Site icon Vistara News

Indian Origin Doctor: ಅಮೆರಿಕದಲ್ಲಿ ಪತ್ನಿ ಮಕ್ಕಳ ಕೊಲೆಗೆ ಯತ್ನ; ಭಾರತೀಯ ಮೂಲದ ವೈದ್ಯನಿಗೆ ಜೈಲು ಶಿಕ್ಷೆ ಬದಲು ಮಾನಸಿಕ ಚಿಕಿತ್ಸೆ

Indian Origin Doctor

ನ್ಯೂಯಾರ್ಕ್‌: ಕಾರು ಡಿಕ್ಕಿ ಹೊಡೆಸಿ ಪತ್ನಿ ಮತ್ತು ಇಬ್ಬರು ಮಕ್ಕಳ ಹತ್ಯೆಗೆ ಯತ್ನಿಸಿದ್ದ ಭಾರತೀಯ ಮೂಲದ ವೈದ್ಯ(Indian Origin Doctor)ನಿಗೆ ಜೈಲು ಶಿಕ್ಷೆ ನೀಡಲು ಕೋರ್ಟ್‌(Court) ನಿರಾಕರಿಸಿದ್ದು, ಆತನನ್ನು ಮಾನಸಿಕ ಚಿಕಿತ್ಸೆಗೊಳಪಡಿಸುವಂತೆ ಸೂಚನೆ ನೀಡಿದೆ. ಭಾರತೀಯ ಮೂಲದ ವೈದ್ಯ ಧರ್ಮೇಶ್‌ ಪಟೇಲ್‌(Dharmesh Patel) ಎಂಬಾತ ತನ್ನ ಪತ್ನಿ ಹಾಗೂ 7 ಮತ್ತು 4 ವರ್ಷ ಮಕ್ಕಳ ಹತ್ಯೆಗೆ ಯತ್ನಿಸಿದ್ದ. ಅದೃಷ್ಟವಶಾತ್‌ ಎಲ್ಲರೂ ಅಪಾಯದಿಂದ ಪಾರಾಗಿದ್ದರು.

ಕ್ಯಾಲಿಫೋರ್ನಿಯಾದಲ್ಲಿ ರೇಡಿಯಾಲಾಜಿಸ್ಟ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಧರ್ಮೇಶ್‌ ಪಟೇಲ್‌, ಕಳೆದ ವರ್ಷ ತನ್ನ ಟೆಸ್ಲಾ ಕಾರಿನಲ್ಲಿ ಪತ್ನಿ ನೇಹಾ ಹಾಗೂ ಇಬ್ಬರು ಮಕ್ಕಳು ಕಾರಿನಲ್ಲಿ ಕರೆದೊಯ್ದು ಬಂಡೆಗೆ ಡಿಕ್ಕಿ ಹೊಡೆಸಿದ್ದ. ಪರಿಣಾಮವಾಗಿ ಕಾರು 250 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದ. ಬಿದ್ದ ರಭಸಕ್ಕೆ ಕಾರು ನಜ್ಜುಗುಜ್ಜಾಗಿತ್ತು. ಆದರೆ ಚಮತ್ಕಾರ ಎಂಬಂತೆ ಇಡೀ ಕುಟುಂಬ ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿತ್ತು. ಇದಾದ ಬಳಿಕ ಕೇಸ್‌ ದಾಖಲಾಗಿದ್ದು, ಪೊಲೀಸ್‌ ತನಿಖೆ ವೇಳೆ ತನ್ನ ಪತಿ ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಎಸಗಿದ್ದಾನೆ ಎಂದು ಒಪ್ಪಿಕೊಂಡಿದ್ದಳು. ಆದರೆ ಆತನ ವಿರುದ್ಧ ಮೊಕದ್ದಮೆ ಹೂಡಲು ನಿರಾಕರಿಸಿದ್ದಳು.

