Site icon Vistara News

ISIS link: ಐಸಿಸ್‌ ಲಿಂಕ್ ಕೇಸ್‌ನಲ್ಲಿ ಮಾಜಿ ಶಾಸಕ ಇದಿನಬ್ಬ ಮೊಮ್ಮಗನಿಗೆ ದಿಲ್ಲಿ ಹೈಕೋರ್ಟ್‌ ಜಾಮೀನು; ಕೋರ್ಟ್‌ ಕೊಟ್ಟ ಕಾರಣ ನೋಡಿ!

isis link ummer abdul rehman mariyam

ಹೊಸದಿಲ್ಲಿ: ರಾಜ್ಯದಲ್ಲಿ ಕುತೂಹಲ ಕೆರಳಿಸಿದ್ದ, ಭಯೋತ್ಪಾದಕ ಸಂಘಟನೆ (Terrorist organisation) ಐಸಿಸ್‌ ಲಿಂಕ್‌ (ISIS link) ಪ್ರಕರಣದಲ್ಲಿ ಮಾಜಿ ಶಾಸಕ ಇದಿನಬ್ಬ (Ex MLA BM Idinabba) ಅವರ ಮೊಮ್ಮಗ ಉಮ್ಮರ್‌ ಅಬ್ದುಲ್‌ ರೆಹಮಾನ್‌ಗೆ ಜಾಮೀನು (bail) ದೊರೆತಿದೆ. “ಐಸಿಸ್ ಬಾವುಟ, ಕರಪತ್ರ ಮೊಬೈಲ್‌ನಲ್ಲಿದ್ದರೆ ಆತ ಉಗ್ರ ಎನ್ನಲು ಪೂರಕ ಸಾಕ್ಷ್ಯವಲ್ಲ” ಎಂದು ಜಾಮೀನು ನೀಡಿದ ದಿಲ್ಲಿ ಉಚ್ಚ ನ್ಯಾಯಾಲಯ (Delhi High court) ಹೇಳಿದೆ.

ಉಳ್ಳಾಲದ ಮಾಜಿ ಶಾಸಕ ದಿ. ಇದಿನಬ್ಬ ಅವರ ಮೊಮ್ಮಗನ ಐಸಿಸ್ ನಂಟು ಕೇಸ್‌ನಲ್ಲಿ ಈ ಮಹತ್ವದ ಬೆಳವಣಿಗೆ ಆಗಿದೆ. ಯುಎಪಿಎ ಕಾಯಿದೆಯಡಿ ಈತನನ್ನು ರಾಷ್ಟ್ರೀಯ ತನಿಖಾ ದಳ (NIA) ಬಂಧಿಸಿತ್ತು. ಅಗಸ್ಟ್ 21, 2021ರಂದು ಐಸಿಸ್ ನಂಟಿನ ಆರೋಪದಡಿ ಬಂಧಿತನಾಗಿ ಜೈಲಿನಲ್ಲಿದ್ದ ಉಮ್ಮರ್ ಅಬ್ದುಲ್ ರೆಹಮಾನ್‌ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ.

ರೆಹಮಾನ್‌ ಬಂಧನ ಪ್ರಶ್ನಿಸಿ ವಿಚಾರಣಾಧೀನ ಕೋರ್ಟ್‌ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ವಿಚಾರಣಾಧೀನ ಕೋರ್ಟ್ ಜಾಮೀನು‌ ನಿರಾಕರಿಸಿದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಸದ್ಯ ಸುದೀರ್ಘ ವಿಚಾರಣೆ ಬಳಿಕ ದೆಹಲಿ ಹೈಕೋರ್ಟ್ ಜಾಮೀನು ಒದಗಿಸಿದೆ. ಉಮ್ಮರ್ ಅಬ್ದುಲ್ ರೆಹಮಾನ್ ಜಾಮೀನು ಆದೇಶದಲ್ಲಿ ಹಲವು ಅಂಶಗಳನ್ನು ದೆಹಲಿ ಹೈಕೋರ್ಟ್ ಉಲ್ಲೇಖಿಸಿದೆ.

