ಇಸ್ಲಾಮಾಬಾದ್: ಪಾಕಿಸ್ತಾನದಂಥ ಧರ್ಮಾಂಧ ರಾಷ್ಟ್ರದಲ್ಲಿ ದೇವನಿಂದನೆ, ಧರ್ಮ ದ್ರೋಹದ ಆಪಾದನೆ ಹೊರಿಸಿ ಏನು ಬೇಕಾದರೂ ಮಾಡಬಹುದು ಎಂಬಂಥ ಸ್ಥಿತಿ ಇದೆ. ಇತ್ತೀಚೆಗೆ ಅಲ್ಲಿನ ಹೈದರಾಬಾದ್‌ನಲ್ಲಿ ಇಂಥಹುದೇ ಒಂದು ಘಟನೆ ನಡೆಯಿತು. ಧರ್ಮ ನಿಂದನೆ ಆರೋಪ ಹೊರಿಸಿ ಸ್ವಚ್ಛತಾ ಕಾರ್ಮಿಕನೊಬ್ಬನನ್ನು ಹೊಡೆದು ಕೊಲ್ಲಲು ಎಲ್ಲ ರೀತಿಯಲ್ಲೂ ಸಿದ್ಧತೆ ನಡೆದಿತ್ತು. ಆತನಿದ್ದ ಕಟ್ಟಡವನ್ನು ಹತ್ತಿ ಅವನನ್ನು ಎಳೆದು ತರಲು ಜನರು ಪ್ರಾಣಿಗಳಂತೆ ಕಟ್ಟಡ ಹತ್ತಿದ್ದರು. ಆದರೆ, ಪೊಲೀಸರು ತೆಗೆದುಕೊಂಡ ಸಕಾಲಿಕ ಕ್ರಮದಿಂದ ಆ ಹಿಂದೂ ಕಾರ್ಮಿಕ ಬಚಾವಾದ. ನಿಜವೆಂದರೆ, ಧರ್ಮ ನಿಂದನೆ ಮಾಡಿದ್ದು ಅವನಾಗಿರಲೇ ಇಲ್ಲ. ಮಾಡಿದ್ದು ಯಾರು ಮತ್ತು ಮಾಡಿದ್ದು ಯಾಕೆ ಎನ್ನುವುದನ್ನು ತಿಳಿದು ಸ್ವತಃ ಪೊಲೀಸರೇ ಅವಾಕ್ಕಾದರು!
ಏನೇನಾಯಿತು ಅಲ್ಲಿ?
ಹೈದರಾಬಾದ್‌ನ ಆ ಕಟ್ಟಡದ ಹೊರಗಡೆ ನೂರಾರು ಜನರ ಸೇರಿದ್ದರು. ಅಶೋಕ್ ಕುಮಾರ್ ಎಂಬಾತ ಆ ಕಟ್ಟಡದಲ್ಲಿದ್ದ. ಅವನನ್ನು ನಮ್ಮ ಕೈಗೆ ಕೊಡಿ ನಾವು ನೋಡಿಕೊಳ್ಳುತ್ತೇವೆ ಎಂದು ಅಲ್ಲಿ ನೆರೆದವರು ಬೊಬ್ಬೆ ಹೊಡೆಯುತ್ತಿದ್ದರು. ಕುಮಾರ್ ಮುಸ್ಲಿಮರ ಧರ್ಮ ಗ್ರಂಥವಾದ ಕುರಾನ್‌ನ್ನು ಸುಟ್ಟು ಹಾಕಿದ್ದಾನೆ ಎನ್ನುವುದು ಎದುರಾಗಿದ್ದ ಅರೋಪ. ಪಾಕಿಸ್ತಾನದಲ್ಲಿ ಅನ್ಯ ಧರ್ಮೀಯರು ಮುಸ್ಲಿಂ ಧರ್ಮ, ದೇವರನ್ನು ನಿಂದನೆ ಮಾಡಿದರೆ ಹೇಳದೆ ಕೇಳದೆ ಹೊಡೆದೇ ಕೊಲ್ಲುವ ಘಟನೆಗಳು ನಡೆಯುತ್ತಿವೆ. ಅದೇ ರೀತಿ ಕುಮಾರ್‌ಗಾಗಿ ಹುಡುಕಾಡುತ್ತಿದ್ದರು. ಅವನು ಕಟ್ಟಡದ ಒಳಗಿದ್ದ. ಹೀಗಾಗಿ ಪ್ರತಿಭಟನೆಕಾರರಿಗೆ ಒಳಗೆ ಹೋಗಲು ಆಗಲಿಲ್ಲ. ಅವರು ಕಟ್ಟಡದ ಒಂದು ಭಾಗದಿಂದ ಒಬ್ಬರ ಮೇಲೆ ಒಬ್ಬರು ಏರಿ ಅವನಿದ್ದ ಭಾಗಕ್ಕೆ ಹೋಗಲು ಪ್ರಯತ್ನ ಶುರು ಮಾಡಿದರು. ಕೆಲವರು ಬಾಲ್ಕನಿ ಹತ್ತಿದರು, ಪೈಪ್ ಹಿಡಿದು ಮೇಲೆ ಹತ್ತಿದರು.
