Site icon Vistara News

Hassan Pen Drive Case: ರಾಕೇಶ್‌ ಸಿದ್ದರಾಮಯ್ಯ ಸಾವಿನ ವೇಳೆ ಏನಾಗಿತ್ತು ಎಂದೂ ಹೇಳುತ್ತೇನೆ: ಎಚ್‌.ಡಿ. ಕುಮಾರಸ್ವಾಮಿ

Hassan Pen Drive Case will tell Rakesh Siddaramaiah died history says HD Kumaraswamy

ಹುಬ್ಬಳ್ಳಿ: ಹಾಸನ ಸಂಸದ (Hassan MP), ಜೆಡಿಎಸ್‌ ಮುಖಂಡ (JDS Leader), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರ ಮನೆಯಲ್ಲಿ ನಡೆದಿದ್ದ ವಿಚಾರವನ್ನು ಹೊರಗಡೆ ತರುತ್ತೇನೆ ಎಂದು ರಾಕೇಶ್ ಸಿದ್ದರಾಮಯ್ಯ (Rakesh Siddaramaiah) ಸಾವಿನ ಸಂದರ್ಭದಲ್ಲಿ ನಡೆದ ವಿಚಾರವನ್ನು ಎಚ್‌ಡಿಕೆ ಎಳೆದು ತಂದಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದಲ್ಲಿ ನಡೆದಿದ್ದ ಘಟನೆಗೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಅವರು ಯಾವ ರೀತಿ ಸಹಾಯ ಮಾಡಿದ್ದಾರೆ ಎಂಬುದನ್ನು ಮರೆತಿದ್ದೀರಿ. ಎಲ್ಲ ದಾಖಲೆಗಳನ್ನು ನಾವು ಹೊರಗಡೆ ತರುತ್ತೇವೆ. ನಿಮ್ಮ ಕುಟುಂಬದಲ್ಲಿ ನಡೆದ ಘಟನೆ ಏನೇನಾಯಿತು ಎಲ್ಲವೂ ಹೊರಗೆ ಬರಲಿದೆ ಎಂದು ಎಚ್ಚರಿಕೆ ನೀಡಿದರು.

ನಮ್ಮ ಮನೆಯ ಎದುರು ಏಕೆ ಪ್ರತಿಭಟನೆ ಮಾಡುತ್ತೀರಿ. ಇದನ್ನು ಇಷ್ಟಕ್ಕೆ ಬಿಡಲ್ಲ. ಎಲ್ಲ ವಿಷಯವೂ ತನಿಖೆಯಾಗಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ‌ಎಚ್‌.ಡಿ. ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ. ಕಾಂಗ್ರೆಸ್‌ನವರು ನಮ್ಮ ಮನೆ ಬಳಿ ಬಂದು ಪ್ರತಿಭಟಿಸುತ್ತಿದ್ದಾರೆ. ಮಹಾನುಭಾವನ ಮನೆ ಮುಂದೆ ಹೋಗಿ ಪ್ರತಿಭಟನೆ ಮಾಡಿ. ಡಿಸಿಎಂ ಡಿ.ಕೆ. ಶಿವಕುಮಾರ್‌ ಮನೆ ಬಳಿ ಹೋಗಿ ಪ್ರತಿಭಟನೆ ಮಾಡಿ. ಎಚ್‌.ಡಿ. ರೇವಣ್ಣ ಕುಟುಂಬದ ಬಗ್ಗೆ ವಿಷಯವನ್ನು ಕೆದಕಿದ್ದಾರೆ. ನಾನು ಚರ್ಚೆ ಮಾಡಲು ಸಿದ್ಧ. ಪಲಾಯಾನ ಮಾಡುವುದಿಲ್ಲ. ಕಾಂಗ್ರೆಸ್‌ ನಾಯಕ ಮಹಾಪರಾಧ ಮಾಡಿದ್ದಾನೆ. ಎಷ್ಟು ತಿಂಗಳ ಹಿಂದೆ ಆ ಮಹಾನ್‌ ನಾಯಕನಿಗೆ ಗೊತ್ತಿತ್ತು. ಪೆನ್‌ಡ್ರೈವ್‌ ಯಾರು ಸರಬರಾಜು ಮಾಡಿದರು ಎಲ್ಲವೂ ಗೊತ್ತಿದೆ. ಈ ಮಹಾನ್‌ ನಾಯಕನ ನಡವಳಿಕೆಯ ಬಗ್ಗೆಯೂ ಚರ್ಚಿಸೋಣ. ನಿನ್ನೆ ಹಾಸನ ಜಿಲ್ಲಾಧಿಕಾರಿ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಸರ್ಕಾರದ ಹುನ್ನಾರ ಅಡಗಿದೆ ಎಂದು ಕಿಡಿಕಾರಿದರು.

