ಮಂಡ್ಯ: ಕೃಷಿ ಸಚಿವರಾದ (Agriculture Minister) ಚಲುವರಾಯ ಸ್ವಾಮಿ (Chaluvaraya Swami) ಅವರು ಮಂಡ್ಯ ಜಿಲ್ಲೆಯ ಏಳು ತಾಲೂಕುಗಳ ಕೃಷಿ ಅಧಿಕಾರಿಗಳಿಂದ (Agriculture officers) ತಲಾ ಆರರಿಂದ ಎಂಟು ಲಕ್ಷ ರೂ. ಲಂಚ ಕೇಳಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರಾದ ಥ್ಯಾವರ್‌ಚಂದ್ ಗೆಹ್ಲೋಟ್ (Governor Thawar Chand Gehlot) ಅವರಿಗೆ ಪತ್ರ ಬರೆದ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ.
ಇದೊಂದು ನಕಲಿ ಪತ್ರ, ಯಾವ ಅಧಿಕಾರಿಯೂ ಸಹಿ ಹಾಕಿಲ್ಲ, ನಕಲಿ ಸಹಿ ಹಾಕಿ ಪತ್ರ ಬರೆಯಲಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿತ್ತು. ಈಗ ಈ ರೀತಿ ನಕಲಿ ಪತ್ರ ಸೃಷ್ಟಿಸಿದ ಮೈಸೂರು ಮೂಲದ ಇಬ್ಬರು ಕೃಷಿ ಅಧಿಕಾರಿಗಳ ಸಹಾಯಕ ನಿರ್ದೇಶಕ ಗುರುಪ್ರಸಾದ್ ಮತ್ತು ತಾಂತ್ರಿಕ ನಿರ್ದೇಶಕ ಸುದರ್ಶನ್ ಅವರನ್ನು ಸಿಐಡಿ ಬಂಧಿಸಿದೆ.
ಘಟನೆ ಮಂಡ್ಯದಲ್ಲಿ ನಡೆದಿದ್ದರೂ ಇದರಲ್ಲಿ ಮೈಸೂರು ಮೂಲದ ಅಧಿಕಾರಿಗಳು ಭಾಗಿಯಾಗಿದ್ದಾರೆ. ಇವರನ್ನು ಬಂಧಿಸಿದ ಸಿಐಡಿ ಅಧಿಕಾರಿಗಳು ಭಾನುವಾರ ರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಇವರನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರ ಮುಂದೆ ಸಿಐಡಿ ಅಧಿಕಾರಿಗಳು ಮನವಿ ಮಾಡಿದ್ದರೂ ಕೋರ್ಟ್ ಮೂರು ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಿದೆ. ಮೂರು ದಿನಗಳ ವಿಚಾರಣೆ ಬಳಿಕ ಮತ್ತೆ ನ್ಯಾಯಾಧೀಶರ ಮುಂದೆ ಅಧಿಕಾರಿಗಳನ್ನು ಹಾಜರುಪಡಿಸಬೇಕಾಗಿದೆ.
ಸಹಿಗಳ ಸಾಮ್ಯತೆ ಪರಿಶೀಲನೆಗೆ ಎಫ್‌ಎಸ್‌ಎಲ್ ಪರೀಕ್ಷೆ
ಸಿಐಡಿಯಿಂದ ಬಂಧಿತರಾಗಿರುವ ಗುರುಪ್ರಸಾದ್ ಅವರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದರೆ, ಸುದರ್ಶನ ಗುರುಪ್ರಸಾದ್ ಅಡಿಯಲ್ಲಿ ಕೆಲಸ ಮಾಡುವ ತಾಂತ್ರಿಕ ಅಧಿಕಾರಿಯಾಗಿದ್ದಾರೆ. ಇವರು ಪತ್ರದ ವಿಚಾರ ಹೊರಬಂದು ಸಿಐಡಿ ತನಿಖೆಗೆ ಆದೇಶ ಹೊರಬಿದ್ದ ಕೂಡಲೇ ಕಚೇರಿಗೆ ಬರುವುದನ್ನು ನಿಲ್ಲಿಸಿದ್ದರು. ಅವರ ಚಟುವಟಿಕೆ ಆಧರಿಸಿ ವಿಚಾರಿಸಿದಾಗ ಪತ್ರ ಬರೆದಿದ್ದು ಹೌದೆಂದು ಒಪ್ಪಿಕೊಂಡಿದ್ದರು.
ಈ ನಡುವೆ ಸಿಐಡಿ ಈ ಪತ್ರಗಳ ಅಸಲಿಯತ್ತಿನ ಬಗ್ಗೆ ತನಿಖೆಗೆ ಮುಂದಾಗಿದ್ದು, ರಾಜ್ಯಪಾಲರಿಗೆ ಬರೆದ ಪತ್ರವನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಒಳಪಡಿಸಲು ರವಾನೆ ಮಾಡಿದೆ.