ಅವರ ಆಕ್ರೋಶ ಹೇಗಿತ್ತೆಂದರೆ ಒಂದು ವೇಳೆ ಕುಮಾರ ಕೈಗೆ ಸಿಗುತ್ತಿದ್ದರೆ ಇವರೆಲ್ಲ ಸೇರಿ ಕೊಂದೇ ಹಾಕುತ್ತಿದ್ದರು. ಆದರೆ, ಪುಣ್ಯಕ್ಕೆ ಅಷ್ಟು ಹೊತ್ತಿಗೆ ಕಟ್ಡಡದೊಳಗಿನಿಂದ ಯಾರೋ ಪೊಲೀಸರಿಗೆ ಕರೆ ಮಾಡಿದ್ದರು. ಪೊಲೀಸರು ಬಂದು ಎಲ್ಲರಿಗೂ ಎರಡೆರಡು ಕೊಟ್ಟು ಓಡಿಸಿದರು. ಪೊಲೀಸರು ಅಶೋಕ್ ಕುಮಾರ್‌ನನ್ನು ರಕ್ಷಿಸಿ ಹೈದರಾಬಾದ್‌ನ ಸದರ್‌ನಲ್ಲಿರುವ ರಬಿಯಾ ಸೆಂಟರ್‌ಗೆ ಕಳುಹಿಸಿದ್ದಾರೆ.
ನಿಜವೆಂದರೆ, ಇದು ಸುಳ್ಳು ಆರೋಪವಂತೆ
ಪಾಕಿಸ್ತಾನದ ಪತ್ರಕರ್ತ ಹಾಗೂ ಅಂಕಣಕಾರರಾದ ನೈಲಾ ಇನಾಯತ್ ಅವರು ಟ್ವೀಟ್‌ನಲ್ಲಿ ಹೇಳಿದ ಪ್ರಕಾರ, ಕುರಾನ್‌ನ್ನು ಅಪವಿತ್ರ ಗೊಳಿಸಿದ ಆರೋಪ ಹೊರಿಸಿ ಸ್ವಚ್ಛತಾ ಕಾರ್ಮಿಕ ಅಶೋಕ್ ಕುಮಾರ್ ಮೇಲೆ ಧರ್ಮ ದ್ರೋಹಿ ಎಂದು ದೂಷಿಸಲಾಗಿತ್ತು. ಈ ಆರೋಪ ಬಂದಿದ್ದು ಅಂಗಡಿಕಾರ ಬಿಲಾಲ್ ಅಬ್ಬಾಸಿ ಮತ್ತು ಅಶೋಕ್ ಕುಮಾರ್ ಮಧ್ಯೆ ಯಾವುದೋ ಕಾರಣಕ್ಕೆ ಜಗಳವಾದ ಹಿನ್ನೆಲೆಯಲ್ಲಿ.
