Site icon Vistara News

ವಿಸ್ತಾರ Explainer | ರಕ್ಕಮ್ಮ ಜಾಕ್ವೆಲಿನ್‌ ವಂಚಕ ಸುಕೇಶ್‌ ಕೈಯಲ್ಲಿ ರೊಕ್ಕಮ್ಮ ಆಗಿದ್ದು ಹೇಗೆ?

Jacqueline

ರಕ್ಕಮ್ಮ ಅಲಿಯಾಸ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಅವರ ಬೆನ್ನಟ್ಟಿರುವ ಜಾರಿ ನಿರ್ದೇಶನಾಲಯ ಆಕೆಯ ಕುರಿತು ಒಂದೊಂದೇ ಆರೋಪಗಳನ್ನು ಪಟ್ಟಿ ಮಾಡುತ್ತಿದೆ. ಜಾಕ್ವೆಲಿನ್‌ ಮತ್ತು ವಂಚಕ ಸುಕೇಶ್‌ ಚಂದ್ರಶೇಖರ್‌ ಸೇರಿ ಮಾಡಿರುವ ವಂಚನೆಯ ಮೊತ್ತ ಸಣ್ಣದಲ್ಲ- 200 ಕೋಟಿ ರೂಪಾಯಿಗೂ ಹೆಚ್ಚು. ಇದಲ್ಲದೇ ಇನ್ನೊಂದಷ್ಟು ಹೊಸ ವಿವರಗಳು ಹೊರಬಿದ್ದಿವೆ.

ವಂಚನೆ ಪ್ರಕರಣದ ಪ್ರಥಮ ಆರೋಪಿ ಸುಕೇಶ್‌ ಚಂದ್ರಶೇಖರ್‌, ಜಾಕ್ವೆಲಿನ್‌ಗೆ ಹಲವಾರು ದುಬಾರಿ ಗಿಫ್ಟ್‌ಗಳನ್ನು ಕೊಟ್ಟಿದ್ದಾನೆ. 52 ಲಕ್ಷ ರೂಪಾಯಿ ಬೆಲೆಯ ಅರೇಬಿಯನ್‌ ಕುದುರೆ, 9 ಲಕ್ಷ ಬೆಲೆಬಾಳುವ ಪರ್ಷಿಯನ್‌ ಬೆಕ್ಕುಗಳನ್ನು ಕೊಟ್ಟಿದ್ದಾನೆ. ಒಂದು ಲಕ್ಷ ಅಮೆರಿಕನ್‌ ಡಾಲರ್‌ ಹಾಗೂ 26,740 ಆಸ್ಟ್ರೇಲಿಯನ್‌ ಡಾಲರ್‌ಗಳನ್ನು ನಟಿಯ ಮನೆಯವರಿಗೆ ಕೊಟ್ಟಿದ್ದಾನೆ. ಮಿನಿ ಕೂಪರ್‌ ಕಾರು, Gucci, Chanel ಮುಂತಾದ ದುಬಾರಿ ಬ್ರಾಂಡ್‌ಗಳ ವಿಲಾಸಿ ಬ್ಯಾಗ್‌ಗಳು, ಬಹವರ್ಣದ ಕಲ್ಲುಗಳ ಬ್ರೇಸ್‌ಲೆಟ್‌, ಹರ್ಮಿಸ್‌ ಬ್ರೇಸ್‌ಲೆಟ್‌ಗಳನ್ನೆಲ್ಲಾ ನೀಡಿದ್ದಾನೆ. ಈಕೆಯನ್ನು ಪ್ರಧಾನ ಪಾತ್ರವಾಗಿ ಹೊಂದಿರುವ ಒಂದು ವೆಬ್‌ ಸೀರೀಸ್‌ಗೆ ಸ್ಕ್ರಿಪ್ಟ್‌ ಬರೆಯಲು ಬರಹಗಾರರಿಗೆ 15 ಲಕ್ಷ ರೂ. ನೀಡಿದ್ದಾನೆ. ಒಟ್ಟಾರೆ ಈತ ಕೊಟ್ಟ ಗಿಫ್ಟ್‌ನ ಮೌಲ್ಯವೇ 10 ಕೋಟಿ ರೂ.ಗೂ ಅಧಿಕ ಎನ್ನಲಾಗಿದೆ.

ಯಾರು ಈ ಸುಕೇಶ್‌ ಚಂದ್ರಶೇಖರ್‌?

