ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಡೆಂಗ್ಯು ಜ್ವರ (Dengue Fever) ಕರಾಳ ಸ್ವರೂಪವನ್ನು ಪ್ರದರ್ಶಿಸಲಾರಂಭಿಸಿದ್ದು, ಎರಡನೇ ಬಲಿ (dengue death) ತೆಗೆದುಕೊಂಡಿದೆ. ಬಾಲಕನೊಬ್ಬ ಬಲಿಯಾಗಿದ್ದಾನೆ. ಹಾಸನದಲ್ಲಿ ಶಂಕಿತ ಡೆಂಗ್ಯು ಜ್ವರಕ್ಕೆ ಮೂವರು ಹೆಣ್ಣು ಮಕ್ಕಳು ಬಲಿಯಾದ ಬೆನ್ನಲ್ಲೇ ಈ ಸುದ್ದಿ ಬಂದಿದೆ.
ಅಂಜನಾಪುರದ 11 ವರ್ಷದ ಬಾಲಕ ಗಗನ್ ಜ್ವರದಿಂದ ಸಾವಿಗೀಡಾಗಿದ್ದು, ಇದು ಬೆಂಗಳೂರಿನಲ್ಲಿ ಡೆಂಗ್ಯುವಿಗೆ ಪುಟ್ಟ ಮಗುವಿನ ಮೊದಲ ಸಾವು ಆಗಿದೆ. ನಿನ್ನೆ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಬಾಲಕ ಅಸುನೀಗಿದ್ದಾನೆ. ಈತ ಜಂಬೂಸವಾರಿ ದಿಣ್ಣೆಯ ಚೈತನ್ಯ ಟೆಕ್ನೋ ಶಾಲೆಯಲ್ಲಿ ಓದುತ್ತಿದ್ದ. ಕಳೆದ ಮೂರು ದಿನಗಳಿಂದ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾನೆ.
ಕಳೆದ ವಾರ ಕಗ್ಗದಾಸಪುರದಲ್ಲಿ 27 ವರ್ಷ ಯುವಕ ಡೆಂಗ್ಯುವಿನಿಂದ ಸಾವನ್ನಪ್ಪಿದ್ದ. ಹಾಸನದಲ್ಲಿ ಮೂವರು ಬಾಲಕಿಯರು ಡೆಂಗ್ಯುವಿನಿಂದ ಮೃತಪಟ್ಟಿದ್ದಾರೆ. ಒಟ್ಟು ಏಳು ಮಂದಿ ರಾಜ್ಯದಲ್ಲಿ ಇದುವರೆಗೆ ಡೆಂಗ್ಯುವಿನಿಂದ ಸಾವಿಗೀಡಾಗಿದ್ದಾರೆ ಎಂದು ಲೆಕ್ಕ ಹಾಕಲಾಗಿದೆ. ಕೆಲವು ಶಂಕಿತ ಡೆಂಗ್ಯು ಸಾವಿನ ಪ್ರಕರಣಗಳಿದ್ದು , ಅವು ಖಚಿತಗೊಳ್ಳಬೇಕಿವೆ.
ಡೆಂಗ್ಯು ಪರೀಕ್ಷೆಗೆ ದರ ನಿಗದಿ
ಬೆಂಗಳೂರು: ಡೆಂಗ್ಯೂ ಪರೀಕ್ಷೆಗೆ ದರ ನಿಗದಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಡೆಂಗ್ಯೂ ಜ್ವರ ಪತ್ತೆಗೆ ಎರಡು ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಈ ಪರೀಕ್ಷೆಗಳಿಗೆ ಒಟ್ಟು 600 ರೂ. ನಿಗದಿಪಡಿಸಲು ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಈ ಸಂಬಂಧ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ.
ಡೆಂಗ್ಯೂ ಜ್ವರ ಪತ್ತೆಗೆ ಎರಡು ಮಾದರಿಯ ಪರೀಕ್ಷೆ ನಡೆಸಲಾಗುತ್ತದೆ. ತಲಾ 300 ರೂ.ನಂತೆ ಒಟ್ಟು 600 ರೂ. ದರವನ್ನು ನಿಗದಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಈ ಸಂದರ್ಭವನ್ನು ಬಳಸಿಕೊಂಡು ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಪರೀಕ್ಷೆಗೆ ದುಪ್ಪಟ್ಟು ಹಣ ವಸೂಲಿಯಾಗುತ್ತಿದೆ ಎಂಬ ಬಗ್ಗೆ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಪರೀಕ್ಷೆಗೆ ರಾಜ್ಯ ಸರ್ಕಾರ ದರ ನಿಗದಿ ಮಾಡಲು ಮುಂದಾಗಿದೆ.
ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ
ಖಾಸಗಿ ಆಸ್ಪತ್ರೆಗಳು ಡೆಂಗ್ಯೂ ಕೇಸ್ ರಿಪೋರ್ಟ್ ಮಾಡುತ್ತಿಲ್ಲ. ಕೆಪಿಎಂ ಆಕ್ಟ್ ಪ್ರಕಾರ ಖಾಸಗಿ ಆಸ್ಪತ್ರೆಗಳು ಡೆಂಗ್ಯೂ ಕೇಸ್ ರಿಪೋರ್ಟ್ ಮಾಡುವುದು ಕಡ್ಡಾಯ. IHIPಯಲ್ಲಿ ಅನೇಕ ಖಾಸಗಿ ಆಸ್ಪತ್ರೆಗಳು ಅಪ್ಲೋಡ್ ಮಾಡುತ್ತಿಲ್ಲ. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು. ಖಾಸಗಿ ಆಸ್ಪತ್ರೆಯಲ್ಲಿ ಡೆಂಗ್ಯು ತಪಾಸಣೆಗೆ ದರ ನಿಗದಿ ಮಾಡುವ ಬಗ್ಗೆ ಚರ್ಚೆ ಮಾಡಿಲ್ಲ. ಆ ಬಗ್ಗೆ ಮುಂದೆ ಚರ್ಚೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಂಗಳವಾರ ತಿಳಿಸಿದ್ದರು.
ಇದನ್ನೂ ಓದಿ | Dengue Fever: ಡೆಂಗ್ಯೂ ಬಗ್ಗೆ ಇರಲಿ ಎಚ್ಚರಿಕೆ!