ಬೆಂಗಳೂರು: ರಾಜಧಾನಿಯ ವೈಟ್‌ಫೀಲ್ಡ್‌ನ (Whitefield) ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ (Blast in Bengaluru) ಸಂಬಂಧಿಸಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ. ಸಿಸಿಟಿಟಿಯಲ್ಲಿ (CCTV) ಅನುಮಾನಾಸ್ಪದ ಓಡಾಟದೊಂದಿಗೆ ಕಂಡುಬಂದಿದ್ದ, ಕ್ಯಾಪ್ ಧರಿಸಿದ ವ್ಯಕ್ತಿಯನ್ನೂ ವಶಕ್ಕೆ ಪಡೆಯಲಾಗಿದೆ.
ನಿನ್ನೆ ಮಧ್ಯಾಹ್ನ ಸ್ಫೋಟದ ಕ್ಷಣದಿಂದಲೇ ಮಿಂಚಿನ ಕಾರ್ಯಾಚರಣೆಗೆ ಇಳಿದಿರುವ ಸಿಸಿಬಿ ಪೊಲೀಸರು, ಕ್ಯಾಪ್ ಹಾಕಿರುವ ವ್ಯಕ್ತಿ ಸೇರಿ ಒಟ್ಟು ನಾಲ್ಕು ಜನರನ್ನು ವಶಕ್ಕೆ ಪಡೆದಿದ್ದಾರೆ. ಅಜ್ಞಾತ ಸ್ಥಳದಲ್ಲಿ ಇವರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಶಂಕಿತ ವ್ಯಕ್ತಿ ಖತರ್ನಾಕ್ ಪ್ಲಾನ್ ಮಾಡಿದ್ದು, ಘಟನೆಯುದ್ದಕ್ಕೂ ಕೈಗೆ ಹ್ಯಾಂಡ್ ಗ್ಲೌಸ್ ಹಾಕಿಕೊಂಡಿದ್ದ ಎಂದು ಗೊತ್ತಾಗಿದೆ. ಫಿಂಗರ್ ಪ್ರಿಂಟ್ ಎಲ್ಲಿಯೂ ಉಳಿಯಬಾರದು ಎಂಬ ಕಾರಣಕ್ಕೆ ಹ್ಯಾಂಡ್ ಗ್ಲೌಸ್ ಬಳಸಿದ್ದ. ಹ್ಯಾಂಡ್ ಗ್ಲೌಸ್ ಹಾಕಿಕೊಂಡೇ ಕೆಫೆಯೊಳಗೆ ಎಂಟ್ರಿ ನೀಡಿದ್ದು, ಅದರ ಜೊತೆಗೇ ಹೋಗಿದ್ದಾನೆ.
ಕೆಫೆಯಲ್ಲಿ ಬಾಂಬ್ ಇಟ್ಟು ನಾಪತ್ತೆಯಾದ ವ್ಯಕ್ತಿಯ ಚಲನವಲನಗಳ ಎಕ್ಸ್‌ಕ್ಲೂಸಿವ್ ದೃಶ್ಯಗಳು ಸಿಸಿಟಿವಿ ಫೂಟೇಜ್‌ನಿಂದ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿವೆ. ಕೆಫೆಯಿಂದ ಹೊರ ಬಂದು ವೇಗವಾಗಿ ಹೋಗುತ್ತಿರುವ ವ್ಯಕ್ತಿಯ ಓಡಾಟವನ್ನು ಸಿಸಿಟಿವಿ ಸೆರೆಹಿಡಿದಿತ್ತು. ಆರೋಪಿ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದು, ತಲೆಗೆ ಕ್ಯಾಪ್ ಧರಿಸಿದ್ದಾನೆ. ಈತನ ಅನುಮಾನಾಸ್ಪದ ಓಡಾಟದ ದಾಖಲಾಗಿದೆ. ನಿನ್ನೆ 11:50ಕ್ಕೆ ಕೆಫೆಯಿಂದ ಹೊರ ಬಂದಿರುವ ಈತ ವೇಗವಾಗಿ ಹೊರಟುಹೋಗಿದ್ದಾನೆ.