ಸುಕೇಶ್‌ ಮೂಲತಃ ಬೆಂಗಳೂರಿನವನು. ವಿಲಾಸಿ ಜೀವನದ ಅಭಿಲಾಷೆ ಹೊಂದಿದ್ದ ಈತ ತನ್ನ 17ನೇ ವಯಸ್ಸಿನಿಂದಲೇ ಸಿಕ್ಕಸಿಕ್ಕವರಿಗೆ ವಂಚನೆ ಎಸಗುತ್ತಾ ಬಂದಿದ್ದಾನೆ ಎಂದು ತನಿಖಾ ಮೂಲಗಳು ಹೇಳಿವೆ. ಆರಂಭದಲ್ಲಿ ಈತ ಬೆಂಗಳೂರಿನಲ್ಲಿ ಫೋರ್ಜರಿ ಮಾಡುತ್ತಿದ್ದ. ನಂತರ ಚೆನ್ನೈಗೆ ಸಾಗಿದ. ನಂತರ ಇತರ ಮೆಟ್ರೋ ಸಿಟಿಗಳಿಗೂ ಇವನ ವಂಚನೆಯ ಬಾಹುಗಳು ಚಾಚಿದವು.

ಸದ್ಯ ಈತ ದೆಹಲಿಯ ಜೈಲಿನಲ್ಲಿದ್ದಾನೆ. ಇಡಿ ಇವನನ್ನು ವಿಚಾರಣೆಗೆ ಒಳಪಡಿಸುತ್ತಿದೆ. ಸುಮಾರು 15 ಎಫ್‌ಐಆರ್‌ಗಳು ಇವನ ಮೇಲೆ ದಾಖಲಿಸಲಾಗಿವೆ. ಚೆನ್ನೈಯಲ್ಲಿ ಹತ್ತತ್ತಿರ ಒಂದು ಕೋಟಿ ರೂ. ಮೌಲ್ಯದ ಸಮುದ್ರ ತೀರದ ಬಂಗಲೆ ಹಾಗೂ ಒಂದು ಡಜನ್‌ ಐಷಾರಾಮಿ ಕಾರುಗಳನ್ನು ಇವನಿಂದ ಸೀಜ್ ಮಾಡಲಾಗಿದೆ.

ಇದಕ್ಕೂ ಮೊದಲು ಇವನು ತಿಹಾರ್‌ ಜೈಲಿನಲ್ಲಿದ್ದುಕೊಂಡೇ ತನ್ನ ಜಾಲದ ಮೂಲಕ ಸುಮಾರು 200 ಕೋಟಿ ರೂ. ಮೌಲ್ಯದ ವಂಚನೆ ಎಸಗಿದ ಪ್ರಕರಣಗಳು ಬಯಲಾಗಿವೆ. ಇವನಿಗೆ ಸಹಕರಿಸುತ್ತಿದ್ದ ಇವನ ಪತ್ನಿ ಲೀನಾ ಮಾರಿಯಾ ಪೌಲ್‌ ಸೇರಿದಂತೆ ಇತರ ಏಳು ಮಂದಿಯನ್ನೂ ಬಂಧಿಸಲಾಗಿದೆ. ರಾಜಕಾರಣಿಯಂತೆ ಪೋಸು ಕೊಟ್ಟು, ಕೆಲಸ ಕೊಡಿಸುವುದಾಗಿ ನಂಬಿಸಿ ನೂರಕ್ಕೂ ಹೆಚ್ಚು ಮಂದಿಯನ್ನು ವಂಚಿಸಿದ್ದಾನೆ.

2011ರಲ್ಲೇ ಕೆನರಾ ಬ್ಯಾಂಕ್‌ಗೆ ವಂಚಿಸಿದ ಪ್ರಕರಣದಲ್ಲಿ ಇವನನ್ನೂ ಲೀನಾ ಮಾರಿಯಾಳನ್ನೂ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಆದರೆ ಸುಕೇಶ್‌ ತನ್ನ ವಕ್ರಬುದ್ಧಿ ಬಿಟ್ಟಿರಲಿಲ್ಲ. ಇವನಿಂದ ಮೋಸ ಹೋದವರ ಪಟ್ಟಿಯಲ್ಲಿ ಪ್ರತಿಷ್ಠಿತ ಫೋರ್ಟಿಸ್‌ ಆಸ್ಪತ್ರೆಯ ಪ್ರಮೋಟರ್‌ ಶಿವಿಂದರ್‌ ಮೋಹನ್‌ ಸಿಂಗ್‌ ಅವರ ಪತ್ನಿ ಅದಿತಿ ಸಿಂಗ್‌ ಕೂಡ ಇದ್ದಾರೆ. ಕತ್ರಿನಾ ಕೈಫ್‌ ಅವರನ್ನು ಪ್ರಮೋಷನ್‌ ಇವೆಂಟ್‌ಗೆ ಕರೆತರುತ್ತೇನೆಂದು ಹೇಳಿ ಕೊಚ್ಚಿಯ ಎಮಾನ್ಯುಯೆಲ್‌ ಸಿಲ್ಕ್ಸ್‌ನ ಎಂಡಿ ಬೈಜು ಅವರಿಗೂ ಕೈ ಎತ್ತಿದ್ದ.

