Site icon Vistara News

ಸಂಜಯ್‌ ದತ್‌ TO ಸಿದ್ಧಾಂತ್‌ ಕಪೂರ್: ಬಾಲಿವುಡ್ ಬೆಂಬಿಡದ ಡ್ರಗ್ಸ್‌ ನಂಟು!

ಮುಂಬಯಿ: ಬಾಲಿವುಡ್‌ ನಟ ಸಿದ್ಧಾಂತ್ ಕಪೂರ್ ಬೆಂಗಳೂರಿನ ದಿ ಪಾರ್ಕ್‌ ಹೋಟೆಲ್‌ನಲ್ಲಿ ನಡೆದ ರೇವ್‌ ಪಾರ್ಟಿಯಲ್ಲಿ ಪಾಲ್ಗೊಂಡು ಡ್ರಗ್ಸ್‌ ಸೇವಿಸಿದ ಆರೋಪದಲ್ಲಿ ಬಂಧಿತರಾಗಿದ್ದಾರೆ. ಬಾಲಿವುಡ್‌ನ ಜನಪ್ರಿಯ ತಾರೆಯರು ಡ್ರಗ್ಸ್‌ ಕೇಸಿನಲ್ಲಿ ಸಿಕ್ಕಿ ಬೀಳುತ್ತಿರುವುದು ಹೊಸತೇನೂ ಅಲ್ಲ. ಈ ಹಿಂದೆ ಹಲವರು ಸಿಕ್ಕಿಬಿದ್ದಿದ್ದಾರೆ. ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಬಾಲಿವುಡ್ ಪ್ರಮುಖ ಡ್ರಗ್ಸ್ ಪ್ರಕರಣಗಳ ಒಂದು ನೋಟ ಇಲ್ಲಿದೆ. ವಿಶೇಷವೆಂದರೆ, ಯಾವುದೇ ಪ್ರಕರಣದಲ್ಲೂ ಸೆಲೆಬ್ರಿಟಿಗಳಿಗೆ ಶಿಕ್ಷೆ ಆಗಿಲ್ಲ. ಎಲ್ಲರೂ ಬಂಧಮುಕ್ತರಾಗಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಪ್ರಕರಣ
2020ರ ಜೂನ್‌ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಅನಿರೀಕ್ಷಿತ ಸಾವಿನ ನಂತರ, ಅವರ ಗೆಳತಿ ರಿಯಾ ಚಕ್ರವರ್ತಿ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳನ್ನು ಮಾದಕವಸ್ತುಗಳ ದುರುಪಯೋಗ ಮತ್ತು ಖರೀದಿ ಆರೋಪಗಳಿಗೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ವಿಚಾರಣೆ ನಡೆಸಿತ್ತು. ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ರಾಕುಲ್ ಪ್ರೀತ್ ಸಿಂಗ್ ಮತ್ತು ಶ್ರದ್ಧಾ ಕಪೂರ್ ಕೂಡ ಪ್ರಕರಣದ ಭಾಗವಾಗಿ ಎನ್ಸಿಬಿಯ ವಿಚಾರಣೆಯನ್ನು ಎದುರಿಸಬೇಕಾಯಿತು ಆದರೆ ಅವರ ವಿರುದ್ಧ ಆರೋಪ ಹೊರಿಸಲಾಗಿಲ್ಲ. ಅರ್ಜುನ್ ರಾಂಪಾಲ್ ಮತ್ತು ಅವರ ಗೆಳತಿ ಗೇಬ್ರಿಯೆಲಾ, ಡೆಮೆಟ್ರಿಯಾಡೆಸ್ ಅವರನ್ನೂ ಕರೆಸಲಾಯಿತು. ಆದರೆ ವಿಚಾರಣೆಯ ನಂತರ ಅವರು ಯಾವುದೇ ಡ್ರಗ್ಗ್‌ ಸೇವಿಸಿಲ್ಲ ಅಂತ ಸಾಬೀತಾಯಿತು.

