ಬೆಂಗಳೂರು: ಪೊಲೀಸ್ ಸಬ್ ಇನ್ಸ್‌ಪೆಕ್ಟರ್(ಪಿಎಸ್‌ಐ) ನೇಮಕ ಹಗರಣದಲ್ಲಿ ಬಂಧಿತರಾಗಿರುವ ಎಡಿಜಿಪಿ ಅಮೃತ್ ಪಾಲ್ ಅವರನ್ನು ಹತ್ತು ದಿನ ಕಸ್ಟಡಿಯಲ್ಲಿ ಇರಿಸಿಕೊಂಡಿದ್ದರೂ ಒಮ್ಮೆಯೂ ವಿಚಾರಣಾಧೀನ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೇಳಿಕೆ ದಾಖಲಿಸಿಲ್ಲ. ಹಾಗಿದ್ದ ಮೇಲೆ ತನಿಖೆ ಸೂಕ್ತ ರೀತಿಯಲ್ಲಿ ನಡೆಯುತ್ತಿದೆ ಎಂದು ನಂಬುವುದಾದರೂ ಹೇಗೆ? ಎಂದು ಹಗರಣದ ತನಿಖೆ ನಡೆಸುತ್ತಿರುವ ಅಪರಾಧ ತನಿಖಾ ದಳವನ್ನು(ಸಿಐಡಿ) ಹೈಕೋರ್ಟ್ ಗುರುವಾರ ಪ್ರಶ್ನಿಸಿದೆ.
ಆರೋಪದಲ್ಲಿ ಬಂದಿತನಾಗಿರುವ ಸಿ.ಎನ್. ಶಶಿಧರ್ ಮತ್ತಿತರರು ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಸುವ ಸಂದರ್ಭದಲ್ಲಿ ಸಿಐಡಿ ಪರ ವಕೀಲರನ್ನು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಪ್ರಶ್ನಿಸಿದರು.
ಇದನ್ನೂ ಓದಿ | ಎಸಿಬಿ ಸೀಮಂತ್‌ಕುಮಾರ್ ಸಿಂಗ್ ವಿರುದ್ಧ ತನಿಖೆಯಾಗಲಿ: ನ್ಯಾ. ಸಂದೇಶ್‌ಗೆ ವಕೀಲರ ಸಂಘ ಬೆಂಬಲ
ಸಿಐಡಿಯ ಪೊಲೀಸ್ ಮಹಾನಿರ್ದೇಶಕರೇ ತನಿಖೆಯ ಮೇಲೆ ನಿಗಾ ವಹಿಸಿದ್ದು, ತನಿಖೆಯು ಸರಿ ದಾರಿಯಲ್ಲಿ ಸಾಗುತ್ತಿರುವ ಕುರಿತು ಅನುಮಾನ ವ್ಯಕ್ತಪಡಿಸಬೇಕಿಲ್ಲ ಎಂದು ಸಿಐಡಿ ಪರ ವಕೀಲರು ಸಮರ್ಥನೆ ಮಾಡಿಕೊಂಡರು.
ಈ ಕುರಿತು ಅಸಮಾಧಾನ ಹೊರಹಾಕಿದ ನ್ಯಾಯಾಲಯ, ಬಂಧಿತರಾಗಿರುವವರು ಎಡಿಜಿಪಿ ಆಗಿರುವುದರಿಂದಲೇ ನೀವು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೇಳಿಕೆ ದಾಖಲಿಸಿಲ್ಲ. ಹತ್ತು ದಿನಗಳಲ್ಲಿ ಏನೂ ಮಾಡದೆ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೀರಿ. ಐದು ದಿನ ವಶಕ್ಕೆ ನೀಡಿ ಎಂದು ಕೇಳಿದ್ದೀರಿ, ನ್ಯಾಯಾಲಯ ಮೂರು ದಿನ ವಶಕ್ಕೆ ನೀಡಿದೆ. ಪ್ರಕರಣದಲ್ಲಿ ಏನೂ ಪ್ರಗತಿ ಆಗಿಲ್ಲದಿರುವುದರಿಂದಲೇ ಸಿಐಡಿ ಡಿಜಿಯನ್ನು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಹೇಳುವ ಪರಿಸ್ಥಿತಿ ಬಂದಿದೆ ಎಂದು ಹೇಳಿತು.
