ಬೆಂಗಳೂರು: ಹಾಸನ ಸಂಸದ (Hassan MP), ಜೆಡಿಎಸ್ ಮುಖಂಡ (JDS Leader), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಒಪ್ಪಂದವಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಮಾಧ್ಯಮವರೊಂದಿಗೆ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿ, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕಾಂಗ್ರೆಸ್ ಅತ್ಯಂತ ಬೇಜವಾಬ್ದಾರಿತನದಿಂದ ಆರೋಪ ಮಾಡುತ್ತಿದೆ ಎಂದು ಪ್ರತಿಕ್ರಿಯಿಸಿದರು.
ಪ್ರಜ್ವಲ್ ರೇವಣ್ಣ ಅವರು ಎಫ್‌ಐಆರ್ ಆಗುವ ಮೊದಲೇ ವಿದೇಶಕ್ಕೆ ಹೋಗಿದ್ದಾರೆ. ರಾಜ್ಯ ಪೊಲೀಸರು ತಕ್ಷಣವೇ ಎಫ್ಐಆರ್ ಹಾಕಬೇಕಿತ್ತು. ಹೋಗಲು ಏಕೆ ಬಿಟ್ಟರು? ಎಂದು ಜೋಶಿ ಪ್ರಶ್ನಿಸಿದರು.
ಪ್ರಜ್ವಲ್ ವಿದೇಶಕ್ಕೆ ಹಾರುತ್ತಾರೆಂಬುದು ಕೇಂದ್ರಕ್ಕೆ ಕನಸು ಬೀಳುತ್ತದೆಯೇ? ರಾಜ್ಯ ಸರ್ಕಾರ ತನ್ನ ತಪ್ಪನ್ನು ಕೇಂದ್ರದ ಮೇಲೆ ಹಾಕಲು ನೋಡುತ್ತಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಗಂಭೀರ ಆರೋಪ ಕೇಳಿ ಬಂದ ತತ್ ಕ್ಷಣವೇ ರಾಜ್ಯ ಪೊಲೀಸರು ಏಕೆ ಎಫ್‌ಐಆರ್ ಹಾಕಲಿಲ್ಲ? ಎಂದು ಪ್ರಲ್ಹಾದ್ ಜೋಶಿ ಪ್ರಶ್ನಿಸಿದರು.
ಉಚ್ಚಾಟನೆಗೆ ನಮ್ಮ ವಿರೋಧವಿಲ್ಲ
ಜೆಡಿಎಸ್ ಒಂದು ಸ್ವತಂತ್ರ ಪಕ್ಷ. ಆಗಲೇ ಪ್ರಜ್ವಲ್ ರೇವಣ್ಣ ಅವರನ್ನು ಉಚ್ಚಾಟಿಸುವ ತೀರ್ಮಾನವನ್ನು ತೆಗೆದುಕೊಂಡಿದೆ. ಆ ಪಕ್ಷ ಕೈಗೊಂಡಿರುವ ಕ್ರಮಕ್ಕೆ ಬಿಜಿಪಿಯ ವಿರೋಧವಿಲ್ಲ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದರು.
ಇನ್ನು, ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ಆಗಲೇ “ಉಪ್ಪು ತಿಂದವರು ನೀರು ಕುಡಿಯಬೇಕು” ಎಂದು ಹೇಳಿದ್ದಾರೆ. ಜೆಡಿಎಸ್ ಆಗಲಿ, ಬಿಜೆಪಿಯಾಗಲಿ ಪ್ರಜ್ವಲ್ ಉಚ್ಚಾಟನೆಗೆ ವಿರೋಧ ವ್ಯಕ್ತಪಡಿಸಿಲ್ಲ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ಕಾಂಗ್ರೆಸ್ ಬೇಜವಾಬ್ದಾರಿ ಆರೋಪ
ಪ್ರಜ್ವಲ್ ರೇವಣ್ಣ ತಲೆಮರೆಸಿಕೊಳ್ಳಲು ಬಿಜೆಪಿ ಸಹಾಯ ಮಾಡಿದೆ ಎಂಬ ಆರೋಪ ಕಾಂಗ್ರೆಸ್‌ನವರ ಆರೋಪವು ಬೇಜವಾಬ್ದಾರಿತನದ್ದು. ಇವರ ತಪ್ಪನ್ನು ಇಟ್ಟುಕೊಂಡು ನಮ್ಮ ಮೇಲೆ ಗೂಬೆ ಕೂರಿಸಿದರೆ ಹೇಗೆ ಎಂದು ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಸ್ವಲ್ಪ ಬುದ್ಧಿ, ಜ್ಞಾನ ಇಟ್ಟುಕೊಳ್ಳಲಿ
ಯಾರೇ ಆಗಲಿ ಆರೋಪ ಮಾಡುವಾಗ ಬುದ್ಧಿ, ಜ್ಞಾನ ಇಟ್ಟುಕೊಳ್ಳಬೇಕು. ದುರುದ್ದೇಶದಿಂದ ಕೂಡಿರಬಾರದು ಎಂದು ಕಾಂಗ್ರೆಸ್ ನಾಯಕರನ್ನು ತಿವಿದ ಪ್ರಲ್ಹಾದ್ ಜೋಶಿ, ಪ್ರಜ್ವಲ್ ರೇವಣ್ಣ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಎಂಬ ಕಾರಣಕ್ಕೆ ಪ್ರಕರಣ ಸೆನ್ಸಿಟಿವ್ ಆಗಿದೆ. ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ ಎಂದು ಹೇಳಿದರು.