ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ (Cyber Crime)ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಇದಕ್ಕೆ ಇಲ್ಲಿದೆ ಮತ್ತೊಂದು ತಾಜಾ ಉದಾಹರಣೆ. ತನ್ನ ತಾಯಿಯ ಮೊಬೈಲ್‌ನಲ್ಲಿ ಗೇಮ್ ಆಡುತ್ತಿದ್ದ 18 ವರ್ಷದ ಯುವಕ ಆನ್‌ಲೈನ್ ವಂಚನೆಗೆ ಬಲಿಯಾಗಿದ್ದ. ವಂಚಕರು ಲಿಂಕ್ ಕಳುಹಿಸಿ ಆತನ ತಂದೆಯ ಬ್ಯಾಂಕ್ ಅಕೌಂಟ್‌ನಿಂದ ಸುಮಾರು 2 ಲಕ್ಷ ರೂ. ದೋಚಿದ್ದರು. ಇದರಿಂದ ಮನನೊಂದು ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಆಘಾತಕಾರಿ ಘಟನೆ ಮುಂಬೈಯಲ್ಲಿ ನಡೆದಿದೆ.
ಘಟನೆ ವಿವರ
ಮುಂಬೈನ ನಲಸೊಪರದ ಈ ಯುವಕ ಎಂದಿನಂತೆ ಬುಧವಾರ (ಏಪ್ರಿಲ್ 3) ತನ್ನ ತಾಯಿಯ ಮೊಬೈಲ್‌ನಲ್ಲಿ ಗೇಮ್ ಆಡುತ್ತಿದ್ದ. ಆಗ ವಂಚಕರು ಲಿಂಕ್ ಒಂದನ್ನು ಆ ಮೊಬೈಲ್‌ಗೆ ಕಳುಹಿಸಿದ್ದರು. ಆತ ತಪ್ಪಿ ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದ. ಇದರಿಂದ ವಂಚಕರು ಆತನ ತಂದೆಯ ಎಲ್ಲ ಮಾಹಿತಿಯನ್ನು ಪಡೆದುಕೊಂಡು ಅಕೌಂಟ್‌ನಿಂದ 2 ಲಕ್ಷ ರೂ. ಡ್ರಾ ಮಾಡಿದ್ದರು. ತಾನು ವಂಚನೆಗೊಳಗಾದ ವಿಷಯ ಅರಿವಿಗೆ ಬರುತ್ತಲೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ʼʼಹನ್ನೊಂದನೇ ತರಗತಿಯ ವಿದ್ಯಾರ್ಥಿ ಫೋನ್‌ಗೆ ಬಂದ ನಕಲಿ ಎಸ್ಎಂಎಸ್ ಅನ್ನು ಕ್ಲಿಕ್ ಮಾಡಿದ್ದಾನೆ. ಕೆಲವೇ ನಿಮಿಷಗಳಲ್ಲಿ, ಆತನ ತಂದೆಯ ಖಾತೆಯಿಂದ 2 ಲಕ್ಷ ರೂ.ಗಳನ್ನು ಡೆಬಿಟ್ ಮಾಡಲಾಗಿದೆ ಎಂದು ಮತ್ತೊಂದು ಸಂದೇಶ ಬಂದಿದೆ. ಇದರಿಂದ ಆತ ಗಾಬರಿಗೊಳಗಾಗಿ ಈ ಕೃತ್ಯ ಎಸಗಿದ್ದಾನೆ. ನಗದು ಡ್ರಾ ಆಗಿರುವ ಬಗ್ಗೆ ಬ್ಯಾಂಕ್‌ನಿಂದ ಬಂದ ಮೆಸೇಜ್ ಕುರಿತು ಆತ ಯಾರಿಗೂ ತಿಳಿಸಿರಲಿಲ್ಲ. ಮಗ ಮೃತಪಟ್ಟ ಬಳಿಕ ಮಹಿಳೆ ಈ ಮೆಸೇಜ್ ಗಮನಿಸಿದ್ದರುʼʼ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಹೆತ್ತವರು ನಿಂದಿಸುತ್ತಾರೆ ಎನ್ನುವ ಭಯದಿಂದ ಆತ ಕೀಟನಾಶಕವನ್ನು ಸೇವಿಸಿದ್ದ. ಆತನ ಬಾಯಿಯಲ್ಲಿ ನೊರೆ ಬರಲು ಪ್ರಾರಂಭಿಸಿದಾಗ ತಾಯಿ ಕೂಡಲೇ ಅವನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ʼʼಯಾವುದೇ ಡೆತ್ ನೋಟ್ ಪತ್ತೆಯಾಗದ ಕಾರಣ, ಸೈಬರ್ ವಂಚನೆಯ ಸಾಧ್ಯತೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆʼʼ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಮೊಬೈಲ್ ಫೋನ್ ಅನ್ನು ಪರೀಕ್ಷೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಯುವಕ ತನ್ನ ತಂದೆ-ತಾಯಿ ಮತ್ತು ಕಿರಿಯ ಸಹೋದರನೊಂದಿಗೆ ವಾಸವಾಗಿದ್ದ.
ಇದನ್ನೂ ಓದಿ: Cyber Crime: ಕಾಣೆಯಾದ ಮಗು ಸಿಕ್ಕಿದೆ ಎಂದು 900 ಕುಟುಂಬಗಳಿಂದ ಹಣ ವಸೂಲಿ ಮಾಡಿದರು!
ʼʼಒಂದು ವೇಳೆ ಆ ಯುವಕ ಅಕೌಂಟ್‌ನಿಂದ ಹಣ ವಿತ್ ಡ್ರಾ ಆಗಿರುವ ಬಗ್ಗೆ ಹೇಳಿಕೊಂಡಿದ್ದರೆ ಅದನ್ನು 24 ಗಂಟೆಯೊಳಗೆ ಮರಳಿ ಪಡೆಯಬಹುದಿತ್ತುʼʼ ಎಂದು ಪೊಲೀಸರು ತಿಳಿಸಿದ್ದಾರೆ. ʼʼಕೂಡಲೇ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ ಹಣ ವರ್ಗಾವಣೆಯನ್ನು ಸ್ಥಗಿತಗೊಳಿಸುವ ವ್ಯವಸ್ಥೆ ಇದೆ. ದೇಶಾದ್ಯಂತ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಹದಿಹರೆಯದವರು ಮತ್ತು ಹಿರಿಯ ನಾಗರಿಕರೇ ವಂಚಕರ ಗುರಿ. ಈ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕುʼʼ ಎಂದು ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