ರಾಮೇಶ್ವರಂ ಕೆಫೆ ಮುಂದೆಯೇ ಬಿಎಂಟಿಸಿ ಬಸ್ ನಿಲ್ದಾಣವಿದೆ. ಅಲ್ಲೇ ಇರುವ ಹೋಟೆಲ್‌ನ ಹೊರ ಭಾಗದಲ್ಲಿರುವ ಸಿಸಿ ಕ್ಯಾಮರಾದಲ್ಲಿ ಶಂಕಿತನ ವಿಡಿಯೋ ಸೆರೆಯಾಗಿದೆ. ಬರುವಾಗ ಈತ ಬಸ್ಸಿನಲ್ಲಿ ಬಂದು ಇಳಿದಿದ್ದ. ಹೋಗುವಾಗ ಅವಸರದಲ್ಲಿ ನಡೆದುಕೊಂಡು ಹೋಗಿದ್ದಾನೆ.
ಆರೋಪಿ ಸೈಡ್ ಬ್ಯಾಗ್ ಹಾಕಿಕೊಂಡು ಬ್ಯಾಗ್ ಒಳಗೆ ಮತ್ತೊಂದು ಬ್ಯಾಗ್‌ನಲ್ಲಿ ಸ್ಫೋಟಕ ತಂದಿರುವುದು ಇನ್ನೊಂದು ಸಿಸಿಟಿವಿ ಫೂಟೇಜ್‌ನಲ್ಲಿ ಪೊಲೀಸರಿಗೆ ಲಭ್ಯವಾಗಿದೆ. ಜನರ ಕಣ್ಣಿಗೆ ಮತ್ತು ಸಿಸಿ ಕ್ಯಾಮರದಲ್ಲಿ ಸೆರೆಯಾಗದ ಜಾಗಕ್ಕೆ ಈತ ಹುಡುಕಾಟ ನಡೆಸಿದ್ದು, ಕೊನೆಗೆ ಕೈ ತೊಳೆಯುವ ಜಾಗದಲ್ಲಿದ್ದ ಡೆಸ್ಟ್ ಬಿನ್‌ನಲ್ಲಿ ಬ್ಯಾಗ್ ಬಿಸಾಡಿ ಎಸ್ಕೇಪ್ ಆಗಿದ್ದಾನೆ.
ಎಫ್‌ಐಆರ್ ದಾಖಲು
ರಾಮೇಶ್ವರ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ ಕುರಿತು ಹೆಚ್‌ಎಎಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 307, 471 ಮತ್ತು ಯುಎಪಿಎ ಕಾಯ್ದೆಯ 16, 18, 38 ಹಾಗೂ explosive substance’s act 3ಮತ್ತು 4 ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಾರೆ.
ನಿನ್ನೆ ಮಧ್ಯಾಹ್ನ 12.55ಕ್ಕೆ ರಾಮೇಶ್ವರ ಕೆಫೆಯಲ್ಲಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಓರ್ವ ಮಹಿಳೆ ತೀವ್ರವಾಗಿ ಗಾಯಗೊಂಡು ಒಟ್ಟು ಹತ್ತು ಜನ ಗಾಯಗೊಂಡಿದ್ದರು. ಎನ್ಎಸ್‌ಜಿ ಬಾಂಬ್ ಸ್ಕ್ವಾಡ್ ವಿಂಗ್‌ನಿಂದಲೂ ಕಾರ್ಯಾಚರಣೆ ತೀವ್ರಗೊಂಡಿದ್ದು, ಸ್ಪೋಟ ನಡೆದ ಸ್ಥಳದಲ್ಲಿ ಇಂಚಿಂಚು ಪರಿಶೀಲನೆ ನಡೆಸಿದ್ದಾರೆ.
ಹೆಚ್ಚಿನ ಭದ್ರತೆ ಇಲ್ಲ
ಕೆಫೆ ಸ್ಫೋಟ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಎಂದಿನಂತೆ ಭದ್ರತೆ ಮುಂದುವರಿದಿದೆ. ಯಾವುದೇ ರೀತಿಯ ಹೆಚ್ಚುವರಿ ಭದ್ರತೆಯನ್ನು ರೈಲ್ವೇ ಇಲಾಖೆ ಆಯೋಜನೆ ಮಾಡಿಲ್ಲ. ನಿನ್ನೆಯ ನಡೆದ ಘಟನೆ ಬಳಿಕ ಭದ್ರತೆ ತೀವ್ರ ಮಾಡುವ ನಿರೀಕ್ಷೆ ಇತ್ತು. ರಾಜ್ಯದ ನಾನಾ ಜಿಲ್ಲೆಗಳಿಂದ, ದೇಶದ ನಾನಾ ಭಾಗಗಳಿಂದ ಬಂದು ತಲುಪುವ ಪ್ರಮುಖ ಭಾಗದಲ್ಲಿ ಹೆಚ್ಚಿನ ಎಚ್ಚರ ತೆಗೆದುಕೊಂಡಿಲ್ಲ.
