ಮಂಡ್ಯ: ಕೆರಗೋಡು ಧ್ವಜಸ್ತಂಭ (Keragodu) ಹೋರಾಟ ಪ್ರಕರಣದಲ್ಲಿ, ಹನುಮಧ್ವಜ (Hanuman Flag) ಹಾರಾಡಿಸುವ ಕುರಿತು ಹೋರಾಟ ಮಾಡಿದವರ ಮೇಲೆ ರೌಡಿ ಶೀಟರ್ (Rowdy Sheet) ಅಸ್ತ್ರ ಬಳಸಲು ಗೃಹ ಇಲಾಖೆ (Home ministry) ಮುಂದಾಗಿದೆ.
ಧ್ವಜಸ್ತಂಭದಲ್ಲಿ ಹನುಮ ನೆಡಲು ಹೋರಾಟ ನಡೆಸಿದ್ದ ಮೂವರಿಗೆ ಮಂಡ್ಯದ ಕೆರಗೋಡು ಪೊಲೀಸರಿಂದ ರೌಡಿ ಶೀಟರ್ ತೆರೆಯುವ ನೋಟಿಸ್ ಜಾರಿ ಮಾಡಲಾಗಿದೆ. ಬಾಲಕೃಷ್ಣ @ ಚಿಕ್ಕಬಳ್ಳಿ ಬಾಲು, ಕಾರ್ತಿಕ್ ಮತ್ತು ಹರೀಶ್‌ಗೆ ಈ ಕುರಿತು ನೋಟೀಸ್ ನೀಡಲಾಗಿದೆ.
ಕೆರಗೋಡಿನಲ್ಲಿ ಹನುಮಧ್ವಜಕ್ಕಾಗಿ ಈ ಮೂವರು ಹೋರಾಟ ನಡೆಸಿದ್ದರು. ಕೆರಗೋಡು ಹನುಮಧ್ವಜ ಹೋರಾಟ ದೇಶಾದ್ಯಂತ ಬಾರೀ ಸುದ್ದಿ ಮಾಡಿತ್ತು. ಹನುಮಧ್ವಜ ಹೋರಾಟದ ಸಂದರ್ಭ ಐಪಿಸಿ ಸೆಕ್ಷನ್ 143, 341, 353, 149ರ ಅಡಿಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿತ್ತು. ಅನ್ಯಕೋಮಿನವರನ್ನು ಹೆದರಿಸುವುದು, ಬೆದರಿಸುವುದು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣ ಕೊಟ್ಟು ನೋಟಿಸ್ ಜಾರಿ ಮಾಡಲಾಗಿದೆ.
7 ದಿನಗಳ ಒಳಗೆ ಕೆರಗೋಡು ಪೊಲೀಸ್ ಠಾಣೆಗೆ ಹಾಜರಾಗಿ ನೋಟಿಸ್‌ಗೆ ಉತ್ತರಿಸುವಂತೆ ಸೂಚನೆ ನೀಡಲಾಗಿದೆ. ನೋಟಿಸ್ ಬಳಿಕ ಹನುಮಧ್ವಜ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂಪರ ಕಾರ್ಯಕರ್ತರನ್ನು ಹೀಗೆ ಹತ್ತಿಕ್ಕಲಾಗುತ್ತಿದೆ ಎಂದು ರಾಜ್ಯ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ.
ಏನಿದು ಮಂಡ್ಯದ ಹನುಮಧ್ವಜ ಕೇಸ್?
ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಗ್ರಾಮಸ್ಥರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರು ಗ್ರಾಮದ 108 ಅಡಿ ಧ್ವಜಸ್ತಂಭದಲ್ಲಿ ಹನುಮ ಧ್ವಜವನ್ನು ಹಾರಿಸಿದ್ದರು. ಜನವರಿ 22ರಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿತು. ಇದರ ನೆನಪಾಗಿ ಕೆರಗೋಡು ಗ್ರಾಮದಲ್ಲಿ 108 ಅಡಿ ಎತ್ತರ ಧ್ವಜಸ್ತಂಭದ ಮೇಲೆ ಹನುಮ ಧ್ವಜ ಹಾರಿಸಲು ಗ್ರಾಮಸ್ಥರು ನಿರ್ಧರಿಸಿದ್ದರು. ಧ್ವಜ ಹಾರಿಸಲು ನಿಶ್ಚಯಿಸಿದ ಜಾಗ ಗ್ರಾಮ ಪಂಚಾಯಿತಿಗೆ ಸೇರಿದ್ದರಿಂದ ಅನುಮತಿ ಕೋರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರು. ಆದರೆ, ಗ್ರಾಮ ಪಂಚಾಯಿತಿ “ರಾಷ್ಟ್ರ ಧ್ವಜ ಮತ್ತು ನಾಡಧ್ವಜ” ಹೊರತುಪಡಿಸಿ ಯಾವುದೇ ಧಾರ್ಮಿಕ/ ರಾಜಕೀಯ ಧ್ವಜವನ್ನು ಹಾರಿಸುವಂತಿಲ್ಲವೆಂದು ಅನುಮತಿಯನ್ನು ನಿರಾಕರಣೆ ಮಾಡಿತ್ತು.