ನ್ಯಾಯಪೀಠದ ಪ್ರಕಾರ, “ಉಗ್ರ ಸಂಘಟನೆ ಬಗೆಗಿನ ಆಕರ್ಷಣೆಯನ್ನು ಉಗ್ರ ನಂಟು ಎನ್ನಲು ಆಗುವುದಿಲ್ಲ. ಐಸಿಸ್ ಪರ ವಿಡಿಯೋ ಡೌನ್‌ಲೋಡ್ ಮಾಡುವುದು, ಭಾಷಣ ಆಲಿಸುವುದನ್ನು ಯುಎಪಿಎ ಕಾಯಿದೆಯಡಿ ತರಲು ಆಗುವುದಿಲ್ಲ. ಈ ಸಾಕ್ಷ್ಯ ಬಳಸಿ ಯುಎಪಿಎ ಸೆಕ್ಷನ್ 38 ಮತ್ತು 39ರಡಿ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ” ಎಂದಿದೆ.

“ಆರೋಪಿ ಮೊಬೈಲ್‌ನಲ್ಲಿ ಉಗ್ರ ಒಸಾಮಾ ಬಿನ್‌ ಲಾಡೆನ್, ಐಸಿಸ್ ಬಾವುಟಗಳ ಚಿತ್ರ, ಐಸಿಸ್ ಪರ ಭಾಷಣಗಳ ತುಣುಕು ಸಿಕ್ಕಿದೆ” ಎಂದು ಎನ್‌ಐಎ ವಾದಿಸಿದರೆ, “ಇದೆಲ್ಲದರ ಮೂಲಕ ಆತನಿಗೆ ಐಸಿಸ್ ನಂಟಿದೆ ಎನ್ನಲು‌ ಆಗುವುದಿಲ್ಲ. ಯಾಕೆಂದರೆ ಇವುಗಳು ಇಂದಿನ ಡಿಜಿಟಲ್ ಯುಗದಲ್ಲಿ ಇಂಟರ್‌ನೆಟ್‌ನಲ್ಲಿ ಸಿಗುತ್ತವೆ. ಕುತೂಹಲ ಇರುವ ಯಾರು ಬೇಕಾದರೂ ‌ಮೊಬೈಲ್, ಕಂಪ್ಯೂಟರ್‌ನಲ್ಲಿ ಇದನ್ನು ಡೌನ್‌ಲೋಡ್ ಮಾಡಬಹುದು. ಹಾಗಾಗಿ ಇದನ್ನು ಇಟ್ಟುಕೊಂಡು ಐಸಿಸ್ ನಂಟನ್ನು ಸಾಬೀತು ಪಡಿಸಲು ಆಗುವುದಿಲ್ಲ” ಎಂದು ಕೋರ್ಟ್‌ ಹೇಳಿದೆ.

ಈಗಾಗಲೇ ಪ್ರಕರಣ ಸಂಬಂಧ ಹಲವು ಜನರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿದೆ. ಅಮ್ಮರ್ ಅಬ್ದುಲ್ ರೆಹಮಾನ್ ಜೊತೆಗೆ ಇದಿನಬ್ಬ ಅವರ ಸೊಸೆ ದೀಪ್ತಿ ಮಾರ್ಲ ಅಲಿಯಾಸ್‌ ಮರಿಯಂಳನ್ನೂ ಬಂಧಿಸಿದೆ. ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ, ಇದಿನಬ್ಬ ಮಗ ಬಿ‌.ಎಂ.ಭಾಷಾರ ಮಗ ಅನಾಸ್ ಅಬ್ದುಲ್ ಅವರ ಪತ್ನಿ. ಅನಾಸ್ ಅಬ್ದುಲ್ ರೆಹಮಾನ್ ಮದುವೆಯಾಗಿ ಇಸ್ಲಾಂಗೆ ಮತಾಂತರಗೊಂಡಿದ್ದ ದೀಪ್ತಿ ಮಾರ್ಲ, ಮರಿಯಂ ಎಂದು ಹೆಸರು ಬದಲಿಸಿಕೊಂಡಿದ್ದಳು. ಅಮ್ಮರ್ ಅಬ್ದುಲ್ ರೆಹಮಾನ್ ಬಂಧನದ ಬಳಿಕ, ಜನವರಿ 4ರಂದು ಉಳ್ಳಾಲದಲ್ಲಿ ಮರಿಯಂಳನ್ನು ಎನ್‌ಐಎ ಬಂಧಿಸಿತ್ತು.