ಅದಾಗ್ಯೂ ಪ್ರಕರಣದ ಸಂಬಂಧ ಕೋರ್ಟ್‌ ವಿಚಾರಣೆ ಮುಂದುವರೆದಿದೆ. ಧರ್ಮೇಶ್‌ ತನ್ನ ಮಕ್ಕಳು ಮಾನವ ಕಳ್ಳಸಾಗಾಟದ ದಂಧೆಗೆ ಬಲಿಯಾಗುತ್ತಾರೆ ಎಂಬ ಭೀತಿಯಲ್ಲಿದ್ದ. ಇದೇ ಕಾರಣದಿಂದ ಈ ಕೃತ್ಯ ಎಸಗಿದ್ದಾನೆ. ಆತ ಮಾನಸಿಕ ಖಿನ್ನತೆಗೊಳಗಾಗಿದ್ದಾನೆ. ಆತ ಸ್ಕಿಜೋಆಫೆಕ್ಟಿವ್ ಡಿಸಾರ್ಡರ್ ಎಂಬ ಖಾಯಿಲೆಯಿಂದ ಬಳಲುತ್ತಿದ್ದಾನೆ. ಘಟನೆಗೂ ಒಂದು ವಾರ ಹಿಂದೆ ಹೆಜ್ಜೆ ಸಪ್ಪಳ ಕೇಳಿಸಿಕೊಂಡು ಯಾರೋ ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದೇ ಭಾವಿಸಿ ಭೀತಿಗೊಳಗಾಗಿದ್ದ. ವಾಸ್ತವದಲ್ಲಿ ಇಲ್ಲದಿರುವ ವಿಚಾರವನ್ನು ಇದೇ ಎಂದು ಭಾವಿಸಿಕೊಳ್ಳುವಂತಹ ಮಾನಸಿಕ ಸಮಸ್ಯೆಗೆ ಅವರು ತುತ್ತಾಗಿದ್ದಾರೆ ಎಂದು ವೈದ್ಯರು ಕೋರ್ಟ್‌ಗೆ ತಿಳಿಸಿದರು.

ಆತನಿಗೆ ತನ್ನ ಮಕ್ಕಳು ಅಪಹರಣಕ್ಕೊಳಗಾಗುತ್ತಾರೆ. ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತದೆ ಎಂಬೆಲ್ಲಾ ಕಲ್ಪನೆ ಮಾಡಿಕೊಂಡು ಈ ರೀತಿ ಕೃತ್ಯ ಎಸಗಿದ್ದಾನೆ ಎಂದು ಕೋರ್ಟ್‌ಗೆ ವೈದ್ಯರು ಮನವರಿಕೆ ಮಾಡಿಕೊಟ್ಟರು. ಈ ಎಲ್ಲಾ ವಾದವನ್ನು ಪರಿಗಣಿಸಿದ ಕೋರ್ಟ್‌ ಧರ್ಮೇಂದ್ರ ಪಟೇಲ್‌ನನ್ನು ತಕ್ಷಣ ಮಾನಸಿಕ ಚಿಕಿತ್ಸೆಗೊಳಪಡಿಸಬೇಕು. ಮಾನಸಿಕ ಸ್ಥಿಮಿತ ಸರಿ ಇರದಿರುವ ವ್ಯಕ್ತಿಯಿಂದ ಆಗಿರುವ ಅಪರಾಧಕ್ಕೆ ಶಿಕ್ಷೆ ನೀಡಲು ಸಾಧ್ಯವಿಲ್ಲ. ಬದಲಾಗಿ ಆತನಿಗೆ ಚಿಕಿತ್ಸೆ ನೀಡುವುದೇ ಸೂಕ್ತ. ಆತನನ್ನು ಜಿಪಿಎಸ್‌ ಮೂಲಕ ಮೇಲ್ವಿಚಾರಣೆ ಮಾಡುತ್ತಾ, ವಾರಕ್ಕೆ ಒಂದು ಬಾರಿ ಆತನ ಮಾನಸಿಕ ಸ್ಥಿತಿಗತಿ, ಚಿಕಿತ್ಸೆ ಬಗ್ಗೆ ಕೋರ್ಟ್‌ಗೆ ವರದಿ ನೀಡಬೇಕು. ಆತನಿಗೆ ದೇಶ ಬಿಟ್ಟು ಹೋಗಲು ಅನುಮತಿ ನಿರಾಕರಿಸಲಾಗಿದೆ. ಅಲ್ಲದೇ ಆತನ ಡ್ರೈವಿಂಗ್‌ ಲೈಸೆನ್ಸ್‌ ಮತ್ತು ಪಾಸ್‌ಪೋರ್ಟನ್ನು ಅಧಿಕಾರಿಗಳಿಗೆ ಒಪ್ಪಿಸಬೇಕು ಎಂದು ಕೋರ್ಟ್‌ ಹೇಳಿದೆ.

ಇದನ್ನೂ ಓದಿ:Hijab Ban: ತರಗತಿಯಲ್ಲಿ ಹಿಜಾಬ್‌, ಬುರ್ಖಾ ನಿಷೇಧ; ಕಾಲೇಜು ಆದೇಶ ಎತ್ತಿಹಿಡಿದ ಹೈಕೋರ್ಟ್‌

Exit mobile version