Site icon Vistara News

ಗೋವಾದಲ್ಲಿ ಘೋರ ಕೃತ್ಯ: ಬ್ರಿಟಿಷ್ ಮಹಿಳೆ ಮೇಲೆ ಸಂಗಾತಿ ಎದುರೇ ಅತ್ಯಾಚಾರ

goa

ಪಣಜಿ: ಗೋವಾದ ಸುಂದರ ಬೀಚುಗಳು, ಅಲ್ಲಿನ ವ್ಯವಸ್ಥೆ ಜಗತ್ಪ್ರಸಿದ್ಧ. ಬಾಲಿವುಡ್‌ ತಾರೆಯರು, ಗಣ್ಯರು, ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ಗೋವಾ ಬೀಚ್‌ಗೆ ಬಂದು ಬದುಕಿನ ಸುಂದರ ಕ್ಷಣಗಳನ್ನು ಕಳೆಯುತ್ತಾರೆ. ಇಂಥ ಸುರಕ್ಷಿತ ಎಂದು ಹೇಳಲಾಗುವ ಬೀಚ್‌ಗಳಲ್ಲೂ ಕೆಲವೊಮ್ಮೆ ದುಷ್ಕರ್ಮಿಗಳು ಅಟ್ಟಹಾಸ ಮೆರೆಯುತ್ತಾರೆ. ಅಂತಹುದೇ ಒಂದು ಘಟನೆ ಜೂನ್‌ 2ರಂದು ಕೂಡಾ ನಡೆಯಿತು. ಉತ್ತರ ಗೋವಾದ ಆರಂಬೋಲ್ ಬೀಚ್‌ನಲ್ಲಿ ಬ್ರಿಟಿಷ್‌ ಮಹಿಳೆಯೊಬ್ಬರ ಮೇಲೆ ಆಕೆಯ ಸಂಗಾತಿ ಎದುರೇ ಅತ್ಯಾಚಾರ ನಡೆಸಲಾಗಿದೆ. ಮಸಾಜ್‌ ಸೇವೆ ನೀಡುವ ನೆಪದಲ್ಲಿ ಬಂದ 32 ವರ್ಷದ ವಿನ್ಸೆಂಟ್‌ ಡಿಸೋಜ ಎಂಬಾತ ಮಹಿಳೆ ಮೇಲೆ ದೌರ್ಜನ್ಯ ನಡೆಸಿದ್ದಾನೆ.

ವಿನ್ಸೆಂಟ್‌ ಡಿಸೋಜ ಆರಂಬೋಲ್‌ ಬೀಚ್‌ನಲ್ಲಿ ಅಕ್ರಮವಾಗಿ ಮಸಾಜ್‌ ಸೇವೆ ನೀಡುವ ತಂಡವೊಂದರ ಸದಸ್ಯನಾಗಿದ್ದಾನೆ ಎಂದು ಹೇಳಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೋವಾದ ಮಸಾಜ್‌ ಸೇವೆ ಭಾರಿ ಜನಪ್ರಿಯವಾಗಿದೆ. ಇದರ ಲಾಭ ಪಡೆಯಲು ಹಲವು ಅಕ್ರಮ ಮಸಾಜ್‌ ಪಾರ್ಲರ್‌ಗಳು ಹುಟ್ಟಿಕೊಂಡಿವೆ. ಇವುಗಳಿಗೆ ಯಾವುದೇ ಅಧಿಕೃತ ಮಾನ್ಯತೆ ಇಲ್ಲ. ಈ ಹಿಂದೆ ಶಾಲೆಯೊಂದರಲ್ಲಿ ಗ್ರಂಥ ಪಾಲಕನಾಗಿ ಕೆಲಸ ಮಾಡುತ್ತಿದ್ದ ವಿನ್ಸೆಂಟ್‌ ಕೆಲವು ಸಮಯದ ಹಿಂದೆ ಆ ಕೆಲಸ ಬಿಟ್ಟು ಮಸಾಜ್‌ ಸೇವೆಗಳ ಕೆಲಸಕ್ಕೆ ಸೇರಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಈಗ ಬಂಧಿಸಲಾಗಿದೆ.

ಆವತ್ತು ಆಗಿದ್ದೇನು?
ಬ್ರಿಟನ್‌ ಮೂಲದ ಈ ಮಧ್ಯ ವಯಸ್ಕ ಮಹಿಳೆ ತನ್ನ ಪುರುಷ ಸಂಗಾತಿಯ ಜತೆಗೆ ಬೀಚ್‌ನ ಸಮೀಪವೇ ಇರುವ ಸಿಹಿ ನೀರ ಕೊಳದ ಬಳಿ ಇದ್ದರು. ಅಲ್ಲೇ ಮಲಗಿಕೊಂಡಿದ್ದಾಗ ವಿನ್ಸೆಂಟ್‌ ಅಲ್ಲಿಗೆ ಬಂದಿದ್ದಾನೆ. ತಾನು ಮಸಾಜ್‌ ಮಾಡುವುದಾಗಿ ಹೇಳಿದ್ದಾನೆ. ಮಹಿಳೆ ಒಪ್ಪಿದ್ದಾರೆ. ಆಗ ಮಸಾಜ್‌ನ ನೆಪದಲ್ಲಿ ಆತ ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಜೂನ್‌ ಎರಡರಂದು ನಡೆದಿದ್ದರೂ ಮಹಿಳೆ ಬ್ರಿಟನ್‌ನಲ್ಲಿರುವ ತನ್ನ ಕುಟುಂಬ ಸದಸ್ಯರೊಂದಿಗೆ ಸಮಾಲೋಚಿಸಿ ಭಾರತದಲ್ಲಿನ ಬ್ರಿಟಿಷ್ ರಾಯಭಾರ ಕಚೇರಿಯಿಂದ ಸಹಾಯ ಕೋರಿದ ನಂತರ ಸೋಮವಾರ ಪೆರ್ನೆಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ದೂರು ಸ್ವೀಕರಿಸಿದ ಒಂದು ಗಂಟೆಯೊಳಗೆ, ಇನ್ಸ್ಪೆಕ್ಟರ್ ವಿಕ್ರಮ್ ನಾಯಕ್ ನೇತೃತ್ವದ ಪೆರ್ನೆಮ್ ಪೊಲೀಸರು ಕಾರ್ಯಾಚರಣೆಗೆ ಇಳಿದು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ರಾತ್ರಿ ಹಾಗೂ ಆರೋಪಿಗಳನ್ನು ಸಮೀಪದ ಮಾಪುಸಾ ಪಟ್ಟಣದ ಜಿಲ್ಲಾ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.

ಭಾರತೀಯ ದಂಡ ಸಂಹಿತೆ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಆರೋಪಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಮತ್ತು ಪೊಲೀಸರು ಆತನನ್ನು ಸೋಮವಾರ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ರಿವಾಲ್ವರ್‌ ತೋರಿಸಿ ಮನೆ ಮಾಲೀಕನಿಂದ ಅತ್ಯಾಚಾರ

Exit mobile version