ಬಿಎಂಟಿಸಿ ಬಸ್‌ಗಳ ಪರಿಶೀಲನೆ
ನಿನ್ನೆ ಶಂಕಿತ ವ್ಯಕ್ತಿ ಓಡಾಡಿರಬಹುದಾದ ಬಿಎಂಟಿಸಿ ಬಸ್‌ಗಳಲ್ಲಿನ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಲಾಗುತ್ತಿದೆ. ಒಟ್ಟು 5 ಡಿಪೋಗಳ ವೋಲ್ವೋ ಬಸ್‌ಗಳ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಲಾಗಿದೆ. ಶಂಕಿತ ಬಂದು ಹೋಗಿರುವ ಬಸ್‌ಗಳಲ್ಲಿ ಪರಿಶೀಲನೆ ಮಾಡಲಾಗಿದೆ.
ಗೃಹ ಸಚಿವರ ಹೇಳಿಕೆ
ಗೃಹ ಸಚಿವ ಪರಮೇಶ್ವರ್ ಪ್ರಕರಣದ ತನಿಖೆ ಕುರಿತು ಹೇಳಿಕೆ ನೀಡಿದ್ದು, ಈಗಾಗಲೇ ಅನೇಕ ತಂಡಗಳನ್ನು ರಚನೆ ಮಾಡಲಾಗಿದೆ ಎಂದಿದ್ದಾರೆ. ಕೆಲವು ಕುರುಹು ಸಿಕ್ಕಿವೆ. ಸಿಸಿಟಿವಿ ಫ್ಯೂಟೇಜ್ ಸಿಕ್ಕಿದೆ. ಆ ಸಮಯದಲ್ಲಿ ಆ ಜಾಗದಲ್ಲಿ 26 ಬಿಎಂಟಿಸಿ ಬಸ್ ಮೂವ್ ಆಗಿದೆ. ಅದರಲ್ಲಿರುವ ಕ್ಯಾಮೆರಾಗಳ ಮೂಲಕವೂ ಮಾಹಿತಿ ಸಿಗುತ್ತದೆ ಎಂದಿದ್ದಾರೆ.
ಕೆಫೆಯವರ ಮೇಲಿನ ದ್ವೇಷದಿಂದ ಸ್ಫೋಟ ಮಾಡಲಾಗಿದೆ ಎನ್ನುವ ಕೋನವೂ ಇದೆ. ಎಲ್ಲಾ ಆ್ಯಂಗಲ್ ಅಲ್ಲೂ ನಾವೂ ಯೋಚನೆ ಮಾಡುತ್ತೇವೆ. ತಪ್ಪಿತಸ್ಥರು ಯಾರನ್ನೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ. ವಿರೋಧ ಪಕ್ಷದವರಿಗೂ ಹೇಳಿದ್ದೇನೆ, ಬೇರೆ ಸಮಯದಲ್ಲಿ ರಾಜಕಾರಣ ಮಾಡಿ, ಈಗ ಬೇಡ ಅಂತ. ಇದು ಬೆಂಗಳೂರಿನ ಪ್ರತಿಷ್ಠೆ ಮತ್ತು ಸುರಕ್ಷತೆಯ ಪ್ರಶ್ನೆ. ನಗರದಲ್ಲಿ ಸುಮಾರು 7500 ಕ್ಯಾಮೆರಾಗಳನ್ನು ಹಾಕಲಾಗಿದೆ. AI ಕೂಡ ಬಳಸಲಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: Blast in Bengaluru: ರಾಮೇಶ್ವರಂ ಕೆಫೆ ಸ್ಫೋಟ; ಇವನೇ ನೋಡಿ ಬಾಂಬ್ ಇಟ್ಟವನು!