ಈಕೆ ಅಮ್ಮರ್ ಅಬ್ದುಲ್ ರೆಹಮಾನ್ ಸೂಚನೆಗಳಂತೆ ಐಸಿಸ್ ಪರವಾಗಿ ಕೆಲಸ‌ ಮಾಡುತ್ತಿದ್ದಳು ಎಂದು ಎನ್‌ಐಎ ಆರೋಪ ಮಾಡಿತ್ತು. ಈಕೆಯ ಭಾಗಿಧಾರಿಕೆ ಬಗ್ಗೆ ಚಾರ್ಚ್ ಶೀಟ್ ಸಲ್ಲಿಸಿದ್ದು, ಇಸ್ಲಾಮಿಕ್ ಸ್ಟೇಟ್ ಐಡಿಯಾಲಜಿಯಿಂದ ಪ್ರಭಾವಿತಳಾಗಿದ್ದಳು ಎಂದಿತ್ತು. ಮಾರ್ಚ್ 5, 2021ರಲ್ಲಿ ದೆಹಲಿಯಲ್ಲಿ ಸ್ವಯಂಪ್ರೇರಿತ ಎಫ್‌ಐಆರ್ ದಾಖಲಿಸಿತ್ತು. ಇದೀಗ‌ ಐಸಿಸ್ ನಂಟಿನ ಪೂರಕ ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ಅಮ್ಮರ್ ಅಬ್ದುಲ್ ರೆಹಮಾನ್‌ಗೆ ಜಾಮೀನು ದೊರೆತಿದ್ದು, ಇನ್ನೂ ಎನ್‌ಐಎ ವಶದಲ್ಲೇ ಇರುವ ಮರಿಯಂಗೂ ಜಾಮೀನು ಸಿಗಲು ಇದು ಪೂರಕವಾಗಲಿದೆ ಎನ್ನಲಾಗಿದೆ.

ಆರೋಪಿಗಳಾದ ದೀಪ್ತಿ ಮಾರ್ಲ, ಇದಿನಬ್ಬ ಮೊಮ್ಮಗ ಅಮ್ಮರ್ ಅಬ್ದುಲ್ ರಹಿಮಾನ್, ಮೊಹಮ್ಮದ್ ವಕಾರ್ ಲಾನ್ ಯಾನೆ ವಿಲ್ಸನ್ ಕಾಶ್ಮೀರಿ, ಮಿಜಾ ಸಿದ್ದೀಕ್, ಶಿಫಾ ಹಾರೀಸ್ ಯಾನೆ ಆಯಿಷಾ, ಒಬೈದ್ ಹಮೀದ್ ಮಟ್ಟಾ, ಮಾದೇಶ್ ಶಂಕರ್ ಯಾನೆ ಅಬ್ದುಲ್ಲಾ, ಮುಜಾಮಿಲ್ ಹಸನ್ ಭಟ್ ವಿರುದ್ಧ ಈ ದೋಷಾರೋಪಣ ಪಟ್ಟಿಯನ್ನು ಎನ್ಐಎ ಸಲ್ಲಿಕೆ ಮಾಡಿದೆ. ಈ ಎಂಟು ಆರೋಪಿಗಳು ಐಸಿಸ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದು, ಐಸಿಸ್‌ಗೆ ಜನರನ್ನು ನೇಮಕ ಮಾಡುವುದು, ಭಯೋತ್ಪಾದಕ ಕೃತ್ಯಕ್ಕೆ ನಿಧಿ ಸಂಗ್ರಹಿಸುವುದರಲ್ಲಿ ತೊಡಗಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದಾರೆ.