ಜಾಕ್ವೆಲಿನ್‌ಗೂ ಸುಕೇಶ್‌ಗೂ ಏನು ನಂಟು?

ಜಾಕ್ವೆಲಿನ್‌ ಫರ್ನಾಂಡಿಸ್‌ ಶ್ರಿಲಂಕಾ ಮೂಲದ ನಟಿ. 2009ರಲ್ಲಿ ಬಾಲಿವುಡ್‌ನ ʼಅಲಾದಿನ್‌ʼ ಸಿನಿಮಾದ ಮೂಲಕ ನಟನೆಯ ಕೆರಿಯರ್‌ ಪ್ರವೇಶಿಸಿದರು. ಇತ್ತೀಚೆಗೆ ಕನ್ನಡದ ʼವಿಕ್ರಾಂತ್‌ ರೋಣʼ ಸಿನಿಮಾದ ʼರಕ್ಕಮ್ಮʼ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. 2011ರಲ್ಲಿ ಸುಕೇಶ್‌ ಗೆಳೆತನದ ಪರಿಧಿಯೊಳಗೆ ಪ್ರವೇಶಿಸಿದರು. “ತಾನು ಜಯಲಲಿತಾ ಕುಟುಂಬದವನುʼʼ ಎಂದು ಈತ ಆಕೆಗೆ ಪರಿಚಯಿಸಿಕೊಂಡಿದ್ದನಂತೆ. ಆದರೆ ಸುಕೇಶ್‌ ವಂಚಕ ಎಂಬುದು ಜಾಕ್ವೆಲಿನ್‌ಗೆ ಗೊತ್ತಿರಲಿಲ್ಲವೇ? ಇಡಿ ಜಾಕ್ವೆಲಿನ್‌ ಅವರನ್ನು ಅನೇಕ ಸಲ ಕರೆಸಿಕೊಂಡು ವಿಚಾರಿಸಿದೆ. ಇಡಿಗೆ ಜಾಕ್ವೆಲಿನ್‌ ನೀಡಿದ ಹೇಳಿಕೆ ಪ್ರಕಾರ, ಆತ ವಂಚಕ ಎಂಬುದು ಆಕೆಗೆ ಗೊತ್ತಿರಲಿಲ್ಲ. ತನ್ನ ನಿಜವಾದ ಐಡೆಂಟಿಟಿಯನ್ನು ಆತ ಮರೆಮಾಚಿಕೊಂಡು, ಗೃಹ ಮಂತ್ರಿ ಅಮಿತ್‌ ಶಾ ಅವರ ಸಚಿವಾಲಯದಿಂದ ಮಾಡುತ್ತಿರುವಂತೆ ಫೋನ್‌ ಕರೆ ಮಾಡಿ ಜಾಕ್ವೆಲಿನ್‌ಳನ್ನು ಬುಟ್ಟಿಗೆ ಹಾಕಿಕೊಂಡಿದ್ದನಂತೆ.‌

ಇದನ್ನೂ ಓದಿ: Jacqueline Fernandez | 215 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ʼರಕ್ಕಮ್ಮʼ ಜಾಕ್ವೆಲಿನ್‌ಗೆ ಸಂಕಷ್ಟ

ಜಾಕ್ವೆಲಿನ್‌ಗೆ ಸುಕೇಶ್‌ ನೀಡಿರುವ ದುಬಾರಿ ಗಿಫ್ಟ್‌ಗಳನ್ನು ನೋಡುತ್ತಿದ್ದರೆ ಸಾಕಷ್ಟು ಅನುಮಾನಗಳು ಏಳುತ್ತವೆ. ಸುಕೇಶ್‌ನ ವಂಚನೆಯಲ್ಲಿ ಜಾಕ್ವೆಲಿನ್‌ ಪಾಲ್ಗೊಂಡಿದ್ದಾಳೆ ಎನ್ನುವುದಕ್ಕೆ ಆಧಾರಗಳಿಲ್ಲ. ಆದರೆ, ವಂಚನೆಯಿಂದ ಪಡೆದ ಹಣದಿಂದಲೇ ಸುಕೇಶ್‌ ಈ ದುಬಾರಿ ಗಿಫ್ಟ್‌ಗಳನ್ನು ನೀಡುತ್ತಿದ್ದಾನೆ ಎಂಬ ಅರಿವು ಜಾಕ್ವೆಲಿನ್‌ಗೆ ಇದ್ದಂತೆ ಕಾಣುತ್ತದೆ. ಇದು ಇಡಿ ವಿಚಾರಣೆಯಲ್ಲಿ ಗೊತ್ತಾಗಿದೆ.