ಹಲವು ವಿಷಯಗಳಿವೆ, ಎಲ್ಲವನ್ನೂ ಹೇಳುವೆ

ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದ ಸಂಬಂಧ ಹಲವು ವಿಷಯಗಳಿವೆ. ಅದನ್ನು ನಾನು ಹೇಳುತ್ತೇನೆ. ಮಹಾನ್‌ ನಾಯಕ ಮಹಿಳೆಯರ ಬದುಕನ್ನು ಬೀದಿಗೆ ತಂದಿದ್ದಾನೆ. ಇದರ ಬಗ್ಗೆಯೂ ನಾವು ಚರ್ಚೆ ಮಾಡಬೇಕಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಗುಡುಗಿದರು.

ಮಾತೃ ಶಕ್ತಿ ಪರ ನಿಲ್ಲುವುದಾಗಿ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅಮಿತ್‌ ಶಾ ಅವರು ಪ್ರಜ್ವಲ್‌ ರೇವಣ್ಣ ಬಗ್ಗೆ ಚರ್ಚೆ ಮಾಡಿಲ್ಲ. ಪ್ರಜ್ವಲ್‌ ವಿರುದ್ಧದ ಕ್ರಮ ತೆಗೆದುಕೊಳ್ಳುವ ವಿಷಯವನ್ನು ನಮಗೆ ಬಿಟ್ಟಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಇದನ್ನೂ ಓದಿ: Hassan Pen Drive Case: ಪ್ರಜ್ವಲ್ ಪ್ರಕರಣದಲ್ಲಿ ರೇವಣ್ಣ-ಸಿದ್ದರಾಮಯ್ಯ ಒಪ್ಪಂದ; ಪ್ರಲ್ಹಾದ್ ಜೋಶಿ ಹೇಳಿದ್ದೇನು?

ನಿಮ್ಮ ಜತೆ ನಾವಿದ್ದೇವೆ

ತಪ್ಪಾಗಿದ್ದರೆ ಶಿಕ್ಷೆಯಾಗಬೇಕೆಂದು ನಾನೇ ಹೇಳಿದ್ದೇನೆ. ಕಾನೂನು ವ್ಯಾಪ್ತಿಯಲ್ಲಿ ಏನಾಗಬೇಕೆಂದು ಚರ್ಚಿಸುತ್ತೇವೆ. ಈ ಬಗ್ಗೆ ಯಾರೂ ಗಾಬರಿಯಾಗಬೇಡಿ, ಆತಂಕ ಬೇಡ. ಯಾವುದೇ ಮಹಿಳೆಯರಿಗೆ ಅನ್ಯಾಯವಾದರೂ ಧ್ವನಿ ಎತ್ತುತ್ತೇವೆ. ನಿಮ್ಮ ಜತೆ ಎಚ್.ಡಿ. ದೇವೇಗೌಡ ಹಾಗೂ ನಾವು ಇದ್ದೇವೆ ಎಂದು ಎಚ್.ಡಿ. ಕುಮಾರಸ್ವಾಮಿ ಅಭಯ ನೀಡಿದರು.

Exit mobile version