ಆದರೆ ನಿಜವಾಗಿ ಆಗಿದ್ದೇನೆಂದರೆ ಬಿಲಾಲ್ ಅಬ್ಬಾಸಿ ಅಶೋಕ್ ಕುಮಾರ್‌ಗೆ ಪಾಠ ಕಲಿಸಬೇಕು ಎಂದು ಕುರಾನ್ ಅಪವಿತ್ರಗೊಳಿಸಿದ ಆರೋಪ ಮಾಡಿದ್ದಾನೆ. ಆದರೆ, ನಿಜವಾಗಿಯೂ ಕುರಾನ್‌ನ್ನು ಹರಿದಿದ್ದು ಒಬ್ಬ ಮುಸ್ಲಿಂ ಮಹಿಳೆ ಎಂದು ತನಿಖೆ ವೇಳೆ ತಿಳಿದುಬಂತು. ಈ ನಡುವೆ, ಸಕಾಲದಲ್ಲಿ ಮಧ್ಯ ಪ್ರವೇಶ ಮಾಡಿ ಒಬ್ಬನ ಜೀವ ಉಳಿಸಿದ್ದಕ್ಕಾಗಿ ಅಲ್ಲಿನ ನೆಟ್ಟಿಗರು ಪೊಲೀಸರನ್ನು ಅಭಿನಂದಿಸಿದ್ದಾರೆ. ಪಾಕಿಸ್ತಾನದಲ್ಲಿ ಧರ್ಮನಿಂದನೆ ಕಾನೂನಿನ ದುರ್ಬಳಕೆ ಆಗುತ್ತಿದ್ದು, ಅದನ್ನು ತಡೆದದ್ದು ನಿಜಕ್ಕೂ ಒಳ್ಳೆಯ ಕೆಲಸ ಎಂದಿದ್ದಾರೆ. ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ದ್ವೇಷ ಸಾಧಿಸಲು ಮಾತ್ರವಲ್ಲ, ಕೆಲವೊಮ್ಮೆ ಮುಸ್ಲಿಮರೇ ಮುಸ್ಲಿಮರ ಮೇಲೆ ದ್ವೇಷದಿಂದ ಈ ರೀತಿ ಕೇಸ್ ಹಾಕುವುದುಂಟು.
೨೦೨೧ರ ಡಿಸೆಂಬರ್‌ನಲ್ಲಿ ಶ್ರೀಲಂಕಾದ ಫ್ಯಾಕ್ಟರಿ ಮ್ಯಾನೇಜರ್ ಒಬ್ಬನನ್ನು ಧರ್ಮ ನಿಂದನೆಯ ಆರೋಪ ಹೊರಿಸಿ ಹೊಡೆದು ಕೊಂದಿದ್ದು ಮಾತ್ರವಲ್ಲ ಬೆಂಕಿಯನ್ನೂ ಹಚ್ಚಲಾಗಿತ್ತು. ಈ ಘಟನೆ ಶ್ರೀಲಂಕಾ ಮತ್ತು ಪಾಕಿಸ್ತಾನದ ನಡುವೆ ರಾಜತಾಂತ್ರಿಕ ಸಂಘರ್ಷಕ್ಕೂ ಕಾರಣವಾಗಿತ್ತು. ಆಗ ಪ್ರಧಾನ ಮಂತ್ರಿಯಾಗಿದ್ದ ಇಮ್ರಾನ್ ಖಾನ್ ಅವರು ಈ ಘಟನೆಯನ್ನು ಪಾಕಿಸ್ತಾನಕ್ಕೇ ಅಪಮಾನ ಎಂದು ವ್ಯಾಖ್ಯಾನಿಸಿದ್ದರು.
ಇದನ್ನೂ ಓದಿ| ಬಂಧನ ಭೀತಿಯಲ್ಲಿ ಇಮ್ರಾನ್ ಖಾನ್, ಮನೆಯ ಸುತ್ತ ಜಮಾಯಿಸಿದ ಪಕ್ಷದ ಕಾರ್ಯಕರ್ತರಿಂದ ಸರಕಾರಕ್ಕೆ ಸವಾಲ್