ದುಬಾರಿಯಾದ ರೊಮ್ಯಾನ್ಸ್‌

2021ರ ಅಕ್ಟೋಬರ್‌ನಲ್ಲಿ ಸುಕೇಶ್‌ನ ಲಾಯರ್‌ ಒಂದು ಸೆನ್ಸೇಷನಲ್‌ ಹೇಳಿಕೆ ನೀಡಿದರು. ಸುಕೇಶ್‌ ಜತೆಗೆ ಜಾಕ್ವೆಲಿನ್‌ ಸಂಬಂಧ ಹೊಂದಿದ್ದಾಳೆ ಎಂಬುದೇ ಆ ಆರೋಪ. ಇದಕ್ಕೆ ಆಧಾರಗಳೂ ಇವೆ. ಸುಕೇಶ್‌ ಅನ್ನು ಜಾಕ್ವೆಲಿಬ್‌ ಗಟ್ಟಿಯಾಗಿ ಅಪ್ಪಿಕೊಂಡು ಮುತ್ತಿಡುತ್ತಿರುವ, ಇಬ್ಬರೂ ತಬ್ಬಿಕೊಂಡು ಸೆಲ್ಫಿ ತೆಗೆದುಕೊಳ್ಳುತ್ತಿರುವ ಫೋಟೋಗಳು ಇದಕ್ಕೆ ಸಾಕ್ಷಿ.

ಇವರಿಬ್ಬರ ಆಪ್ತ ಫೋಟೋಗಳು ಈ ವರ್ಷದ ಜನವರಿಯಲ್ಲಿ ಖಾಸಗಿ ವಲಯದಿಂದ ಆಚೆ ಬಿದ್ದು ಜಗಜ್ಜಾಹೀರಾದವು. ಮೀಡಿಯಾಗಳಲ್ಲೂ ಬಂದವು. ಇಬ್ಬರೂ ತಮ್ಮ ಖಾಸಗಿ ಫೋಟೋಗಳನ್ನು ಪ್ರಕಟಿಸದಂತೆ ವಿನಂತಿಸಿದರು. “ಇದು ತಮ್ಮ ಖಾಸಗಿತನದ ಹಕ್ಕಿನ ಉಲ್ಲಂಘನೆʼ ಎಂದು ಸುಕೇಶ್‌ ಅಬ್ಬರಿಸಿದ. “ನಾನು ಆಕೆಗೆ ಕೊಟ್ಟಿರುವ ಗಿಫ್ಟ್‌ಗಳು ನನ್ನ ಪ್ರೀತಿಯ ದ್ಯೋತಕʼʼ ಎಂದು ಹೇಳಿದ. “ನಮ್ಮ ನಡುವಿನ ಬಾಂಧವ್ಯಕ್ಕೂ ಈ ಗಿಫ್ಟ್‌ಗಳಿಗೂ ಸಂಬಂಧವಿಲ್ಲ. ಹಣಕ್ಕಾಗಿ ನಾನು ದೇಹ ಹಂಚಿಕೊಂಡಿಲ್ಲʼʼ ಎಂದು ಜಾಕ್ವೆಲಿನ್‌ ಕಿಡಿಕಿಡಿಯಾದಳು.

ಪ್ರಸ್ತುತ ವಂಚಕ ಸುಕೇಶ್‌ ವಂಚನೆಯಿಂದ ಗಳಿಸಿದ ಸ್ವತ್ತುಗಳನ್ನು ಜಾಕ್ವೆಲಿನ್‌ಗೆ ನೀಡಿರುವುದರಿಂದ, ಈ ಸ್ವತ್ತುಗಳನ್ನು ಹೊಂದಿದ ಆಕೆಯ ಹೆಸರೂ ಸುಕೇಶ್‌ ವಿರುದ್ಧದ ಇಡಿ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಇದೆ. ವಂಚಕನೊಬ್ಬನನ್ನು ನಂಬಿದ, ಆತನ ದುಬಾರಿ ಗಿಫ್ಟ್‌ಗಳಿಗೆ ಮನಸೋತ ಕಾರಣಕ್ಕಾಗಿ ಈ ಮಾದಕ ನಟಿ ಈಗ ಕಾನೂನು ಕ್ರಮ ಎದುರಿಸಬೇಕಾಗಿದೆ.

ಇದನ್ನೂ ಓದಿ: ಜನುಮದಿನ ಸಂಭ್ರಮದಲ್ಲಿ Jacqueline Fernandez

Exit mobile version