ಕೊಚ್ಚಿ: ರೈಲು ಬೋಗಿಯಲ್ಲಿ ದುಷ್ಕರ್ಮಿಯೊಬ್ಬ ಇತರ ಪ್ರಯಾಣಿಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ ಪೂರ್ವಯೋಜಿತ ಎಂಬುದು ಸಿಸಿಟಿವಿ ಸುಳಿವಿನಿಂದ ತಿಳಿದುಬಂದಿದೆ. ಭಯೋತ್ಪಾದಕ ಸಂಚಿನ ಆಯಾಮವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಲಪ್ಪುಳ- ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನೊಳಗೆ ಭಾನುವಾರ ರಾತ್ರಿ ಪ್ರಯಾಣಿಕನೊಬ್ಬ ಸಹ ಪ್ರಯಾಣಿಕರ ಮೇಲೆ ಇದ್ದಕ್ಕಿದ್ದಂತೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಪರಿಣಾಮ ಎಂಟು ಮಂದಿಗೆ ತೀವ್ರವಾದ ಸುಟ್ಟ ಗಾಯಗಳಾಗಿದ್ದವು. ಇದಾದ ಕೆಲವೇ ಗಂಟೆಗಳಲ್ಲಿ ಇದೇ ರೈಲಿನಿಂದ ನಾಪತ್ತೆಯಾಗಿದ್ದ ಮೂವರು ಪ್ರಯಾಣಿಕರ ಶವಗಳು ಹಳಿಯಲ್ಲಿ ಪತ್ತೆಯಾಗಿದ್ದವು.
ಭಾನುವಾರ ರಾತ್ರಿ ಅಲಪ್ಪುಳ- ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನೊಳಗೆ ಈ ದಾರುಣ ಘಟನೆ ನಡೆದಿತ್ತು. ರಾತ್ರಿ 9.45ಕ್ಕೆ ರೈಲು ಕೋಝಿಕ್ಕೋಡ್ ನಗರವನ್ನು ದಾಟಿ ಕೊರಾಪುಳ ರೈಲ್ವೆ ಸೇತುವೆಯನ್ನು ತಲುಪಿದಾಗ, ಅಪರಿಚಿತ ದುಷ್ಕರ್ಮಿ ಸಹ ಪ್ರಯಾಣಿಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ. ಪರಿಣಾಮವಾಗಿ ಕನಿಷ್ಠ ಎಂಟು ಜನರಿಗೆ ಸುಟ್ಟ ಗಾಯಗಳಾಗಿವೆ. ಬೆಂಕಿ ಹಚ್ಚಿದ ಕೂಡಲೇ ದುಷ್ಕರ್ಮಿ ಪರಾರಿಯಾಗಿದ್ದ. ಪ್ರಯಾಣಿಕರು ತುರ್ತು ಸರಪಳಿ ಎಳೆದು ರೈಲು ನಿಲ್ಲಿಸಿದ್ದು, ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು.
ರೈಲು ನಿಂತ ಬಳಿಕ ಸುಮಾರು ಮೂವತ್ತು ವರ್ಷದ ವ್ಯಕ್ತಿಯೊಬ್ಬ ಬೋಗಿಯಿಂದ ಜಿಗಿದು ತನಗಾಗಿ ಕಾಯುತ್ತಿದ್ದ ಬೈಕೊಂದಕ್ಕೆ ಏರಿ ಪರಾರಿಯಾಗಿದ್ದನ್ನು ನೋಡಿದ್ದಾಗಿ ಕೆಲವು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರೈಲ್ವೆ ಹಳಿಯಲ್ಲಿ ಒಂದು ಬ್ಯಾಗ್ ಪತ್ತೆಯಾಗಿದ್ದು, ಅದರಲ್ಲಿ ಇನ್ನೊಂದು ಬಾಟಲಿ ಪೆಟ್ರೋಲ್ ಹಾಗೂ ಎರಡು ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ. ಘಟನೆ ನಡೆದ ಸಮೀಪದ ಮನೆಯ ಸಿಸಿಟಿವಿ ಫೂಟೇಜ್‌ಗಳನ್ನು ಪೊಲೀಸರು ವಶಪಡಿಸಿಕೊಂಡು ಪರಿಶೀಲಿಸುತ್ತಿದ್ದಾರೆ. ಇದೊಂದು ಪೂರ್ವಯೋಜಿತ ಸಂಚಿನಂತೆ ಕಾಣುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಂಕಿ ಪ್ರಕರಣದ ಕೆಲವೇ ಗಂಟೆಗಳ ನಂತರ ಇಲ್ಲಿನ ಎಲತ್ತೂರು ರೈಲು ನಿಲ್ದಾಣದ ಬಳಿ ಹಳಿಗಳ ಮೇಲೆ ಮೂವರ ಶವಗಳು ಪತ್ತೆಯಾಗಿವೆ. ಇವರಲ್ಲಿ ಒಬ್ಬ ಪುರುಷ, ಒಬ್ಬಾಕೆ ಮಹಿಳೆ ಹಾಗೂ ಒಂದು ವರ್ಷದ ಮಗು. ಬೆಂಕಿ ಹಚ್ಚಿದ ಪ್ರಕರಣದ ಬಳಿಕ ಈ ಮೂವರು ರೈಲಿನಿಂದ ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ. ರೈಲು ಕಣ್ಣೂರು ತಲುಪಿದಾಗ, ದುರ್ಘಟನೆಯ ನಂತರ ಮಹಿಳೆ ಮತ್ತು ಮಗು ಕಾಣೆಯಾಗಿದ್ದಾರೆ ಎಂದು ಕೆಲವು ಪ್ರಯಾಣಿಕರು ದೂರಿದ್ದರು. ನಾಪತ್ತೆಯಾದವರ ಸುದ್ದಿ ಹೊರಬಿದ್ದ ಕೂಡಲೇ ಪೊಲೀಸರು ರೈಲು ಹಳಿಗಳನ್ನು ಪರಿಶೀಲಿಸಿದಾಗ ಮಹಿಳೆ, ಮಗು ಮತ್ತು ಮಧ್ಯವಯಸ್ಕ ಪುರುಷರ ಮೃತದೇಹಗಳು ಪತ್ತೆಯಾದವು. ಬೆಂಕಿ ಆಕಸ್ಮಿಕದ ಸಂದರ್ಭದಲ್ಲಿ ಇವರು ರೈಲಿನಿಂದ ಬಿದ್ದಿರಬಹುದು ಅಥವಾ ಇಳಿಯಲು ಪ್ರಯತ್ನಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ: Crime news: ರೈಲು ಬೋಗಿಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಯಾಣಿಕ, 8 ಮಂದಿಗೆ ಸುಟ್ಟ ಗಾಯ, ಮೂವರ ಶವ ಪತ್ತೆ