ಪತ್ರವನ್ನ ಎಲ್ಲಿ ತಯಾರು ಮಾಡಲಾಗಿತ್ತು? ಪತ್ರದಲ್ಲಿರುವ ಅಧಿಕಾರಿಗಳ ಸಹಿಗಳು ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯಲು ಎಫ್ಎಸ್ಎಲ್ ಗೆ ರವಾನೆ ಮಾಡಲಗಿದೆ. ಎಫ್ಎಸ್ಎಲ್ ವರದಿ ಬಂದ ಬಳಿಕ ಪತ್ರದ ಅಸಲಿ ಸತ್ಯ ಬೆಳಕಿಗೆ ಬರಲಿದೆ.
ಇದುವರೆಗೆ ಸಿಐಡಿ ಮಂಡ್ಯ ಮತ್ತು ಮೈಸೂರು ಭಾಗದ 50ಕ್ಕೂ ಅಧಿಕ ಅಧಿಕಾರಿಗಳನ್ನು ವಿಚಾರಣೆ ನಡೆಸಿದೆ. ಪತ್ರ ಬರೆದವರು ಯಾರು, ಪತ್ರ ತಯಾರಾಗಿದ್ದು ಎಲ್ಲಿ, ಸಹಿ ಮಾಡಿದ ಅಧಿಕಾರಿಗಳು ಯಾರು ಎಂದು ಸಿಐಡಿ ತನಿಖೆ ಮಾಡಿದೆ. ಪತ್ರ ಬರೆದವರು ಯಾರು ಎಂಬುದನ್ನ ಪತ್ತೆಹಚ್ಚಲು ಸಹಿ ಸಂಗ್ರಹವೂ ನಡೆದಿದೆ. ಪತ್ರದ ಜತೆಗೆ ಸಂಗ್ರಹಿಸಿದ ಸಹಿಗಳನ್ನು ಕೂಡಾ ಎಫ್ಎಸ್ಎಲ್ ಗೆ ರವಾನೆ ಮಾಡಲಾಗಿದೆ.
ಎಫ್ಎಸ್ಎಲ್ ವರದಿ ಬಂದ ಬಳಿಕ ಸಂಗ್ರಹಿಸಿದ ಸಹಿ ಹಾಗೂ ಪತ್ರದಲ್ಲಿರುವ ಸಹಿಗಳ ನಡುವೆ ಸಾಮ್ಯತೆ ಪರಿಶೀಲನೆ ನಡೆಯಲಿದೆ. ಎಫ್ಎಸ್ಎಲ್ ವರದಿಯಲ್ಲೇ ಸಹಿಗಳ ಸಾಮ್ಯತೆ ಪರಿಶೀಲನೆಯೂ ನಡೆದು ವರದಿ ಸಿದ್ಧವಾಗಲಿದೆ.
ಇದನ್ನೂ ಓದಿ: Mandya Politics: ಮಾಟ-ಮಂತ್ರ ಮಾಡಿಸುವುದೇ ಚಲುವರಾಯಸ್ವಾಮಿ ಕೆಲಸ, ಭ್ರಷ್ಟಾಚಾರದಲ್ಲಿ ಫಸ್ಟ್: ಸುರೇಶ್ ಗೌಡ ಕಿಡಿ
ಅಧಿಕಾರಿಗಳು ಬರೆದ ಪತ್ರದ ಸಾರಾಂಶವೇನು?
ಮಂಡ್ಯ, ಮಳವಳ್ಳಿ, ಕೃಷ್ಣರಾಜಪೇಟೆ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ, ಮದ್ದೂರಿನ ಸಹಾಯಕ ಕೃಷಿ ಅಧಿಕಾರಿಗಳು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಒಂದು ಪತ್ರ ಬರೆದಿದ್ದರು. ಅದರಲ್ಲಿ ಚಲುವರಾಯ ಸ್ವಾಮಿ ಅವರು 6ರಿಂದ 8 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಕಡಿವಾಣ ಹಾಕುವಂತೆ ಕೃಷಿ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು. ಅಲ್ಲದೇ ಲಂಚಕ್ಕೆ ಕಡಿವಾಣ ಹಾಕದಿದ್ದರೆ ವಿಷ ಕುಡಿಯುವುದಾಗಿ ದೂರಿನ ಪತ್ರದಲ್ಲಿ ಉಲ್ಲೇಖಿಸಿದ್ದರು. ರಾಜ್ಯ ಸರ್ಕಾರ ಇದರ ಬಗ್ಗೆ ತನಿಖೆಗೆ ಆದೇಶಿಸಿದಾಗ ಇದು ನಕಲಿ ಪತ್ರ, ಅದರಲ್ಲಿ ಸಹಿ ಹಾಕಿದರೆಂದು ಹೇಳಲಾದ ಅಧಿಕಾರಿಗಳು ಸಹಿಯನ್ನೇ ಹಾಕಿರಲಿಲ್ಲ ಎಂದು ತಿಳಿದುಬಂದಿತ್ತು.