ಔರಂಗಾಬಾದ್: ಚಾಲಕ ನೀಡುತ್ತಿದ್ದ ಲೈಂಗಿಕ ಕಿರುಕುಳವನ್ನು (Molestation) ತಪ್ಪಿಸಿಕೊಳ್ಳುವುದಕ್ಕಾಗಿ ವೇಗವಾಗಿ ಹೋಗುತ್ತಿದ್ದ ಆಟೋರಿಕ್ಷಾದಿಂದ ಬಾಲಕಿಯೊಬ್ಬಳು ಹೊರೆಗೆ ನೆಗೆದಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಹಾರಾಷ್ಟ್ರದ ಔರಂಗಾಬಾದ್ ನಗರದಲ್ಲಿ ಈ ಘಟನೆ ನಡೆದಿದೆ. ಚಾಲಕನನ್ನು ಸೈಯದ್ ಅಕ್ಬರ್ ಹಮೀದ್ ಎಂದು ಗುರುತಿಸಲಾಗಿದ್ದು, ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಬಾಲಕಿಯ ತಲೆಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಔರಂಗಾಬಾದ್ ಕ್ರಾಂತಿ ಚೌಕ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ದ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಘಟನೆ ನಡೆದ ಜಾಗದಲ್ಲಿ ಸಿಸಿಟಿವಿ ಇರುವುದರಿಂದ ಇಡೀ ಘಟನೆ ಸೆರೆಯಾಗಲು ಸಾಧ್ಯವಾಗಿದೆ.
ಏನಾಗಿತ್ತು?
ಸಂತ್ರಸ್ತ ಬಾಲಕಿ ಶಾಲೆಯಿಂದ ಮನೆಗೆ ಹೋಗಲು ಆಟೋರಿಕ್ಷಾ ಹತ್ತಿದ್ದಳು. ಸ್ವಲ್ಪ ದೂರ ಹೋಗುತ್ತಿದ್ದಂತೆ ಚಾಲಕ ಬಾಲಕಿಯ ಜತೆ ಅಶ್ಲೀಲವಾಗಿ ಮಾತನಾಡುತ್ತಾ, ಲೈಂಗಿಕವಾಗಿ ಕಿರುಕುಳ ನೀಡಲು ಮುಂದಾಗಿದ್ದಾನೆ. ಇಲ್ಲೇನೋ ತಪ್ಪಾಗುತ್ತಿದೆ ಎಂಬುದನ್ನು ಅರಿತ ಬಾಲಕಿ ಆಟೋ ಹೆಚ್ಚು ಜನರು ಇರುವ ರಸ್ತೆಗೆ ಹೋಗುತ್ತಿದ್ದಂತೆ ಅದರಿಂದ ಹೊರಗೆ ಜಿಗಿದಿದ್ದಾಳೆ. ರಸ್ತೆಗೆ ಜೋರಾಗಿ ತಲೆ ತಾಗಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದಾಳೆ. ಕೂಡಲೇ ಜನರು ಸುತ್ತುವರಿದ ಹುಡುಗಿಯನ್ನು ರಕ್ಷಿಸಿದ್ದಾರೆ ಮತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ | Harassment | ಬಾಲಕಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ; ಗ್ರಾಮಸ್ಥರಿಂದ ಧರ್ಮದೇಟು, ಶಿಕ್ಷಕ ಅಮಾನತು