ಆದರೂ ಗ್ರಾಮಸ್ಥರು ಮತ್ತು ಹಿಂದು ಕಾರ್ಯಕರ್ತರು ಹನುಮ ಧ್ವಜ ಹಾರಿಸಿದ್ದರು. ಇದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಕೊನೆಗೆ ಈ ವಿಚಾರ ಮತ್ತೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದಿದೆ. ಅಲ್ಲಿ 22 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಹನುಮ ಧ್ವಜ ಹಾರಾಟಕ್ಕೆ 20 ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಬಳಿಕ ಗ್ರಾಮ ಪಂಚಾಯತ್ ಸದಸ್ಯರು ನಡಾವಳಿ ರಚಿಸಿ, ವಿವಾದವನ್ನು ಇತ್ಯರ್ಥ ಪಡಿಸಿದ್ದರು.
ಆದರೆ, ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸಲಾಗಿದೆ, ಇದನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತ ಮೌಖಿಕ ಆದೇಶವನ್ನು ಹೊರಡಿಸಿತ್ತು. ಹೀಗಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಅವರು ತೆರವುಗೊಳಿಸಲು ಮುಂದಾದರು. ಇದಕ್ಕೆ ಗ್ರಾಮಸ್ಥರು ಅಡ್ಡಿಪಡಿಸಿ ಪ್ರತಿಭಟಿಸಿದ್ದರು. ಹೀಗಾಗಿ ಅಲ್ಲಿಂದ ನಿರ್ಗಮಿಸಿದ್ದ ಅಧಿಕಾರಿಗಳು ಶನಿವಾರ (ಜ.27) ರಾತ್ರಿ ಪುನಃ ಬಂದು ಹನುಮಧ್ವಜ ತೆರವಿಗೆ ಮುಂದಾದರು. ಮುಂಜಾನೆ 3 ಗಂಟೆ ಹೊತ್ತಿಗೆ ಮಂಡ್ಯ ಎಸಿ ಶಿವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಬಿರಾದರ್ ನೇತೃತ್ವದಲ್ಲಿ ತೆರವಿಗೆ ಮುಂದಾಗುತ್ತಿದ್ದಂತೆ ಗ್ರಾಮಸ್ಥರಿಗೆ ವಿಷಯ ತಿಳಿದು ಬಂದು ಪ್ರತಿಭಟನೆ ನಡೆಸಿದ್ದರು. ಆದರೂ ಹನುಮಧ್ವಜ ತೆರವು ಮಾಡಲಾಗಿತ್ತು.
ನಂತರ ಈ ಪ್ರಕರಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕೈಜೋಡಿಸಿದ್ದವು. ಕೆರಗೋಡು ಹಾಗೂ ಮಂಡ್ಯದಲ್ಲಿ ಹನುಮಧ್ವಜ ಮರು ಸ್ಥಾಪನೆಗೆ ಆಗ್ರಹಿಸಿ ಪಾದಯಾತ್ರೆ ನಡೆದಿತ್ತು. ಫೆ.7ರಂದು ಮಂಡ್ಯ ಬಂದ್‌ಗೆ ಕರೆ ನೀಡಲಾಗಿತ್ತು. ಕೆರಗೋಡು ಗ್ರಾಮದಲ್ಲಿ ಮನೆಮನೆ ಮೇಲೆ ಹನುಮಧ್ವಜ ಹಾರಿಸಿ ಪ್ರತಿಭಟಿಸಲಾಗಿತ್ತು.
ಇದನ್ನೂ ಓದಿ: Hanuman Flag: ಹನುಮಧ್ವಜ ವಿವಾದ; ಇಂದು ಮಂಡ್ಯ ಬಂದ್‌ಗೆ ಹಿಂದೂ ಸಂಘಟನೆಗಳ ಕರೆ; ಬೈಕ್ ರ್‍ಯಾಲಿ