ಸುಶಾಂತ್ ಸಿಂಗ್‌ ರಜಪೂತ್‌

ಈ ಮಧ್ಯೆ, ರಿಯಾ ಮತ್ತು ಆಕೆಯ ಸಹೋದರನನ್ನು ಸುಶಾಂತ್ ಗೆ ಪೂರೈಸಲು ಗಾಂಜಾ ಖರೀದಿಸಿದ್ದಾರೆ ಎಂಬ ಆರೋಪದ ಮೇಲೆ 2020ರ ಸೆಪ್ಟೆಂಬರ್ 8ರಂದು ಎನ್‌ ಸಿಬಿ ಬಂಧಿಸಿತು. ಅಕ್ಟೋಬರ್ 7ರಂದು ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಅದರೆ ಎನ್‌ಸಿಬಿ ಇನ್ನೂ ಕ್ಲೀನ್‌ ಚಿಟ್‌ ನೀಡಿಲ್ಲ.

ಆರ್ಯನ್ ಖಾನ್
ಬಾಲಿವುಡ್ ಅನ್ನು ಬೆಚ್ಚಿಬೀಳಿಸಿದ ಮತ್ತೊಂದು ಪ್ರಮುಖ ಪ್ರಕರಣವೆಂದರೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಮುಂಬಯಿಯಿಂದ ಹೊರಟಿದ್ದ ಕ್ರೂಸ್ ಮೇಲೆ ದಾಳಿ ನಡೆಸಿದ ನಂತರ 24 ವರ್ಷದ ಆರ್ಯನ್ ಖಾನ್ ಅವರನ್ನು ಎನ್‌ ಸಿಬಿ ಬಂಧಿಸಿತ್ತು. ಜಾಮೀನು ಪಡೆಯುವ ಮೊದಲು ಅವರನ್ನು ಸುಮಾರು ಒಂದು ತಿಂಗಳ ಕಾಲ ಕಸ್ಟಡಿಯಲ್ಲಿ ಇರಿಸಲಾಗಿತ್ತು. ಆದರೆ ಚಾರ್ಜ್‌ಶೀಟ್‌ನಲ್ಲಿ ಅವರನ್ನು ಆರೋಪಿ ಎಂದು ಉಲ್ಲೇಖಿಸದ ಕಾರಣ ಅವರಿಗೆ ಕಳೆದ ತಿಂಗಳು ಅಂತಿಮವಾಗಿ ಕ್ಲೀನ್ ಚಿಟ್ ನೀಡಲಾಯಿತು.

ಆರ್ಯನ್‌ ಖಾನ್‌

ಪ್ರತೀಕ್ ಬಬ್ಬರ್
ನಟ-ರಾಜಕಾರಣಿ ರಾಜ್ ಬಬ್ಬರ್ ಮತ್ತು ದಿವಂಗತ ನಟಿ ಸ್ಮಿತಾ ಪಾಟೀಲ್ ಅವರ ಪುತ್ರ ನಟ ಪ್ರತೀಕ್‌ ಬಬ್ಬರ್ 2020ರಲ್ಲಿ ತನ್ನ ಹಳೆ ವ್ಯಸನದ ಕಥೆಯನ್ನು ಬಿಚ್ಚಿಟ್ಟರು. ತಾನು ಕೇವಲ 13 ವರ್ಷದವನಾಗಿದ್ದಾಗ ಮಾದಕ ದ್ರವ್ಯ ವ್ಯಸನಕ್ಕೆ ಒಳಗಾಗಿ ಸಂಕಷ್ಟಪಟ್ಟಿದ್ದನ್ನು ನೆನಪಿಸಿಕೊಂಡಿದ್ದರು. ಕೊನೆಗೆ ಇದರಿಂದ ಹೊರಬರಲು ಹೇಗೆಲ್ಲ ಹೆಣಗಾಡಿದೆ ಎಂದು ವಿವರಿಸಿದ್ದರು.