ಇದಕ್ಕೂ ಮುನ್ನ ವಾದ ಮಂಡಿಸಿದ ಸಿಐಡಿ ಪರ ವಕೀಲರು, ಹಗರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಅನೇಕರನ್ನು ಬಂಧಿಸಲಾಗಿದೆ. ಇದರಲ್ಲಿ ಇನ್ಸ್‌ಪೆಕ್ಟರ್‌ಗಳು, ಪಿಎಸ್‌ಐ, ಆರ್‌ಎಸ್‌ಐ ಸೇರಿ ಅನೇಕರನ್ನು ಬಂಧಿಸಲಾಗಿದೆ, ಅನೇಕರ ಮನೆಗಳನ್ನು ತಪಾಸಣೆ ನಡೆಸಲಾಗಿದೆ. 90 ದಿನದಲ್ಲಿ ಆರೋಪಪಟ್ಟಿಯನ್ನು ಸಲ್ಲಿಸಬೇಕಿದೆ. ಇದಕ್ಕೆ ಇನ್ನೂ 15 ದಿನ ಅವಕಾಶವಿದೆ. ತನಿಖೆಯ ಹಂತವನ್ನು ನೋಡಿಕೊಂಡು ಈ ಕುರಿತು ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿಸಿದರು.
ಅಮೃತ್ ಪಾಲ್ ವಿಚಾರದಲ್ಲಿ ಏನು ಪ್ರಗತಿಯಾಗಿದೆ ಎಂದು ನ್ಯಾಯಾಲಯ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಸಿಐಡಿ ಪರ ವಕೀಲರು, ಅಮೃತ್ ಪಾಲ್ ಮನೆಯನ್ನು ಶೋಧನೆ ನಡೆಸಲಾಗಿದೆ, ಅವರ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಲಾಗಿದೆ, ಫೋನ್ ವಶಕ್ಕೆ ಪಡೆಯಲಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಎಡಿಜಿಪಿ ಹಂತದ ಅಧಿಕಾರಿಯ ತನಿಖೆಯನ್ನು, ಅವರಿಗಿಂತ ಕೆಳಗಿನ ಹಂತದ ಅಧಿಕಾರಿಯಿಂದ ತನಿಖೆ ನಡೆಸುತ್ತಿದ್ದೀರಿ. ಒಂದೊಮ್ಮೆ ಅಮೃತ್ ಪಾಲ್ ಕ್ಲೀನ್‌ಚಿಟ್ ಪಡೆದು ಹೊರಬಂದರೆ? ಈ ಕುರಿತು ಕೆಳಹಂತದ ಅಧಿಕಾರಿಗೆ ಆತಂಕ ಇರುವುದಿಲ್ಲವೇ? ಎಂದು ಪ್ರಶ್ನಿಸಿತು.
ಇದಕ್ಕೆ ಉತ್ತರಿಸಿದ ಸಿಐಡಿಪ ಪರ ವಕೀಲರು, ನ್ಯಾಯಾಲಯದ ನಿರ್ದೇಶನದಂತೆ ಸಿಐಡಿಯ ಡಿಜಿ ತನಿಖೆಯ ಮೇಲೆ ನಿಗಾ ಇಟ್ಟಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಯೂ ನ್ಯಾಯಾಲಯದ ಮುಂದೆ ಹಾಜರಿದ್ದು, ತನಿಖೆಯ ಮೇಲೆ ಕಣ್ಣಿಟ್ಟಿದ್ದಾರೆ. ಯಾರೂ ಪ್ರಭಾವ ಬೀರಲಾಗದು ಎಂಬ ಭರವಸೆಯನ್ನು ನ್ಯಾಯಾಲಯಕ್ಕೆ ನೀಡುತ್ತೇನೆ ಎಂದರು.
ಪೊಲೀಸ್ ವರಿಷ್ಠಾಧಿಕಾರಿಯೂ ಎಡಿಜಿಪಿ ಶ್ರೇಣಿಗಿಂತ ಕೆಳಗಿದ್ದಾರಲ್ಲವೇ? ಇದು ಬೇಲಿಯೇ ಎದ್ದು ಹೊಲ ಮೇಯ್ದ ಪ್ರಕರಣವಲ್ಲವೇ? ಮಹತ್ವದ ಸ್ಥಾನದಲ್ಲಿರುವ ಎಡಿಜಿಪಿಯೇ ಒಎಂಆರ್ ಪತ್ರಿಕೆಗಳನ್ನು ತಿರುಚುವ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಇವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ಪಾರದರ್ಶಕ ತನಿಖೆಯನ್ನು ನಿರೀಕ್ಷಿಸಲು ಸಾಧ್ಯವಾದೀತೆ? ಎಂದು ನ್ಯಾ. ಎಚ್.ಪಿ. ಸಂದೇಶ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ | ಎಡಿಜಿಪಿ ಆತ್ಮಸಾಕ್ಷಿ ಕೇಳಿಕೊಳ್ಳಲಿ: ಎಸಿಬಿ ವಿರುದ್ಧ ಮತ್ತೆ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಆಕ್ರೋಶ