ಗಾಂಧಿನಗರ: ಕಾಲೇಜು ದಿನಗಳು (Collge Days) ಜೀವನವಿಡೀ ನೆನಪಿರಲು ಸ್ನೇಹಿತರು ಬಹುಮುಖ್ಯ ಕಾರಣವಾಗುತ್ತಾರೆ. ಕಾಲೇಜು ದಿನಗಳ ತರ್ಲೆ, ಗೆಳೆತನದ ಒಗ್ಗಟ್ಟು, ದುಡ್ಡಿರದಿದ್ದರೂ ಹಂಚಿಕೊಂಡು ತಿನ್ನುವ ಮನೋಭಾವ, ಹುಸಿ ಮುನಿಸು ಮರೆತು ಒಂದಾಗುವ ಕ್ಷಣಗಳು ನೆನಪಿನ ಸ್ಮೃತಿ ಪಟಲದಲ್ಲಿ ಉಳಿಯುತ್ತವೆ. ಆದರೆ, ಮಹಾರಾಷ್ಟ್ರದಲ್ಲಿ (Maharashtra) ಹಣಕ್ಕಾಗಿ ಕಾಲೇಜಿನ ಗೆಳೆಯರೇ ಯುವತಿಯನ್ನು ಅಪಹರಿಸಿ (Kidnap), ಭೀಕರವಾಗಿ ಕೊಲೆ ಮಾಡಿದ್ದು, ಯಾರನ್ನು ನಂಬಬೇಕು, ಯಾರ ಗೆಳೆತನ ಮಾಡಬೇಕು ಎಂಬ ಜಿಜ್ಞಾಸೆ ಮೂಡಿಸುವಂತೆ ಮಾಡಿದೆ.
ಹೌದು, ಪುಣೆಯ ವಾಘೋಲಿಯಲ್ಲಿರುವ ಎಂಜಿನಿಯರಿಂಗ್ ಓದುತ್ತಿದ್ದ 22 ವರ್ಷದ ವಿದ್ಯಾರ್ಥಿನಿಯನ್ನು ಆಕೆಯ ಕಾಲೇಜು ಗೆಳೆಯ ಸೇರಿ ಮೂವರು ಅಪಹರಿಸಿದ್ದು, ಅಹ್ಮದ್‌ನಗರದಲ್ಲಿ ಆಕೆಯನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ಪ್ರಕರಣದಕ್ಕೆ ಸಂಬಂಧಿಸಿದಂತೆ ಯುವತಿಯ ಗೆಳೆಯ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 30ರಂದು ವಿದ್ಯಾರ್ಥಿನಿಯು ಕಾಣೆಯಾಗಿದ್ದಳು. ಇದಾದ ನಂತರ ಆಕೆಯ ಶವವೀಗ ಅಹ್ಮದ್‌ನಗರದಲ್ಲಿ ಪತ್ತೆಯಾಗಿದೆ. ಪೊಲೀಸರು ತನಿಖೆ ನಡೆಸಿದಾಗ ಗೆಳೆಯರೇ ಕೊಂದಿರುವುದು ಬಯಲಾಗಿದೆ.
ಭೇಟಿ ನೆಪದಲ್ಲಿ ಅಪಹರಣ
ಮಾರ್ಚ್ 29ರಂದು ಆಕೆಯ ಕಾಲೇಜು ಗೆಳೆಯ ಸೇರಿ ಮೂವರು ಭೇಟಿಯಾಗಿದ್ದಾರೆ. ಆಕೆ ಬೇಡವೆಂದರೂ ಹಾಸ್ಟೆಲ್‌ವರೆಗೆ ಡ್ರಾಪ್ ಮಾಡಿದ್ದಾರೆ. ಇದಾದ ಬಳಿಕ ಮಾರ್ಚ್ 30ರಂದು ಆಕೆಯನ್ನು ಅಹ್ಮದ್‌ನಗರಕ್ಕೆ ಕರೆದೊಯ್ದಿದ್ದಾರೆ. ಗೆಳೆಯರು ಎಂಬುದಾಗಿ ನಂಬಿದ ಯುವತಿಗೆ ಅಹ್ಮದ್‌ನಗರಕ್ಕೆ ಹೋದ ಮೇಲೆಯೇ ಇವರ ಬಂಡವಾಳ ಬಯಲಾಗಿದೆ. ಯುವತಿಯನ್ನು ಕೂಡಿಹಾಕಿದ ಗೆಳೆಯರು, ಆಕೆಯ ತಂದೆ-ತಾಯಿಗೆ ಕರೆ ಮಾಡಿ 9 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ.
ಏಕಾಏಕಿ 9 ಲಕ್ಷ ರೂ.ಗೆ ಬೇಡಿಕೆ ಇಟ್ಟ ಕಾರಣ ಯುವತಿಯ ಪೋಷಕರು ಗಲಿಬಿಲಿಗೊಂಡಿದ್ದಾರೆ. ಇದೇ ಕಾರಣಕ್ಕಾಗಿ ಹಣ ಹೊಂದಿಸುವುದು ತುಸು ವಿಳಂಭವಾಗಿದೆ. ಇನ್ನು ನಮಗೆ ದುಡ್ಡು ಸಿಗಲ್ಲ ಎಂದು ತಿಳಿದ ಯುವಕರು, ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಶವವನ್ನು ಅಹ್ಮದ್‌ನಗರ ಹೊರವಲಯದಲ್ಲಿ ಬಿಸಾಡಿದ್ದಾರೆ. ಆಕೆಯ ಮೊಬೈಲ್‌ನಿಂದ ಸಿಮ್ ಕಾರ್ಡ್ ತೆಗೆದು ಎಸೆದಿದ್ದಾರೆ. ಪೋಷಕರು ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Cyber Crime: ಆನ್‌ಲೈನ್ ವಂಚನೆಗೆ ಇನ್ನೊಂದು ಬಲಿ; ಮೆಸೇಜ್ ಕ್ಲಿಕ್ ಮಾಡಿ 2 ಲಕ್ಷ ರೂ. ಕಳೆದುಕೊಂಡ ವಿದ್ಯಾರ್ಥಿ ಆತ್ಮಹತ್ಯೆ