ಪ್ರತೀಕ್‌ ಬಬ್ಬರ್ ಪೋಟೊ

ಸಂಜಯ್ ದತ್
ಸುನಿಲ್‌ ದತ್‌- ನರ್ಗಿಸ್‌ ದತ್‌ ಪುತ್ರನಾಗಿರುವ ಸಂಜಯ್‌ ದತ್‌ ನರ್ಗಿಸ್‌ ಅವರ ಮರಣದ ಬಳಿಕ ಡ್ರಗ್‌ ಅಡಿಕ್ಟ್‌ ಆಗಿದ್ದರು. ಅವರನ್ನು ಈ ಬಲೆಯಿಂದ ಹೊರತರಲು ಸುನಿಲ್‌ ದತ್‌ ಭಾರಿ ಹೋರಾಟವನ್ನೇ ನಡೆಸಿದ್ದರು. 1982ರಲ್ಲಿ ಸಂಜಯ್ ದತ್ ಅವರನ್ನು ಒಮ್ಮೆ ಬಂಧಿಸಲಾಗಿತ್ತು. ತಾನು ಯಾವ ಡ್ರಗ್ಸ್‌ ತೆಗೆದುಕೊಂಡಿದ್ದೆ ಎಂಬುದನ್ನು ಸಂಜಯ್‌ ದತ್‌ ಪಟ್ಟಿ ಮಾಡಿ ಕೊಟ್ಟಿದ್ದರು. ಕೊನೆಗೆ ಅವರನ್ನು ಅಮೆರಿಕಕ್ಕೆಲ್ಲ ಕಳುಹಿಸಿ ವ್ಯಸನ ಮುಕ್ತಗೊಳಿಸಲಾಯಿತು.

ಸಂಜಯ್‌ ದತ್ತ್‌ ಪೋಟೊ

ಫರ್ದೀನ್ ಖಾನ್
ಫರ್ದೀನ್ ಖಾನ್ ಅವರನ್ನು ಕೊಕೇನ್ ಖರೀದಿಸಲು ಪ್ರಯತ್ನಿಸಿದ ಆರೋಪದ ಮೇಲೆ 2001 ರಲ್ಲಿ ಮುಂಬಯಿನಲ್ಲಿ ಬಂಧಿಸಲಾಗಿತ್ತು. ಸ್ವತಃ ಮಾದಕ ವ್ಯಸನಿಯಾಗಿದ್ದ ಅವರನ್ನು 2012ರಲ್ಲಿ ಆರೋಪ ಮುಕ್ತಗೊಳಿಸಲಾಯಿತು.

ಫರ್ದಿನ್‌ ಖಾನ್

ಅರ್ಮಾನ್ ಕೊಹ್ಲಿ
ಜನಪ್ರಿಯ ನಟ ಮತ್ತು ಬಿಗ್ ಬಾಸ್ ಹಳೆಯ ಅಭ್ಯರ್ಥಿ ಅರ್ಮಾನ್‌ ಕೊಹ್ಲಿ ಅವರ ಮನೆಗೆ 2021ರ ಆಗ‌ಸ್ಟ್‌ನಲ್ಲಿ ದಾಳಿ ಮಾಡಲಾಯಿತು. ಈ ವೇಳೆ ಸಾಕಷ್ಟು ಪ್ರಮಾಣದಲ್ಲಿ ಮಾದಕ ವಸ್ತುಗಳು ಸಿಕ್ಕಿದ್ದವು. ಬಳಿಕ ಅವರನ್ನು ಬಂಧಿಸಲಾಯಿತು.

ಅರ್ಮಾನ್ ಕೊಹ್ಲಿ

ಇದನ್ನೂ ಓದಿ:ಟ್ರೇಲರ್‌ ರಿಲೀಸ್‌ ಬೆನ್ನಲ್ಲೇ ಟ್ರೆಂಡ್‌ ಆಗ್ತಿದೆ Boycott LaalSingh Chaddha; ಆಮಿರ್‌ ಮಾತು ಮರೆತಿಲ್ಲ ಜನ

Exit mobile version