Site icon Vistara News

Fraud Case: ಅಸಲಿ ಮದುವೆ, ನಕಲಿ ಹೆಣ್ಣು! 3 ವರ್ಷದಲ್ಲಿ 5 ಮದುವೆಯಾಗಿ ವಂಚನೆ; ಮದುಮಗಳು ಮತ್ತು ಗ್ಯಾಂಗ್‌ ಆರೆಸ್ಟ್

fraud case tumkur

ತುಮಕೂರು: ಇದು ಮದುವೆ ಆಲೋಚನೆಯಲ್ಲಿರುವ ಅವಿವಾಹಿತರು ನೋಡಲೇಬೇಕಾದ ಸ್ಟೋರಿ. ಸಿಕ್ಕಿದ್ದೇ ಸೀರುಂಡೆ ಅಂತ ಕಣ್ಮುಚ್ಚಿಕೊಂಡು ಹೆಣ್ಣು ಒಪ್ಪಿಕೊಳ್ಳುವುದಕ್ಕೆ ಮುನ್ನ ಹುಷಾರಾಗಿರಿ. ವಯಸ್ಸು ಮೀರಿ ಹೋಗ್ತಿದೆ ಅಂತ ಆತುರಪಟ್ಟರೆ ಡಿಸೈನ್‌ ಡಿಸೈನ್‌ ಮಕ್ಮಲ್‌ ಟೋಪಿ ಹಾಕಿಸಿಕೊಳ್ಳುವುದು ಗ್ಯಾರಂಟಿ. ಇದು ಅಸಲಿ ಮದುವೆಯಾಗಿ ವಂಚಿಸುವ ನಕಲಿ ಹೆಣ್ಣು ಹಾಗೂ ಗ್ಯಾಂಗ್‌ನ ಕಥೆ.

ಇಲ್ಲಿ ಎಂಟು ಜನ ಹುಡುಗಿ ಕಡೆಯವರು ಬರುತ್ತಾರೆ. ಹೆಣ್ಣು ತೋರಿಸುತ್ತಾರೆ. ಮದುವೆಯನ್ನೂ ಮಾಡಿಸುತ್ತಾರೆ. ಮದುವೆಯಾದ ನಾಲ್ಕೇ ದಿನಕ್ಕೆ ಮದುಮಗಳು ವರನ ಮನೆಯಲ್ಲಿದ್ದ ಹಣ, ಒಡವೆಯನ್ನೆಲ್ಲ ಎತ್ತಿಕೊಂಡು ಪರಾರಿಯಾಗ್ತಾಳೆ. ತುಮಕೂರಿನಲ್ಲಿ ಇಂಥ ದೋಖಾ ಮ್ಯಾರೇಜ್ ಕಂಪನಿ ಪತ್ತೆಯಾಗಿದೆ. ಮದುವೆ ವಯಸ್ಸು ಮೀರಿದ ಯುವಕರೇ ಈ ದೋಖಾ ಗ್ಯಾಂಗಿನ ಟಾರ್ಗೆಟ್ ಆಗಿದ್ದು, ಮದುವೆ ಹೆಸರಲ್ಲಿ ವಂಚನೆ ಮಾಡುತ್ತಿದ್ದ ತಂಡವನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

ತುಮಕೂರು ಜಿಲ್ಲೆ ಗುಬ್ಬಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ತುಮಕೂರು ಸೇರಿದಂತೆ ರಾಜ್ಯದ ಹಲವೆಡೆ ಹಲವರನ್ನು ಯಾಮಾರಿಸಿದ್ದ ತಂಡ ಅಂದರ್ ಆಗಿದೆ. 3 ವರ್ಷದಲ್ಲಿ ಐದು ಮದುವೆ ಮಾಡಿಕೊಂಡಿದ್ದ ಐನಾತಿ ಮದುಮಗಳು ಕೂಡ ಆರೆಸ್ಟ್ ಆಗಿದ್ದಾಳೆ.

ಏನಿದು ಪ್ರಕರಣ?

