ಬೆಂಗಳೂರು: ಹೇಗಾದರೂ ಗೆಲ್ಲಬೇಕೆಂಬ ಹುಮ್ಮಸ್ಸಿನಿಂದ, ಮತದಾರರ ಸಿಂಪತಿ ಗಿಟ್ಟಿಸಿಕೊಳ್ಳಲು ಜೆಡಿಎಸ್ ಅಭ್ಯರ್ಥಿಯೊಬ್ಬರು ತಮ್ಮ ಕಿಡ್‌ನ್ಯಾಪ್ ಪ್ರಕರಣವನ್ನು ತಾವೇ ಸೃಷ್ಟಿಲು (kidnap drama) ಯತ್ನಿಸಿದ್ದಾರೆ ಎಂದು ಹೇಳಲಾದ ವಿಡಿಯೋ ಒಂದು ಬಿಡುಗಡೆಯಾಗಿದ್ದು, ವೈರಲ್ ಆಗಿದೆ.
ಪ್ರತಿ ಕ್ಷೇತ್ರದಂತೆ ಯಲಹಂಕ ಕ್ಷೇತ್ರದಲ್ಲೂ ಎಲೆಕ್ಷನ್ ಪ್ರಚಾರ ಬಲು ಜೋರಾಗಿಯೇ ಇದೆ. ಇದರ ನಡುವೆ ಗೆಲ್ಲಲೇಬೇಕೆಂಬ ಹುಮ್ಮಸ್ಸಿನಿಂದ ಯಲಹಂಕ ಜೆಡಿಎಸ್ ಅಭ್ಯರ್ಥಿ ಮುನೇಗೌಡ ಎಡವಟ್ಟು ಮಾಡಿಕೊಂಡಿದ್ದಾರೆ. ಈ ಬಗ್ಗೆ ರಿಲೀಸ್ ಆಗಿರುವ 17 ನಿಮಿಷದ ವಿಡಿಯೋ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.
ಯಲಹಂಕ ಜೆಡಿಎಸ್ ಅಭ್ಯರ್ಥಿ ಮುನೇಗೌಡ ಹಾಗೂ ಜೆಡಿಎಸ್ ವಕ್ತಾರ ಚರಣ್ ಗೌಡ ನಡೆಸಿದ್ದಾರೆ ಎನ್ನಲಾದ ಚರ್ಚೆಯ ವಿಡಿಯೋ ತುಣುಕು ಹೊರ ಬಂದಿದೆ. ಈ ವಿಡಿಯೋ ಮುಖಾಂತರ ಬಿಜೆಪಿ ಗಂಭೀರ ಆರೋಪ ಮಾಡಿದ್ದು, ಜೆಡಿಎಸ್ ಅಭ್ಯರ್ಥಿ ಮುನೇಗೌಡ ತಾವೇ ತಮ್ಮ ಹುಡುಗರಿಂದ ಕಿಡ್ನಾಪ್ ಮಾಡಿಸಿಕೊಂಡು ಅದನ್ನು ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ತಲೆಗೆ ಕಟ್ಟಲು ಸಂಚು ನಡೆಸಿದ್ದರು ಎಂದು ದೂರಿದೆ.
ಜೆಡಿಎಸ್ ಅಭ್ಯರ್ಥಿ ಮುನೇಗೌಡ ಹಾಗೂ ವಕ್ತಾರ ಚರಣ್ ಗೌಡ ಅನಾಮಧೇಯ ವ್ಯಕ್ತಿಯೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾದ ವಿಡಿಯೋದಲ್ಲಿ ಇದೇ ಮೇ 5 ಅಥವ 6ನೇ ತಾರೀಕು ಫೇಕ್ ಕಿಡ್ನಾಪ್ ತಂತ್ರದ ಚರ್ಚೆ ನಡೆಸಲಾಗಿದೆ. ಅಪಹರಣದ ನಂತರ ಹೊಸೂರು ರಸ್ತೆಯ ಫಾರ್ಮ್ ಹೌಸ್‌ನಲ್ಲಿ ಎರಡು ಮೂರು ದಿನ ಉಳಿದುಕೊಳ್ಳುವ ಯೋಜನೆ ಬಗ್ಗೆ ಚರ್ಚಿಸಲಾಗಿದೆ. ಕಿಡ್ನಾಪ್ ಆದ ತಕ್ಷಣ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುವುದು ಸೇರಿದಂತೆ ಹಲವು ತಂತ್ರಗಳ ಬಗ್ಗೆ ಮಾತುಕತೆ ನಡೆಸಲಾಗಿದೆ.
ಬಳಿಕ 7ರಂದು ಜೆಡಿಎಸ್ ಸಮಾವೇಶಕ್ಕೆ ಗೈರು ಹಾಜರಾಗುವ ಮೂಲಕ ಮತದಾರರ ಅನುಕಂಪ ಗಿಟ್ಟಿಸಿಕೊಳ್ಳುವ ಪ್ಲ್ಯಾನ್ ಸಹ ಮಾಡಲಾಗಿತ್ತು. ಜೊತೆಗೆ ಸಿಂಗನಾಯಕನಹಳ್ಳಿ ಗ್ರಾಮದಲ್ಲಿ ಮುನೇಗೌಡರ ಪತ್ನಿ ಹಾಗೂ ಭಾವಮೈದುನನನ್ನು ಪ್ರಚಾರಕ್ಕೆ ಕಳುಹಿಸಿ ತಮ್ಮವರಿಂದಲೇ ಅವರಿಗೆ ಹಲ್ಲೆ ಮಾಡಿಸಿ ಬಳಿಕ ಅದನ್ನು ಬಿಜೆಪಿಗರ ತಲೆಗೆ ಕಟ್ಟುವ ಬಗ್ಗೆ ಸಹ ಮಾತುಕತೆ ಈ ವಿಡಿಯೋದಲ್ಲಿದೆ.
ಈ ವಿಡಿಯೋ ಬಗ್ಗೆ ಮಾಹಿತಿ ತಿಳಿದ ಬಿಜೆಪಿ ಅಭ್ಯರ್ಥಿ ವಿಶ್ವನಾಥ್, ವಿಡಿಯೋ ಆಧರಿಸಿ ದೂರು ನೀಡಲು ಮುಂದಾಗಿದ್ದಾರೆ. ಚುನಾವಣೆಯಲ್ಲಿ ನೇರವಾಗಿ ಎದುರಿಸುವುದು ಬಿಟ್ಟು ಹೀಗೆ ಅಡ್ಡದಾರಿ ಹಿಡಿಯುತ್ತಿರುವುದು ದುರಂತ. ಈ ಬಗ್ಗೆ ರಾಜಾನಕುಂಟೆ ಪೊಲೀಸ್ ಠಾಣೆಗೆ ದೂರು ನೀಡುತ್ತಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: Kidnap Case : ಹೆಂಡತಿಯನ್ನು ʻಅವನುʼ ಕಿಡ್ನ್ಯಾಪ್ ಮಾಡಿದ್ದಾನೆ, ದಯವಿಟ್ಟು ಹುಡುಕಿಕೊಡಿ ಎಂದ ಗಂಡ