ಉಗ್ರ ಚಟುವಟಿಕೆ ಸಂಬಂಧಿಸಿ ಮಾರ್ಚ್ 5, 2021ರಂದು ಕೇರಳದ ಮಹಮ್ಮದ್ ಅಮೀನ್ ಮತ್ತು ಆತನ ಇಬ್ಬರು ಸಹಚರರನ್ನು ಎನ್ಐಎ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿತ್ತು. ಆ ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು, ಭಟ್ಕಳ, ಬೆಂಗಳೂರು, ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿ ನಡೆಸಿ ಈ ಎಂಟು ಜನರನ್ನು ಬಂಧಿಸಲಾಗಿತ್ತು. ಲ್ಯಾಪ್‌ಟಾಪ್, ಸಿಮ್ ಕಾರ್ಡ್, ಹಾರ್ಡ್ ಡಿಸ್ಕ್ ಡ್ರೈವ್ ಸಹಿತ ಡಿಜಿಟಲ್ ಉಪಕರಣಗಳನ್ನು ವಶಪಡಿಸಿಕೊಂಡಿರುವುದರ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಾದ ಟೆಲಿಗ್ರಾಂ, ಹೂಪ್, ಇನ್‌ಸ್ಟಗ್ರಾಂ ಬಳಸಿಕೊಂಡು ಈ ಆರೋಪಿಗಳು ಐಸಿಸ್‌ಗೆ ಜನರನ್ನು ಸೇರಿಸುವುದನ್ನು ಮಾಡುತ್ತಿದ್ದರು ಎಂದಿತ್ತು.

ಮರಿಯಂ, ಕ್ರೋನಿಕಲ್ ಪೌಂಡೇಶನ್ ಎಂಬ ಇನ್‌​ಸ್ಟಾಗ್ರಾಂ​ ಪೇಜ್ ಮೂಲಕ ಐಸಿಸ್​ ಕೆಲಸ ಮಾಡಲು ಶುರು ಮಾಡಿದ್ದಳು. ನಂತರ ಪತಿ ಅನಾಸ್ ಅಬ್ದುಲ್ ರೆಹಮಾನ್, ಸಂಬಂಧಿ ಅಮ್ಮರ್ ಅಬ್ದುಲ್ ರೆಹಮಾನ್ ಸೂಚನೆಗಳಂತೆ ಐಸಿಸ್ ಪರವಾಗಿ ಕೆಲಸ‌ ಮಾಡುತ್ತಿದ್ದಳು. ಸುಮಾರು 15 ನಕಲಿ‌ ಸೋಷಿಯಲ್ ಮೀಡಿಯಾ ಖಾತೆಗಳನ್ನು ಹೊಂದಿದ್ದಾಳೆ. ಈ ಹಿಂದೆ ಎನ್ಐಎನಿಂದ ಬಂಧಿತನಾಗಿದ್ದ ಮಾದೇಶ ಪೆರುಮಾಳ್‌ನ​ನ್ನು ಮತಾಂತರ ಮಾಡಿ ಐಸಿಸ್​ಗೆ ಕೆಲಸ ಮಾಡುವಂತೆ ಮಾಡಿದ್ದಳು. ಇದುವರೆಗೂ ಸುಮಾರು 10 ಯುವಕರನ್ನು ಮತಾಂತರಗೊಳಿಸಿ ಐಸಿಸ್​ಗೆ ಸೇರಿಸಿದ್ದಾಳೆ ಎಂದು ಎನ್ಐಎ ದೂರಿದೆ.

ಇದನ್ನೂ ಓದಿ: Terrorist Arrested: ಬೆಂಗಳೂರಿನ ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಶಂಕಿತ ಉಗ್ರನ ಬಂಧನ

Exit mobile version