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಅತ್ತಿಗಟ್ಟೆ ಗ್ರಾಮದಲ್ಲಿ ಇಂಥದೊಂದು ವಂಚನೆಯ ಮದುವೆ ನಡೆದಿತ್ತು. ಗ್ರಾಮದ ಪಾಲಾಕ್ಷಯ್ಯ ಎಂಬವರು ತಮ್ಮ ಮಗ ದಯಾನಂದಮೂರ್ತಿಗೆ 37 ವರ್ಷ ದಾಟಿದರೂ ಹೆಣ್ಣು ಸಿಗದೇ ನೊಂದಿದ್ದರು. ಕುಷ್ಟಗಿ ಮೂಲದ ಬಸವರಾಜು ಎಂಬಾತನ ಮೂಲಕ ಹುಬ್ಬಳ್ಳಿಯ ಲಕ್ಷ್ಮಿ ಎಂಬಾಕೆಯ ಪರಿಚಯವಾಗಿತ್ತು. ಮದುವೆ ಬ್ರೋಕರ್‌ ಕೆಲಸ ಮಾಡುತ್ತಿದ್ದ ಲಕ್ಷ್ಮಿ ಬಳಿ ಮಗನಿಗೆ ಹೆಣ್ಣು ತೋರಿಸುವಂತೆ ಪಾಲಾಕ್ಷಯ್ಯ ಕೇಳಿಕೊಂಡಿದ್ದರು.

ಇವರ ಪರಿಸ್ಥಿತಿ ನೋಡಿ ಮೋಸ ಮಾಡುವ ತೀರ್ಮಾನ ಮಾಡಿದ ಲಕ್ಷ್ಮೀ, ಹುಬ್ಬಳ್ಳಿಯಲ್ಲಿ ಒಬ್ಬಳು ಒಳ್ಳೆ ಹುಡುಗಿ ಇದ್ದಾಳೆ. ಆಕೆಗೆ ತಂದೆ-ತಾಯಿ ಇಲ್ಲ. ನೀವೇ ಮದುವೆ ಮಾಡಿಕೊಳ್ಳಬೇಕೆಂದು ಸುಳ್ಳು ಹೇಳಿದ್ದಳು. ಕೋಮಲಾ ಎಂಬ ಹೆಸರಿನಲ್ಲಿ ಹುಡುಗಿಯ ಫೋಟೋ ಕಳುಹಿಸಿದ್ದಳು. ಬಳಿಕ ಹುಡುಗಿಯನ್ನು ಗಂಡಿನ ಮನೆಗೆ ಕರೆದುಕೊಂಡು ಬಂದಿದ್ದಳು. ಆಕೆಯ ಸಂಬಂಧಿಕರು ಎಂದು ಇನ್ನೂ ಐದಾರು ಜನರನ್ನು ಕರೆತಂದಿದ್ದಳು.

ಕಳೆದ ವರ್ಷ ನವೆಂಬರ್‌ 11ರಂದು ಅತ್ತಿಗಟ್ಟೆಗೆ ಬಂದಿದ್ದ ನಕಲಿ ಕುಟುಂಬ ಅಂದೇ ಮದುವೆ ಮಾತುಕತೆ ನಡೆಸಿತ್ತು. ಮರುದಿನ ಮುಂಜಾನೆಯೇ ಮದುವೆಯನ್ನೂ ಮಾಡಿ ಮುಗಿಸಿದ್ದರು. ಮಗನಿಗೆ ಹೆಣ್ಣು ಸಿಗದೇ ಹೈರಾಣಾಗಿದ್ದ ದಯಾನಂದಮೂರ್ತಿ ಕುಟುಂಬ ದಿಢೀರ್‌ ಮದುವೆಗೆ ಒಪ್ಪಿಕೊಂಡು ಗ್ರಾಮದಲ್ಲಿ ಮದುವೆ ಮಾಡಿದ್ದರು. ಹೆಣ್ಣು ಸಿಕ್ಕ ಖುಷಿಯಲ್ಲಿ ಹಿಂದೆಮುಂದೆ ಯೋಚಿಸದೆ ಮದುವೆ ಮಾಡಿಸಿದ್ದರು. ಮದುವೆಗೆ ಸುಮಾರು 200ಕ್ಕೂ ಹೆಚ್ಚು ಜನ ಸೇರಿದ್ದು, ಹೆಣ್ಣಿಗೆ ಚಿನ್ನದ ಸರ, ತಾಳಿ, ಕಿವಿಗೆ ಓಲೆ ನೀಡಿದ್ದರು.

ವಧುವಿಗೆ 25 ಗ್ರಾಂ ಚಿನ್ನಾಭರಣ ಹಾಕಲಾಗಿತ್ತು. ಹೆಣ್ಣು ತೋರಿಸಿದ ಬ್ರೋಕರ್‌ ಲಕ್ಷ್ಮಿಗೆ 1.5 ಲಕ್ಷ ಹಣ ನೀಡಿದ್ದರು. ಹೆಣ್ಣಿನ ಕಡೆಯವರು ಅಂತ 8 ಜನರನ್ನು ಬ್ರೋಕರ್‌ ಲಕ್ಷ್ಮಿ ಕರೆ ತಂದಿದ್ದಳು. ಮದುವೆ ಮುಗಿದ ಎರಡು ದಿನದ ನಂತರ ಸಂಪ್ರದಾಯದ ನೆಪ ಹೇಳಿ ಹಣ-ಚಿನ್ನದ ಒಡವೆ ಸಹಿತ ಮದುಮಗಳನ್ನ ಕರೆದುಕೊಂಡು ಹೋಗಿದ್ದರು. ವಾರ ಕಳೆದರೂ ಸೊಸೆ ವಾಪಸ್‌ ಬಂದಿರಲಿಲ್ಲ.

