Site icon Vistara News

Self Harming: ಇಬ್ಬರು ಇನ್‌ಸ್ಪೆಕ್ಟರ್‌ಗಳ ಬಳಿಕ ಹೆಡ್‌ಮಾಸ್ಟರ್‌ ಶಾಲೆಯಲ್ಲೇ ಆತ್ಮಹತ್ಯೆ; ಏನಾಗ್ತಿದೆ ರಾಜ್ಯದಲ್ಲಿ?

head master self harming

ವಿಜಯಪುರ: ಸರಕಾರಿ ಅಧಿಕಾರಿಗಳ (Govt Officers) ಸಾಲು ಸಾಲು ಅನುಮಾನಾಸ್ಪದ ಸಾವುಗಳು (Self Harming) ರಾಜ್ಯದಲ್ಲಿ ಕಳವಳ ಮೂಡಿಸುತ್ತಿವೆ. ಇದೀಗ ವಿಜಯಪುರದಲ್ಲಿ ಮುಖ್ಯೋಪಾಧ್ಯಾಯರೊಬ್ಬರು (Head Master) ಶಾಲೆಯ ಸ್ಟಾಕ್ ರೂಂನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರ ಕಿರುಕುಳದ ಬಗ್ಗೆ ದೂರಲಾಗಿದೆ.

ವಿಜಯಪುರ (Vijayapura news) ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ನಾಗೂರು ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. ಶಾಲೆಯ ಸ್ಟಾಕ್‌ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮುಖ್ಯೋಪಾಧ್ಯಾಯ ಸಿ.ಎಸ್ ಹಡಪದ ಅವರ ಶವ ಪತ್ತೆಯಾಗಿದೆ. ಇವರು ಕಳೆದ ಎರಡು ವರ್ಷದಿಂದ ನಾಗೂರು ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಶಾಲಾ ಅವಧಿ ಮುಗಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಸಾವಿನ ಕುರಿತು ಕುಟುಂಬಸ್ಥರು ಹಾಗೂ ಶಿಕ್ಷಕರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರಿ ನೌಕರರ ಸಂಘದಿಂದಲೂ ಸಾವಿನ ಕುರಿತು ಸಂಶಯ ವ್ಯಕ್ತವಾಗಿದೆ. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ತೀವ್ರ ಕಿರುಕುಳ ನೀಡುತ್ತಿದ್ದು, ಕಿರುಕುಳ ಸಹಿಸಲಾಗದೆ ನೇಣಿಗೆ ಶರಣಾಗಿದ್ದಾರೆ ಎಂದು ಆರೋಪಿಸಿರುವ ಕುಟುಂಬಸ್ಥರು, ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಬಸವನಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪೊಲೀಸರ ತನಿಖೆ ಬಳಿಕ ಸತ್ಯಾಂಶ ತಿಳಿದು ಬರಲಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಸರಕಾರಿ ಅಧಿಕಾರಿಗಳ ಅನುಮಾನಾಸ್ಪದ ಸಾವುಗಳ ಸರಣಿಗೆ ಇದು ಸೇರ್ಪಡೆಯಾಗಿದೆ. ಎರಡು ತಿಂಗಳ ಹಿಂದೆ ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ್‌ ಎಂಬವರ ಆತ್ಮಹತ್ಯೆ ರಾಜ್ಯ ರಾಜಕೀಯದಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ವಾರದ ಹಿಂದೆ ಯಾದಗಿರಿ ಪಿಎಸ್‌ಐ ಪರಶುರಾಮ್‌ ಹೃದಯಾಘಾತದಿಂದ ಸಾವಿಗೆ ಒಳಗಾಗಿದ್ದರು. ಇದರ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರ ಭ್ರಷ್ಟಾಚಾರ, ಲಂಚದ ಒತ್ತಡದ ಆರೋಪವಿದೆ. ನಂತರ ಬಿಡದಿಯಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್‌ ತಿಮ್ಮೇಗೌಡ ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಸಿಸಿಬಿ ಇನ್‌ಸ್ಪೆಕ್ಟರ್‌ ಆತ್ಮಹತ್ಯೆ

ಎರಡು ತಿಂಗಳ ಹಿಂದೆ ಸಿಸಿಬಿಗೆ (CCB) ಟ್ರಾನ್ಸ್‌ಫರ್‌ (Tarnsfer) ಆಗಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ತಿಮ್ಮೇಗೌಡ (Thimmegowda) ಆತ್ಮಹತ್ಯೆ ಮಾಡಿಕೊಂಡವರು. ಬೆಂಗಳೂರು ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇವರು ಬಿಡದಿಯಲ್ಲಿ ಆತ್ಮಹತ್ಯೆಗೆ (Self harming) ಶರಣಾಗಿದ್ದಾರೆ.

ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣು ಹಾಕಿಕೊಂಡು ತಿಮ್ಮೇಗೌಡ ಸಾವಿಗೆ ಶರಣಾಗಿದ್ದಾರೆ. ಈ ಹಿಂದೆ ಕುಂಬಳಗೋಡಿನ ಇನ್‌ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು ಎರಡು ತಿಂಗಳ ಹಿಂದೆ ಸಿಸಿಬಿಗೆ ವರ್ಗಾವಣೆಗೊಂಡಿದ್ದರು. ತಮ್ಮ ತೋಟದ ಜಾಗದಲ್ಲಿ ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ.

1998ರ ರೂರಲ್ ಬ್ಯಾಚ್ ಇನ್ಸ್‌ಪೆಕ್ಟರ್ ತಿಮ್ಮೇಗೌಡ, ಚನ್ನಪಟ್ಟಣದ ಹಳ್ಳಿಯೊಂದರ ನಿವಾಸಿ. ಗ್ರಾಮೀಣ ಕೃಪಾಂಕದಲ್ಲಿ ಆಯ್ಕೆಯಾಗಿದ್ದ ತಿಮ್ಮೇಗೌಡ ವಿಧಾನಸಭೆ ಚುನಾವಣೆ ವೇಳೆಗೆ ಬಿಡದಿಯಿಂದ ಅತ್ತಿಬೆಲೆಗೆ ವರ್ಗಾವಣೆಯಾಗಿದ್ದರು. 2023ರ ಸೆಪ್ಟೆಂಬರ್‌ನಲ್ಲಿ ಅತ್ತಿಬೆಲೆಯಲ್ಲಿ ಪಟಾಕಿ ದುರಂತ ನಡೆದ ಬಳಿಕ ಆ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದರು. ನಂತರ ಕುಂಬಳಗೋಡು ಠಾಣೆಗೆ ವರ್ಗಾವಣೆಯಾಗಿದ್ದು, ಇತ್ತೀಚೆಗೆ ಸಿಸಿಬಿಗೆ ವರ್ಗಾವಣೆಯಾಗಿತ್ತು.

ಇದನ್ನೂ ಓದಿ: Road Accident : ಅಮಾವಾಸ್ಯೆಗೆಂದು ದೇವಸ್ಥಾನಕ್ಕೆ ತೆರಳುತ್ತಿದ್ದ ಬೈಕ್‌ ಸವಾರ ಅಪಘಾತಕ್ಕೆ ಬಲಿ

Exit mobile version