 ಕೋಟಿ ರೂ. ನಷ್ಟ
ಕಳೆದ 16 ದಿನಗಳಲ್ಲಿ ಸೈಬರ್ ವಂಚಕರು ಗ್ರಾಹಕರಿಗೆ ಪ್ಯಾನ್ ಕಾರ್ಡ್-ಕೆವೈಸಿ ಪರಿಷ್ಕರಣೆ ನೆಪದಲ್ಲಿ ಸೈಬರ್ ವಂಚಕರು ಒಟ್ಟಾಗಿ 1 ಕೋಟಿ ರೂ. ವಂಚಿಸಿದ್ದಾರೆ. ಪ್ಯಾನ್ ಕಾರ್ಡ್ ಮತ್ತು ಕೆವೈಸಿ ಅಪ್‌ಡೇಟ್ ಮಾಡದಿದ್ದರೆ ಬ್ಯಾಂಕ್ ಉಳಿತಾಯ ಖಾತೆ ಸಸ್ಪೆಂಡ್ ಆಗಲಿದೆ ಅಥವಾ ಬ್ಲಾಕ್ ಆಗಬಹುದು. ಇದನ್ನು ತಪ್ಪಿಸಲು ಈ ಲಿಂಕ್ ತೆರೆದು ಅಪ್‌ಡೇಟ್ ಮಾಡಿಕೊಳ್ಳಿ ಎಂದು ಸೈಬರ್ ವಂಚಕರು ಲಿಂಕ್ ಕಳಿಸುತ್ತಿದ್ದರು. ಅದನ್ನು ತೆರೆದು ವಿವರಗಳನ್ನು ಭರ್ತಿ ಮಾಡಿದವರು ಕೆಲ ನಿಮಿಷಗಳಲ್ಲಿಯೇ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ.ಗಳನ್ನು ಕಳೆದುಕೊಂಡಿದ್ದರು.
ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು, ಕಲಾವಿದರು, ವೈದ್ಯರು, ಎಂಜಿನಿಯರ್, ಶಿಕ್ಷಕರು, ಚಾರ್ಟರ್ಡ್ ಅಕೌಂಟೆಂಟ್ ಹೀಗೆ ನಾನಾ ವೃತ್ತಿಗಳಲ್ಲಿ ತೊಡಗಿಸಿಕೊಂಡವರು ಇಂಥ ಸೈಬರ್ ದಾಳಿಗೆ ಸಿಲುಕಿ ಲಕ್ಷಾಂತರ ರೂ. ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ.
ಮುಂಬಯಿನ ಎಂಎಸ್ ಗೋಸಾವಿ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಸೈಬರ್ ಕನ್ನದ ಪರಿಣಾಮ 4.99 ಲಕ್ಷ ರೂ. ಕಳೆದುಕೊಂಡಿದ್ದಾರೆ. ನಟಿ ಮಾಲವಿಕಾ ಶ್ವೇತಾ ಮೆನನ್ ಕೂಡ ಲಕ್ಷಾಂತರ ರೂ. ಕಳೆದುಕೊಂಡಿದ್ದರು. ವಂಚಕರು ಅವರ ಖಾತೆಯಲ್ಲಿ ಕೇವಲ 57 ರೂ. ಮಾತ್ರ ಬಾಕಿ ಇರಿಸಿದ್ದರು. ಸೈಬರ್ ಪೊಲೀಸರು, ಬ್ಯಾಂಕ್‌ಗಳಿಗೂ ಈ ಬಗ್ಗೆ ಸಂದೇಶ ರವಾನಿಸಿದ್ದಾರೆ. ಡೇಟಾ ಕನ್ನವಾಗದಂತೆ ಭದ್ರತೆ ಹೆಚ್ಚಿಸಲು ತಿಳಿಸಿದ್ದಾರೆ.