ಆತಂಕಗೊಂಡ ಪಾಲಾಕ್ಷಯ್ಯ ಹುಬ್ಬಳ್ಳಿಗೆ ಹೋಗಿ ವಿಚಾರಿಸಿದಾಗ, ನಡೆದದ್ದು ನಕಲಿ ಮದುವೆ, ಬಂದವರು ದೋಖಾ ಗಿರಾಕಿಗಳು ಎಂಬ ಸತ್ಯ ಬಯಲಾಗಿದೆ. ವಾಪಸ್‌ ಗುಬ್ಬಿಗೆ ಬಂದ ಪಾಲಾಕ್ಷಯ್ಯ ಎಲ್ಲರ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಗುಬ್ಬಿ ಪೊಲೀಸರು ತನಿಖೆ ನಡೆಸಿದ್ದರು. ಒಂದು ವರ್ಷದಿಂದ ದೋಖಾ ಕುಟುಂಬ ತಲೆ ಮರೆಸಿಕೊಂಡಿತ್ತು. ಮಹಾರಾಷ್ಟ್ರ, ಹುಬ್ಬಳ್ಳಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮದುಮಗಳು ಕೋಮಲಾ @ ಲಕ್ಷ್ಮೀ ಬಾಳಸಾಬ್ ಜನಕರ, ಚಿಕ್ಕಪ್ಪ ಪಾತ್ರಧಾರಿ ಸಿದ್ದಪ್ಪ, ಚಿಕ್ಕಮ್ಮ ಪಾತ್ರಧಾರಿ ಲಕ್ಷ್ಮೀಬಾಯಿ, ಬ್ರೋಕರ್ ಲಕ್ಷ್ಮಿ ಬಂಧಿತರು.

ಮದುವೆ ಹೆಸರಲ್ಲಿ ವಂಚಿಸಲು ನಕಲಿ ಆಧಾರ್‌ ಕಾರ್ಡ್‌ ಅನ್ನೂ ಈ ತಂಡ ಸೃಷ್ಟಿ ಮಾಡಿಕೊಂಡಿತ್ತು. ಮದುವೆ ಹೆಸರಲ್ಲಿ ವಂಚನೆ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ ತಂಡ, ಆಧಾರ್ ಕಾರ್ಡ್ ತೋರಿಸಿ ಗಂಡಿನ‌ ಮನೆಯವರನ್ನ ನಂಬಿಸುತ್ತಿದ್ದರು. ಮೂರು ವರ್ಷದಲ್ಲಿ ನಾಲ್ಕು ಮಂದಿ ಪುರುಷರಿಗೆ ಮದುವೆ ಹೆಸರಿನಲ್ಲಿ ಹೀಗೆ ವಂಚಿಸಿದೆ. ಸಂಪ್ರದಾಯದಂತೆ ಮದುವೆ ಮಾಡಿಸಿ, ನಂಬಿಸಿ ಮೋಸ ಮಾಡುವ ಈ ಪ್ರಕರಣದಲ್ಲಿ ಬ್ರೋಕರ್‌ ಲಕ್ಷ್ಮೀ ಇಡೀ ಪ್ರಕರಣದ ಸೂತ್ರಧಾರಿ. ಮದುಮಗಳಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಚಿಕ್ಕಪ್ಪ-ಚಿಕ್ಕಮ್ಮನ ಹೆಸರಿನಲ್ಲಿ ಬಂದಿದ್ದವರು ಕೂಡ ನಕಲಿಗಳು. ಸದ್ಯ ನಾಲ್ವರನ್ನೂ ಬಂಧಿಸಿ ಗುಬ್ಬಿ ಪೊಲೀಸರು ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: Raichur News: ಶಿಕ್ಷಕಿಗೆ ಅಶ್ಲೀಲ ಮೆಸೇಜ್‌ ಕಳಿಸಿದ ಪ್ರಭಾರಿ ಪ್ರಾಚಾರ್ಯನಿಗೆ ಧರ್ಮದೇಟು

Exit mobile version